ನಾಥಮುನಿಗಳು

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಕೃತಿಯಲ್ಲಿ ನಾವು ನಮ್ಮಾಳ್ವಾರ್‍ರ (https://acharyas.koyil.org/index.php/2012/08/18/nammazhwar-english/) ಬಗ್ಗೆ ಚರ್ಚಿಸಿದೆವು.  ಈಗ ನಾವು ಓರಾನ್ ವಳಿ ಗುರು ಪರಂಪರೆಯಂತೆ ಮುಂದಿನ ಆಚಾರ್ಯರ ಬಗ್ಗೆ ತಿಳಿದುಕೊಳ್ಳೋಣ.

ನಾಥಮುನಿಗಳು – ಕಾಟ್ಟುಮನ್ನಾರ್ ಕೋಯಿಲ್

ತಿರುನಕ್ಷತ್ರಂ: ಆಣಿ, ಅನುಷಂ

ಅವತಾರ ಸ್ಥಳಂ : ಕಾಟ್ಟುಮನ್ನಾರ್ ಕೋಯಿಲ್ (ವೀರ ನಾರಾಯಣಪುರಂ)

ಆಚಾರ್ಯನ್: ನಮ್ಮಾಳ್ವಾರ್

ಶಿಷ್ಯರು: ಉಯ್ಯಕೊಂಡಾರ್, ಕುರುಗೈ ಕಾವಲಪ್ಪನ್, ಪಿಳ್ಳೈ ಕರುಣಾಕರ ದಾಸರ್, ನಂಬಿ ಕರುಣಾಕರ ದಾಸರ್, ಏರು ತಿರುವಡೈಯಾರ್, ತಿರುಕಣ್ಣಮಂಗೈ ಆಂಡನ್, ವಾಣಮಾಮಲೈ ದೈವನಾಯಕ ಆಂಡಾನ್, ಉರುಪತ್ತೂರ್ ಆಚ್ಚಾನ್ ಪಿಳ್ಳೈ, ಚೋಗತ್ತೂರ್ ಆಳ್ವಾನ್, ಕೀಳೈ ಅಗತ್ತಾಳ್ವಾನ್, ಮೇಲೈಅಗತ್ತಾಳ್ವಾನ್.

ಕೃತಿಗಳು: ನ್ಯಾಯ ತತ್ವಂ, ಯೋಗ ರಹಸ್ಯಂ, ಪುರುಷ ನಿರ್ಣಯಂ

ಶ್ರೀಮನ್ನಾಥಮುನಿಗಳು ಈಶ್ವರಭಟ್ಟಾಳ್ವಾರ ಮಗನಾಗಿ ವೀರನಾರಾಯಣಪುರದಲ್ಲಿ ಜನಿಸಿದರು. ಇವರು ಶ್ರೀರಂಗನಾಥಮುನಿ ಹಾಗು ನಾಥಬ್ರಹ್ಮ ಎಂದೂ ಸಹ ಪ್ರಸಿದ್ಧರಾಗಿರುತ್ತಾರೆ. ಇವರು ಅಷ್ಟಾಂಗಯೋಗ ಹಾಗು ದೇವಗಾನಗಳಲ್ಲಿ ಪ್ರಾವಿಣ್ಯರಾಗಿದ್ದರು. ಇಂದಿಗೂ ಶ್ರೀರಂಗಂ, ಅಳ್ವಾರ್ ತಿರುನಗರಿ,  ಶ್ರೀವಿಲ್ಲಿಪುತ್ತೂರ್,  ಮತ್ತಿತರ ಸ್ಥಳಗಳಲ್ಲಿ ಆಚರಿಸಲ್ಪಡುವ ಅರೈಯರ್ ಸೇವೆ ಸ್ಥಾಪಿಸಲ್ಪಟ್ಟದ್ದು ಇವರಿಂದಲೇ.

