ಆಳವಂದಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈ ಹಿಂದಿನ ಕೃತಿಯಲ್ಲಿ (https://acharyas.koyil.org/index.php/2018/02/20/manakkal-nambi-kannada/) ನಾವು ಮಣಕ್ಕಾಲ್ ನಂಬಿಯ ಬಗ್ಗೆ ಚರ್ಚಿಸಿದೆವು.  ಈಗ ನಾವು ಓರಾನ್ ವಳಿ ಗುರು ಪರಂಪರೆಯಲ್ಲಿನ ಮುಂದಿನ ಆಚಾರ್ಯನ ಬಗ್ಗೆ ಮುಂದುವರೆಯೋಣ.

ಆಳವಂದಾರ್  – ಕಾಟ್ಟು ಮನಾರ್ ಕೋಯಿಲ್

ತಿರುನಕ್ಷತ್ರಂ: ಆಡಿ, ಉತ್ತಿರಾಡಂ

ಅವತಾರ ಸ್ಥಳಂ: ಕಾಟ್ಟು ಮನ್ನಾರ್ ಕೋಯಿಲ್

ಆಚಾರ್ಯ: ಮಣಕ್ಕಾಲ್ ನಂಬಿ

ಶಿಷ್ಯರು: ಪೆರಿಯ ನಂಬಿ, ಪೆರಿಯ ತಿರುಮಲೈ ನಂಬಿ, ತಿರುಕ್ಕೋಷ್ಟಿಯೂರ್ ನಂಬಿ, ತಿರುಮಲೈ ಆಂಡಾನ್, ದೈವವಾರಿಯಾಂಡಾನ್, ವಾಣಮಾಮಲೈಯಾಂಡಾನ್,  ಈಶ್ವರಾಂಡಾನ್, ಜೀಯರಾಂಡಾನ್ ಆಳವಂದಾರಾಳ್ವಾನ್, ತಿರುಮೋಗೂರಪ್ಪನ್, ತಿರುಮೋಗೂರ್ ನಿನ್ರಾರ್, ದೇವಪ್ಪೆರುಮಾಳ್, ಮಾರನೇರಿ ನಂಬಿ, ತಿರುಕ್ಕಚ್ಚಿ ನಂಬಿ, ತಿರುವರಂಗ ಪೆರುಮಾಳ್ ಅರೈಯರ್ (ಮಣಕ್ಕಾಲ್ ನಂಬಿಯ ಶಿಷ್ಯ ಹಾಗು ಆಳವಂದಾರ್ ಅವರ ಪುತ್ರ) ತಿರುಕ್ಕುರುಗೂರ್ ದಾಸರ್, ವಕುಳಾಭರಣ ಸೋಮಯಾಜಿಯಾರ್, ಅಮ್ಮಂಗಿ ಆಳ್ಕೊಂಡಿ ಗೋವಿಂದ ದಾಸರ್ (ವಡಮದುರೈ ನಲ್ಲಿ ಜನಿಸಿದವರು), ನಾಥಮುನಿ ದಾಸರ್ (ರಾಜ ಪುರೋಹಿತರು), ತಿರುವರಂಗತ್ತಮ್ಮಾನ್ (ರಾಜ ಮಹಿಷಿ).

ಕೃತಿಗಳು: ಚತುಶ್ಲೋಕಿ, ಸ್ತೋತ್ರರತ್ನ, ಸಿದ್ಧಿತ್ರಯ, ಆಗಮ ಪ್ರಾಮಾಣ್ಯ, ಗೀತಾರ್ಥ ಸಂಗ್ರಹ

ಪರಮಪದವನ್ನು ಹೊಂದಿದ ಸ್ಥಳ: ತಿರುವರಂಗಂ

ಯಮುನೈತುರೈವರ್ ಕಾಟ್ಟುಮನ್ನಾರ್ ಕೋಯಿಲ್ ನಲ್ಲಿ ಜನಿಸಿದರು. ಕಾಲಾನಂತರ ಅವರು ಆಳವಂದಾರ್ ಎಂಬ ಹೆಸರಿನಿಂದ ಜನಪ್ರಿಯರಾದರು.  ಅವರು ಪೆರಿಯ ಮುದಲಿಯಾರ್, ಪರಮಾಚಾರ್ಯರ್, ವಾದಿಮತೇಭ ಸಿಂಹೇಂದ್ರರ್ ಎಂದೂ ಸಹ ಕರೆಯಲ್ಪಡುತ್ತಿದ್ದರು.

