ಶ್ರೀ: ಶ್ರೀಮತೇ ಶಠಗೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:
ತಿರುನಕ್ಷತ್ರಮ್: ಆಣಿ ಶ್ರವಣಮ್ (ತಿರುವೋಣಂ)
ಅವತಾರ ಸ್ಥಳಂ: ತಿರುಕ್ಕಣ್ಣಮಂಗೈ
ಆಚಾರ್ಯನ್: ನಾಥಮುನಿಗಳ್
ಕೃತಿಗಳು: ನಾಚ್ಚಿಯಾರ್ ತಿರುಮೊಳಿ ತನಿಯನ್ “ಅಲ್ಲಿ ನಾಳ್ ತಾಮರೈ ಮೇಲ್” ಇಂದ ಆರಂಭವಾಗುತ್ತದೆ
ಭಗವಾನ್ ಭಕ್ತವತ್ಸಲ ಮತ್ತು ತಾಯಾರ್ – ತಿರುಕ್ಕಣ್ಣಮಂಗೈ
ತಿರುಕ್ಕಣ್ಣಮಂಗೈ ಆಂಡಾನ್ – ತಿರುಕ್ಕಣ್ಣಮಂಗೈ
ನಾಥಮುನಿಗಳ ಪ್ರಿಯ ಶಿಷ್ಯರಾದ ತಿರುಕ್ಕಣ್ಣಮಂಗೈ ಆಂಡಾನ್ ಅವರು ತಿರುಕ್ಕಣ್ಣಮಂಗೈ ದಿವ್ಯದೇಶದಲ್ಲಿ ಜನಿಸಿದರು. ಅವರು ಭಗವಂತನ ರಕ್ಷಕತ್ವದಲ್ಲಿನ ತಮ್ಮ ಪರಮ ನಂಬಿಕೆಯಿಂದಾಗಿ ನಮ್ಮ ಪೂರ್ವಾಚಾರ್ಯರುಗಳಿಂದ ವಿಶೇಷವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ.
ಪಿಳ್ಳೈ ಲೋಕಾಚಾರ್ಯರ ಶ್ರೀ ವಚನಭೂಷಣ ದಿವ್ಯ ಶಾಸ್ತ್ರವು ಅವರ ವೈಭವಗಳನ್ನು ತೆರೆದಿಡುತ್ತದೆ. ಭಗವಂತನನ್ನು ಅನುಸರಿಸಿಕೊಂಡು ಹೋಗುವ ‘ಉಪಾಯ’ ಮತ್ತು ಭಗವಂತನ ಸೇವೆ ಮಾಡುವ ಧ್ಯೇಯವಾದ ‘ಉಪೇಯ’ ಇವುಗಳನ್ನು ಅತ್ಯಂತ ಆದರ್ಶಪೂರ್ಣವಾದ ಮತ್ತು ಉದಾತ್ತವಾದ ಉದಾಹರಣೆಗಳೊಂದಿಗೆ ವಿವರಿಸುತ್ತಾ, ಅವರು ಸೂತ್ರ ೮೦ ರಲ್ಲಿ ಹೀಗೆ ಹೇಳುತ್ತಾರೆ “ಉಪಾಯತುಕ್ಕು ಪಿರಾಟ್ಟಿಯೈಯುಮ್, ದ್ರೌಪದಿಯೈಯುಮ್, ತಿರುಕ್ಕಣ್ಣಮಂಗೈ ಆಂಡಾನೆಯುಮ್ ಪೋಲೆ ಇರುಕ್ಕವೇಣುಮ್; ಉಪೇಯತುಕ್ಕು ಇಳೈಯ ಪೆರುಮಾಳೈಯುಮ್, ಪೆರಿಯ ಉಡೈಯಾರೈಯುಮ್, ಪಿಳ್ಳೈ ತಿರುನರೈಯೂರ್ ಅರೈಯರೈಯುಮ್ ಚಿಂತಯಂತಿಯೈಯುಮ್ ಪೋಲೆ ಇರುಕ್ಕವೇಣುಮ್”. ಈ ಸೂತ್ರ ಮತ್ತು ಮುಂದಿನ ಕೆಲವು ಸೂತ್ರಗಳಲ್ಲಿ ಉಪಾಯ ಮತ್ತು ಉಪೇಯಗಳನ್ನು ಅತ್ತುತ್ತಮವಾದ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಉಪಾಯವೆಂದರೆ ಪ್ರಕ್ರಿಯೆ ಮತ್ತು ಉಪೇಯವೆಂದರೆ ಲಕ್ಷ್ಯ. ಶಾಸ್ತ್ರದ ಪ್ರಕಾರ ಭಗವಂತನೇ ಶ್ರೇಷ್ಠವಾದ ಉಪಾಯ ಮತ್ತು ಭಗವಂತನ ನಿರಂತರ ಕೈಂಕರ್ಯವೇ ಸರ್ವೋಚ್ಛವಾದ ಧೇಯ. ಭಗವಂತನು ಸಂಪೂರ್ಣ ಸಮರ್ಥನಾಗಿರುವುದರಿಂದ, ಆತನು ಯಾರನ್ನೇ ಆದರೂ ಸುಲಭವಾಗಿ ಉದ್ಧರಿಸಬಲ್ಲನು – ಆದ್ದರಿಂದ ಭಗವಂತನೇ ಅತ್ಯುತ್ತಮವಾದ ಉಪಾಯ. ಶ್ರೀಮನ್ನಾರಾಯಣನು ಎಲ್ಲರ ಅತ್ಯುನ್ನತ ಪ್ರಭುವಾಗಿರುವುದರಿಂದ, ಶ್ರೀಮನ್ನಾರಾಯಣ ಮತ್ತು ಆತನ ದಿವ್ಯ ಪತ್ನಿ ಶ್ರೀ ಮಹಾಲಕ್ಷ್ಮಿ ಇವರಿಗೆ ಕೈಂಕರ್ಯ ಮಾಡುವುದೇ ಅತ್ಯುತ್ತಮ ಉಪೇಯ ಎಂದು ಹೇಳಲಾಗಿದೆ.