ನಾಥಮುನಿಗಳು ತಮ್ಮ ತಂದೆ, ಮನೆಯವರು ಮತ್ತು ಮಗ (ಈಶ್ವರಮುನಿ) ಯೊಂದಿಗೆ ತೀರ್ಥಯಾತ್ರೆಗೆಂದು ವಡ ಮದುರೈ, ವೃಂದಾವನ, ಗೋವರ್ಧನಗಿರಿ, ದ್ವಾರಕೆ, ಬದರಿಕಾಶ್ರಮ, ನೈಮಿಶಾರಣ್ಯ ಮತ್ತಿತರ ಪುಣ್ಯಸ್ಥಳಗಳಿಗೆ ಹೊರಟು, ಯಮುನಾ ನದಿಯ ದಡದಲ್ಲಿ ಗೋವರ್ಧನಪುರವೆಂಬ ಗ್ರಾಮದಲ್ಲಿ ನೆಲೆಸಿರುವ ಯಮುನೈ ತುರೈವರ್ ಎಂಬ ಎಂಬೆರುಮಾನ್‍ನನ್ನು ಸೇವಿಸುತ್ತಾ ವಾಸಿಸುತ್ತಿದ್ದರು. ಒಂದು ದಿನ, ಅವರ ಕನಸಿನಲ್ಲಿ ಕಾಣಿಸಿಕೊಂಡ ಎಂಬೆರುಮಾನ್, ಅವರಿಗೆ ಕಾಟ್ಟುಮನ್ನಾರ್ ಕೋಯಿಲ್ ಗೆ ಹಿಂತಿರುಗಬೇಕೆಂದು ಅದೇಶಿಸಿದಾಗ, ನಾಥಮುನಿಗಳು ಹಿಂತಿರುಗಿದರು. ದಾರಿ ಮಧ್ಯದಲ್ಲಿ ವಾರಣಾಸಿ, ಪುರಿ ಜಗನ್ನಾಥ, ಸಿಂಹಾಚಲ, ತಿರುವೇಂಕಟ, ಘಟಿಕಾಚಲ, ಕಾಂಚೀಪುರ (ಅಲ್ಲಿರುವ ದಿವ್ಯದೇಶಗಳು), ತಿರುವಹೀಂದ್ರಪುರ, ತಿರುಕ್ಕೋವಲೂರ್, ತಿರುವರಂಗ ಮತ್ತು ತಿರುಕ್ಕುಡಂದೈಗಳಲ್ಲಿ ಮಂಗಳಾಶಾಸನ ಮಾಡಿ ಕೊನೆಗೆ ಕಾಟ್ಟುಮನ್ನಾರ್ ಕೋಯಿಲ್ ತಲುಪಿದರು.

