ಕುರುಗೈ ಕಾವಲಪ್ಪನ್

ಶ್ರೀ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:

ತಿರುನಕ್ಷತ್ರಮ್: ಥೈ, ವಿಶಾಖಮ್
ಅವತಾರ ಸ್ಥಳಂ: ಆಳ್ವಾರ್ ತಿರುನಗರಿ
ಆಚಾರ್ಯನ್: ನಾಥಮುನಿಗಳ್

ಕುರುಗೈ ಕಾವಲಪ್ಪನ್ ನಾಥಮುನಿಗಳಿಗೆ ಒಬ್ಬ ಪ್ರಿಯ ಶಿಷ್ಯರಾಗಿದ್ದರು. ನಾಥಮುನಿಗಳು ಕಾಟ್ಟು ಮನ್ನಾರ್ ಕೋಯಿಲ್ ಗೆ ಹಿಂತಿರುಗಿದನಂತರ ಕೆಲಕಾಲ ಭಗವಂತನಲ್ಲಿ ಧ್ಯಾನಮಗ್ನರಾಗಿರುತ್ತಾರೆ. ತದನಂತರ, ಅವರು ಯೋಗರಹಸ್ಯಗಳನ್ನು ಕಲಿಯಲು ಕುರುಗೈ ಕಾವಲಪ್ಪನ್ ಅವರಿಗೆ ಆದೇಶಿಸುತ್ತಾರೆ ಮತ್ತು ಅದನ್ನು ಅವರಿಗೆ ಬೋಧಿಸುತ್ತಾರೆ. ಕುರುಗೈ ಕಾವಲಪ್ಪನ್ ಅದನ್ನೆಲ್ಲಾ ಕಲಿಯುತ್ತಾರೆ ಮತ್ತು ಅಷ್ಟಾಂಗ ಯೋಗದಲ್ಲಿ ಭಗವಂತನ ಧ್ಯಾನವನ್ನು ಮುಂದುವರಿಸುತ್ತಾರೆ. ನಾಥಮುನಿಗಳು ಎಂಪೆರುಮಾನನಿಂದ ಅಗಲಿಕೆಯನ್ನು ಸಹಿಸಲಾರದೆ ಪರಮಪದಕ್ಕೆ ತೆರಳಿದಾಗ, ಕುರುಗೈ ಕಾವಲಪ್ಪನ್ ಅವರು ನಾಥಮುನಿಗಳು ತಮ್ಮ ವಿಮಲ ಚರಮ ತಿರುಮೇನಿಯನ್ನು ತ್ಯಜಿಸಿದ ಸ್ಥಳಕ್ಕೆ ಹೋಗುತ್ತಾರೆ ಮತ್ತು ಅಲ್ಲಿಯೇ ತಂಗಿದ್ದು, ಸಂಪೂರ್ಣವಾಗಿ ಭಗವಂತನನ್ನು ಧ್ಯಾನಿಸುತ್ತಾ ಮತ್ತು ಆ ಸ್ಥಳವನ್ನು ನೋಡಿಕೊಳ್ಳುತ್ತಾ ತಮ್ಮ ಉಳಿದ ಜೀವನವನ್ನು ಸಾಗಿಸುತ್ತಾರೆ.