ಈ ಕೆಳಗೆ ಉಪಾಯ ಮತ್ತು ಉಪೇಯಗಳ ಬಗ್ಗೆ ಕೆಲವು ಉದಾಹರಣೆಗಳನ್ನು ನೀಡಲಾಗಿದೆ. ಅವುಗಳನ್ನು ಈಗ ಸಂಕ್ಷಿಪ್ತವಾಗಿ ನೋಡೋಣ –
ಉಪಾಯ
- ಪಿರಾಟ್ಟಿ – ಸೀತಾ ಪಿರಾಟ್ಟಿ (ಶ್ರೀ ಮಹಾಲಕ್ಷ್ಮಿ) – ಪಿರಾಟ್ಟಿಯು ರಾವಣನಿಂದ ಅಪಹರಿಸಲ್ಪಟ್ಟು ಸೆರೆಯಲ್ಲಿದ್ದಾಗ, ಆಕೆಯು ಸಶಕ್ತಳಾಗಿರುವುದರಿಂದ ರಾವಣನನ್ನು ಸುಲಭವಾಗಿ ದಂಡಿಸಿ ಅಲ್ಲಿಂದ ಪಾರಾಗಬಹುದಿತ್ತು. ರಾಕ್ಷಸರು ಬಾಲಕ್ಕೆ ಬೆಂಕಿ ಹಚ್ಚಿದಾಗ ಆಕೆಯು ಹನುಮಂತನನ್ನು ರಕ್ಷಿಸಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದಳು. ಆಕೆಯು “ಶೀತೋ ಭವ” (ಈ ಬೆಂಕಿಯು ಹನುಮಂತನಿಗೆ ತಣ್ಣನೆಯ ಅನುಭವವನ್ನು ನೀಡಲಿ) ಎಂದು ಆಶೀರ್ವದಿಸಿ ಹನುಮಂತನನ್ನು ರಕ್ಷಿಸಿದಳು. ಆದರೆ ಆಕೆಯು ತನ್ನನ್ನೇ ರಕ್ಷಿಸಿಕೊಳ್ಳಬೇಕಾದಾಗ ತನ್ನೆಲ್ಲಾ ಶಕ್ತಿಯನ್ನು ತೊರೆದು ಭಗವಂತನ (ಶ್ರೀರಾಮ) ಮೇಲೆ ತನ್ನ ಸಂಪೂರ್ಣ ಅವಲಂಬಿಕೆಯನ್ನು ವ್ಯಕ್ತಪಡಿಸಿದಳು.
- ದ್ರೌಪದಿ – ಕೌರವರ ಸಭಾಂಗಣದಲ್ಲಿ ದ್ರೌಪದಿಗೆ ಕಿರುಕುಳಕೊಟ್ಟು ಅವಮಾನಿಸಿದಾಗ, ಆಕೆಯು ತನ್ನ ನಾಚಿಕೆಯನ್ನು ಸಂಪೂರ್ಣವಾಗಿ ಬಿಟ್ಟಳು, ತನ್ನೆರಡೂ ಕೈಗಳನ್ನು ಮೇಲೆತ್ತಿದಳು ಮತ್ತು ಶ್ರೀಕೃಷ್ಣನಿಗೆ ಮೊರೆಯಿಟ್ಟಳು. ಆಕೆಯು ತನ್ನ ವಸ್ತ್ರಗಳನ್ನು ಹಿಡಿದುಕೊಳ್ಳಲಿಲ್ಲ, ಆದರೆ ಸಂಪೂರ್ಣವಾಗಿ ಮತ್ತು ವಿಶ್ವಾಸಪೂರ್ವಕವಾಗಿ ತನ್ನೆರಡೂ ಕೈಗಳನ್ನು ಮೇಲೆತ್ತಿದಳು ಮತ್ತು ಶ್ರೀಕೃಷ್ಣನು ಅವಳನ್ನು ರಕ್ಷಿಸಿದನು.
- ತಿರುಕ್ಕಣ್ಣಮಂಗೈ ಆಂಡಾನ್ – ಅವರು ತಮ್ಮ ಎಲ್ಲಾ ಕರ್ಮಗಳನ್ನು ತೊರೆದರು ಮತ್ತು ತಿರುಕ್ಕಣ್ಣಮಂಗೈ ದಿವ್ಯದೇಶದ ಭಕ್ತವತ್ಸಲ ಭಗವಂತನನ್ನೇ ತಮ್ಮ ಸಮಸ್ತ ಆಶ್ರಯದಾತ ಮತ್ತು ರಕ್ಷಕನೆಂದು ಅಂಗೀಕರಿಸಿ ಆ ಭಕ್ತವತ್ಸಲನಿಗೇ ಸಂಪೂರ್ಣವಾಗಿ ಶರಣಾಗತರಾದರು.