ಮೇಲ್ ನಾಡು (ತಿರುನಾರಾಯಣಪುರ ಪ್ರದೇಶ) ದಿಂದ ಬಂದಂತಹ ಶ್ರೀವೈಷ್ಣವರ ಗುಂಪೊಂದು ಕಾಟ್ಟುಮನ್ನಾರ್ ಕೋಯಿಲ್‍ನ ಮನ್ನಾರ್ ಮುಂದೆ ತಿರುವಾಯ್‍ಮೊಳಿಯ “ಆರಾವಮುದೇ ….” ದಶಕವನ್ನು ಹಾಡುತ್ತಿದ್ದರು. ಆ ಪಾಶುರಗಳ ಅರ್ಥವನ್ನು ಕೇಳಿ ಉತ್ಸಾಹಗೊಂಡ ನಾಥಮುನಿಗಳು ಆ ಶ್ರೀವೈಷ್ಣವರನ್ನು ಪಾಶುರಗಳ ಬಗ್ಗೆ ಕೇಳಿದಾಗ, ಅವರುಗಳು ಈ ೧೧ ಪಾಶುರಗಳನ್ನು ಬಿಟ್ಟು ಬೇರೇ ಏನೂ ತಿಳಿಯದೆಂದು ಹೇಳುತ್ತಾರೆ. ಅವರುಗಳು ನಾಥಮುನಿಗಳಿಗೆ ತಿರುಕ್ಕುರುಗೂರ್ ಎಂಬ ಸ್ಥಳಕ್ಕೆ ಹೋದರೆ ಹೆಚ್ಚಿನ ಮಾಹಿತಿ ದೊರಕಬಹುದೆಂದು ತಿಳಿಸುತ್ತಾರೆ. ನಾಥಮುನಿಗಳು ಮಹಾಮನ್ನರಿಂದ ಅಪ್ಪಣೆ ಪಡೆದು ಆಳ್ವಾರ್ ತಿರುನಗರಿಯನ್ನು ತಲುಪುತ್ತಾರೆ. ಅಲ್ಲಿ ಮಧುರಕವಿಯಾಳ್ವಾರರ ಶಿಷ್ಯರಾದ ಪರಾಂಕುಶದಾಸರನ್ನು ಭೇಟಿ ಮಾಡಿದಾಗ, ಅವರು ನಾಥಮುನಿಗಳಿಗೆ ಕಣ್ಣಿನುಣ್ ಶಿರಿತ್ತಾಂಬು ಎಂಬುವುದನ್ನು ಕಲಿಸಿಕೊಟ್ಟು, ಇದನ್ನು ೧೨,೦೦೦ ಸಲ ತಿರುಪುಳಿಯಾಳ್ವಾರ್ (ನಮ್ಮಾಳ್ವಾರ್ ವಾಸಿಸುತ್ತಿದ್ದ ಹುಣಿಸೆ ಮರ) ಮುಂದೆ ನಿರಂತರವಾಗಿ ಪಠನೆ ಮಾಡಲು ಹೇಳುತ್ತಾರೆ. ಈಗಾಗಲೇ ಅಷ್ಟಾಂಗಯೋಗ ಕಲಿತಿದ್ದ ನಾಥಮುನಿಗಳು ನಮ್ಮಾಳ್ವಾರರನ್ನು ಧ್ಯಾನಿಸುತ್ತಾ ಯಶಸ್ವಿಯಾಗಿ ಕಣ್ಣಿನುಣ್ ಶಿರುತ್ತಾಂಬು ವನ್ನು ೧೨,೦೦೦ ಸಲ ಪಠನೆ ಮುಗಿಸುತ್ತಾರೆ. ಇದರಿಂದ ಸಂಪ್ರೀತರಾದ ನಮ್ಮಾಳ್ವಾರರು, ನಾಥಮುನಿಗಳ ಮುಂದೆ ಕಾಣಿಸಿಕೊಂಡು, ಅವರಿಗೆ ಅಷ್ಟಾಂಗಯೋಗದ ಸಂಪೂರ್ಣ ಜ್ಞಾನವನ್ನೂ, ೪೦೦೦   ದಿವ್ಯ ಪ್ರಬಂಧಗಳೂ ಹಾಗು ಅರುಳಿಚ್ಚೆಯಲ್‍ನ ಅರ್ಥಗಳನ್ನೂ ಅನುಗ್ರಹಿಸುತ್ತಾರೆ. ಯಾವರೀತಿ ಎಂಬೆರುಮಾನ್ ನಮ್ಮಾಳ್ವಾರ್‍ರಿಗೆ ದಿವ್ಯಜ್ಞಾನವನ್ನು ದಯಪಾಲಿಸಿದನೋ, ಅದೇ ರೀತಿ ನಮ್ಮಾಳ್ವಾರ್ ನಾಥಮುನಿಗಳಿಗೂ ಅದೇ ದಿವ್ಯಜ್ಞಾನವನ್ನು ದಯಪಾಲಿಸಿದರು. ಇದನ್ನೇ ಮಣವಾಳಮಾಮುನಿಗಳು ತಮ್ಮ ಉಪದೇಶರತ್ನಮಾಲೈ ನಲ್ಲಿ ಹೇಳುವುದು – ಅರುಳ್ ಪೆತ್ತ ನಾಥಮುನಿ (அருள் பெற்ற நாதமுனி).

ನಾಥಮುನಿಗಳು ಕಾಟ್ಟುಮನಾರ್ ಕೋಯಿಲ್ ಗೆ ಹಿಂತಿರುಗಿ, ಮಹಾಮನ್ನರ್ ಮುಂದೆ ೪೦೦೦ ದಿವ್ಯ ಪ್ರಭಂಧಗಳನ್ನು ಸಮರ್ಪಿಸುತ್ತಾರೆ. ನಾಥಮುನಿಗಳಿಂದ ಸಂಪ್ರೀತರಾದ ಮಹಾಮನ್ನರ್, ದಿವ್ಯಪ್ರಬಂಧಗಳನ್ನು ವರ್ಗೀಕರಿಸಿ ಎಲ್ಲೆಡೆ ಪ್ರಚಾರ ಮಾಡಲು ಹೇಳುತ್ತಾರೆ. ನಾಥಮುನಿಗಳು ಅರುಳಿಚ್ಚೆಯಲ್‍ಗಳಿಗೆ ಸಂಗೀತವನ್ನು ಸೇರಿಸಿ, ತಮ್ಮ ಸೋದರಳಿಯರಾದ ಕೀಳೈ ಅಗತ್ತಾಳ್ವಾನ್ ಹಾಗು ಮೇಲೈಅಗತ್ತಾಳ್ವಾನ್ ರಿಗೆ ಕಲಿಸಿ, ಅವರ ಮೂಲಕ ಪ್ರಚಾರ ಪಡಿಸುತ್ತಾರೆ.