ಇವರು ಈಶ್ವರಮುನಿಗಳ ಪುತ್ರರಾಗಿಯೂ ಹಾಗು ನಾಥಮುನಿಗಳ ಮೊಮ್ಮಗನಾಗಿಯೂ ಜನಿಸಿದವರು. ಇವರು ಮಹಾಭಾಷ್ಯ ಭಟ್ಟರ ಬಳಿಯಲ್ಲಿ ಸಾಮಾನ್ಯ ಶಾಸ್ತ್ರವನ್ನು ಕಲಿತುಕೊಂಡರು. ಆ ಸಮಯದಲ್ಲಿ, ಆಕ್ಕಿಯಾಳ್ವಾನ್ ಎಂಬ ರಾಜ ಪುರೋಹಿತರು ತಮ್ಮ ಪ್ರತಿನಿಧಿಗಳನ್ನು ಎಲ್ಲಾ ಪಂಡಿತರ ಬಳಿಗೂ ಕಳುಹಿಸಿ, ಅವರಿಂದ ತೆರಿಗೆ ಕಟ್ಟಿಸಿಕೊಳ್ಳುವಂತೆ ಹೇಳಿದ್ದರು (ತಾನು ಪ್ರಧಾನ ಪಂಡಿತನೆಂದು). ಆಗ ಮಹಾಭಾಷ್ಯ ಭಟ್ಟರು ಚಿಂತಿತರಾಗಿ ಇರುವುದನ್ನು ಕಂಡ ಯಮುನೈತುರೈವರ್,  ತಾನು ಸಮಸ್ಯೆಯನ್ನು ನಿಭಾಯಿಸುವುದಾಗಿ ಹೇಳಿದ.  ಒಂದು ಶ್ಲೋಕದಲ್ಲಿ “ಅಗ್ಗದ ಪ್ರಚಾರಕ್ಕೆ ಮೊರೆಹೊಕ್ಕು ಕವಿಗಳನ್ನು ನಾಶಮಾಡುತ್ತಾರೆ”  ಎಂದು ಬರೆದು ಕಳುಹಿಸಿದ. ಅದನ್ನು ಕಂಡು ಕೋಪಗೊಂಡ ಆಕ್ಕಿಯಾಳ್ವಾನ್, ತನ್ನ ಸೈನಿಕರನ್ನು ಕಳುಹಿಸಿ ಯಮುನೈತುರೈವನ್ ರನ್ನು ರಾಜನ ಆಸ್ಥಾನಕ್ಕೆ ಕರೆದುಕೊಂಡು ಬರಲು ತಿಳಿಸಿದ. ಯಮುನೈತುರೈವನ್ ತನಗೆ ಸೂಕ್ತ ಮರ್ಯಾದೆಗಳನ್ನು ಅರ್ಪಿಸಿದರೆ ಮಾತ್ರ ಬರುವುದಾಗಿ ಅವರಿಗೆ ಹೇಳಿದ. ಆ ರಾಜ ಒಂದು ಪಲ್ಲಕಿಯನ್ನು ಕಳುಹಿಸಲು, ಯಮುನೈತುರೈವನ್ ರಾಜನ ಆಸ್ಥಾನವನ್ನು ತಲುಪಿದನು.

ಇನ್ನೇನು ಚರ್ಚೆ ಆರಂಭಿಸಬೇಕಿದ್ದಾಗ, ರಾಜ ಮಹಿಷಿಯು  ಯಮುನೈತುರೈವನ್ ಅವರೇ ಗೆಲ್ಲುವುದು ಎಂದು ತನಗೆ ಖಚಿತವಾಗಿದೆ ಎಂದು ರಾಜನಿಗೆ ಹೇಳಿ, ಒಂದು ವೇಳೆ ಅವನು ಸೋತರೆ, ತಾನು ರಾಜನ ದಾಸಿ ಆಗುವೆ ಎಂದು ಹೇಳಿದಳು. ಆಕ್ಕಿಯಾಳ್ವಾನ್ ಗೆಲ್ಲುತ್ತಾನೆ ಎಂಬ ವಿಶ್ವಾಸದಿಂದ,  ರಾಜನು ಯಮುನೈತುರೈವನ್ ಗೆದ್ದರೆ ತನ್ನ ರಾಜ್ಯದ ಅರ್ಧ ಭಾಗವನ್ನು ಆತನಿಗೆ ನೀಡುತ್ತೇನೆ ಎಂದು ಹೇಳಿದ.

ತನ್ನ ಚರ್ಚಾ ಸಾಮರ್ಥ್ಯದಲ್ಲಿ ಅತಿಯಾದ ವಿಶ್ವಾಸವಿದ್ದ ಆಕ್ಕಿಯಾಳ್ವಾನನು, ಯಮುನೈತುರೈವನ್ ಹೇಳುವ ಯಾವುದೇ ವಾಕ್ಯಗಳನ್ನು ತಾನು ವಿರೋಧಿಸುತ್ತೇನೆ ಎಂದು ಹೇಳಿದ. ಯಮುನೈತುರೈವರ್ ೩ ವಾಕ್ಯಗಳನ್ನು ಹೇಳುತ್ತಾರೆ:

  • ಆಕ್ಕಿಯಾಳ್ವಾನ್ ನ ತಾಯಿ ಬಂಜೆಯಲ್ಲ.
  • ರಾಜ ಸರ್ವಶಕ್ತನು.
  • ಮಹಾರಾಣಿಯು ಮಹಾ ಪತಿವ್ರತೆ.

ಇದನ್ನು ಕೇಳಿಸಿಕೊಂಡ ಆಕ್ಕಿಯಾಳ್ವಾನ್ ಆಶ್ಚರ್ಯಚಕಿತನಾಗುತ್ತಾನೆ.  ರಾಜನಿಂದ ಶಿಕ್ಷಿತನಾಗಬಹುದು ಎಂದು ಹೆದರಿದ ಅವನು ಯಾವುದೇ ವಾಕ್ಯಗಳನ್ನು ನಿರಾಕರಿಸಲಾಗಲಿಲ್ಲ.  ಆದರೆ ಯಮುನೈತುರೈವನ್ ಎಲ್ಲಾ 3 ಅಂಶಗಳನ್ನು ಕೆಳಕಂಡಂತೆ ಸುಲಲಿತವಾಗಿ ನಿರಾಕರಿಸುತ್ತಾರೆ:

  • ಆಕ್ಕಿಯಾಳ್ವಾನನ ತಾಯಿ ಬಂಜೆ ಏಕೆಂದರೆ ಅವಳಿಗೆ ಒಂದೇ ಮಗು ಇರುವುದು (ಸಾಮಾನ್ಯ ಶಾಸ್ತ್ರದ ಪ್ರಕಾರ, ಒಂದೇ ಮಗುವಿರುವ ತಾಯಿಯನ್ನು ಬಂಜೆ ಎಂದು ಪರಿಗಣಿಸಲಾಗುತ್ತದೆ)
  • ರಾಜ ಸರ್ವಶಕ್ತನಲ್ಲ ಏಕೆಂದರೆ ಆತ ಎಲ್ಲವನ್ನೂ ಆಳಲು ಸಾಧ್ಯವಿಲ್ಲ- ಕೇವಲ ನಿರ್ದಿಷ್ಟವಾದ ಸಾಮ್ರಾಜ್ಯವನ್ನು ಆಳುತ್ತಿದ್ದಾನೆ.
  • ಶಾಸ್ತ್ರೋಕ್ತವಾಗಿ ನಡೆಸುವ ಮದುವೆಗಳಲ್ಲಿ, ವಧುವನ್ನು ವರನಿಗಿಂತ ಮೊದಲು ದೇವತೆಗಳಿಗೆ ಮಂತ್ರೋಚ್ಚಾರ ಸಹಿತವಾಗಿ ಅರ್ಪಿಸಲಾಗುವುದು. ಆ ಆರ್ಥದಲ್ಲಿ ಆಕೆ ಪತಿವ್ರತೆ ಅಲ್ಲ.

ಯಮುನೈತುರೈವರ್ ಅವರ ನಿಜವಾದ ಪಾಂಡಿತ್ಯವನ್ನು ಅರಿತುಕೊಂಡ ಆಕ್ಕಿಯಾಳ್ವಾನ್, ಕೊನೆಗೆ ಯಮುನೈತುರೈವನ್ ಶಾಸ್ತ್ರಗಳ ವಿವರಣೆಗಳಿಂದ ವಿಶಿಷ್ಟಾದ್ವೈತ ಸಿದ್ದಾಂತದ ಸ್ಥಾಪನೆ ಮಾಡಿದಾಗ ಚರ್ಚೆಯಲ್ಲಿ ಸೋಲುತ್ತಾನೆ. ಮಹಾರಾಣಿಯು ಅವರಿಗೆ “ಆಳವಂದಾರ್” (ಆಳಲು/ಕಾಪಾಡಲು ಬಂದವರು – ಅವನು ಗೆಲ್ಲದೆ ಇದ್ದಿದ್ದರೆ, ಆಕೆ ದಾಸಿಯಾಗಿರಬೇಕಾಗಿತ್ತು) ಎಂದು ಹೆಸರು ನೀಡುತ್ತಾಳೆ.  ಆತನಿಗೆ ಅರ್ಧ ರಾಜ್ಯವೂ ದೊರಕುತ್ತದೆ ಹಾಗು ಆತ ಆಡಳಿತಾತ್ಮಕ ಕಾರ್ಯಗಳಲ್ಲಿ ತನ್ನನು ತೊಡಗಿಸಿಕೊಳ್ಳಲು ಪ್ರಾರಂಭಿಸುತ್ತಾನೆ.

ನಾವು ಈಗಾಗಲೇ ಹಿಂದಿನ ಕೃತಿಯಲ್ಲಿ ಹೇಗೆ ಮಣಕ್ಕಾಲ್ ನಂಬಿಗಳು ಆಳವಂದಾರ್ ರನ್ನು ಪರಿವರ್ತಿಸಿ ಶ್ರೀರಂಗಕ್ಕೆ ಕರೆತಂದು ನಮ್ಮ ಸಂಪ್ರದಾಯದ ನಾಯಕನನ್ನಾಗಿ ಮಾಡಿದರು ಎಂದು ನೋಡಿದ್ದೇವೆ. ಅವರು ಶ್ರೀರಂಗಕ್ಕೆ ಬಂದ ನಂತರ, ಸಂನ್ಯಾಸಿಯಾಗಿ ನಮ್ಮ ಸಂಪ್ರದಾಯವನ್ನು ಪ್ರಚುರಗೊಳಿಸಲು ತೊಡಗುತ್ತಾರೆ. ಬಹಳಷ್ಟು ಜನ ಅವರ ಶಿಷ್ಯರಾಗುತ್ತಾರೆ.

