ಮಹಾ ಪೂರ್ಣ (ಪೆರಿಯ ನಂಬಿ)

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಲೇಖನದಲ್ಲಿ (https://acharyas.koyil.org/index.php/2018/02/21/alavandhar-kannada/) ನಾವು ಆಳವಂದಾರ್ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ.

ಪೆರಿಯ ನಂಬಿ – ಶ್ರೀರಂಗಂ

ತಿರುನಕ್ಷತ್ರಂ: ಮಾರ್ಗಳಿ, ಕೇಟ್ಟೈ

ಅವತಾರ ಸ್ಥಳಂ: ಶ್ರೀರಂಗಂ

ಆಚಾರ್ಯ: ಆಳವಂದಾರ್

ಶಿಷ್ಯರು: ಎಂಬೆರುಮಾನಾರ್, ಮಲೈ ಕುನಿಯ ನಿನ್ರಾರ್, ಆರಿಯೂರಿಲ್ ಶ್ರೀ ಶಠಗೋಪ ದಾಸರ್, ಅಣಿ ಅರಂಗತ್ತಮುದನಾರ್ ಪಿಳ್ಳೈ, ತಿರುವಾಯ್ ಕುಲಮುಡೈಯಾರ್ ಭಟ್ಟರ್, ಇತರರು.

ಇವರು ಪರಮಪದ ಹೊಂದಿದ ಸ್ಥಳ:  ಚೋಳ ದೇಶದ ಪಸಿಯದು (ಪಶುಪತಿ?) ಕೋಯಿಲ್

ಪೆರಿಯ ನಂಬಿ ಅವರು ಜನಿಸಿದ್ದು ಶ್ರೀರಂಗದಲ್ಲಿ ಮತ್ತು ಅವರು ಮಹಾ ಪೂರ್ಣ, ಪರಾಂಕುಶ ದಾಸ ಹಾಗು ಪೂರ್ಣಾಚಾರ್ಯ ಎಂದೂ ಸಹ ಕರೆಯಲ್ಪಡುತ್ತಾರೆ.

ಇವರು ಆಳವಂದಾರ್ ಅವರ ಪ್ರಧಾನ ಶಿಷ್ಯರಲ್ಲಿ ಒಬ್ಬರಾಗಿದ್ದು ಮತ್ತು ರಾಮಾನುಜರನ್ನು ಶ್ರೀರಂಗಕ್ಕೆ ಕರೆದು ತರಲು ಕಾರಣಕರ್ತರು. ಆಳವಂದಾರ್ ಅವರ ಕಾಲದ ನಂತರ, ರಾಮಾನುಜರನ್ನು ಶ್ರೀರಂಗಕ್ಕೆ ಕರೆದು ತರಲು, ಶ್ರೀರಂಗಂ ನಲ್ಲಿರುವ ಎಲ್ಲಾ ಶ್ರೀವೈಷ್ಣವರೂ ಪೆರಿಯ ನಂಬಿಯವರನ್ನು ಕೇಳಿಕೊಂಡರು. ಆದುದರಿಂದ ಅವರು ತಮ್ಮ ಸಂಸಾರವಂದಿಗರಾಗಿ ಶ್ರೀರಂಗವನ್ನು ಬಿಟ್ಟು ಕಾಂಚೀಪುರದ ಕಡೆಗೆ ಪ್ರಯಾಣವನ್ನು ಬೆಳೆಸುತ್ತಾರೆ.  ಅದೇ ಸಮಯದಲ್ಲಿ ರಾಮಾನುಜರೂ ಸಹ ಪೆರಿಯ ನಂಬಿಯನ್ನು ಕಾಣಲು ಕಾಂಚೀಪುರವನ್ನು ಬಿಟ್ಟು  ಹೊರಟಿರುತ್ತಾರೆ. ಇಬ್ಬರೂ ಮಧುರಾಂತಕದಲ್ಲಿ ಭೇಟಿ ಮಾಡಿದಾಗ ರಾಮನುಜರಿಗೆ ಪೆರಿಯ ನಂಬಿಗಳು ಅಲ್ಲಿಯೇ ಪಂಚಸಂಸ್ಕಾರವನ್ನು ಮಾಡಿಬಿಡುತ್ತಾರೆ. ಅವರು ಕಾಂಚೀಪುರಕ್ಕೆ ಹೋಗಿ ಸಂಪ್ರದಾಯದ ಅರ್ಥಗಳನ್ನು ರಾಮಾನುಜರಿಗೆ ಉಪದೇಶಿಸುತ್ತಾರೆ.  ಆದರೆ ರಾಮಾನುಜರ ಧರ್ಮಪತ್ನಿಯಿಂದಾದ ಕೆಲವು ಉಪಟಳಗಳಿಂದ, ಕಾಂಚೀಪುರವನ್ನು ತೊರೆದು ತಮ್ಮ ಸಂಸಾರದೊಂದಿಗೆ ಶ್ರೀರಂಗಕ್ಕೆ ಹಿಂತಿರುಗುತ್ತಾರೆ.