ನಾಥಮುನಿಗಳು ದಿವ್ಯ ಸಂಗೀತದಲ್ಲೂ ಪರಿಣಿತಿ ಹೊಂದಿದ್ದರು.  ಒಂದುಸಲ ಆ ಪ್ರದೇಶದ ರಾಜನಿಗೆ ಓರ್ವ ಸಾಧಾರಣ ಹಾಡುಗಾರ ಹಾಗು ಓರ್ವ ದಿವ್ಯ ಹಾಡುಗಾರನ ನಡುವೆ ವ್ಯತ್ಯಾಸ ಕಂಡುಹಿಡಿಯಲು ಕಷ್ಟವಾದಾಗ, ನಾಥಮುನಿಗಳು ದಿವ್ಯ ಹಾಡುಗಾರನನ್ನು ಗುರುತಿಸಿಕೊಡುತ್ತಾರೆ. ಅವರ ಸಾಮರ್ಥ್ಯವನ್ನು ರಾಜನು ಪ್ರಶ್ನಿಸಿದಾಗ, ನಾಥಮುನಿಗಳು ರಾಜನಿಗೆ ೪೦೦೦ ತಾಳವಾದ್ಯಗಳನ್ನು ಒಂದೇ ಸಲ ಶಬ್ದಮಾಡಲು ಹೇಳಿ, ಶಬ್ಧವನ್ನು ಕೇಳಿಯೇ ಪ್ರತಿ ತಾಳ ವಾದ್ಯದ ತೂಕವೆಷ್ಟೆಂದು ಗುರುತಿಸುತ್ತಾರೆ – ಅಷ್ಟರ ಮಟ್ಟಿಗೆ ಇತ್ತು ಅವರ ಪ್ರಾವೀಣ್ಯ, ಇವರ ಮಹಿಮೆಯನ್ನು ಅರಿತುಕೊಂಡ ರಾಜನು, ಅವರಿಗೆ ಹೇರಳ ಧನವನ್ನು ಕೊಟ್ಟಾಗ – ನಾಥಮುನಿಗಳು ಆ ಧನದಲ್ಲಿ ಕಿಂಚಿತ್ತೂ ಆಸಕ್ತಿಯನ್ನು ತೋರಲಿಲ್ಲ.

ನಾಥಮುನಿಗಳು ಆಳವಂದಾರ್ (ತಮ್ಮ ಮೊಮ್ಮಗ) ನ ಅವತಾರದ ಬಗ್ಗೆ ಮುಂಗಾಣಿದ್ದರು. ತಮ್ಮ ಮಗ ಈಶ್ವರ ಮುನಿಗೆ, ಆ ಮಗುವಿಗೆ “ಯಮುನೈ ತುರೈವನ್” (ಕಣ್ಣನ್ ಎಂಬೆರುಮಾನ್ ಬಗ್ಗೆ ಇದ್ದ ತಮ್ಮ ಮಮತೆಯಿಂದ) ಎಂದು ನಾಮಕರಣ ಮಾಡಲು ಹೇಳಿ ತಮ್ಮ ಎಲ್ಲ ಶಿಷ್ಯರಿಗೂ ಯಮುನೈ ತುರೈವನ್ (ಮುಂದೆ ಆಳವಂದಾರ್ ಆಗುವ) ರಿಗೆ ಎಲ್ಲಾ ಜ್ಞಾನವನ್ನು ಕಲಿಸಿಕೊಡಬೇಕೆಂದು ತಿಳಿಸುತ್ತಾರೆ.

ನಾಥಮುನಿಗಳು ಎಂಬೆರುಮಾನ್‍ನ ಧ್ಯಾನದಲ್ಲಿರುವಾಗ ತಮ್ಮ ಸುತ್ತಲಿನ ಎಲ್ಲವನ್ನೂ ಮರೆತುಬಿಡುತ್ತಿದ್ದರು. ಒಂದು ಸಲ ರಾಜನು ತನ್ನ ಪತ್ನಿಯರೊಂದಿಗೆ ನಾಥಮುನಿಗಳನ್ನು ಭೇಟಿ ಮಾಡಲು ಬಂದಾಗ, ನಾಥಮುನಿಗಳು ಯೋಗದಲ್ಲಿ ಇದ್ದುದ್ದನ್ನು ಕಂಡು ರಾಜನು ನಿಶ್ಯಬ್ಧವಾಗಿ ಹಿಂತಿರುಗುತ್ತಾನೆ.  ಆದರೆ ನಾಥಮುನಿಗಳು ತಮ್ಮ ಶುದ್ಧ ಭಕ್ತಿ ಭಾವದಿಂದ, ಅವರುಗಳನ್ನು ಕೃಷ್ಣ ತನ್ನ ಗೋಪಿಯರೊಂದಿಗೆ ಭೇಟಿಗೆ ಬಂದಿಹನೆಂದು ತಿಳಿದು, ಅವರ ಹಿಂದೆ ಓಡುತ್ತಾರೆ,