ಆಂಡಾನ್ ಅವರ ನಿಷ್ಠೆಯನ್ನು ಸುಂದರವಾಗಿ ನಮ್ಮ ಮಾಮುನಿಗಳು ಈ ಸೂತ್ರದ ವ್ಯಾಖ್ಯಾನದಲ್ಲಿ ವಿವರಿಸಿದ್ದಾರೆ.
ಒಮ್ಮೆ ಒಬ್ಬ ವ್ಯಕ್ತಿಯು ಒಂದು ನಾಯಿಯ ಮೇಲೆ ಆಕ್ರಮಣ ಮಾಡುವುದನ್ನು ಆಂಡಾನ್ ಅವರು ನೋಡುತ್ತಾರೆ. ಆ ನಾಯಿಯ ಮಾಲಿಕನು ಬಹು ಕೋಪಗೊಂಡು ಆಕ್ರಮಣ ಮಾಡಿದ ವ್ಯಕ್ತಿಯೊಂದಿಗೆ ಜಗಳವಾಡುತ್ತಾನೆ. ಅವರಿಬ್ಬರೂ ತಮ್ಮ ಕತ್ತಿಗಳನ್ನು ತೆಗೆದು ಹೊರಡುತ್ತಾರೆ ಮತ್ತು ಒಬ್ಬರನ್ನೊಬ್ಬರು ಕೊಲ್ಲುವದಕ್ಕೂ ಸಿದ್ಧರಾಗುತ್ತಾರೆ. ಇದನ್ನು ನೋಡಿ ಆಂಡಾನ್ ಅವರಿಗೆ ಒಂದು ಅತಿ ದೊಡ್ಡ ಜ್ಞಾನವು ಸ್ಫುರಿಸುತ್ತದೆ. ಆಂಡಾನ್ ಯೋಚಿಸುತ್ತಾರೆ “ಹೀಗೆ ಒಂದು ನಾಯಿಯ ಮಾಲೀಕನಾದ ಒಬ್ಬ ಸಾಮಾನ್ಯವಾದ ಮನುಷ್ಯನು ಅತಿ ಉದ್ವಿಗ್ನಗೊಂಡು ತನ್ನ ನಾಯಿಯನ್ನು ಹೊಡೆದ ಇನ್ನೊಬ್ಬ ವ್ಯಕ್ತಿಯನ್ನು ಕೊಲ್ಲುವುದಕ್ಕೂ ಸಿದ್ಧನಾಗಿದ್ದಾನೆ, ಕೇವಲ ಆ ನಾಯಿಯ ಒಡೆಯನೆಂಬ ಕಾರಣಕ್ಕಾಗಿ. ಹೀಗಿರುವಾಗ ತನಗೆ ಶರಣಾಗತನಾದವನು ಕಷ್ಟಪಡುವಾಗ ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವಾಗ ಪರಮ ಪ್ರಭುವಾದ ಶ್ರೀಮನ್ನಾರಾಯಣನು ಹೇಗೆ ತಾನೇ ಭಾವಿಸುವನು?”. ಹೀಗೆ ಯೋಚಿಸಿ, ಅವರು ಕೂಡಲೇ ತಮ್ಮ ಎಲ್ಲಾ ಬಾಂಧವ್ಯಗಳನ್ನು ತೊರೆದು, ದೇವಸ್ಥಾನದೊಳಗೆ ಪ್ರವೇಶಿಸುತ್ತಾರೆ, ಮತ್ತು ಇನ್ನು ಮುಂದೆ ತಮ್ಮನ್ನು ರಕ್ಸಿಸಿಕೊಳ್ಳುವ ಯಾವ ಚಿಂತೆಯೂ ಇಲ್ಲದೆ ಸಂತೋಷವಾಗಿ ವಿರಾಮಿಸುತ್ತಾರೆ. ಇಲ್ಲಿ, ಎಲ್ಲ ಕರ್ಮಗಳನ್ನೂ ತೊರೆಯುವುದೆಂದರೆ ಯಾವ ಕೆಲಸವನ್ನೂ ಮಾಡದಿರುವುದೆಂದು ಅರ್ಥೈಸಿದಂತಾಗುತ್ತದೆ. ಆದರೆ ಮಾಮುನಿಗಳು ಈ ತತ್ವವನ್ನು ತಮ್ಮ ವ್ಯಾಖ್ಯಾನದಲ್ಲಿ ಸುಂದರವಾಗಿ ವಿವರಿಸಿದ್ದಾರೆ. ಅವರ ದಿವ್ಯ ವಚನವೇನೆಂದರೆ “ಸ್ವರಕ್ಷಣಹೇತುವಾನ ಸ್ವವ್ಯಾಪಾರಂಗಳೈ ವಿಟ್ಟಾನ್ ಎನ್ರಪ್ಪಡಿ” – ಅರ್ಥಾತ್ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಮಾಡಬೇಕಾದ ಎಲ್ಲಾ ಕರ್ಮಗಳನ್ನೂ ತೊರೆದರು. ಇದರರ್ಥವೇನೆಂದರೆ, ಅವರು ತಾವು ಭಗವಂತನಿಗೆ ಮಾಡಬೇಕಾದ ಎಲ್ಲಾ ಕೈಂಕರ್ಯಗಳನ್ನು ಮುಂದುವರಿಸಿದರು, ಆದರೆ ತಮ್ಮನ್ನು ರಕ್ಷಿಸಿಕೊಳ್ಳವು ಮಾಡಬೇಕಾದ ಪ್ರಯತ್ನವನ್ನು ಬಿಟ್ಟುಬಿಟ್ಟರು. ಆಯ್ ಜನಾನ್ಯಾಚಾರ್ಯರೂ ಸಹ ಇದೇ ತತ್ವವನ್ನು ಎತ್ತಿ ತೋರಿಸುತ್ತಾರೆ. ಇದನ್ನು ಈ ಮುಂದಿನ ಭಾಗಗಳಲ್ಲಿ ತಿಳಿದುಕೊಳ್ಳಬಹುದು, ವಿಶೇಷವಾಗಿ ತಿರುವಾಯ್ಮೊಳಿ ೯.೨.೧ ಯಲ್ಲಿ ಎತ್ತಿ ತೋರಿಸಿರುವ ಪ್ರಸಂಗದಲ್ಲಿ.