ಒಮ್ಮೆ ಮಣಕ್ಕಾಲ್ ನಂಬಿಗಳು ಆಳವಂದಾರರಿಗೆ ಕುರುಗೈ ಕಾವಲಪ್ಪನ್ ಅವರ ಬಳಿ ಅಷ್ಟಾಂಗ ಯೋಗ ರಹಸ್ಯ ಕಲಿತುಕೊಳ್ಳಲು ನಿರ್ದೇಶಿಸುತ್ತಾರೆ. ಅವರು ಅಲ್ಲಿಗೆ ಹೋದಾಗ, ಕುರುಗೈ ಕಾವಲಪ್ಪನ್ ಯೋಗದ ಮೂಲಕ ಭಗವದ್ ಅನುಭವದಲ್ಲಿ ಪೂರ್ಣವಾಗಿ ಮುಳುಗಿಹೋಗುತ್ತಾರೆ . ಆದರೆ ಆಳವಂದಾರರ ಆಗಮನವನ್ನು ಗಮನಿಸಿದ ಅವರು, ನಾಥಮುನಿಗಳ ವಂಶಾವಳಿಯಲ್ಲಿ ಬರುವ ಆಳವಂದಾರರನ್ನು ಕಾಣಲು, ಯೋಗದ ಸಮಯದಲ್ಲಿ, ಎಂಬೆರುಮಾನ್ ತನ್ನ ಭುಜಗಳ ಹಿಂದಿನಿಂದ ನೋಡುತ್ತಿದ್ದಾನೆ ಏಕೆಂದರೆ ಆ ವಂಶಾವಳಿಯವರು ಭಗವಂತನಿಗೆ ಬಹಳ ಆಪ್ತರಾದವರು ಎಂದು ಆಳವಂದಾರರಿಗೆ ಹೇಳುತ್ತಾರೆ. ಜೊತೆಗೆ ಆಳವಂದಾರ್ ಯೋಗ ರಹಸ್ಯವನ್ನು ಕಲಿಯಲು ಒಂದು ದಿನಾಂಕವನ್ನು ನೀಡುತ್ತಾರೆ (ತಾವು ಸಂಸಾರದಿಂದ ಪರಮಪದಕ್ಕೆ ತೆರಳಲು ಯೋಜಿಸಿದ್ದ ಸಮಯಕ್ಕೆ ಮುನ್ನ). ಆದರೆ ಆ ನಿರ್ದಿಷ್ಟವಾದ ದಿನದಂದು ಆಳವಂದಾರ್ ರ ತಿರುವನಂತಪುರದ ಭೇಟಿ ಸಂಭವಿಸುತ್ತದೆ ಹಾಗು ಯೋಗ ರಹಸ್ಯ ಕಲಿಯಲು ತುಂಬಾ ತಡವಾಗಿದೆ ಎಂದು ಅರಿತುಕೊಳ್ಳುತ್ತಾರೆ.

ಆ ಸಮಯದಲ್ಲಿ, ಅವರ ಶಿಷ್ಯರಲ್ಲೊಬ್ಬರಾದ ದೈವವಾರಿಯಾಂಡಾನ್, ತನ್ನ ಆಚಾರ್ಯರಿಂದ ಬೇರ್ಪಡಿಕೆ ಸಹಿಸಲಾರದೆ ತಿರುವನಂತಪುರದ ಕಡೆ ಪ್ರಯಾಣ ಬೆಳಸುತ್ತಾರೆ ಮತ್ತು ಅದೇ ಸಮಯದಲ್ಲಿ ಆಳವಂದಾರ್ ಸಹ ಶ್ರೀರಂಗಕ್ಕೆ ಪ್ರಯಾಣ ಮಾಡಲು ತೊಡಗುತ್ತಾರೆ್. ಅವರೀರ್ವರೂ ತಿರುವನಂತಪುರದ ಪ್ರವೇಶ ದ್ವಾರದ ಬಳಿ ಭೇಟಿ ಮಾಡಿದಾಗ ದೈವವಾರಿಯಾಂಡಾನನಿಗೆ ತನ್ನ ಆಚಾರ್ಯನನ್ನು ಕಂಡು ಬಹಳ ಸಂತೋಷವಾಗುತ್ತದೆ. ಆಳವಂದಾರ್ ಜೊತೆಗೆ ಹಿಂತಿರುಗಲು ಆತ ತೀರ್ಮಾನಿಸಿದಾಗ, ಆತನನ್ನು ಅನಂತಶಯನ ಎಂಬೆರುಮಾನ್ ರ ದರ್ಶನ ಮಾಡಿ ಬರಲು  ಹೇಳುತ್ತಾರೆ. ಅದಕ್ಕೆ ಆತ ತನಗೆ ಎಂಬೆರುಮಾನ್ ಅವರಿಗಿಂತ ಆಳವಂದಾರ್ ಅವರೇ ಮುಖ್ಯವೆಂದು ತಿಳಿಸುತ್ತಾರೆ. ಅಷ್ಟಿತ್ತು ಅವರ ಆಚಾರ್ಯ ಭಕ್ತಿ.