ಪೆರಿಯ ನಂಬಿ ಅವರ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ಘಟನೆಗಳನ್ನು ವಿವಿಧ ಪೂರ್ವಾಚಾರ್ಯ ಶ್ರೀಸೂಕ್ತಿಗಳಲ್ಲಿ ಉಲ್ಲೇಖಿಸಲಾಗಿದೆ.  ಅದರಲ್ಲಿನ ಕೆಲವನ್ನು ನಾವು ಇಲ್ಲಿ ನೋಡೋಣ:

  • ಅವರು ಆತ್ಮ ಗುಣಗಳಿಂದ ತುಂಬಿದ್ದವರು ಹಾಗು ರಾಮಾನುಜರೆಡೆಗೆ ಮಹಾನ್ ಬಾಂಧವ್ಯವನ್ನು ಹೊಂದಿದ್ದರು.  ತನ್ನ ಮಗಳು ಲೌಕಿಕ ಸಹಾಯದ ಅಪೇಕ್ಷೆಯಿಂದ ಬಂದಾಗಲೂ ಸಹ ಅವರು ಅವಳನ್ನು ರಾಮಾನುಜರ ಬಳಿ  ಪರಿಹಾರಕ್ಕಾಗಿ ಕಳುಹಿಸಿದರು
  • ಒಮ್ಮೆ ರಾಮಾನುಜರು ತಮ್ಮ ಎಲ್ಲಾ ಶಿಷ್ಯರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ, ಪೆರಿಯ ನಂಬಿಗಳು ಅವರ ಮುಂದೆ ದೀರ್ಘದಂಡ ಪ್ರಣಾಮವನ್ನು ಸಲ್ಲಿಸುತ್ತಾರೆ.  ತನ್ನ ಆಚಾರ್ಯನಿಂದ ಪ್ರಣಾಮಗಳನ್ನು ಸ್ವೀಕರಿಸಿದಂತೆ ಆಗುವುದು ಎಂದುಕೊಂಡ ರಾಮಾನುಜರು ಅದನ್ನು ಅಂಗೀಕರಿಸಲಿಲ್ಲ,  ಹೀಗೇಕೆ ಮಾಡಿದಿರಿ ಎಂದು ಪೆರಿಯ ನಂಬಿಗಳನ್ನು ಕೇಳಿದಾಗ ಅವರು ತಾವು ರಾಮಾನುಜರಲ್ಲಿ ಆಳವಂದಾರರನ್ನು ಕಂಡದ್ದಾಗಿ ತಿಳಿಸುತ್ತಾರೆ. ವಾರ್ತಾಮಾಲೈ ನಲ್ಲಿ ಬರುವ  “ಆಚಾರ್ಯನು ತನ್ನ ಶಿಷ್ಯರ ಮೇಲೆ ಬಹಳ ಗೌರವ ಇಟ್ಟುಕೊಳ್ಳಬೇಕು”  ಎಂಬ ವಾಕ್ಯದಂತೆ, ಪೆರಿಯ ನಂಬಿಗಳು ಅದರಂತೆಯೇ ನಡೆದಿದ್ದರು.
  •  ಮಾರನೇರಿ ನಂಬಿ (ಚತುರ್ಥ ವರ್ಣದಲ್ಲಿ ಜನಿಸಿದ್ದ ಓರ್ವ ಮಹಾನ್ ಶ್ರೀವೈಷ್ಣವ ಹಾಗು ಆಳವಂದಾರ್ ರ ಶಿಷ್ಯ) ಪರಮಪದವನ್ನು ಹೊಂದಿದಾಗ, ಆತನ ಚರಮ ಕೈಂಕರ್ಯಗಳನ್ನು ಪೆರಿಯ ನಂಬಿಗಳು ನಡೆಸಿದರು.  ಅವರ ಈ ಕಾರ್ಯವನ್ನು ಸ್ವೀಕರಿಸದ ಕೆಲ ಸ್ಥಳೀಯ ಶ್ರೀವೈಷ್ಣವರು, ಇದರ ಬಗ್ಗೆ ರಾಮಾನುಜರಲ್ಲಿ ದೂರು ನೀಡುತ್ತಾರೆ.  