ಉಪೇಯ (ಕೈಂಕರ್ಯ) – ಸೂತ್ರ ೮೦ ರ ಉಳಿದ ಭಾಗ ಮತ್ತು ನಂತರದ ಸೂತ್ರಗಳ ಸಂಕ್ಷಿಪ್ತ ವಿವರಣೆ
- ಇಳಯ ಪೆರುಮಾಳ್ – ಲಕ್ಷ್ಮಣ – ಅವನ ಕೈಂಕರ್ಯವು ಎಷ್ಟು ದೃಢವಾಗಿತ್ತೆಂದರೆ ಅವನು ಪೆರುಮಾಳ್ (ಶ್ರೀರಾಮ) ಎಲ್ಲಿ ಹೋದರೂ ಅನುಸರಿಸುತ್ತಿದ್ದನು ಮತ್ತು ಸದಾಕಾಲವೂ ಶ್ರೀರಾಮನ ಸೇವೆ ಮಾಡುತ್ತಿದ್ದನು.
- ಪೆರಿಯ ಉಡೈಯಾರ್ – ಜಟಾಯು ಮಹಾರಾಜ – ಸೀತಾದೇವಿಯನ್ನು ರಕ್ಷಿಸಲು ರಾವಣನೊಡನೆ ಹೊರಡುವಾಗ ಅವನು ತನ್ನ ಸಾವಿನ ಬಗ್ಗೆ ಚಿಂತಿಸಲಿಲ್ಲ. ಅವನು ಸೀತಾಮಾತೆಯನ್ನು ರಕ್ಷಿಸುವುದರಲ್ಲಿಯೇ ಗಮನವಿರಿಸಿದ್ದನು ಮತ್ತು ಅಂತಿಮವಾಗಿ ಸಂಹರಿಸಲ್ಪಟ್ಟನು.
- ಪಿಳ್ಳೈ ತಿರುನರೈಯೂರ್ ಅರೈಯರ್ – ಅವರು ತಮ್ಮ ಕುಟುಂಬದೊಂದಿಗೆ ತೊಟ್ಟಿಯಮ್ ತಿರುನಾರಾಯಣಪುರಮ್ (ಶ್ರೀರಂಗಮ್ ಹತ್ತಿರದಲ್ಲಿರುವ ಸ್ಥಳ) ಎಂಬಲ್ಲಿ ಭಗವಂತನ ಸೇವೆ ಮಾಡುತ್ತಿದ್ದರು. ಒಮ್ಮೆ ಕೆಲವು ವಿಧ್ವಂಸಕರು ದೇವಸ್ಥಾನದ ಮೇಲೆ ದಾಳಿ ಮಾಡಿದರು ಮತ್ತು ಅರ್ಚಾವತಾರ ಭಗವಂತನಿಗೆ ಬೆಂಕಿಯಿಟ್ಟರು. ಈ ರೀತಿಯ ದಾಳಿಯನ್ನು ಸಹಿಸಲಾರದೆ ಮತ್ತು ಭಗವಂತನನ್ನು ರಕ್ಷಿಸಲೋಸುಗ ಅವರು ತಮ್ಮ ಕುಟುಂಬದೊಂದಿಗೆ ಅರ್ಚಾ ವಿಗ್ರಹವನ್ನು ತಬ್ಬಿಕೊಂಡರು ಮತ್ತು ಭಗವಂತನನ್ನು ಕಾಪಾಡಿದರು. ಆದರೆ ಆ ಬೆಂಕಿಯಿಂದಾದ ಸುಟ್ಟ ಗಾಯಗಳಿಂದಾಗಿ ಅವರು ಮತ್ತು ಕುಟುಂಬದವರೊಂದಿಗೆ ತಮ್ಮ ಪ್ರಾಣವನ್ನೇ ತ್ಯಜಿಸಬೇಕಾಯಿತು. ಭಗವಂತನಿಗೆ ಅವರ ಸಮರ್ಪಣಾಭಾವವನ್ನು ನಮ್ಮ ಪೂರ್ವಾಚಾರ್ಯರು ಬಹುವಾಗಿ ಕೊಂಡಾಡಿದ್ದಾರೆ.