ಆಳವಂದಾರ್ ಶ್ರೀರಂಗಕ್ಕೆ ಹಿಂತಿರುಗಿ ಬಂದು ತಮ್ಮ ಸಂಪ್ರದಾಯದ ಉತ್ತರಾಧಿಕಾರಿಯ ನೇಮಕದ ಬಗ್ಗೆ ಚಿಂತಿತರಾಗುತ್ತಾರೆ. ಕಾಂಚೀಪುರದಲ್ಲಿ ಯಾದವಪ್ರಕಾಶರ ಕೆಳಗೆ ಓದುತ್ತಿರುವ ಇಳೈಯಾಳ್ವಾರ್ (ರಾಮಾನುಜರ್) ಬಗ್ಗೆ ಕಂಡುಕೊಳ್ಳುತ್ತಾರೆ. ಕಾಂಚೀಪುರಕ್ಕೆ ಹೋಗುವ ಅವರು ದೇವಪ್ಪೆರುಮಾಳ್ ದೇವಸ್ಥಾನದಲ್ಲಿ ಕರಿಯಮಾಣಿಕ್ಕ ಪೆರುಮಾಳ್ ಸನ್ನಿಧಿಯಲ್ಲಿ ಅವರು ತಮ್ಮ ದಿವ್ಯ ಕಟಾಕ್ಷವನ್ನು ಆ ಸಮಯದಲ್ಲಿ ಆ ಹಾದಿಯಲ್ಲಿ ಹೋಗುತ್ತಿದ್ದ ಇಳೈಯಾಳ್ವಾರ್ ಮೇಲೆ ಹರಿಸುತ್ತಾರೆ,  ಆಳವಂದಾರ್ ದೇವಪ್ಪೆರುಮಾಳ್ ಬಳಿಗೆ ಹೋಗಿ, ಇಳೈಯಾಳ್ವಾರ್ ರನ್ನು ಸಂಪ್ರದಾಯದ ಮುಂದಿನ ನಾಯಕನನ್ನಾಗಿ ಮಾಡಬೇಕೆಂದು ಎಂಬೆರುಮಾನ್ ರಲ್ಲಿ ಶರಣಾಗತಿ ಮಾಡುತ್ತಾರೆ.  ಈ ರೀತಿ ಆಳವಂದಾರ್ ಮಹಾ ವೃಕ್ಷದ, ಅಂದರೆ ಎಂಬೆರುಮಾನಾರ್ ದರ್ಶನದ, ಬೀಜವನ್ನು ಬಿತ್ತುತ್ತಾರೆ.  ಇಳೈಯಾಳ್ವಾರರಿಗೆ ಅವರ ಆಧ್ಯಾತ್ಮದ ಬೆಳವಣಿಗೆಯಲ್ಲಿ ಸಹಾಯ ಮಾಡುವಂತೆ ತಿರುಕಚ್ಚಿ ನಂಬಿಗಳಿಗೆ ಆಳವಂದಾರ್ ಸೂಚಿಸುತ್ತಾರೆ.

ಆಳವಂದಾರ್ ಅಸ್ವಸ್ಥಗೊಂಡು ತಮ್ಮ ಎಲ್ಲಾ ಶಿಷ್ಯರುಗಳಿಗೂ ತಿರುವರಂಗ ಪೆರುಮಾಳ್ ಅರೈಯರ್ ಅವರನ್ನು ಆಶ್ರಯಿಸಲು ನಿರ್ದೇಶಿಸುತ್ತಾರೆ. ತಮ್ಮ ಚರಮ ದಶೆ್ (ಈ ಸಂಸಾರದಲ್ಲಿ ತಮ್ಮ ಜೀವನದ ಕೊನೆ) ಯಲ್ಲಿ ಆಳವಂದಾರ್ ಬಹು ಮುಖ್ಯ ಸೂಚನೆಗಳನ್ನು ಸಹ ನೀಡುತ್ತಾರೆ. ಅವರ ಕೆಲ ಸೂಚನೆಗಳು ಯಾವುವೆಂದರೆ:

  • ದಿವ್ಯದೇಶಗಳೇ ನಮ್ಮ ಜೀವನ ಹಾಗು ನಾವು ಯಾವಾಗಲೂ ನಮ್ಮ ಸಮಯವನ್ನು ಅವುಗಳ ಚಿಂತನೆಯಲ್ಲಿಯೇ ಕಳೆಯಬೇಕು ಮತ್ತು ಅಲ್ಲಿ ಕೈಂಕರ್ಯಗಳನ್ನು ಮಾಡಬೇಕು
  • ಪೆರಿಯ ಪೆರುಮಾಳ್ ರ ಪಾದ ಕಮಲಗಳಲ್ಲಿ ನೆಲೆಸಿರುವ ತಿರುಪ್ಪಾಣಾಳ್ವಾರ್ ರ (ತಿರುವಡಿಯಿಂದ ತಿರುಮುಡಿಯ ವರೆವಿಗೂ) ನಾವು ಪೂಜಿಸಲೇಬೇಕು. ತಾವು ಸಹ ತಿರುಪ್ಪಾಣಾಳ್ವಾರ್ (ತಿರುವರಂಗಪ್ಪೆರುಮಾಳ್ ಅರೈಯರ್ ರಿಂದಲೂ ಸಹ ಪೂಜಿಸಲ್ಪಟ್ಟ) ಅವರೇ ತಮ್ಮ ಉಪಾಯ ಹಾಗು ಉಪೇಯ ಎಂದು ಯಾವಾಗಲೂ ಚಿಂತಿಸುತ್ತಿದ್ದರು.  ತಿರುಪ್ಪಾಣಾಳ್ವಾರ್ (ಪೆರಿಯ ಪೆರುಮಾಳ್ ರ ಬಗ್ಗೆ ಹಾಡಿದವರು) ಅವರನ್ನು ಕುರುಂಬರುತ್ತ ನಂಬಿ (ತಿರುವೇಂಗಡಮುಡೈಯಾನ್ ರಿಗೆ ಮಣ್ಣಿನ ಪುಷ್ಪ ನೀಡಿದವರು) ಹಾಗು ತಿರುಕ್ಕಚ್ಚಿ ನಂಬಿ (ದೇವ ಪ್ಪೆರುಮಾಳ್ ರಿಗೆ ಬೀಸಣಿಗೆ ಕೈಂಕರ್ಯ ಮಾಡಿದವರು) ಇವರಿಬ್ಬರಿಗೂ ಹೋಲಿಕೆ ಮಾಡಿ ಮೂರ್ವರೂ ಒಂದೇ ಮಟ್ಟದಲ್ಲಿರುವವರು  ಎಂದಿದ್ದಾರೆ.
  • ಓರ್ವ ಪ್ರಪನ್ನನು ಎಂದಿಗೂ ಸಹ ತನ್ನ ಆತ್ಮ ಯಾತ್ರೆ (ಭಗವದ್ ವಿಷಯಂ) ಅಥವಾ ತನ್ನ ದೇಹ ಯಾತ್ರೆ (ಲೌಕಿಕ) ಗಳ ಬಗ್ಗೆ ಚಿಂತಿಸಲೇಬಾರದು. ಏಕೆಂದರೆ, ಆತ್ಮನು ಎಂಬೆರುಮಾನ್ ರ ಅತ್ಯಂತ ಪರತಂತ್ರನು ಮತ್ತು ಎಂಬೆರುಮಾನ್ ಆತ್ಮ ಯಾತ್ರೆಯ ಆರೈಕೆಯನ್ನು ನೋಡಿಕೊಳ್ಳುತ್ತಾನೆ. ದೇಹವು ಕರ್ಮದಿಂದ ನಡೆಸಲ್ಪಡುವುದರಿಂದ, ನಮ್ಮ ಪಾಪ/ಪುಣ್ಯಗಳು ದೇಹ ಯಾತ್ರೆಯನ್ನು ನಡೆಸಿಕೊಳ್ಳುತ್ತದೆ. ಆದುದರಿಂದ, ನಾವು ಈ ಎರಡರ ಬಗ್ಗೆಯೂ ಚಿಂತಿಸಬೇಕಾಗಿಲ್ಲ.
  • ನಾವು ಭಾಗವತರ ನಡುವೆ ತಾರತಮ್ಯ ಮಾಡಬಾರದು. ನಾವು ಭಾಗವತರನ್ನು ಕನಿಷ್ಟ ಪಕ್ಷ ಎಂಬೆರುಮಾನ್ ನಿಗೆ ಸಮಾನವಾಗಿಯಾದರೂ ಕಾಣಲೇಬೇಕು.
  • ನಾವು ಎಂಬೆರುಮಾನ್ ರ ಚರಾಣಾಮೃತವನ್ನು ಸ್ವೀಕರಿಸುವ ರೀತಿಯಲ್ಲಿಯೇ, ಆಚಾರ್ಯರ ಶ್ರೀಪಾದ ತೀರ್ಥವನ್ನು ಸಹ ಅದೇ ಗೌರವದೊಂದಿಗೆ ಸ್ವೀಕರಿಸಬೇಕು
  •  ನಾವುಗಳು (ಆಚಾರ್ಯರು) ಶ್ರೀಪಾದ ತೀರ್ಥವನ್ನು ಇತರರಿಗೆ ನೀಡುವಾಗ, ಅದನ್ನು ವಾಕ್ಯ ಗುರುಪರಂಪರೆ/ದ್ವಯ ಮಹಾಮಂತ್ರದ ಅನುಸಂಧಾನದೊಂದಿಗೆ ಗುರುಪರಂಪರೆಯ ಪರವಾಗಿ ನೀಡಬೇಕು

ಕೊನೆಯಲ್ಲಿ ಅವರು ತಮ್ಮ ಎಲ್ಲ ಶಿಷ್ಯಂದಿರನ್ನೂ ಹಾಗು ಇತರ ಶ್ರೀವೈಷ್ಣವರನ್ನೂ ತಮ್ಮ ಮುಂದೆ ನಿಲ್ಲುವಂತೆ ಬಿನ್ನವಿಸಿಕೊಳ್ಳುತ್ತಾರೆ.  ತಾವು ಮಾಡಿರಬಹುದಾದಂತಹ ಯಾವುದೇ ತಪ್ಪುಗಳಿಗೆ ಅವರಲ್ಲಿ ಕ್ಷಮೆಯನ್ನು ಯಾಚಿಸಿ,  ಅವರಿಂದ ಶ್ರೀಪಾದ ತೀರ್ಥ ಸ್ವೀಕರಿಸಿ, ಅವರುಗಳಿಗೆ ತದಿಯಾರಾಧನೆ ನಡೆಸಿ, ತಮ್ಮ ಚರಮ ತಿರುಮೇನಿಯನ್ನು ಕಳಚಿ ಪರಮಪದಕ್ಕೆ ತೆರಳುತ್ತಾರೆ. ಅವರ ಎಲ್ಲಾ ಶಿಷ್ಯರೂ ದು:ಖದಲ್ಲಿ ಮುಳುಗಿಹೋಗಿ, ಕೊನೆಯದಾಗಿ ಒಂದು ಭವ್ಯ ಆಚರಣೆ ಮಾಡುವ ಯೋಜನೆಯಲ್ಲಿ ತೊಡಗುತ್ತಾರೆ. ಶ್ರೀವೈಷ್ಣವರು ಪರಮಪದಕ್ಕೆ ಹೋಗಲು ತಮ್ಮ ದೇಹ ತೊರೆದಾಗ, ಅವರಿಗೆ ಪರಮಪದದಲ್ಲಿ ದೊರಕುವ ಆಶೀರ್ವಾದದ ಸಂದರ್ಭವನ್ನು ಭವ್ಯವಾದ ರೀತಿಯಲ್ಲಿ ಆಚರಿಸಲಾಗುತ್ತದೆ.  ಚರಮ ಕೈಂಕರ್ಯಗಳಾದ ತಿರುಮಂಜನ, ಶ್ರೀಚೂರ್ಣಪರಿಪಾಲನ, ಅಲಂಕಾರಗಳು, ಬ್ರಹ್ಮರಥ ಇತ್ಯಾದಿ   ಆಳವಂದಾರ್ ಚರಿತ್ರೆ ಹಾಗು ಇತರ ಆಚಾರ್ಯರುಗಳ ಜೀವಿತಗಳಲ್ಲಿ ಬಹಳ ವಿಷದೀಕೃತವಾಗಿ ವಿವರಿಸಲಾಗಿದೆ.