ರಾಮಾನುಜರು ಇದರ ಬಗ್ಗೆ ವಿಚಾರಿಸಿದಾಗ, ಪೆರಿಯ ನಂಬಿಗಳು ತಾವು ಆಳ್ವಾರ್ ತಿರುವುಳ್ಳಂ ನಂತೆ ತಿರುವಾಯ್ ಮೊಳಿಯ ಪಯಿಲುಂ ಶುಡರೊಳಿ (3.7) ಹಾಗು ನೆಡುಮಾರ್ಕ್ಕಡಿಮೈ (8.10) ದಶಕಗಳಂತೆ ನಡೆದುಕೊಂಡಿದ್ದಾಗಿ ತಿಳಿಸುತ್ತಾರೆ. ಈ ಐತೀಹ್ಯವನ್ನು ಅಳಗೀಯ ಮಣವಾಳ ಪೆರುಮಾಳ್ ನಾಯನಾರ್ ತಮ್ಮ ಆಚಾರ್ಯ ಹೃದಯದಲ್ಲಿ ತೋರಿಸಿದ್ದಾರೆ ಮತ್ತು ಗುರುಪರಂಪರಾ ಪ್ರಭಾವದಲ್ಲಿ ವಿವರಿಸಲಾಗಿದೆ.
  • ಒಮ್ಮೆ ಪೆರಿಯ ಪೆರುಮಾಳ್ ರಿಗೆ ಕೆಲವು ದುಷ್ಕರ್ಮಿಗಳಿಂದ ಅಪಾಯ ಒದಗಿದಾಗ,  ಪೆರಿಯ ಕೋಯಿಲ್ ನ ಸುತ್ತಲೂ ಪ್ರದಕ್ಷಿಣೆ ಮಾಡಲು ಪೆರಿಯ ನಂಬಿಗಳೇ ಸರಿಯಾದ ವ್ಯಕ್ತಿ ಎಂದು ನಿರ್ಧರಿಸಿದರು. ಅವರು ಕೂರತ್ತಾಳ್ವಾನನ್ನು ತಮ್ಮ ಜೊತೆ ಬರಲು ಕೇಳಿಕೊಳ್ಳುತ್ತಾರೆ ಏಕೆಂದರೆ ಪಾರತಂತ್ರ್ಯ ಸ್ವಭಾವವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡವರಲ್ಲೊಬ್ಬರು ಕೂರತ್ತಾಳ್ವಾನ್ ಎಂದು. ಇದನ್ನು ನಂಬಿಳ್ಳೈ ತಮ್ಮ ತಿರುವಾಯ್ ಮೊಳಿ (7.10.5) ಈಡು ವ್ಯಾಖ್ಯಾನದಲ್ಲಿ ತೋರಿಸಿದ್ದಾರೆ.
  • ಇವೆಲ್ಲಕ್ಕಿಂತಲೂ ಮಿಗಿಲಾಗಿ, ಶೈವ ರಾಜನು ರಾಮಾನುಜರನ್ನು ತನ್ನ ಆಸ್ಥಾನಕ್ಕೆ ಆಹ್ವಾನಿಸಿದಾಗ, ಕೂರತ್ತಾಳ್ವಾನ್ ಮಾರುವೇಶದಲ್ಲಿ ಹೋಗುತ್ತಾರೆ. ಆಳ್ವಾನನ ಜೊತೆ ಬಹಳ ವೃದ್ಧ ವಯಸ್ಕರಾದ ಪೆರಿಯನಂಬಿಗಳೂ ಹೋಗುತ್ತಾರೆ.   ರಾಜನು ಕಣ್ಣುಗಳನ್ನು ಕೀಳಬೇಕೆಂದು ಮಾಡಿದ ಆಜ್ಞೆಯನ್ನು ಒಪ್ಪಿದ ಪೆರಿಯ ನಂಬಿಗಳು, ತಮ್ಮ ವೃದ್ದ ವಯಸ್ಸಿನ ಕಾರಣ ನೋವು ಸಹಿಸಲಾರದೆ ತಮ್ಮ ಜೀವವನ್ನು ತೊರೆದು ಪರಮಪದ ಸೇರುತ್ತಾರೆ. ಆದರೆ ತಮ್ಮ ಪ್ರಾಣ ತ್ಯಜಿಸುವ ಸಮಯದಲ್ಲಿ,  ನಮಗೆ ಒಂದು ಬಹು ಮುಖ್ಯ ಅಂಶವನ್ನು ತೋರಿಸಿಕೊಟ್ಟಿದ್ದಾರೆ.  