ಮಣಕ್ಕಾಲ್ ನಂಬಿ ಅವರು ಆಳವಂದಾರರಿಗೆ ಕುರುಗೈ ಕಾವಲಪ್ಪನ್ ಅವರ ಬಳಿಗೆ ಹೋಗಿ ಯೋಗರಹಸ್ಯಗಳನ್ನು ಕಲಿಯಲು ಆದೇಶಿಸುತ್ತಾರೆ. ಅದರಂತೆ ಆಳವಂದಾರರು ತಮ್ಮ ಶಿಷ್ಯರೊಂದಿಗೆ ಕುರುಗೈ ಕಾವಲಪ್ಪನ್ ಅವರು ಭಗವಂತನಲ್ಲಿ ಧ್ಯಾನಮಗ್ನರಾಗಿರುವ ಸ್ಥಳಕ್ಕೆ ತಲುಪುತ್ತಾರೆ. ಕಾವಲಪ್ಪನ್ ಅವರ ಧ್ಯಾನವನ್ನು ಭಂಗ ಮಾಡಲು ಇಚ್ಛಿಸದೆ ಅವರೆಲ್ಲರೂ ಯಾವುದೇ ಶಬ್ದವನ್ನು ಮಾಡದೆ, ಒಂದು ಗೋಡೆಯ ಹಿಂದೆ ಅಡಗಿಕೊಂಡು ಕಾವಲಪ್ಪನ್ ಅವರನ್ನು ಹಿಂಬದಿಯಿಂದ ಗಮನಿಸುತ್ತಾರೆ. ಅನಿರೀಕ್ಷಿತವಾಗಿ, ಅಪ್ಪನ್ ಅವರು ಹಿಂತಿರುಗಿ ನೋಡುತ್ತಾರೆ ಮತ್ತು ಯಾರಾದರೂ ಶ್ರೇಷ್ಠಕುಲದವರಿದ್ದಾರೆಯೇ (ನಾಥಮುನಿಗಳ) ಎಂದು ಕೇಳುತ್ತಾರೆ. ಆಗ ಆಳವಂದಾರರು ಹೊರಗೆ ಬಂದು ತಾವು ನಾಥಮುನಿಗಳ ಮೊಮ್ಮಗ ಎಂದು ಪರಿಚಯಿಸುತ್ತಾರೆ. ಆಳವಂದಾರರು ಅಪ್ಪನ್ ಅವರನ್ನು ಕೇಳುತ್ತಾರೆ – “ನಾವು ತಮ್ಮ ಬೆನ್ನಿನ ಹಿಂದೆ ಗೋಡೆಯ ಹಿಂಭಾಗದಲ್ಲಿ ಅಡಗಿಕೊಂಡಿದ್ದೆವು. ಆದರೂ ತಮಗೆ ನನ್ನ ಗುರುತು ಹೇಗೆ ಸಿಕ್ಕಿತು ? “. ಅಪ್ಪನ್ ಉತ್ತರಿಸುತ್ತಾರೆ – “ನಾನು ಭಗವಂತನೊಂದಿಗೆ ಯೋಗದಲ್ಲಿರುವಾಗ, ಪೆರಿಯ ಪಿರಾಟ್ಟಿ (ಮಹಾಲಕ್ಷ್ಮಿ) ಬಂದು ಕರೆದರೂ ಆತನು ತಿರುಗಿ ನೋಡಲಾರ. ಆದರೆ ಈಗ ಭಗವಂತನು ಒಂದೇ ಸಮನೆ ನನ್ನ ಭುಜಗಳನ್ನು ಕೆಳಗೆ ಅದುಮುತ್ತಾ ನೀವಿರುವ ಕಡೆಗೆ ನೋಡುತ್ತಿದ್ದನು. ಅದರಿಂದ ಭಗವಂತನಿಗೆ ಅತಿ ಪ್ರಿಯವಾದ ನಾಥಮುನಿಗಳ ಶ್ರೇಷ್ಠ ಕುಲದವರೊಬ್ಬರು ಬಂದಿರಬೇಕೆಂದು ನನಗೆ ಅರಿವಾಯಿತು”. ಅಪ್ಪನ್ ಅವರ ಭಗವಂತನಲ್ಲಿನ ಅನುಭವ ಮತ್ತು ನಾಥಮುನಿಗಳ ಮೇಲೆ ಭಗವಂತನ ಮಮತೆಯನ್ನು ಕಂಡು ಆಳವಂದಾರರ ಮನಸ್ಸು ಸ್ಪಂದಿಸಿತು. ತದನಂತರ ಅವರು ಅಪ್ಪನ್ ಅವರ ಚರಣಾರವಿಂದಗಳಿಗೆ ಎರಗುತ್ತಾರೆ ಮತ್ತು ತಮಗೆ ಯೋಗರಹಸ್ಯಗಳನ್ನು ಕಲಿಸಲು ವಿನಂತಿಸಿಕೊಳ್ಳುತ್ತಾರೆ. ಅಪ್ಪನ್ ಅವರು ಆಳವಂದಾರರನ್ನು ಮೇಲೆತ್ತುತ್ತಾರೆ ಮತ್ತು ಅದನ್ನು ಕಲಿಸುತ್ತೇನೆಂದು ಭರವಸೆಯನ್ನು ಕೊಡುತ್ತಾರೆ. ಆದರೆ ಈ ಸಂಸಾರದಲ್ಲಿ ತಮ್ಮ ಜೀವನದ ಕಡೆಯ ದಿನಗಲ್ಲಿ ಮಾತ್ರ ಈ ರಹಸ್ಯವನ್ನು ಅವರಿಗೆ ಬಹಿರಂಗಪಡಿಸುವುದಾಗಿ ತಿಳಿಸುತ್ತಾರೆ. ಒಬ್ಬ ಶ್ರೇಷ್ಠ ಯೋಗಿಯಾದ್ದರಿಂದ, ಅವರಿಗೆ ತಾವು ಪರಮಪದಕ್ಕೆ ತೆರಳುವ ನಿಖರವಾದ ದಿನವು ತಿಳಿದಿತ್ತು. ಆ ದಿನ ಮತ್ತು ಸಮಯವನ್ನು ಅವರು ಆಳವಂದಾರರಿಗೆ ಒಂದು ಚೀಟಿಯಲ್ಲಿ ಬರೆದುಕೊಡುತ್ತಾರೆ ಮತ್ತು ಆ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ತಮ್ಮಲ್ಲಿ ಬಂದು ಯೋಗರಹಸ್ಯಗಳನ್ನು ಕಲಿಯುವಂತೆ ತಿಳಿಸುತ್ತಾರೆ. ಆಳವಂದಾರರೂ ಅದಕ್ಕೆ ಸಮ್ಮತಿಸಿ, ಶ್ರೀರಂಗಂ ಗೆ ಹಿಂತಿರುಗಿ ತಮ್ಮ ಕೈಂಕರ್ಯಗಳನ್ನು ಮುಂದುವರಿಸುತ್ತಾರೆ.