ಸರಾಸರಿ ಅದೇ ಸಮಯದಲ್ಲಿ, ಇಳೈಯಾಳ್ವಾರರನ್ನು ಶ್ರೀರಂಗಕ್ಕೆ ಕರೆತರಲು ಪೆರಿಯನಂಬಿ ಕಾಂಚೀಪುರಕ್ಕೆ ಹೋಗಿರುತ್ತಾರೆ.  ದೇವಪ್ಪೆರುಮಾಳ್ ರಿಗೆ ನೀರು ತರುವ ತಮ್ಮ ಕೈಂಕರ್ಯಕ್ಕಾಗಿ ಇಳೈಯಾಳ್ವಾರ್ ಸಾಲೈ ಕಿಣರಿಗೆ ಹೋಗಿದ್ದಾಗ, ಪೆರಿಯ ನಂಬಿಗಳು ಆಳವಂದಾರರ ಸ್ತೋತ್ರರತ್ನವನ್ನು ಜೋರಾಗಿ ಓದತೊಡಗುತ್ತಾರೆ. ಅದನ್ನು ಕೇಳಿ, ಅದರ ಗೂಢಾರ್ಥಗಳನ್ನು ಅರಿತ ಇಳೈಯಾಳ್ವಾರ್, ಈ ಶ್ಲೋಕಗಳನ್ನು ಬರೆದವರಾರು ಎಂದು ಪೆರಿಯನಂಬಿಗಳನ್ನು ವಿಚಾರಿಸುತ್ತಾರೆ.  ಆಳವಂದಾರರ ಹಿರಿಮೆಗಳನ್ನು ವಿವರಿಸಿದ ಪೆರಿಯನಂಬಿಗಳು, ಇಳೈಯಾಳ್ವಾರರನ್ನು ಶ್ರೀರಂಗಕ್ಕೆ ಭೇಟಿ ನೀಡಲು ಕೋರುತ್ತಾರೆ. ಈ ಪ್ರಸ್ತಾಪವನ್ನು ಒಪ್ಪಿದ ಇಳೈಯಾಳ್ವಾರ್, ದೇವಪ್ಪೆರುಮಾಳ್ ಹಾಗು ತಿರುಕಚ್ಚಿನಂಬಿಗಳ ಬಳಿ ಹೋಗಿ ಶ್ರೀರಂಗಕ್ಕೆ ಭೇಟಿ ನೀಡಲು ಒಪ್ಪಿಗೆಯನ್ನು ಪಡೆಯುತ್ತಾರೆ.     ಶ್ರೀರಂಗವನ್ನು ತಲುಪುತ್ತಿದ್ದಾಗ ಆಳವಂದಾರರ ತಿರುಮೇನಿಯ ಮೆರವಣಿಗೆಯನ್ನು ಕಂಡ ಪೆರಿಯ ನಂಬಿಗಳು ಕೆಳಗೆ ಬಿದ್ದು ಅಳತೊಡಗುತ್ತಾರೆ. ಇದರಿಂದ ವಿಚಲಿತರಾದ ಇಳೈಯಾಳ್ವಾರ್, ಸ್ಥಳೀಯ ಶ್ರೀವೈಷ್ಣವರುಗಳನ್ನು ವಿಚಾರಿಸಿ, ನಡೆದುದು ಏನೆಂದು ತಿಳಿದುಕೊಳ್ಳುತ್ತಾರೆ.

ಆ ಸಮಯದಲ್ಲಿ, ಆಳವಂದಾರರಿಗೆ ಕೊನೆಯ ಕೈಂಕರ್ಯಗಳು ಶುರುವಾದಾಗ, ಅವರ ಕೈನ 3 ಬೆರಳುಗಳು ಮಡಚಿರುವುದನ್ನು ಎಲ್ಲಾರೂ ಗಮನಿಸುತ್ತಾರೆ.  ಇದರ ಕಾರಣ ಏನೆಂದು ಯಾರಿಗಾದರೂ ಗೊತ್ತಿದೆಯೇ ಎಂದು ಇಳೈಯಾಳ್ವಾರರು ಕೇಳಿದಾಗ, ಆಳವಂದಾರರಿಗೆ 3 ಅತೃಪ್ತ ಆಸೆಗಳು ಇದ್ದವು ಎಂದು ಅ ಶ್ರೀವೈಷ್ಣವರುಗಳು ಹೇಳುತ್ತಾರೆ. ಅವು:

  • ವ್ಯಾಸ ಹಾಗು ಪರಾಶರ ಋಷಿಗಳೆಡೆಗೆ ನಾವು ನಮ್ಮೆ ಕೃತಘ್ಞತೆಗಳನ್ನು ತೋರಿಸಬೇಕು
  • ನಮ್ಮಾಳ್ವಾರರಿಗೆ ನಾವು ನಮ್ಮ ಪ್ರೇಮವನ್ನು ತೋರಿಸಬೇಕು
  •  ವಿಶಿಷ್ಟಾದ್ವೈತ ಸಿದ್ದಾಂತದಂತೆ ನಾವು ವ್ಯಾಸರ ಬ್ರಹ್ಮಸೂತ್ರಗಳಿಗೆ ಒಂದು ಭಾಷ್ಯವನ್ನು ಬರೆಯಬೇಕು