ಶ್ರೀರಂಗಂ ಇನ್ನು ಕೆಲವೇ ಮೈಲಿಗಳ ದೂರದಲ್ಲಿರುವುದು ಎಂದು ಹೇಳುವ ಆಳ್ವಾನ್ ಹಾಗು ಅತ್ತುಳಾಯ್ (ಪೆರಿಯ ನಂಬಿಗಳ ಪುತ್ರಿ), ಶ್ರೀರಂಗಂ ತಲುಪುವವರೆವಿಗೂ ಪೆರಿಯನಂಬಿಗಳು ತಮ್ಮ ಉಸಿರನ್ನು ಬಿಗಿಹಿಡಿದುಕೊಂಡಿದ್ದು, ಶ್ರೀರಂಗಂನಲ್ಲಿ ದೇಹ ತ್ಯಜಿಸಬಹುದು ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.  ಒಡನೆಯೇ ನಿಂತು ಬಿಡುವ ಪೆರಿಯ ನಂಬಿಗಳು, ತಮ್ಮ ಪ್ರಾಣವನ್ನು ಅಲ್ಲಿಯೇ ಆಗಲೇ ತ್ಯಜಿಸಿಬಿಡಲು ನಿರ್ಧರಿಸಿಬಿಡುತ್ತಾರೆ. ಯಾರಾದರೂ ಈ ಘಟನೆಯ ಬಗ್ಗೆ ತಿಳಿದು ಪ್ರಾಣವನ್ನು ತ್ಯಜಿಸಲು ಶ್ರೀರಂಗಂ (ಅಥವಾ ಯಾವುದಾದರೂ ದಿವ್ಯದೇಶ) ದಲ್ಲಿಯೇ ಇರಬೇಕು ಎಂದು ತೀರ್ಮಾನಿಸಿದರೆ ಅದು ಆ ಶ್ರೀವೈಷ್ಣವನ ವೈಭವವನ್ನು ಮಿತಿಗೊಳಿಸುತ್ತದೆ ಎಂದು ಪೆರಿಯ ನಂಬಿ ಹೇಳುತ್ತಾರೆ.    ಆಳ್ವಾರ್ ಹೇಳುವಂತೆ “ವೈಗುಂದಂ ಆಗುಂ ತಂ ಊರೆಲ್ಲಾಂ” (வைகுந்தம் ஆகும் தம் ஊரெல்லாம்) – ಎಲ್ಲೆಲ್ಲಿ ಶ್ರೀವೈಷ್ಣವರಿರುವನೊ ಆ ಸ್ಥಳವೇ ವೈಕುಂಠ ಆಗುವುದು.  ನಾವು ಎಲ್ಲಿಯೇ ಇದ್ದರೂ ಎಂಬೆರುಮಾನ್ ನ ಮೇಲೆ ಅವಲಂಬಿಸಿರುವುದೇ ಹೆಚ್ಚು ಮುಖ್ಯ –  ದಿವ್ಯ ದೇಶಗಳಲ್ಲಿ ವಾಸಿಸುವ ಬಹಳಷ್ಟು ಜನರು ಅದರ ಕೀರ್ತಿಗಳನ್ನು ಅರಿತುಕೊಳ್ಳದೇ ವಾಸಿಸುತ್ತಿದ್ದಾರೆ.  ಹಾಗೆಯೇ,  ದೂರಸ್ಥ ಸ್ಥಳಗಳಲ್ಲಿ (ಚಾಂಡಿಲಿ-ಗರುಡನ ಪ್ರಸಂಗ ನೆನೆಪಿಸಿಕೊಳ್ಳಿ) ವಾಸಿಸುವ ಇತರರು ನಿರಂತರವಾಗಿ ಎಂಬೆರುಮಾನ್ ಬಗ್ಗೆ ಚಿಂತಿಸುತ್ತಿರುತ್ತಾರೆ.

