ಮಧುರಕವಿ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

MadhuraKavi Azhwar1ತಿರುನಕ್ಷತ್ರಮ್:  ಚಿತ್ತಿರೈ, ಚಿತ್ತಿರೈ

ಅವತಾರ ಸ್ಥಳ:  ತಿರುಕ್ಕೋಳೂರ್

ಆಚಾರ್ಯನ್:  ನಮ್ಮಾಳ್ವಾರ್

ಕೃತಿಗಳು:  ಕಣ್ಣಿನುಣ್ ಚಿರುತ್ತಾಮ್ಬು

ಪರಮಪದಕ್ಕೆ ಸೇರಿದ ಸ್ಥಳ: ಆಳ್ವಾರ್ ತಿರುನಗರಿ

ನಂಪಿಳ್ಳೈ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಮಧುರಕವಿ ಆಳ್ವಾರರ ವೈಭವಗಳನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. ಅದರ ಕುಡಿನೋಟ ಇಲ್ಲಿದೆ.

ಋಷಿಗಳು ತಮ್ಮ ದೃಷ್ಟಿಯನ್ನು ಸಾಮಾನ್ಯ ಶಾಸ್ತ್ರಗಳ ಮೇಲೆ ಕೇಂದ್ರೀಕರಿಸಿದ್ದಾರೆ; ಅವುಗಳು ಪುರುಷಾರ್ಥ (ಆತ್ಮದ ಗುರಿ ಸಾಧನೆ) ಗಳಾದ ಐಶ್ವರ್ಯ, ಕೈವಲ್ಯ ಮತ್ತು ಭಗವತ್ ಕೈಂಕರ್ಯ ಗಳನ್ನು ಪ್ರತಿಪಾದಿಸುತ್ತವೆ. ಆಳ್ವಾರ್ ಗಳು ತಮ್ಮ ದೃಷ್ಟಿಯನ್ನು ಉತ್ತಮ ಪುರುಷಾರ್ಥದ (ಅಂತಿಮ ಗುರಿ ಸಾಧನೆ) ಮೇಲೆ ಕೇಂದ್ರೀಕರಿಸಿದ್ದಾರೆ; ಅದೆಂದರೆ ಶ್ರೀಮನ್ನಾರಾಯಣನಿಗೆ ಪ್ರೀತಿಯ ಸೇವೆ. ಮಧುರಕವಿ ಆಳ್ವಾರರು ತಮ್ಮ ದೃಷ್ಟಿಯನ್ನು ಭಗವತ್ ಕೈಂಕರ್ಯದಲ್ಲಿ ಅತ್ಯುಚ್ಚ ವಾದ ಭಾಗವತ ಕೈಂಕರ್ಯ ದಲ್ಲಿ ಕೇಂದ್ರೀಕರಿಸಿದರು – ಭಗವಂತನು ಸಹಜವಾಗಿಯೇ ತನ್ನ ಭಕ್ತರಿಗೆ ಮಾಡುವ ಸೇವೆಯನ್ನು ತನಗೆ ಮಾಡುವ ಸೇವೆಗಿಂತ ಅಧಿಕವಾಗಿ ಮೆಚ್ಚುತ್ತಾನೆ.

ನಾವು ಇದನ್ನು ಶ್ರೀ ರಾಮಾಯಣದಲ್ಲಿ ಸಹ ಕಾಣಬಹುದು. ಶ್ರೀ ರಾಮಾಯಣವು ವೇದ ಉಪಬ್ರಹ್ಮಣ (ವೇದಗಳ ಗಹನವಾದ ಅರ್ಥಗಳನ್ನು ವಿವರಿಸು ವಂತಹದು) ಆಗಿರುವುದರಿಂದ, ಅದು ವೇದಗಳ ಮುಖ್ಯ ಅಂಶಗಳನ್ನು ಪ್ರತಿಷ್ಠಾಪಿಸುತ್ತದೆ.

  • ಭಗವಾನ್(ಶ್ರೀ ರಾಮ) ಧರ್ಮದ ಸಾಕಾರ ರೂಪ. ಆದ್ದರಿಂದ ಆತನು ಸಾಮಾನ್ಯ ಧರ್ಮಗಳಾದ “ಪಿತೃವಚನ ಪರಿಪಾಲನ” ಮುಂತಾದವುಗಳನ್ನು ಪ್ರತಿಪಾದಿಸಿದನು.
  • ಇಳಯ ಪೆರುಮಾಳ್(ಲಕ್ಷ್ಮಣನು) ವಿಶೇಷ ಧರ್ಮವಾದ ಶೇಷತ್ವವನ್ನು ಪ್ರತಿಪಾದಿಸಿದನು – ಅoದರೆ ಶೇಷನು(ಸೇವಕನು) ನಿರಂತರವಾಗಿ ಶೇಷಿಯನ್ನು(ಯಜಮಾನನನ್ನು) ಅನುಸರಿಸುವುದು.
  • ಶ್ರೀ ಭರತಾಳ್ವಾನ್ (ಭರತನು) ಪಾರತಂತ್ರ್ಯವನ್ನು – ಜೀವಾತ್ಮನ ನಿಜವಾದ ಸ್ವರೂಪವನ್ನು – ಪ್ರತಿಪಾದಿಸಿದನು. ಪಾರತಂತ್ರ್ಯವೆಂದರೆ ತನ್ನ ನಿರೀಕ್ಷೆಗಳೊಂದು ಇಲ್ಲದೆ ಪೂರ್ಣವಾಗಿ ಒಡೆಯನ ಅಭಿಲಾಷೆಗಳನ್ನು ನೆರವೇರಿಸುವುದು. ಭಗವಂತನ ಬಯಕೆಯು ಭರತನು ಅಯೋಧ್ಯೆಯಲ್ಲಿಯೇ ಇದ್ದು ರಾಜ್ಯವನ್ನು ಪಾಲಿಸಬೇಕೆಂದಿದ್ದರಿಂದ ಭರತನು ಅದನ್ನು ತನ್ನ ಸರ್ವೋಚ್ಛ ಆಜ್ಞೆಯಂತೆ ಸ್ವೀಕರಿಸಿದನು ಮತ್ತು 14 ವರ್ಷಗಳ ಕಾಲ ಅಯೋಧ್ಯೆಯ ಹೊರಗೆ ನೆಲೆಸಿ ಶ್ರೀ ರಾಮನ ಉಡುಪು ಮತ್ತು ಅನುಷ್ಠಾನಗಳನ್ನು ಅನುಸರಿಸಿದನು.
  • ಶ್ರೀ ಶತ್ರುಘ್ನಾಳ್ವಾನ್(ಶತ್ರುಘ್ನನು) ನಮ್ಮ ಸ್ವರೂಪದ ಸಾರವಾದ ಭಾಗವತ ಶೇಷತ್ವವನ್ನು ಪ್ರತಿಪಾದಿಸಿದ್ದಾನೆ. ಆತನು ಸುಮ್ಮನೆ ಭರತನನ್ನು ಅನುಸರಿಸಿಕೊಂಡು ಬೇರೆ ಯಾವುದರಲ್ಲೂ ಆಸಕ್ತಿ ತೋರಿಸದೆ ಅವನ ಸೇವೆಯನ್ನು ಮಾಡುತ್ತಿದ್ದನು.