ತರುವಾಯ, ಶ್ರೀರಂಗಂ ನಲ್ಲಿ ಅಧ್ಯಯನ ಉತ್ಸವದ ಸಮಯದಲ್ಲಿ, ಆಳ್ವಾರ್ ತಿರುವರಂಗ ಪೆರುಮಾಳ್ ಅರೆಯರ್ ಅವರು ನಂಪೆರುಮಾಳ್ (ಶ್ರೀರಂಗನಾಥನ ಉತ್ಸವ ಮೂರ್ತಿ) ಮುಂದೆ ನಮ್ಮಾಳ್ವಾರರ ತಿರುವಾಯ್ಮೊಳಿಯನ್ನು ಪಠಿಸುತ್ತಾರೆ. ಅವರು ಆಳವಂದಾರರ ಕಡೆ ನೋಡುತ್ತಾ ಕೆಡುಮಿಡರ್ (೧೦.೨) ತಿರುವನಂತಪುರಂ ಪದಿಗಮ್ ಅನ್ನು ಪಠಿಸುತ್ತಾರೆ ಮತ್ತು ನಂಪೆರುಮಾಳರ ದೈವೇಚ್ಛೆಯಂತೆ ಅರೆಯರ್ ಅವರು “ನಡಮಿನೋ ನಮರ್ಗಳುಳ್ಳೇರ್ ನಾಮುಮಕ್ಕು ಅರಿಯಚೊನ್ನೋಮ್”, ಅರ್ಥಾತ್ “ಒಹ್ ನನ್ನ ಪ್ರಿಯ ಭಕ್ತರೇ, ಈ ಕೂಡಲೇ ತಿರುವನಂತಪುರಕ್ಕೆ ನಡೆಯಿರಿ”. ನಂಪೆರುಮಾಳ್ ಅವರ ಈ ದೈವಿಕ ಆಜ್ಞೆಯನ್ನು ಆಳವಂದಾರರು ಸ್ವೀಕರಿಸುತ್ತಾರೆ ಮತ್ತು ತಿರುವನಂತಪುರಕ್ಕೆ ತೆರಳುತ್ತಾರೆ. ಅಲ್ಲಿಗೆ ತಲುಪಿ ಮಂಗಳಾಶಾಸನವನ್ನು ಮಾಡಿದ ನಂತರ, ಅವರಿಗೆ ಅದೇ ದಿನ ಕುರುಗೈ ಕಾವಲಪ್ಪನ್ ತಮ್ಮ ಬಳಿಗೆ ಬಂದು ಯೋಗರಹಸ್ಯಗಳನ್ನು ಕಲಿಯಲು ಹೇಳಿದ್ದುದು ನೆನಪಾಗುತ್ತದೆ. ಆಗ ಆಳವಂದಾರರು ಈ ಕೂಡಲೇ ಆ ಸ್ಥಳಕ್ಕೆ ಕರೆದೊಯ್ಯಲು ತಮ್ಮ ಬಳಿ ಪುಷ್ಪಕ ವಿಮಾನವೊಂದಿಲ್ಲವೋ ಎಂದು ದುಃಖಿಸುತ್ತಾರೆ.

ಹೀಗೆ, ಅಪ್ಪನ್ ಅವರು ಭಗವಂತನನ್ನು ಧ್ಯಾನಿಸುತ್ತಾ, ತಮ್ಮ ಆಚಾರ್ಯರು ಈ ಸಂಸಾರವನ್ನು ತ್ಯಜಿಸಿದ ಸ್ಥಳದಲ್ಲಿಯೇ ಸದಾಕಾಲ ಇದ್ದು, ಅಂತಿಮವಾಗಿ ಅದೇ ಸ್ಥಳದಲ್ಲಿ ತಮ್ಮ ಆಚಾರ್ಯರ ದಿವ್ಯ ಚರಣಾರವಿಂದಗಳನ್ನು ಸೇರಿದರು.

ನಾವು ಭಗವಾನ್ ಮತ್ತು ಆಚಾರ್ಯರಲ್ಲಿ ಅತ್ಯಂತ ನಿಕಟವಾದ ಬಾಂಧವ್ಯವನ್ನು ಬೆಳೆಸುವಂತೆ ಕುರುಗೈ ಕಾವಲಪ್ಪನ್ ಅವರ ಚರಣಾರವಿಂದಗಳಲ್ಲಿ ಪ್ರಾರ್ಥಿಸೋಣ.

ಕುರುಗೈ ಕಾವಲಪ್ಪನ್ ಅವರ ತನಿಯನ್:

ನಾಥಮುನಿ ಪದಾಸಕ್ತಮ್ ಜ್ಞಾನಯೋಗಾದಿ ಸಂಪದಮ್
ಕುರುಗಾಧಿಪ ಯೋಗೀಂದ್ರಮ್ ನಮಾಮಿ ಶಿರಸಾ ಸದಾ

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ : https://acharyas.koyil.org/index.php/2013/02/03/kurugai-kavalappan-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org


1 thought on “ಕುರುಗೈ ಕಾವಲಪ್ಪನ್”

Comments are closed.