ಈ ರೀತಿ ನಾವು ಪೆರಿಯ ನಂಬಿ ಎಷ್ಟು ಉತ್ಕೃಷ್ಟವಾದವರೆಂಬುದನ್ನು ಕಾಣಬಹುದು. ಇವರು ಎಂಬೆರುಮಾನ್ ರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದವರು. ನಮ್ಮಾಳ್ವಾರ್ ಹಾಗು ತಿರುವಾಯ್ ಮೊಳಿಯ ಮೇಲೆ ಇವರಿಗಿದ್ದ ಬಾಂಧವ್ಯದಿಂದ ಇವರನ್ನು ಪರಾಂಕುಶ ದಾಸರ್ ಎಂದೂ ಸಹ ಕರೆಯುತ್ತಾರೆ. ಇವರ ತನಿಯನ್ ನಿಂದ, ಇವರು ಶ್ರೀಯ:ಪತಿಯ ಕಲ್ಯಾಣ ಗುಣಾನುಭವದಲ್ಲಿ ಮುಳುಗಿದ್ದರೆಂದು ಮತ್ತು ಈ ಅನುಭವದಲ್ಲಿ ಸಂಪೂರ್ಣ ತೃಪ್ತಿ ಹೊದಿದ್ದರೆಂದೂ ತಿಳಿಯುತ್ತದೆ. ಅವರಂತಹುದೇ ಗುಣಗಳನ್ನು ನಮಗೂ ಸಹ ದಯಪಾಲಿಸಿ ಎಂದು ಅವರ ಪಾದಪದ್ಮಗಳಲ್ಲಿ ಬೇಡಿಕೊಳ್ಳೋಣ.

ಪೆರಿಯ ನಂಬಿ ಅವರ ತನಿಯನ್

ಕಮಲಾಪತಿ ಕಲ್ಯಾಣ ಗುಣಾಂಮೃತ  ನಿಶೇವಯಾ
ಪೂರ್ಣ ಕಾಮ್ಯ ಸತತಂ ಪೂರ್ಣಾಯ ಮಹತೇ ನಮ:

ನಮ್ಮ ಮುಂದಿನ ಲೇಖನದಲ್ಲಿ ಎಂಬೆರುಮಾನಾರ್ ವೈಭವದ ಬಗ್ಗೆ ನೋಡೋಣ.

ಅಡಿಯೇನ್ ಎಂಬಾರ್ ತಿರುನಾರಾಯಣ ರಾಮಾನುಜ ದಾಸನ್

ಸಂಗ್ರಹ – http://acharyas.koyil.org/index.php/2012/09/01/periya-nambi-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org