ಭರತನಿಗೆ ಶತ್ರುಘ್ನನ ಸಂಪೂರ್ಣ ಶರಣಾಗತಿಯಿಂದಾಗಿ, ಶ್ರೀ ರಾಮನಿಗೆ ಅವನು ಇನ್ನಿಬ್ಬರು ಸಹೋದರರಿಗಿಂತ(ಲಕ್ಶ್ಮಣ ಮತ್ತು ಭರತ) ಅಧಿಕ ಪ್ರಿಯನಾಗಿದ್ದನು. ಮಧುರಕವಿ ಆಳ್ವಾರರು ಶತ್ರುಘ್ನಾಳ್ವಾನನಂತೆ ಭಾಗವತ ನಿಷ್ಥೆಯಲ್ಲಿ ಪೂರ್ಣವಾಗಿ ಸ್ಥಾಪಿತರಾಗಿದ್ದರು. ಮಧುರಕವಿ ಆಳ್ವಾರರೂ ಸಹ ನಮ್ಮಾಳ್ವಾರರಿಗೆ ಸಂಪೂರ್ಣ ಶರಣಾಗತರಾಗಿದ್ದರು ಮತ್ತು ಅವರಿಗೆ ಪೂರ್ಣ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರಿಗೆ ನಮ್ಮಾಳ್ವಾರರೇ ತಮ್ಮ ಗುರಿ ಮತ್ತು ಗುರಿಸಾಧನೆಯ ಪ್ರಕ್ರಿಯೆಯಾಗಿದ್ದರು. ಇದನ್ನೇ ಮಧುರಕವಿ ಆಳ್ವಾರರು ತಮ್ಮ ದಿವ್ಯ ಪ್ರಬಂಧದಲ್ಲಿ ಸ್ಥಾಪಿಸಿದ್ದಾರೆ.

ಪಿಳ್ಳೈಲೋಕಾಚಾರ್ಯರು  ತಮ್ಮ ಮೇರು ಕೃತಿಯಾದ ಶ್ರೀವಚನ ಭೂಷಣದ ಕಡೆಯ ಪ್ರಕರಣದಲ್ಲಿ ಆಚಾರ್ಯ ಅಭಿಮಾನ ನಿಷ್ಥೆಯ ವೈಭವಗಳನ್ನು ಪೂರ್ಣವಾಗಿ ತೆರೆದಿಟ್ಟು, ಮಧುರಕವಿ ಆಳ್ವಾರರ ಜೀವನ ಮತ್ತು ನಮ್ಮಾಳ್ವಾರರಿಗೆ ಅವರ ನಂಟನ್ನು ಉದಾಹರಿಸುತ್ತಾ ಈ ತತ್ತ್ವವನ್ನು ಪ್ರತಿಪಾದಿಸಿದ್ದಾರೆ. 8 ನೆಯ ಪ್ರಕರಣದಲ್ಲಿ ಭಗವಂತನ ನಿರ್ಹೇತುಕ ಕೃಪೆ ಯನ್ನು ವಿವರಿಸಿದ್ದಾರೆ. ಅದೇ ಸಮಯದಲ್ಲಿ ಭಗವಂತನು ಜೀವಾತ್ಮರಿಗೆ ಅವರ ಕರ್ಮಫಲವನ್ನು ಕೊಡುವುದಕ್ಕೂ ಸಹ ಬಧ್ಧನಾಗಿದ್ದಾನೆ. ಅಂತೆಯೇ ಒಬ್ಬೊಬ್ಬರಿಗೆ ಭಗವಾನ್ ತನ್ನನ್ನು ಸ್ವೀಕರಿಸುತ್ತಾನೋ ಇಲ್ಲವೋ ಎಂಬ ಸಂದೇಹ ಬರಬಹುದು. 9 ನೆಯ(ಕಡೆಯ) ಪ್ರಕರಣದಲ್ಲಿ ಪಿಳ್ಳೈಲೋಕಾಚಾರ್ಯರು ಚರಮ ಉಪಾಯದ ಹಿರಿಮೆಯನ್ನು ಸ್ಥಾಪಿಸಿದ್ದಾರೆ; ಅoದರೆ ಆಚಾರ್ಯರ ಮೇಲೆ ಅವಲಂಬಿತರಾಗಿರುವುದು ಮತ್ತು ಅದು ಹೇಗೆ ಜೀವಾತ್ಮನನ್ನು ವಿಮೋಚಿತಗೊಳಿಸುತ್ತದೆ ಎಂದು. ಈಗ ಅದನ್ನು ನೋಡೋಣ.

ಸೂತ್ರ 407ರಲ್ಲಿ ಹೀಗೆ ತೋರಿಸಿದೆ: ಎಂಬೆರುಮಾನ್(ಭಗವಾನ್) ಸ್ವತಂತ್ರನಾದ್ದರಿಂದ ಶಾಸ್ತ್ರವನ್ನು(ಒಬ್ಬರ ಕರ್ಮ ಆಧರಿಸಿ ಫಲ ನೀಡುವುದು) ಅನುಸರಿಸಿ ತನ್ನನ್ನು ತಿರಸ್ಕರಿಸಬಹುದು ಅಥವಾ ಕಾರುಣ್ಯದಿಂದ ತನ್ನನ್ನು ಸ್ವೀಕರಿಸಬಹುದು ಎಂದು ಒಬ್ಬೊಬ್ಬರಿಗೆ ಸಂದೇಹ ಬರಬಹುದು. ಮಾಮುನಿಗಳು ತಮ್ಮ ವ್ಯಾಖ್ಯಾನದಲ್ಲಿ ಹೀಗೆ ಸೇರಿಸುವುದರ ಮೂಲಕ ಸೂತ್ರವು ಪೂರ್ಣಗೊಳ್ಳುತ್ತದೆ ಎಂದು ತೋರಿಸಿದ್ದಾರೆ “ನಾವು ಪರತಂತ್ರರಾದ ಆಚಾರ್ಯರ(ಎಂಬೆರುಮಾನ್ ಮೇಲೇ ಪೂರ್ಣ ಅವಲಂಬಿತರಾಗಿರುವ) ಮೇಲೆ ಅವಲಂಬಿತರಾದರೆ ಸಂದೇಹವೇ ಬೇಡ, ಅವರು ಖಚಿತವಾಗಿ ನಮ್ಮನ್ನು ವಿಮೋಚಿತಗೊಳಿಸುತ್ತಾರೆ , ಏಕೆಂದರೆ ಆಚಾರ್ಯರು ಕಾರುಣ್ಯದ ಸಾಕಾರ ಮತ್ತು ಜೀವಾತ್ಮನ ಏಳಿಗೆಯನ್ನು ಮಾತ್ರ ನೋಡುತ್ತಾರೆ.

ಸೂತ್ರ 408ರಲ್ಲಿ ಹೀಗೆ ವಿವರಿಸಿದೆ: ಇದನ್ನು 10 ಆಳ್ವಾರುಗಳ ಪಾಶುರಗಳಿಂದ ಸಾಬೀತುಪಡಿಸಲಾಗದು(ಮಧುರಕವಿ ಆಳ್ವಾರ್ ಮತ್ತು ಆಂಡಾಳ್ ಹೊರತುಪಡಿಸಿ), ಏಕೆಂದರೆ ಅವರು ಪೂರ್ಣವಾಗಿ ಎಂಬೆರುಮಾನ್(ಭಗವಾನ್)ಗೆ ಶರಣಾಗತರಾದವರು. ಈ ಆಳ್ವಾರುಗಳು ಎಂಬೆರುಮಾನನ ದೈವಿಕ ಆಶೀರ್ವಾದದಿಂದ ನಿಷ್ಕಳಂಕ ಜ್ನಾನ ಪಡೆದವರು. ಆವರು ಭಗವದನುಭವದಲ್ಲಿ ತಲ್ಲೀನರಾಗಿರುವಾಗ ಭಾಗವತರನ್ನು ವೈಭವೀಕರಿಸುತ್ತಾರೆ. ಆದರೆ ಅವರು ಎಂಬೆರುಮಾನ್ ನಿಂದ ಪ್ರತ್ಯೇಕಗೊಂಡಾಗ  ಭಾಗವತರ ಮೇಲೆ ಅಸಮಾಧಾನಗೊಳ್ಳುತ್ತಾರೆ(ಮಾಮುನಿಗಳು ತಮ್ಮ ವ್ಯಾಖ್ಯಾನದಲ್ಲಿ ಅನೇಕ ಪಾಶುರಗಳನ್ನು ಉಲ್ಲೇಖಿಸಿದ್ದಾರೆ). ಮಾಮುನಿಗಳು ಸಂಕ್ಷೇಪವಾಗಿ ನಾವು ನಿಜವಾದ ಆಚಾರ್ಯ ವೈಭವಗಳನ್ನು 10 ಆಳ್ವಾರುಗಳ ಪಾಶುರಗಳ ಮೂಲಕ ನಿರ್ಧರಿಸಲಾಗದು, ಆದರೆ ನಾವು ಅದನ್ನು ಮಧುರಕವಿ ಆಳ್ವಾರರ ಪಾಶುರಗಳಿಂದ ಮಾಡಬಹುದು ಎಂದಿದ್ದಾರೆ.