ಇದನ್ನು ಕೇಳಿದ ಕೂಡಲೇ, ತಾನು ಈ  3 ಆಸೆಗಳನ್ನೂ ಪೂರೈಸುವನ್ನು ಎಂದು ಇಳೈಯಾಳ್ವಾರ್  ಪ್ರತಿಜ್ಞೆಯನ್ನು ಮಾಡುತ್ತಾರೆ ಮತ್ತು ಒಡನೆಯೇ ಆಳವಂದಾರರ ಕೈ ಬೆರಳುಗಳು ತೆರೆದುಕೊಳ್ಳುತ್ತವೆ.  ಅಲ್ಲಿ ಒಟ್ಟುಗೂಡಿದ್ದ ವೈಷ್ಣವರೆಲ್ಲರೂ, ಇದನ್ನು ಕಂಡು ಭಾವಪರವಶರಾಗುತ್ತಾರೆ ಮತ್ತು ಆಳವಂದಾರರ ಕೃಪೆ ಹಾಗು ಶಕ್ತಿ ಸಂಪೂರ್ಣವಾಗಿ ಇವರ ಮೇಲೆ ವರ್ಷಗೈಯುತ್ತದೆ ಎಂದು ಹೇಳಿ, ನಮ್ಮ ದರ್ಶನ ನಿರ್ವಾಹಕರಾಗಲು ಹಾರೈಸುತ್ತಾರೆ. ಎಲ್ಲಾ ಕೈಂಕರ್ಯಗಳೂ ಮುಗಿದ ನಂತರ,  ಆಳವಂದಾರರ ನಷ್ಟದಿಂದ ತುಂಬಾ ನೊಂದ ಇಳೈಯಾಳ್ವಾರ್ ನಂಬೆರುಮಾಳ್ ರನ್ನು ಪೂಜಿಸದೆಯೇ ಕಾಂಚೀಪುರಕ್ಕೆ ಹಿಂತಿರುಗಿಬಿಡುತ್ತಾರೆ.

ಆಳವಂದಾರ್ ಉಭಯ ವೇದಾಂತಗಳಲ್ಲಿಯೂ ಒಬ್ಬ ಮಹಾನ್ ವಿದ್ವಾಂಸರಾಗಿದ್ದರು. ಇದನ್ನು ಅವರ ಗ್ರಂಥಗಳಿಂದ ನಾವು ಸುಲಭವಾಗಿ ಗ್ರಹಿಸಬಹುದು.

  • ಚತು:ಶ್ಲೋಕಿಯಲ್ಲಿ ಪಿರಾಟ್ಟಿಯ ವೈಭವದ ಮೂಲ ತತ್ವವನ್ನು ಅವರು ಕೇವಲ 4 ಶ್ಲೋಕಗಳಲ್ಲಿ ನೀಡಿದ್ದಾರೆ.
  • ಸ್ತೋತ್ರರತ್ನ ಒಂದು ನಿಜವಾದ ರತ್ನವಾಗಿದೆ – ಶರಣಾಗತಿಯ ಇಡೀ ಪರಿಕಲ್ಪನೆಯನ್ನು (ತಿರುವಾಯ್ ಮೊಳಿ ಇತ್ಯಾದಿಗಳಲ್ಲಿ ವಿವರಿಸಿರುವಂತೆ) ಅವರು ಅತೀ ಸುಲಭ ಸ್ತೋತ್ರಗಳಲ್ಲಿ ವಿವರಿಸಿದ್ದಾರೆ.
  •  ಗೀತಾರ್ಥ ಸಂಗ್ರಹ – ಗೀತೆಯಲ್ಲಿನ ಮೂಲತತ್ವವನ್ನು ಹೊರತರುತ್ತದೆ.
  • ಆಗಮ ಪ್ರಾಮಾಣ್ಯಂ – ಇದು ಪಂಚರಾತ್ರ ಆಗಮದ ಪ್ರಾಮುಖ್ಯತೆ ಮತ್ತು ಸಿಂಧುತ್ವವನ್ನು ಪ್ರಚರಿಸುವ ಮೊದಲ ಗ್ರಂಥವಾಗಿದೆ.

ಆಳವಂದಾರರ ತನಿಯನ್

ಯತ್ ಪದಾಂಭೋರುಹಧ್ಯಾನ  ವಿದ್ವಸ್ತಾಶೇಷ ಕಲ್ಮಷ:
ವಸ್ತುತಾಮುಪಯಾ ತೋಹಂ ಯಾಮುನೇಯಂ ನಮಾಮಿತಂ

ಮುಂದಿನ ಕೃತಿಯಲ್ಲಿ, ನಾವು ಪೆರಿಯ ನಂಬಿಗಳ ವೈಭವವನ್ನು ಕಾಣೋಣ.

ಅಡಿಯೇನ್ ಎಂಬಾರ್ ತಿರುನಾರಾಯಣ ದಾಸನ್

ಸಂಗ್ರಹ – http://acharyas.koyil.org/index.php/2012/09/01/alavandhar-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org