ಕೊನೆಗೊಂದುಸಲ ರಾಜನು ತನ್ನ ಬೇಟೆಯ ಅಧಿವೇಶನದ ನಂತರ ನಾಥಮುನಿಯನ್ನು ಭೇಟಿಮಾಡಲು ತನ್ನ ಪತ್ನಿ, ಇನ್ನೊಬ್ಬ ಬಿಲ್ಲುಗಾರ ಹಾಗು ಒಂದು ಕೋತಿಯ ಜೊತೆ ಬಂದಾಗ, ನಾಥಮುನಿಗಳು ಮತ್ತೊಮ್ಮೆ ತಮ್ಮ ಭಕ್ತಿಭಾವದಿಂದ ಅದು ರಾಮ, ಸೀತೆ, ಲಕ್ಷ್ಮಣ ಹಾಗು ಹನುಮಾನ್ ಎಂದು ತಿಳಿಯುತ್ತಾರೆ. ಅವರ ಹಿಂದೆಯೇ ಓಡುತ್ತಾ ಹೋಗಿ, ಅವರು ಕಾಣಿಸದೇ ಹೋದಾಗ, ಮೂರ್ಚೆಗೊಂಡು ಬೀಳುತ್ತಾರೆ. ಎಂಬೆರುಮಾನ್ ನಿಂದ ಇನ್ನು ಮುಂದೆ ಬೇರ್ಪಡಿಕೆ ಸಹಿಸಲಾರದೆ, ಒಡನೆಯೇ ಪರಮಪದವನ್ನು ಹೊಂದುತ್ತಾರೆ. ಇದನ್ನು ಕೇಳಿ ಈಶ್ವರಮುನಿ ಹಾಗು ನಾಥಮುನಿಗಳ ಶಿಷ್ಯರು ಆ ಸ್ಥಳಕ್ಕೆ ತಲುಪಿ, ಅವರಿಗೆ ಚರಮ ಕೈಂಕರ್ಯಗಳನ್ನು ಮಾಡುತ್ತಾರೆ.

ಅರುಳಿಚ್ಚೆಯಲ್ ಗಳನ್ನು ಹಿಂಪಡೆಯಲು ನಾಥಮುನಿಗಳ ಪ್ರಯತ್ನವಿಲ್ಲದಿದರೆ, ನಮಗೆ ಇಂದು ಈ ಎಲ್ಲಾ ಶ್ರೀವೈಷ್ಣವಶ್ರೀ ದೊರಕಿರಲಾರದು. ಆಳವಂದಾರರು ತಮ್ಮ ಸ್ತೋತ್ರರತ್ನದ ಮೊದಲ ೩ ಶ್ಲೋಕಗಳಲ್ಲಿ ನಾಥಮುನಿಗಳ ದಿವ್ಯ ಗುಣಗಳನ್ನು ಹಾಡಿದ್ದಾರೆ.

ಮೊದಲ ಶ್ಲೋಕದಲ್ಲಿ, ಹೇಳುತ್ತಾರೆ “ಚಿಂತನೆಗೆ ಮೀರಿದ ಅತ್ಯಾಶ್ಚರ್ಯಕರವಾದ ಯಾವ ಕ್ಲಿಷ್ಟತೆಯೂ ಇಲ್ಲದ (ಎಂಬೆರುಮಾನ್/ಆಳ್ವಾರರ ಕಾರ್ಯದಿಂದ) ಜ್ಞಾನ, ವೈರಾಗ್ಯರಾಶಿ ಹಾಗು ಭಗವದ್ಭಕ್ತಿ ಎಂಬ ಕಡಲಾಗಿರುವ ನಾಥಮುನಿಗಳಿಗೆ, ನಮನಗಳು”