ಸೂತ್ರ 409ರಲ್ಲಿ ಹೀಗೆ ವಿವರಿಸಿದೆ: ಮಧುರಕವಿ ಆಳ್ವಾರರು ಇತರ ಆಳ್ವಾರರಿಗಿಂತ ಅತಿ ಶ್ರೇಷ್ಠರು ಏಕೆಂದರೆ ಅವರು ತಮ್ಮ ಗಮನವನ್ನು ಆಚಾರ್ಯ(ನಮ್ಮಾಳ್ವಾರ್) ವೈಭವದ ಮೇಲೆ ಮಾತ್ರ ಕೇಂದ್ರೀಕರಿಸಿದ್ದಾರೆ, ಇತರ ಆಳ್ವಾರರಂತೆ ಭಾಗವತರನ್ನು ಕೆಲವೊಮ್ಮೆ ವೈಭವೀಕರಿಸಿ ಮತ್ತೆ ಕೆಲವೊಮ್ಮೆ ನಿರ್ಲಕ್ಷಿಸುವುದಿಲ್ಲ. ಮಧುರಕವಿ ಆಳ್ವಾರರ ನುಡಿಗಳ ಮೂಲಕ ನಾವು ಆಚಾರ್ಯ ವೈಭವಗಳನ್ನು ಸ್ಥಾಪಿಸಬಹುದು.

ಮಾಮುನಿಗಳು ಮಧುರಕವಿ ಆಳ್ವಾರರ ವೈಭವಗಳನ್ನು ತಮ್ಮ ಉಪದೇಶ ರತ್ನಮಾಲೆಯ 25ನೇ ಮತ್ತು 26ನೇ ಪಾಶುರಗಳಲ್ಲಿ ವಿವರಿಸಿದ್ದಾರೆ.

25ನೆಯ ಪಾಶುರದಲ್ಲಿ ಅವರು ಹೇಳಿರುವುದೇನೆಂದರೆ ಮಧುರಕವಿ ಆಳ್ವಾರರ ತಿರುಅವತಾರ(ಉದಯ) ದಿನ – ಚಿತ್ತಿರೈ/ಚಿತ್ತಿರೈ,ಇತರ ಆಳ್ವಾರರುಗಳ ಅವತಾರ ದಿನಗಳಿಗಿಂತ ಮಿಗಿಲಾಗಿ, ಒಬ್ಬ ಪ್ರಪನ್ನನ ಸ್ವರೂಪಕ್ಕೆ ಬಹು ಸೂಕ್ತವಾದದ್ದು.

26ನೆಯ ಪಾಶುರದಲ್ಲಿ ಅವರು ಮಧುರಕವಿ ಆಳ್ವಾರರ್ ಮತ್ತು ಅವರ ಪ್ರಬಂಧದ ವೈಭವಗಳನ್ನು ಅತ್ಯದ್ಭುತವಾಗಿ ವಿವರಿಸಿದ್ದಾರೆ.

ವಾಯ್ತ ತಿರುಮಣ್ತಿರತ್ತಿನ್ ಮತ್ತಿಮಮಾಮ್ ಪದಮ್ ಪೋಲ್
ಚೀರ್ತ್ತ ಮಧುರಕವಿ ಚೆಯ್ ಕಲೈಯೈ
ಆರ್ತ್ತ ಪುಗಳ್ ಆರಿಯರ್ಗಳ್ ತಾಙ್ಗಳ್ ಅರುಳಿಚೆಯಲ್ ನಡುವೇ
ಚೇರ್ವಿತ್ತಾರ್ ತಾತ್ಪರಿಯಮ್ ತೇರ್ನ್ತು

ಪಿಳ್ಳೈಲೋಕಮ್ ಜೀಯರ್ ಈ ಪಾಶುರಕ್ಕೆ ಸುಂದರವಾದ ವಿವರಣೆಯನ್ನು ನೀಡುತ್ತಾರೆ. ತಿರುಮಂತ್ರದಲ್ಲಿ ನಮ: ಪದವನ್ನು ಇಲ್ಲಿ ಕಣ್ಣಿನುಣ್ ಚಿರುತ್ತಾಮ್ಬುಗೆ ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ತಿರುಮಂತ್ರವು ತನ್ನ ವಾಚಕರಿಗೆ ಈ ಸಂಸಾರಬಂಧನದಿಂದ ಮುಕ್ತಗೊಳಿಸುವುದೆಂದು ವೈಭವೀಕರಿಸಲ್ಪಟ್ಟಿದೆ. ಈ ತಿರುಮಂತ್ರದಲ್ಲಿ ನಮ: ಪದವು ಬಹು ಮುಖ್ಯವಾದ ಪದ – ಅದು ನಮ್ಮನ್ನು ರಕ್ಷಿಸಿಕೊಳ್ಳುವದರಲ್ಲಿ ನಾವು ಭಾಗಿಗಳಲ್ಲ ಮತ್ತು ನಾವು ನಮ್ಮ ರಕ್ಷಣೆಗಾಗಿ ನಮ್ಮ ಒಡೆಯ(ಎoಬೆರುಮಾನ್)ನನ್ನು ಸಂಪೂರ್ಣವಾಗಿ ಅವಲಂಬಿಸಬೇಕು ಎಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ. ಇದೇ ತತ್ವವನ್ನು ಮಧುರಕವಿ ಆಳ್ವಾರರರು (ಏಕೆಂದರೆ ತಮ್ಮ ಆಚಾರ್ಯ ನಿಷ್ಠೆಯಿಂದಾಗಿ ಅವರೇ ಶ್ರೇಷ್ಠರಾಗಿದ್ದಾರೆ) ತಮ್ಮ ಪ್ರಬಂಧದಲ್ಲಿ ನಾವು ನಮ್ಮ ರಕ್ಷಣೆಗಾಗಿ ನಮ್ಮ ಆಚಾರ್ಯರನ್ನು ಸಂಪೂರ್ಣವಾಗಿ ಅವಲಂಬಿಸಬೇಕು ಎಂದು ವಿವರಿಸಿದ್ದಾರೆ. ಆದ್ದರಿಂದ ಅದು ವಾಸ್ತವವಾಗಿ ಶಾಸ್ತ್ರಗಳ ಸಾರವನ್ನು ತೆರೆದಿಡುವುದರಿಂದ, ನಮ್ಮ ಪೂರ್ವಾಚಾರ್ಯರು ಈ ಪ್ರಬಂಧವನ್ನು 4000 ದಿವ್ಯ ಪ್ರಬಂಧಗಳ ಸಂಗ್ರಹದಲ್ಲಿ ಸೇರಿಸಿದ್ದಾರೆ. ಮಧುರಕವಿ ಆಳ್ವಾರರು 27 ನಕ್ಷತ್ರಗಳ ಮಧ್ಯೆ ಬರುವ ಚಿತ್ತಿರೈ ನಕ್ಷತ್ರದಲ್ಲಿ ಜನಿಸಿದ ಹಾಗೆ, ಅವರ ಪ್ರಬಂಧವು ಕೂಡ ದಿವ್ಯ ಪ್ರಬಂಧ ರತ್ನಹಾರದ ಕೇಂದ್ರ ಅಂಶವೆಂದು ಪರಿಗಣಿಸಲ್ಪಟ್ಟಿದೆ.