- ಚಿಂತಯಂತಿ – ವ್ರಜಭೂಮಿಯಲ್ಲಿ ವಾಸಿಸುತ್ತಿದ್ದ ಒಬ್ಬ ಗೋಪಿಕೆ. ಆಕೆಯು ಭಗವಾನ್ ಶ್ರೀ ಕೃಷ್ಣನನ್ನು ಬಹುವಾಗಿ ಹಚ್ಚಿಕೊಂಡಿದ್ದಳು. ಒಮ್ಮೆ ಅವಳು ಭಗವಾನ್ ಶ್ರೀಕೃಷ್ಣನ ದಿವ್ಯವಾದ ನಾದವನ್ನು ಕೇಳಿದಳು, ಆನಂದಭರಿತಳಾದಳು ಮತ್ತು ತನ್ನ ಮನೆಯನ್ನು ಬಿಟ್ಟು ಶ್ರೀಕೃಷ್ಣನನ್ನು ನೋಡಲು ಬಯಸಿದಳು. ಆದರೆ ಆಕೆಗೆ ಕೂಡಲೇ ಮನೆಯಿಂದ ಹೊರಡಲಾಗಲಿಲ್ಲ ಮತ್ತು ಅದರಿಂದ ದುಃಖಿತಳಾದಳು. ಶ್ರೀಕೃಷ್ಣನ ವೇಣುನಾದದಿಂದ ಅತೀವ ಆನಂದಭರಿತಳಾದ ಅವಳು ತನ್ನ ಪುಣ್ಯಕರ್ಮಗಳೆಲ್ಲವನ್ನೂ ವ್ಯಯಿಸಿದಳು (ಪುಣ್ಯವು ಸಂತೋಷವನ್ನುಂಟುಮಾಡುತ್ತದೆ) ಮತ್ತು ಮನೆಯಿಂದ ಹೊರಡಲಾಗದೆ ಅತಿ ದುಃಖಿತಳಾದುದರಿಂದ ತನ್ನ ಪಾಪಕರ್ಮಗಳೆಲ್ಲವನ್ನೂ ವ್ಯಯಿಸಿದಳು. ಆಕೆಯ ಪುಣ್ಯ ಮತ್ತು ಪಾಪಗಳು ತೀರಿಹೋದುದರಿಂದಾಗಿ ಆ ಕ್ಷಣವೇ ಆಕೆಯು ಪರಮಪದವನ್ನೇರಿದಳು ( ನಮ್ಮ ಪುಣ್ಯ ಮತ್ತು ಪಾಪಗಳು ನಮ್ಮನ್ನು ಈ ಸಂಸಾರದೊಂದಿಗೆ ಬಂಧಿಸುತ್ತವೆ – ಅವು ತೀರಿಹೋದ ಮೇಲೆ ನಮ್ಮ ಉದ್ಧಾರವಾಗುತ್ತದೆ. ಹೀಗೆ, ಪರಮಪದಕ್ಕೆ ಸೇರುವ ಮತ್ತು ಅಲ್ಲಿ ಭಗವಂತನ ನಿರಂತರ ಸೇವೆ ಮಾಡುವ ಅಂತಿಮ ಧ್ಯೇಯವು ಆಕೆಗೆ ಸುಲಭವಾಗಿ ಪ್ರಾಪ್ತಿಯಾಯಿತು.
ಆ ನಂತರ ಅವರು ತಿರುಕ್ಕಣ್ಣಮಂಗೈ ಭಗವಂತನಿಗೆ ಸೇವೆ ಸಲ್ಲಿಸುತ್ತಾ ತಮ್ಮ ಉಳಿದ ಜೀವನವನ್ನು ಕಳೆದರು ಮತ್ತು ಪರಮಪಾದನಾಥನಿಗೆ ತಮ್ಮ ಸೇವೆಯನ್ನು ಮುಂದುವರಿಸಲು ವೈಭವೋಪೇತವಾಗಿ ಪರಮಪದವನ್ನು ಸೇರಿದರು.
ಆಂಡಾನ್ ಅವರ ಜೀವನ ಮತ್ತು ವೈಭವಗಳು, ಕೆಲವೆಡೆ ವ್ಯಾಖ್ಯಾನಗಳು ಮತ್ತು ಪೂರ್ವಾಚಾರ್ಯ ಗ್ರಂಥಗಳಲ್ಲಿ ಗುರುತಿಸಲ್ಪಟ್ಟಿವೆ. ಅವುಗಳನ್ನು ನಾವೀಗ ನೋಡೋಣ:
ನಾಚ್ಚಿಯಾರ್ ತಿರುಮೊಳಿ ೧.೧ – ಪೆರಿಯಾವಾಚಾನ್ ಪಿಳ್ಳೈ ವ್ಯಾಖ್ಯಾನ – ಆಂಡಾಳ್ ಹೇಳುತ್ತಾರೆ “ಧರೈ ವಿಳಕ್ಕಿ” – ನೆಲವನ್ನು ಗುಡಿಸುವುದು/ಶುದ್ಧಪಡಿಸುವುದು. ತಿರುಕ್ಕಣ್ಣಮಂಗೈ ಆಂಡಾನ್ ಅವರು ನೆಲವನ್ನು ಸ್ವಚ್ಛಗೊಳಿಸುವ ಕೈಂಕರ್ಯವನ್ನು ತಮ್ಮ ಅಂತಿಮ ಧ್ಯೇಯವಾಗಿಸಿಕೊಂಡಿದ್ದರು (ಮತ್ಯಾವುದೇ ಸಾಧನೆಗಾಗಿ ಅಲ್ಲ) ಎಂಬುದನ್ನು ಪೆರಿಯಾವಾಚಾನ್ ಪಿಳ್ಳೈ ಅವರು ಎತ್ತಿ ತೋರಿಸಿದ್ದಾರೆ.