ಎರಡನೆ ಶ್ಲೋಕದಲ್ಲಿ ಹೇಳುತ್ತಾರೆ “ಮಧುವೆಂಬ ರಕ್ಕಸನನ್ನು ಕೊಂದ (ಮಧುಸೂಧನ) ಅವನ ಚರಣಕಮಲಗಳಲ್ಲಿ ನಿಜವಾದ ಜ್ಞಾನಾನುರಾಗ ಹೊಂದಿರುವ, ಈ ಜಗತ್ತಿನಲ್ಲಿ ಮತ್ತು ಪರಮಪದದಲ್ಲಿ ನಮಗೆ ಯಾವುದು ರಕ್ಷೆಯಾಗಿದೆಯೋ ಅಂತಹ ನಾಥಮುನಿಗಳ ಚರಣಗಳನ್ನು ನಾನು ಶರಣಾಗುತ್ತೇನೆ”

ಮೂರನೆಯ ಶ್ಲೋಕದಲ್ಲಿ ಹೇಳುತ್ತಾರೆ “ಅಚ್ಯುತನಲ್ಲಿ ಅಪರಿಮಿತವಾದ ಭಕ್ತಿ ಮತ್ತು ಯಥಾರ್ಥವಾದ ಜ್ಞಾನವೆಂಬ ಅಮೃತದ ಕಡಲಿನ ಪ್ರವಾಹದಂತಿರುವ, ಇತರರನ್ನು ಕಾಪಾಡಲು ಈ ಲೋಕದಲ್ಲಿ ಮೈತಳೆದಿರುವ, ಭಕ್ತಿ ಪರಿಪೂರ್ಣರಾದ, ಎಲ್ಲಾ ಯೋಗಿಗಳಿಗೂ ಪರಮಗುರುವಾದ , ನಾಥಮುನಿಗಳಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ”.

ಕೊನೆಯ ಶ್ಲೋಕದಲ್ಲಿ ಎಂಬೆರುಮಾನ್ ರಿಗೆ ಅವರು ಕೊನೆಯದಾಗಿ ಹೇಳುವುದೇನೆಂದರೆ “ನನ್ನ ನಡತೆಗಳನ್ನು ಗಣನೆಗೆ ತಂದುಕೊಳ್ಳದೆ,  ನಿನ್ನ ಪಾದ ಪದ್ಮಗಳಲ್ಲಿ  ಯಾವ ಕೃತಿಮತೆಯೂ ಇಲ್ಲದಂತಹ ಪ್ರೇಮ ಹೊಂದಿದ ಹಾಗು ನಿಜವಾದ ಜ್ಞಾನ ಹೊಂದಿದವರಾದ ನನ್ನ ತಾತಂದಿರಾದ ನಾಥಮುನಿಗಳನ್ನು ನೋಡಿ ನನ್ನ ಮೇಲೆ ದಯೆತೋರು”.

ಮೇಲಿನ ೪ ಶ್ಲೋಕಗಳಿಂಧ ನಮಗೆ ನಾಥಮುನಿಗಳ ನಿಜವಾದ ಹಿರಿಮೆ ಅರ್ಥವಾಗುತ್ತದೆ.  ಅಚ್ಚ್ಯುತ ಹಾಗು ಆಳ್ವಾರರ ಮೇಲೆ ನಮ್ಮಗೂ ಸಹ ಅಂತಹುದೇ ಅಪರಿಮಿತವಾದ ಭಕ್ತಿ ಬೆಳೆಯಲೆಂದು ಶ್ರೀಮನ್ನಾಥಮುನಿಗಳ ಚರಣ ಕಮಲಗಳಲ್ಲಿ ಬೇಡಿಕೊಳ್ಳೋಣ.

ನಾಥಮುನಿಗಳ ತನಿಯನ್

ನಮೋ ಅಚಿಂತ್ಯ ಅದ್ಭುತ ಅಕ್ಲಿಷ್ಟ ಜ್ಞಾನ ವೈರಾಗ್ಯ ರಾಶಯೇ |
ನಾಥಾಯ ಮುನಯೇ ಅಗಾಧ ಭಗವತ್ ಭಕ್ತಿ ಸಿಂಧವೇ ||

ಅಡಿಯೇನ್ ತಿರುನಾರಣನ್ ರಾಮಾನುಜ ದಾಸನ್

ಮೂಲ: http://acharyas.koyil.org/index.php/2012/08/22/nathamunigal-english/

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – https://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org