ಹೀಗೆ, ಎಂಬೆರುಮಾನಾರ್, ನಂಪಿಳ್ಳೈ, ಪಿಳ್ಳೈ ಲೋಕಾಚಾರ್ಯರು, ಮಾಮುನಿಗಳು ಮತ್ತು ಪಿಳ್ಳೈಲೋಕಮ್ ಜೀಯರ್ ಅವರುಗಳು ಹೇಗೆ ಒಂದೇ ತತ್ತ್ವವನ್ನು ವಿವಿಧ ಕೋನಗಳಿಂದ ಸುಂದರವಾಗಿ ವರ್ಣಿಸಿದ್ದಾರೆ ಎಂದು ನಾವು ನೋಡಬಹುದು.

ಈ ಅರಿವಿನಿಂದ ಈಗ ನಾವು ಅವರ ಚರಿತ್ರೆಯನ್ನು ತಿಳಿದುಕೊಳ್ಳೋಣ.

ಮಧುರಕವಿ ಆಳ್ವಾರ್ ಚೈತ್ರ ಮಾಸ, ಚಿತ್ರಾ ನಕ್ಷತ್ರದಲ್ಲಿ ತಿರುಕ್ಕೋಳೂರ್ ನಲ್ಲಿ ಜನಿಸಿದರು. ಹೇಗೆ ಸೂರ್ಯನ ಕಿರಣಗಳು ಸ್ವತ: ಸೂರ್ಯನಿಗಿಂತ ಮೊದಲೇ ಕಾಣಿಸಿಕೊಳ್ಳುವವೋ, ಹಾಗೆ ಅವರು ನಮ್ಮಾಳ್ವಾರರ ದೈವಿಕ ಉದಯಕ್ಕೆ ಕೆಲವು ಕಾಲ ಮೊದಲು ಜನಿಸಿದರು. ಅವರ ಶ್ರೇಷ್ಠತೆಯನ್ನು ಕಂಡು, ದಿವ್ಯಸೂರಿ ಚರಿತೆಯಲ್ಲಿ, ಗರುಡವಾಹನ ಪಂಡಿತರು ಅವರನ್ನು “ಕುಮುದ ಗಣೇಶರ” ಅಥವಾ “ಗರುಡಾಳ್ವಾರರ” ಒಂದು ಅಂಶವೆಂದು ವೈಭವೀಕರಿಸಿದ್ದಾರೆ (ಆಳ್ವಾರುಗಳು ಎಂಬೆರುಮಾನ್ ನಿಂದ ಈ ಸಂಸಾರದಿಂದ ಆರಿಸಲ್ಪಟ್ಟು ದೈವಿಕವಾಗಿ ಆಶೀರ್ವದಿಸಲ್ಪಟ್ಟಿದ್ದರು).

ಅವರು ಸಾಮವೇದದ ಅಂಗವಾದ ಪೂರ್ವಶಿಖಾ ಬ್ರಾಹ್ಮಣರ ಒಂದು ಕುಟುಂಬದಲ್ಲಿ ಜನಿಸಿದರು. ಸೂಕ್ತ ವಯಸ್ಸಿನಲ್ಲಿ ಅವರಿಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಳ, ಉಪನಯನ, ಇತ್ಯಾದಿಗಳು ನಡೆದವು, ಮತ್ತು ಅವರು ವೇದ, ವೇದಾಂತ, ಪುರಾಣ, ಇತಿಹಾಸ, ಇತ್ಯಾದಿಗಳನ್ನು ಅಭ್ಯಸಿಸಿದರು. ಅವರು ಎಂಬೆರುಮಾನ್ ನನ್ನು ಬಿಟ್ಟು ಇತರ ಎಲ್ಲದರಿಂದ ಬೇರೆಯಾಗಿದ್ದರು ಮತ್ತು ಅಯೋಧ್ಯಾ, ಮಥುರಾ, ಇತ್ಯಾದಿ ಉತ್ತರಭಾರತದ ದಿವ್ಯದೇಶ/ಕ್ಷೇತ್ರಗಳಲ್ಲಿ ತೀರ್ಥಯಾತ್ರೆ ಕೈಗೊಂಡರು.

MadhuraKavi Azhwar2ಮಧುರಕವಿ ಆಳ್ವಾರ್, ನಮ್ಮಾಳ್ಹ್ವಾರ್ ಮತ್ತು ನಾಥಮುನಿಗಳು – ಕಾಂಚೀಪುರಮ್

ಮಧುರಕವಿ ಆಳ್ವಾರರ ನಂತರ ಜನಿಸಿದ ನಮ್ಮಾಳ್ವಾರರು, ತಾಯಿಯ ಹಾಲನ್ನು ಕುಡಿಯಲೂ ಸಹ ಆಸಕ್ತಿಯಿಲ್ಲದೆ ಮತ್ತು ಯಾವ ಮಾತನ್ನೂ ಆಡದೆ (ಸಂಪೂರ್ಣ ಮೌನವಾಗಿ) ಉಳಿದಿದ್ದರು. ಅವರ ತಂದೆ ತಾಯಿಗಳಾದ ಕಾರಿ ಮತ್ತು ಉದಯನಂಗೈ, ಅವರ ಜನನದ 12ನೆಯ ದಿನ, ಮಗುವಿನ ವರ್ತನೆಯಿಂದ ಬಹು ಆತಂಕಗೊಂಡು, ತಾಮ್ರಭರಣಿ ನದಿಯ ದಕ್ಷಿಣ ದಿಕ್ಕಿಗೆ ಇರುವ, ಸುಂದರವಾಗಿ ಶಂಖ ಮತ್ತು ಚಕ್ರಗಳಿಂದ ಅಲಂಕೃತನಾದ,  ಕಮಲದಂತೆ ಸುಂದರವಾದ ನೇತ್ರಗಳುಳ್ಳವನಾದ, ಅಭಯ ಹಸ್ತವನ್ನು ಹಿಡಿದ, ಮತ್ತು ದಿವ್ಯಮಹಿಷಿಗಳಾದ ಶ್ರೀದೇವಿ, ಭೂದೇವಿ ಮತ್ತು ನೀಳಾದೇವಿ ಸಮೇತನಾದ, ತನ್ನ ಸುಂದರವಾದ ದೇವಸ್ಥಾನದಲ್ಲಿರುವ, ಪೊಲಿನ್ದು ನಿಣ್ರ ಪಿರಾನ್ ಎಂಬೆರುಮಾನನ ಮುಂದೆ ಕರೆದುಕೊಂಡು ಹೋದರು. ಎಂಬೆರುಮಾನನ ಮುಂದೆ ಆ ಮಗುವಿಗೆ ಮಾರನ್ (ಇತರರಿಗಿಂತ ಭಿನ್ನವಾದವನು) ಎಂದು ಹೆಸರಿಟ್ಟರು ಮತ್ತು ಆ ಮಗುವನ್ನು ದಿವ್ಯವಾದ ಹುಣಿಸೇಮರದ ಕೆಳಗೆ ಬಿಟ್ಟರು ಮತ್ತು ಆತನನ್ನು ಒಂದು ದಿವ್ಯವಾದ ವ್ಯಕ್ತಿತ್ವವುಳ್ಳವನಾಗಿ ಪರಿಗಣಿಸಿ ಅಲ್ಲಿ ಪೂಜಿಸಿದರು. ಪರಮಪದನಾಥನು ನಂತರ ವಿಶ್ವಕ್ಸೇನರಿಗೆ ಹೋಗಿ ನಮ್ಮಾಳ್ವಾರರಿಗೆ ಪಂಚಸಂಸ್ಕಾರ ಮಾಡಲು ಮತ್ತು ದ್ರಾವಿಡ ವೇದವನ್ನು ಮತ್ತು ಎಲ್ಲ ರಹಸ್ಯ ಮಂತ್ರಗಳು/ಅರ್ಥಗಳನ್ನು ಉಪದೇಶಿಸಲು ಆದೇಶಿಸುತ್ತಾನೆ (ಇದರಿಂದ ನಾವು ನಾಯನಾರ್ ಅವರು ‘ಆಚಾರ್ಯ ಹೃದಯಂ’ ನಲ್ಲಿ ಸ್ಪಷ್ಟಪಡಿಸಿರುವ ಹಾಗೆ ದ್ರಾವಿಡ ವೇದವೂ ಕೂಡ ಸನಾತನವಾದದ್ದೆಂದು ಅರಿಯಬಹುದು) ಮತ್ತು ವಿಶ್ವಕ್ಸೇನರು ಹಾಗೆಯೇ ಸಹಕರಿಸಿದರು.