ತಿರುಮಾಲೈ ೩೮ – ಪೆರಿಯಾವಾಚಾನ್ ಪಿಳ್ಳೈ ವ್ಯಾಖ್ಯಾನ – ಇದನ್ನು ವಿವರಿಸುವಾಗ “ಉನ್ ಕಡೈತ್ತಲೈ ಇರುಂದು ವಾಳುಮ್ ಶೋಮ್ಬರ್” – ಪೆರಿಯಾವಾಚಾನ್ ಪಿಳ್ಳೈ ವಿವರಿಸುತ್ತಾರೆ “ವಾಳುಮ್ ಶೋಮ್ಬರ್” (ಬಾಳುತ್ತಿರುವ ಆಲಸಿ ವ್ಯಕ್ತಿ) ಎಂದರೆ ಯಾರಿಗೆ ಭಗವಂತನ ಮೇಲೆ ಸಂಪೂರ್ಣ ವಿಶ್ವಾಸವಿದೆಯೋ ಅವರು, ಒಂದು ನಾಯಿಯನ್ನು
ಅದರ ಮಾಲಿಕನು ರಕ್ಷಿಸುವುದನ್ನು ನೋಡಿದ, ಭಗವಾನ್ ಭಕ್ತವತ್ಸಲನನ್ನು ಆಶ್ರಯಿಸಿದ ಆಂಡಾನ್ ಅವರ ಹಾಗೆ. “ವಾಳುಮ್ ಶೋಮ್ಬರ್” ಎಂಬುದಕ್ಕೆ ವಿರುದ್ಧವಾದುದು “ತಾಳುಮ್ ಶೋಮ್ಬರ್” (ನಿಜವಾದ ಸೋಮಾರಿ ವ್ಯಕ್ತಿ), ಯಾವ ಕೈಂಕರ್ಯವನ್ನೂ ಮಾಡದೇ ತಮ್ಮ ಜೇವನವನ್ನು ವ್ಯರ್ಥ ಮಾಡುವವರು.
ತಿರುವಾಯ್ಮೊಳಿ ೯.೨.೧ – ನಂಪಿಳ್ಳೈ ಈಡು ವ್ಯಾಖ್ಯಾನ – ನಮ್ಮಾಳ್ವಾರ್ ೧೦.೨.೭ ರಲ್ಲಿ ಹೇಳುತ್ತಾರೆ “ಕಡೈತ್ತಲೈ ಚೀಕ್ಕಪ್ಪೆಟ್ರಾಲ್ ಕಡುವಿನೈ ಕಳೈಯಲಾಮೆ” – ಭಗವಂತನ ದೇವಾಲಯದಲ್ಲಿ ಕೇವಲ ನೆಲವನ್ನು ಸ್ವಚ್ಛಗೊಳಿಸುವುದರಿಂದ ಒಬ್ಬರ ಪಾಪಗಳನ್ನು ತೊಡೆದುಹಾಕಬಹುದು. ತಿರುಕ್ಕಣ್ಣಮಂಗೈ ಆಂಡಾನ್ ಅವರು ಎಲ್ಲವನ್ನೂ ತೊರೆದು ಭಗವಾನ್ ತಿರುಕ್ಕಣ್ಣಮಂಗೈ ಭಕ್ತವತ್ಸಲನ ಸನ್ನಿಧಿಯಲ್ಲೇ ಉಳಿದರು ಎಂದು ಚಿರಪರಿಚಿತರಾಗಿದ್ದಾರೆ. ಅವರು ಆ ದೇವಾಲಯದಲ್ಲಿ ನೆಲವನ್ನು ಗುಡಿಸುವ ಕೈಂಕರ್ಯವನ್ನೇ ಬಹುವಾಗಿ ಹಚ್ಚಿಕೊಂಡಿದ್ದರು ಮತ್ತು ಆ ಕೈಂಕರ್ಯವನ್ನು ನಿಯಮಿತವಾಗಿ ಮಾಡುತ್ತಿದ್ದರು.