ನಮ್ಮಾಳ್ವಾರರು ನಂತರ 16 ವರ್ಷಗಳ ಕಾಲ ತಿರುಪ್ಪುಳಿಯಾಳ್ವಾರ್(ದಿವ್ಯ ಹುಣಿಸೆಮರ)ದ ಅಡಿಯಲ್ಲಿ ನೆಲೆಸಿದರು. ಅವರ ತಂದೆತಾಯಿಗಳು ಅವರ ಹಿರಿಮೆಯನ್ನು ಅರಿತರು ಆದರೆ ಇತರರೊಂದಿಗೆ ಹಂಚಿಕೊಳ್ಳಲಿಲ್ಲ ಏಕೆಂದರೆ ಅನೇಕರು ಆಳ್ವಾರರ ಹಿರಿಮೆಯನ್ನು ಅರಿಯಲಿಲ್ಲ. ಆಳ್ವಾರರು ತಿರುಕ್ಕುರುಂಗುಡಿ ನಂಬಿ ಎoಬೆರುಮಾನನ್ನು ಧ್ಯಾನಿಸಿಕೊಂಡಿದ್ದರು. ಮಧುರಕವಿ ಆಳ್ವಾರರೂ ಸಹ ಅವರ ಹಿರಿಮೆಯನ್ನು ಕೇಳಿದ್ದರು ಮತ್ತು ಒಂದು ರಾತ್ರಿ ಅವರು ನದೀತೀರಕ್ಕೆ ಹೋಗಿದ್ದಾಗ ದಕ್ಷಿಣ ದಿಕ್ಕಿನಿಂದ ಒಂದು ಪ್ರಕಾಶಮಾನವಾದ ಬೆಳಕು ಹೊಮ್ಮುವುದನ್ನು ನೋಡಿದರು. ಅವರು ಮೊದಲು ಅದು ಒಂದು ಗ್ರಾಮವು ಉರಿಯುತ್ತಿರಬಹುದು ಅಥವಾ ಕಾಡುಕಿಚ್ಚು ಇರಬಹುದೆಂದು ಭಾವಿಸಿದರು.

ಆದರೆ, ತರುವಾಯ ಅವರು ಇನ್ನೂ 2-3 ರಾತ್ರಿಗಳು ನಿರಂತರವಾಗಿ ಅದೇ ತೇಜಸ್ಸನ್ನು ಗಮನಿಸಿದರು. ಅವರು ಅದು ಏನೆಂದು ಪರೀಕ್ಷಿಸಲು ನಿರ್ಧರಿಸಿದರು, ಮತ್ತು ಪ್ರಾತ:ಕಾಲ ನಿದ್ರಿಸಿ ಮತ್ತು ರಾತ್ರಿಯ ವೇಳೆ ಆ ತೇಜಸ್ಸನ್ನು ಹಿಂಬಾಲಿಸುತ್ತಾ ಹೋದರು. ದಾರಿಯಲ್ಲಿ ಅವರು ಅನೇಕ ದಿವ್ಯದೇಶಗಳನ್ನು ಪರಿಶೀಲಿಸಿದರು ಮತ್ತು ಶ್ರೀರಂಗವನ್ನು ತಲುಪಿದರು. ಅವರು ಇನ್ನೂ ಆ ತೇಜಸ್ಸು ಮತ್ತಷ್ಟು ದಕ್ಷಿಣದಲ್ಲಿ ಕಂಡರು ಮತ್ತು ಕಡೆಯದಾಗಿ ತಿರುಕ್ಕುರುಗೂರ್(ಆಳ್ವಾರ್ ತಿರುನಗರಿ) ತಲುಪಿದರು. ಇನ್ನು ಮುಂದೆ ಆ ತೇಜಸ್ಸು ಕಾಣದಾಗಿ ಅವರು ಅದು ಇಲ್ಲಿಂದಲೇ ಹುಟ್ಟಿರಬೇಕೆಂದು ತೀರ್ಮಾನಿಸಿದರು. ಆವರು ನಂತರ ದೇವಸ್ಥಾನವನ್ನು ಪ್ರವೇಶಿಸಿದರು ಮತ್ತು ತಿರುಪ್ಪುಳಿಯಾಳ್ವಾರ್(ಹುಣಿಸೆಮರ) ಕೆಳಗೆ ಸಂಪೂರ್ಣವಾದ/ಶುದ್ಧವಾದ ಜ್ಞಾನದಿಂದ ತುಂಬಿದ, ಸುಂದರವಾದ ನೇತ್ರಗಳುಳ್ಳ, ಕೇವಲ 16 ವರ್ಷದ ಯುವಕನಾದ ಮತ್ತು ಹುಣ್ಣಿಮೆಯ ಚಂದ್ರನಂತೆ ಸುಂದರನಾದ, ಪದ್ಮಾಸನದಲ್ಲಿ ಕುಳಿತಿರುವ, ಉಪದೇಶಮುದ್ರೆಯಲ್ಲಿ  ಎoಬೆರುಮಾನ್ ಬಗ್ಗೆ ಬೋಧಿಸುತ್ತಿರುವ ಮತ್ತು ಎಲ್ಲ ಪ್ರಪನ್ನರಿಗೂ ಆಚಾರ್ಯನಾದ ನಮ್ಮಾಳ್ವಾರರನ್ನು ಕಂಡರು. ಅವರು ಭಗವದನುಭವದಲ್ಲಿ ಮಗ್ನರಾಗಿರುವುದನ್ನು ಗಮನಿಸಿ, ಅವರು ಒಂದು ಕಲ್ಲನ್ನು ಎತ್ತಿಕೊಳ್ಳೂತ್ತಾರೆ ಮತ್ತು ಅವರ ಮುಂದೆ ಎಸೆಯುತ್ತಾರೆ. ಆಳ್ವಾರರು ಎಚ್ಚರಗೊಳ್ಳುತ್ತಾರೆ ಮತ್ತು ಮಧುರಕವಿ ಆಳ್ವಾರರನ್ನು ನೋಡುತ್ತಾರೆ. ಅವರು ಮಾತನಾಡುತ್ತಾರೆಯೋ ಎಂದು ಪರೀಕ್ಷಿಸಬೇಕೆಂದೆನಿಸಿ, ಮಧುರಕವಿ ಆಳ್ವಾರರು ಅವರನ್ನು ಕೇಳುತ್ತಾರೆ “ಚೆತ್ತತ್ತಿನ್ ವಯಿಟ್ರಿಲ್ ಚಿರಿಯದು ಪಿರನ್ದಾಲ್ ಎತ್ತೈತ್ತಿನ್ರು ಎಙ್ಗೇ ಕಿಡಕ್ಕುಮ್” ಎಂದರೆ “ಒಂದು ಚೇತನನು(ಜೀವಾತ್ಮಾ) ಒಂದು ಅಚೇತನವನ್ನು ಪ್ರವೇಶಿಸಿದರೆ, ಅವನು ಏನನ್ನು ಭೋಗಿಸುತ್ತಾನೆ ಮತ್ತು ಎಲ್ಲಿ ವಾಸಿಸುತ್ತಾನೆ?” ಅದಕ್ಕೆ ಆಳ್ವಾರರು ಉತ್ತರಿಸುತ್ತಾರೆ “ಅತ್ತೈತ್ತಿನ್ರು ಅಙ್ಗೇ ಕಿಡಕ್ಕುಮ್”  ಎಂದರೆ “ಆತನು ಭೌತಿಕ ಸುಖ ದು:ಖಗಳನ್ನು ಅನುಭವಿಸುತ್ತಿರುತ್ತಾನೆ ಮತ್ತು ಶಾಶ್ವತವಾಗಿ ಅಲ್ಲಿಯೇ ನೆಲೆಸುತ್ತಾನೆ”. ಇದನ್ನು ಕೇಳಿದ ಮಧುರಕವಿ ಆಳ್ವಾರರು ಅರಿತುಕೊಳ್ಳುತ್ತಾರೆ “ಇವರು ಒಬ್ಬ ಸರ್ವಜ್ಞರು(ಎಲ್ಲವನ್ನು ತಿಳಿದವರು) ಮತ್ತು ನಾನು ಈ ಮಹಾನ್ ವ್ಯಕ್ತಿಯ ಸೇವೆ ಮಾಡಬೇಕು ಮತ್ತು ಉದ್ಧರಿಸಲ್ಪಡಬೇಕು” ಮತ್ತು ನಮ್ಮಾಳ್ವಾರರ ಚರಣಾರವಿಂದದಲ್ಲಿ ಅಡ್ಡಬೀಳುತ್ತಾರೆ. ಅವರು ಆನಂತರ ಆಳ್ವಾರರರೊಂದಿಗೆ ನೆಲೆಸುತ್ತಾರೆ, ಅವರಿಗೆ ನಿರಂತರ ಸೇವೆ ಸಲ್ಲಿಸುತ್ತಾರೆ ಮತ್ತು ಅವರ ಮಹಿಮೆಗಳ ಗುಣಗಾನ ಮಾಡುತ್ತಾರೆ.

ತರುವಾಯ, ಎಲ್ಲ ಕಾರಣಗಳಿಗೂ ಕಾರಣಕರ್ತನಾದ, ಎಲ್ಲದಕ್ಕೂ ಒಡೆಯನಾದ, ಎಲ್ಲರಿಗೂ ನಿಯಂತ್ರಕನಾದ, ಎಲ್ಲರಿಗೂ ಮತ್ತು ಎಲ್ಲದಕ್ಕೂ ಅಂತರ್ಯಾಮಿ ಪರಮಾತ್ಮನಾದ, ಸುಂದರವಾದ ಕಪ್ಪು/ನೀಲ ತಿರುಮೇನಿ(ಕಾಯ) ಉಳ್ಳವನಾದ, ಶ್ರೀವೈಕುಂಠನಾಥನು(ಪಮಪದನಾಥನು) ಆಳ್ವಾರರನ್ನು ಸಂಧಿಸಲು ಬಯಸುತ್ತಾನೆ.  ಪೆರಿಯ ತಿರುವಡಿ (ಗರುಡಾಳ್ವಾನ್) ಒಡನೆಯೇ  ಎoಬೆರುಮಾನ್ ಮುಂದೆ ಆಗಮಿಸುತ್ತಾನೆ ಮತ್ತು ಎoಬೆರುಮಾನ್ಎ  ಶ್ರೀ ಮಹಾಲಕ್ಷ್ಮಿ ಸಮೇತ ಅವನ ಮೇಲೇರಿ ಅವರು ಕ್ಷಣದಲ್ಲೇ ತಿರುಕ್ಕುರುಗೂರ್ ತಲುಪುತ್ತಾರೆ ಮತ್ತು ಎoಬೆರುಮಾನ್ ನಮ್ಮಾಳ್ವಾರರಿಗೆ ತನ್ನ ದಿವ್ಯದರ್ಶನವನ್ನು ನೀಡುತ್ತಾನೆ ಮತ್ತು ಅವರಿಗೆ ದಿವ್ಯ ನಿಷ್ಕಳಂಕ ಜ್ಞಾನವನ್ನು ಆಶೀರ್ವದಿಸುತ್ತಾನೆ.  ಎoಬೆರುಮಾನ್ ನಿಂದ ಹೀಗೆ ಆಶೀರ್ವದಿಸಲ್ಪಟ್ಟ ನಮ್ಮಾಳ್ವಾರರು ಭಗವದನುಭವದಲ್ಲಿ ತಲ್ಲೀನರಾಗುತ್ತಾರೆ ಮತ್ತು ಆ ಅನುಭವವು ಮಿತಿಮೀರಿ ಉಕ್ಕಿ ಹರಿಯುವುದರಿಂದ, ಅದು ದಿವ್ಯ ಪಾಶುರಗಳಾದ ತಿರುವಿರುತ್ತಮ್, ತಿರುವಾಸಿರಿಯಮ್, ಪೆರಿಯ ತಿರುವನ್ದಾದಿ ಮತ್ತು ತಿರುವಾಯ್ಮೊಳಿ (4 ವೇದಗಳ ಸಾರ) ರೂಪವಾಗಿ ಹರಿದು ಎoಬೆರುಮಾನ್ ನ ದಿವ್ಯ ಸ್ವರೂಪ, ದಿವ್ಯ ರೂಪ, ದಿವ್ಯ ಗುಣಗಳನ್ನು ಪ್ರಕಟಗೊಳಿಸುತ್ತವೆ. ನಂತರ ನಮ್ಮಾಳ್ವಾರ್ ಅದೇ ಜ್ಞಾನನ್ನು ಮಧುರಕವಿ ಆಳ್ವಾರ್ ಮತ್ತು ಇತರ ಶರಣಾಗತರಿಗೆ ಉಪದೇಶಿಸುತ್ತಾರೆ.ಎಲ್ಲ ದಿವ್ಯದೇಶ ಎoಬೆರುಮಾನ್ ನಮ್ಮಾಳ್ವಾರರನ್ನು ಆಶೀರ್ವದಿಸಲು ತಿರುಪ್ಪುಳಿಯಾಳ್ವಾರ್ ಗೆ ಆಗಮಿಸುತ್ತಾರೆ ಮತ್ತು ನಮ್ಮಾಳ್ವಾರರ ಮಂಗಳಾಶಾಸನದಿಂದ ಪುಷ್ಟಿಗೊಳ್ಳುತ್ತಾರೆ. ನಂತರ ನಮ್ಮಾಳ್ವಾರರು ಪ್ರತಿಯೊಬ್ಬರೂ ತಮ್ಮಂತೆ ಆಗಬೇಕೆಂದು,  ತಮ್ಮಂತೆ ಎoಬೆರುಮಾನ್ ನ ಜೊತೆ ಬಾಂಧವ್ಯವನ್ನು ಬೆಳೆಸಿಕೊಳ್ಳಲೆಂದು ಹರಸುತ್ತಾರೆ, ಮತ್ತು ನಿತ್ಯಸೂರಿಗಳು (ಪರಮಪದದಿಂದ) ಮತ್ತು ಶ್ವೇತದ್ವೀಪವಾಸಿಗಳು (ಕ್ಷೀರಾಬ್ಧಿ ನಿವಾಸಿಗಳು) ನಮ್ಮಾಳ್ವಾರರನ್ನು ಶ್ಲಾಘಿಸಲು ಆಗಮಿಸುತ್ತಾರೆ ಮತ್ತು ನಮ್ಮಾಳ್ವಾರರು ಅವರನ್ನು ಕಂಡ ನಂತರ ಅವರಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ನಿತ್ಯಸೂರಿಗಳು ಮತ್ತು ಶ್ವೇತದ್ವೀಪವಾಸಿಗಳ ವೈಭವದಿಂದ ಮತ್ತು ಅವರು ತಮ್ಮನ್ನು ಕಾಣಲು ಬಂದದ್ದರಿಂದ ಪರವಶಗೊಂಡ ನಮ್ಮಾಳ್ವಾರರು ತಮ್ಮನ್ನು ಈ ಬ್ರಹ್ಮಾಂಡದ ಅತಿ ಶ್ರೇಷ್ಠರೆಂದು ಘೋಷಿಸಿಕೊಳ್ಳುತ್ತಾರೆ (ಎoಬೆರುಮಾನ್ನ ದಿವ್ಯ ಆಶೀರ್ವಾದಗಳಿಂದ ಉದ್ಭವವಾದ ಸಾತ್ವಿಕ ಅಹಂಕಾರದಿಂದಾಗಿ), ಅಪರಿಮಿತವಾದ ಮಹಿಮೆಗಳೊಂದಿಗೆ ಜೀವಿಸುತ್ತಾರೆ, ಕಣ್ಣನ್ ಎoಬೆರುಮಾನ್ನ  ನಿರಂತರ ಚಿಂತನೆಯಿಂದ ತಮ್ಮನ್ನು ಪೋಷಿಸಿಕೊಳ್ಳುತ್ತಾರೆ. ಅವರು ಅರ್ಥಪಂಚಕವನ್ನು (ಪರಮಾತ್ಮ ಸ್ವರೂಪ, ಜೀವಾತ್ಮ ಸ್ವರೂಪ, ಉಪಾಯ ಸ್ವರೂಪ, ಉಪೇಯ ಸ್ವರೂಪ ಮತ್ತು ವಿರೋಧಿ ಸ್ವರೂಪ) ಪೂರ್ಣವಾಗಿ ಬಹಿರಂಗಗೊಳಿಸುತ್ತಾರೆ ಮತ್ತು ದ್ವಯ ಮಹಾಮಂತ್ರದ ಅರ್ಥಗಳನ್ನು ತಿರುವಾಯ್ಮೊಳಿಯ ( ಎoಬೆರುಮಾನನ ಭಕ್ತರ ದಿವ್ಯ ಅಮೃತ) ಮೂಲಕ ಪ್ರಕಟಗೊಳಿಸುತ್ತಾರೆ. ಅವರು ಅಂತಿಮವಾಗಿ 32 ನೆಯ ವಯಸ್ಸಿನಲ್ಲಿ ಈ ಸಂಸಾರವನ್ನು ತ್ಯಜಿಸುತ್ತಾರೆ ಮತ್ತು ಎoಬೆರುಮಾನನ ದಿವ್ಯ ಅಭಿಲಾಷೆಯಂತೆ ಪರಮಪದವನ್ನು ಸೇರುತ್ತಾರೆ.