ತಿರುವಾಯ್ಮೊಳಿ ೯.೨.೧ ವ್ಯಾಖ್ಯಾನದಲ್ಲಿ ನಂಪಿಳ್ಳೈ ಅವರು ಒಂದು ಮುಖ್ಯವಾದ ಅಂಶವನ್ನು ಸುಂದರವಾಗಿ ಪ್ರತಿಪಾದಿಸಿದ್ದಾರೆ. ಈ ಪಾಶುರದಲ್ಲಿ ನಮ್ಮಾಳ್ವಾರ್ ಭಗವಂತನಿಗೆ ಹೇಳುತ್ತಾರೆ “ನಾವು ಅನೇಕ ತಲೆಮಾರುಗಳಿಂದ ದೇವಾಲಯಗಳನ್ನು ಸ್ವಚ್ಛಗೊಳಿಸುವುದು ಮುಂತಾದ ಅನೇಕ ವಿಧವಾದ ಕೈಂಕರ್ಯಗಳನ್ನು ಮಾಡುತ್ತಿದ್ದೇವೆ”. ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಪ್ರಪನ್ನರು ಕೇವಲ ಭಗವಂತನು ಮಾತ್ರವೇ ಉಪಾಯ ಎಂದು ಸಂಪೂರ್ಣವಾಗಿ ಅಂಗೀಕರಿಸಿದ್ದಾರೆ. ಅವರು ಯಾವುದೇ ವೈಯಕ್ತಿಕ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವುದಿಲ್ಲ. – ಹಾಗಿದ್ದಲ್ಲಿ ಕೈಂಕರ್ಯಗಳನ್ನೇಕೆ ಮಾಡಬೇಕು ? ಇದನ್ನು ನಂಪಿಳ್ಳೈ ಅವರು ತಿರುಕ್ಕಣ್ಣಮಂಗೈ ಆಂಡಾನ್ ಅವರನ್ನೊಳಗೊಂಡ ಮುಂಬರುವ ಘಟನೆಯ ಮೂಲಕ ಸುಂದರವಾಗಿ ವಿವರಿಸಿದ್ದಾರೆ. ಅವರ ಸಹಪಾಠಿಯೊಬ್ಬರು (ನಾಸ್ತಿಕರಾಗಿ ಪರಿವರ್ತಿತರಾದವರು) ಆಂಡಾನ್ ಅವರು ಅವರಿಗೆ ತಮ್ಮ ಸ್ವಪ್ರಯತ್ನದಲ್ಲಿ ತೊಡಗಿಸಿಕೊಳ್ಳದಿರುವಾಗ ನೆಲವನ್ನು ಗುಡಿಸುವ ತೊಂದರೆಯನ್ನೇಕೆ ತೆಗೆದುಕೊಳ್ಳಬೇಕು ಎಂದು ಕೇಳುತ್ತಾರೆ. ಆಂಡಾನ್ ಅವರು ಒಂದು ಸ್ವಚ್ಛವಾದ ಸ್ಥಳ ಮತ್ತು ಒಂದು ಕೊಳಕಾದ ಸ್ಥಳವನ್ನು ಅವರಿಗೆ ತೋರಿಸುತ್ತಾರೆ – ಅವರು ಹೇಳುತ್ತಾರೆ ನೆಲವನ್ನು ಗುಡಿಸುವದರಿಂದ – ಆ ಸ್ಥಳವು ಶುದ್ಧವಾಗುತ್ತದೆ – ಮತ್ತೇನೂ ಅಲ್ಲ. ಅವರು ಮರು ಪ್ರಶ್ನಿಸುತ್ತಾರೆ “ನಿಮಗೆ ಶುದ್ಧವಾದ ಸ್ಥಳ ಮತ್ತು ಮಲಿನವಾದ ಸ್ಥಳಗಳ ನಡುವೆ ವ್ಯತ್ಯಾಸವನ್ನು ಗುರುತಿಸಲಾಗುವುದಿಲ್ಲವೇ ?”. ಹೀಗೆ ನಾವು ಕೈಕರ್ಯವನ್ನು ಮಾಡುವುದು ಒಬ್ಬ ದಾಸಭೂತನ (ಸೇವಕನ) ಸ್ವಾಭಾವಿಕ ಕ್ರಿಯೆ ಎಂದು ಅರಿತುಕೊಳ್ಳಬಹುದು ಮತ್ತು ಕೈಂಕರ್ಯವು (ಸೇವೆಯು) ಒಂದು ಉಪಾಯವಾಗುವುದಿಲ್ಲ.
ಶ್ರೀ ವಚನಭೂಷಣದಲ್ಲಿ ಸೂತ್ರ ೮೮ ರಲ್ಲಿ ಪಿಳ್ಳೈ ಲೋಕಾಚಾರ್ಯರು ಸುಂದರವಾಗಿ ವಿವರಿಸುತ್ತಾರೆ “ಒಬ್ಬ ಭೌತಿಕವಾಗಿ ಪ್ರಚೋದಿತನಾದ ವ್ಯಕ್ತಿಯು ತನ್ನ ಮತ್ತು ತನಗೆ ಪ್ರಿಯರಾದವರ ಭೌತಿಕ ಬಯಕೆಗಳನ್ನು ಪೂರೈಸಲು ಅನೇಕ ಕಾರ್ಯಗಳನ್ನು ಮಾಡುವಾಗ, ಒಬ್ಬ ಪ್ರಪನ್ನನು (ಭಗವಂತನಿಗೆ ಶರಣಾಗತನಾದವನು) ಅಪ್ರತಿಮ ಆನಂದಮಯನಾದ ಮತ್ತು ಸೇವೆಗೆ ಅರ್ಹನಾದ ಭಗವಂತನಿಗೆ ಕೈಂಕರ್ಯವನ್ನು ಮಾಡಲು ಜೀವಾತ್ಮನ ನಿಜ ಸ್ವಭಾವದಂತೆ ಎಷ್ಟು ಆಕಾಂಕ್ಷೆಯುಳ್ಳವನಾಗಿರಬೇಕು ?”