ತರುವಾಯ, ನಮ್ಮಾಳ್ವಾರರ ಪ್ರಧಾನ ಶಿಷ್ಯರಾದ ಮಧುರಕವಿ ಆಳ್ವಾರರು (ಪ್ರಪನ್ನ ಜನ ಕೂಟಸ್ಥರು – ಪ್ರಪನ್ನ ಕುಲದ ಮುಖಂಡರು) ತಮ್ಮ ಆಚಾರ್ಯರನ್ನು ಪ್ರಶಂಸಿಸಿ ಕಣ್ಣಿನುಣ್ ಚಿರುತಾಮ್ಬುವನ್ನು ಸಂಗ್ರಹಿಸುತ್ತಾರೆ ಮತ್ತು ಅದನ್ನು ಪಂಚಮೋಪಾಯ ನಿಷ್ಠರಾದ (5ನೆಯ ಉಪಾಯದಲ್ಲಿ – ಆಚಾರ್ಯ ನಿಷ್ಠೆಯಲ್ಲಿ – ನೆಲೆಗೊಂಡವರಾದ, ಇತರ 4 ಉಪಾಯಗಳೆಂದರೆ  ಕರ್ಮ, ಜ್ಞಾನ, ಭಕ್ತಿ ಮತ್ತು ಪ್ರಪತ್ತಿ) ಮುಮುಕ್ಷುಗಳಿಗೆ ಪ್ರಸ್ತುತಪಡಿಸುತ್ತಾರೆ. ಅವರು ಆಳ್ವಾರ್ ತಿರುನಗರಿಯಲ್ಲಿ ಅರ್ಚಾ ವಿಗ್ರಹವನ್ನು ಸ್ಥಾಪಿಸುತ್ತಾರೆ, ಮತ್ತು ನಿತ್ಯ, ಪಕ್ಷ, ಮಾಸ, ಅಯನ ಮತ್ತು ಸಂವತ್ಸರ ಉತ್ಸವಗಳನ್ನು ಅದ್ದೂರಿಯಿಂದ ಏರ್ಪಡಿಸುತ್ತಾರೆ ಮತ್ತು ಅದನ್ನು ನಿರ್ವಹಿಸುತ್ತಾರೆ. ಅವರು ನಮ್ಮಾಳ್ವಾರರನ್ನು ಹೀಗೆ ಪ್ರಶಂಸಿಸುತ್ತಾರೆ – “ವೇದಮ್ ತಮಿಳ್ ಚೆಯ್ದ ಪೆರುಮಾಳ್ ವನ್ದಾರ್, ತಿರುವಾಯ್ಮೊಳಿ ಪೆರುಮಾಳ್ ವನ್ದಾರ್, ತಿರುನಗರಿ ಪೆರುಮಾಳ್ ವನ್ದಾರ್, ತಿರುವಳುತಿವಳಣಾಡರ್ ವನ್ದಾರ್, ತಿರುಕ್ಕುರುಗೂರ್ನಗರ್ ನಂಬಿ ವನ್ದಾರ್, ಕಾರಿಮಾರರ್ ವನ್ದಾರ್, ಶಟಗೋಪರ್ ವನ್ದಾರ್, ಪರಾಙ್ಗುಶರ್ ವನ್ದಾರ್” ಅರ್ಥಾತ್ “ವೇದಗಳ ಸಾರಾಂಶವನ್ನು ನೀಡಿದವರು ಆಗಮಿಸಿದರು, ತಿರುವಾಇಮೊಳಿಯ ಮಹಾನ್ ಲೇಖಕರು ಆಗಮಿಸಿದರು, ತಿರುನಗರಿಯ ನಾಯಕರು ಆಗಮಿಸಿದರು, ತಿರುವಳುತಿವಳ ಪ್ರದೇಶ(ಆಳ್ವಾರ್ ತಿರುನಗರಿ ಮತ್ತು ಸುತ್ತಮುತ್ತ) ದವರು ಆಗಮಿಸಿದರು, ತಿರುಕ್ಕುರುಗೂರ್ ನಗರದವರಾದ ಅದ್ಭುತ ಗುಣಗಳಿಂದ ಕೂಡಿದವರು ಆಗಮಿಸಿದರು, ಕಾರಿಯವರ ಪುತ್ರರು ಆಗಮಿಸಿದರು, ಶಡಗೋಪರು ಆಗಮಿಸಿದರು, ಎಲ್ಲರನ್ನೂ ನಿಯಂತ್ರಿಸಿದವರು ಆಗಮಿಸಿದರು, ಹೀಗೆ”. ಅದೇ ಸಮಯದಲ್ಲಿ ತಮಿಳು ತಜ್ಞರು (ದಕ್ಷಿಣದ) ಮದುರೈ ತಮಿಳ್ ಸಂಘದಿಂದ ಅಲ್ಲಿಗೆ ಬರುತ್ತಾರೆ ಮತ್ತು ಈ ಪ್ರಶಂಸೆಗಳಿಗೆ ಆಕ್ಷೇಪಿಸುತ್ತಾರೆ ಮತ್ತು ನಮ್ಮಾಳ್ವಾರರ ಹಿರಿಮೆಯನ್ನು ಪ್ರಮಾಣೀಕರಿಸಿದ ಹೊರತು ಮತ್ತು ಸಂಘ ಪಲಗೈ (ಸಾಹಿತ್ಯದ ಶ್ರೇಷ್ಠತೆಯನ್ನು ಅಳೆಯುವ ಹಲಗೆ) ಈ ಸಾಹಿತ್ಯವನ್ನು ಒಪ್ಪಿಕೊಂಡ ಹೊರತು, ನಮ್ಮಾಳ್ವಾರರು ವೇದಗಳ ಸಾರಾಂಶವನ್ನು ನೀಡಿದರೆಂದು ನಾವು ಒಪ್ಪಿಕೊಳ್ಳಲಾಗದು ಎಂದು ಹೇಳಿದರು. ಮಧುರಕವಿ ಆಳ್ವಾರರು ನಮ್ಮಾಳ್ವಾರರು ಬೇರೆಲ್ಲಿಗೂ ಪ್ರಯಾಣಿಸುವುದಿಲ್ಲ ಎಂದು ಹೇಳುತ್ತಾರೆ ಮತ್ತು ತಿರುವಾಯ್ಮೊಳಿಯ 10.5.1 ನೇ ಪಾಶುರದ ಪ್ರಾರಂಭದಲ್ಲಿ ಬರುವ “ಕಣ್ಣನ್ ಕಳಲಿಣೈ” (கண்ணன் கழலிணை) ಎಂಬ ಪದಗಳನ್ನು ಒಂದು ಚಿಕ್ಕ ಓಲೆಗರಿಯ ಮೇಲೆ ಬರೆದು ಆ ತಮಿಳ್ ಸಂಘದ ಕವಿಗಳ ಕೈಗೂಪ್ಪಿಸುತ್ತಾರೆ. ಅವರು ಸಂಘ ಪಲಗೆಯು ಆಳ್ವಾರರ ಈ ಎರಡು ಪದಗಳನ್ನು ಅಂಗೀಕರಿಸಿದರೆ ಅವರ ಶ್ರೇಷ್ಠತೆಯು ಸಾಬೀತಾಗುವುದೆಂದು ಅವರಿಗೆ ಹೇಳುತ್ತಾರೆ. ಕವಿಗಳು ಮಧುರಕವಿ ಆಳ್ವಾರರ ಈ ಮಾತನ್ನು ಒಪ್ಪಿಕೊಂಡು ಮದುರೈಗೆ ಹೋಗುತ್ತಾರೆ ಮತ್ತು ತಮಿಳ್ ಸಂಘದ ಮುಖ್ಯಸ್ಥರಿಗೆ ನಡೆದ ಘಟನೆಗಳನ್ನು ವಿವರಿಸುತ್ತಾರೆ. ಮುಖ್ಯಸ್ಥರು ಅದಕ್ಕೆ ಒಪ್ಪಿಕೊಳ್ಳುತ್ತಾರೆ ಮತ್ತು ಆಳ್ವಾರರ ಪಾಶುರವಿರುವ ಆ ಓಲೆಗರಿಯನ್ನು ಅಂದಿನ ಇತರ 300 ಮಹಾಕವಿಗಳ ಕೃತಿಗಳೊಂದಿಗೆ ಇರಿಸುತ್ತಾರೆ. ಆ ಮಾಂತ್ರಿಕ ಹಲಗೆಯು ಆಳ್ವಾರರ ಪದಗಳನ್ನು ಮಾತ್ರ ಉಳಿಸಿಕೊಂಡು ಇತರ ಎಲ್ಲವನ್ನೂ ತಕ್ಷಣವೇ ತಳ್ಳಿಹಾಕಿ ಆಳ್ವಾರರ ಶ್ರೇಷ್ಠತೆಯನ್ನು ಪ್ರಮಾಣೀಕರಿಸುತ್ತದೆ. ಸಂಘದ ಮುಖ್ಯಸ್ಥರು ಒಡನೆಯೇ ಆಳ್ವಾರರನ್ನು ವೈಭವೀಕರಿಸಿ ಒಂದು ಕವಿತೆಯನ್ನು ಹೀಗೆ ರಚಿನುತ್ತಾರೆ:

ಈಯಾಡುವದೋ ಗರುಡರ್ ಕೆದಿರೇ
ಇರವಿಕ್ಕೆದಿರ್ ಮಿನ್ಮಿನಿಯಾಡುವದೋ
ನಾಯೋಡುವದೋ ಉರುಮಿಪ್ಪುಲಿಮುನ್
ನರಿಕೇಚರಿಮುನ್ ನಡೈಯಾಡುವದೋ
ಪೇಯಡುವದೋ ಎಳಿಲೂರ್ವಚಿಮುನ್
ಪೆರುಮಾನಡಿ ಚೇರ್ ವಗುಳಾಭರಣನ್ ಓರಾಯಿರಮಾಮರೈಯಿನ್ ತಮಿಳಿಲ್ ಒರು ಚೊಲ್ ಪೊರುಮೋ ಉಲಗಿಲ್ ಕವಿಯೇ

ನಮ್ಮಾಳ್ವಾರರ (ಶ್ರೀಮನ್ ನಾರಾಯಣನಿಗೆ ಶರಣಾಗತರಾದ ಮತ್ತು ವೇದಗಳ ಸಾರಾಂಶವನ್ನು ನೀಡಿದ) ಒಂದು ಪದವು ಈ ಲೌಕಿಕ ಕವಿಗಳ ಬಹು ಸಂಖ್ಯೆಯ ಕವಿತೆಗಳಿಗೆ ಹೋಲಿಸಲಾಗದು, ಈ ಕೆಳಗಿನ ಹೋಲಿಕೆಗಳಂತೆ:

– ಗರುಡ ಮತ್ತು ಒಂದು ನೊಣದ ಹಾರುವ ಕೌಶಲ್ಯ
– ಸೂರ್ಯ ಮತ್ತು ಒಂದು ಮಿಂಚುಹುಳದ ಪ್ರಕಾಶ
– ಒಂದು ಹುಲಿಯ ಘರ್ಜನೆ ಮತ್ತು ಒಂದು ನಾಯಿಯ ಬೊಗಳುವಿಕೆ
– ಒಂದು ಸಿಂಹದ ಗಂಭೀರ ನಡೆ ಮತ್ತು ಒಂದು ನರಿಯ ಸಾಧಾರಣ ನಡಿಗೆ
– ಊರ್ವಶಿಯ (ದೇವಲೋಕದ ಅಪ್ಸರೆ) ಸುಂದರ ನೃತ್ಯ ಮತ್ತು ಒಂದು ಪ್ರೇತದ ನರ್ತನ

ಇದನ್ನು ಕಂಡು ತಕ್ಷಣವೇ ಎಲ್ಲಾ ಕವಿಗಳು ನಮ್ಮಾಳ್ವಾರರ ಕ್ಷಮೆಯನ್ನು ಯಾಚಿಸುತ್ತಾರೆ ಮತ್ತು ಅವರನ್ನು ಪ್ರಶಂಸಿಸುತ್ತಾರೆ. ಹೀಗೆ ಮಧುರಕವಿ ಆಳ್ವಾರರು ತಮ್ಮ ಆಚಾರ್ಯರಾದ ನಮ್ಮಾಳ್ವಾರರನ್ನು ವೈಭವೀಕರಿಸುತ್ತಾ ತಮ್ಮ ಕಾಲ ಕಳೆಯುತ್ತಾರೆ ಹೇಗೆಂದರೆ “ಗುರುಮ್ ಪ್ರಕಾಶಯೇತ್ ಧೀಮಾನ್” ಅರ್ಥಾತ್ “ಒಬ್ಬ ಧೀಮಂತನು ತನ್ನ ಆಚಾರ್ಯರರನ್ನು ಸಾರ್ವಜನಿಕವಾಗಿ ಪ್ರಶಂಸಿಸಬೇಕು” ಎಂದಿದ್ದಾರೆ.

ಅವರ ತನಿಯನ್:

ಅವಿದಿತ ವಿಷಯಾನ್ತರಸ್ ಚಟಾರೇರ್ ಉಪನಿಶದಾಮ್ ಉಪಗಾನ ಮಾತ್ರ ಭೋಗ:
ಅಪಿ ಚ ಗುಣ ವಶಾತ್ ತದೇಕ ಶೇಷಿ ಮಧುರಕವಿರ್ ಹೃದಯೇ ಮಮಾವಿರಸ್ತು

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಆಗಲೇ ಚರ್ಚಿಸಲಾಗಿದೆ –
http://ponnadi.blogspot.in/2012/10/archavathara-anubhavam-madhurakavi.html

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://acharyas.koyil.org/index.php/2013/01/17/madhurakavi-azhwar-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – https://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org