ಚರಮೋಪಾಯ ನಿರ್ಣಯಮ್ – ನಾಥಮುನಿಗಳು ಆಳ್ವಾರ್ ತಿರುನಗರಿಯಲ್ಲಿ ಎಲ್ಲ ೪೦೦೦ ದಿವ್ಯಪ್ರಬಂಧಗಳನ್ನು ಸ್ವತಃ: ನಮ್ಮಾಳ್ವಾರ್ ಅವರಿಂದ ಕಲಿತುಕೊಂಡರು ಮತ್ತು ವೀರನಾರಾಯಣಪುರಕ್ಕೆ (ಕಾಟ್ಟು ಮನ್ನಾರ್ ಕೋಯಿಲ್) ಹಿಂದಿರುಗಿದರು. ಅವರು ಆ ದಿವ್ಯಪ್ರಬಂಧಗಳನ್ನು ಅಲ್ಲಿ ಭಗವಾನ್ ಮನ್ನನಾರ್ ಮುಂದೆ ಪಠಿಸಿದರು ಮತ್ತು ಆ ಭಗವಂತನಿಂದ ಎಲ್ಲ ಗೌರವವನ್ನು ಪಡೆದರು. ಆ ನಂತರ ಅವರು ತಮ್ಮ ನಿವಾಸಕ್ಕೆ ತೆರಳಿದರು ಮತ್ತು ತಮ್ಮ ಸೋದರಳಿಯರಾದ ಕೀಳೈ ಅಗತ್ತು ಆಳ್ವಾನ್ ಮತ್ತು ಮೇಲೈ ಅಗತ್ತು ಆಳ್ವಾನ್ ಅವರನ್ನು ಆಹ್ವಾನಿಸಿ, ಅವರಿಗೆ ತಾವು ಆಳ್ವಾರರಿಂದ ಗಳಿಸಿದ ವಿಶೇಷ ಕೃಪೆಯನ್ನು ಮತ್ತು ಆಳ್ವಾರರು ತಮ್ಮ ಸ್ವಪ್ನದಲ್ಲಿ ತೋರಿಸಿದ ದಿವ್ಯ ರೂಪವನ್ನು ವಿವರಿಸಿದರು (ನಾಥಮುನಿಗಳಿಗೆ ಸ್ವಪ್ನದಲ್ಲಿ ನಮ್ಮಾಳ್ವಾರ್ ಅವರು, ಎಲ್ಲರನ್ನೂ ಉದ್ಧರಿಸಲು ಭವಿಷ್ಯದಲ್ಲಿ ಉದಯಿಸುವ, ಎಂಪೆರುಮಾನಾರ್ (ರಾಮಾನುಜರು) ಅವರ ದಿವ್ಯ ರೂಪವನ್ನು ತೋರಿಸಿದರು. ಅವರಿಬ್ಬರೂ ಇದನ್ನು ಕೇಳಿ ಚಕಿತರಾದರು ಮತ್ತು ಹೇಗೋ ಇಂತಹ ಮಹಾನುಭಾವರ ಸಂಬಂಧ ಪಡೆದುದಕ್ಕೆ ಸಂತೃಪ್ತರಾದರು. ತದನಂತರ ನಾಥಮುನಿಗಳು ದ್ವಯ ಮಹಾಮಂತ್ರದ ಅರ್ಥಗಳನ್ನು ತಿರುವಾಯ್ಮೊಳಿಯ ಮೂಲಕ ತಮ್ಮ ಪ್ರಿಯಶಿಷ್ಯರಾದ ತಿರುಕ್ಕಣ್ಣಮಂಗೈ ಆಂಡಾನ್ (ಒಬ್ಬ ಯೋಗ್ಯ ಶಿಷ್ಯನಾಗಲು ಅರ್ಹತೆಯುಳ್ಳವರಾದವರು) ಅವರಿಗೆ ಕಲಿಸುತ್ತಾರೆ.
“ಪೊಲಿಗ ಪೊಲಿಗ ಪೊಲಿಗ” ಪಾಶುರದಲ್ಲಿ (ತಿರುವಾಯ್ಮೊಳಿ ೫.೨.೧) ನಾಥಮುನಿಗಳು ನಮ್ಮಾಳ್ವಾರ್ ಅವರ ದಿವ್ಯ ಪದಗಳನ್ನು ಮತ್ತು ತಮ್ಮ ಸ್ವಪ್ನದಲ್ಲಿ ವೀಕ್ಷಿಸಿದ ಘಟನೆಗಳನ್ನು ವಿವರಿಸುತ್ತಾರೆ. ಇದನ್ನು ಕೇಳಿದ ತಿರುಕ್ಕಣ್ಣಮಂಗೈ ಆಂಡಾನ್ ಅವರು ಹೇಳುತ್ತಾರೆ “ಭವಿಷ್ಯದಾಚಾರ್ಯರ ದಿವ್ಯ ಸ್ವರೂಪವನ್ನು ತಮ್ಮ ಸ್ವಪ್ನದಲ್ಲಿ ವೀಕ್ಷಿಸಿದ ತಮ್ಮಂತಹ ಘನತವೆತ್ತವರೊಂದಿಗೆ ಸಂಬಂಧವನ್ನು ಹೊಂದಿರುವೆ ನಾನು ಅತ್ಯಂತ ಭಾಗ್ಯವಂತನು”. ಪೆರಿಯಾವಾಚಾನ್ ಪಿಳ್ಳೈ ಅವರ ದತ್ತು ಪುತ್ರರಾದ ನಾಯನಾರಾಚಾನ್ ಪಿಳ್ಳೈ ಅವರು ಬರೆದಿರುವ “ಚರಮೋಪಾಯ ನಿರ್ಣಯಮ್” ನಲ್ಲಿ ಈ ಘಟನೆಯನ್ನು ಉಲ್ಲೇಖಿಸಲಾಗಿದೆ.
ವಾರ್ತಾ ಮಾಲೈ ೧೦೯- ನಾವು ಈಗಾಗಲೇ ನೋಡಿರುವ ಶ್ರೀ ವಚನಭೂಷಣ ಸೂತ್ರಗಳಲ್ಲಿ ವಿವರಿಸಿರುವ ಅದೇ ತತ್ವಗಳನ್ನು ಪಿನ್ಬಾಳಗಿಯ ಪೆರುಮಾಳ್ ಜೀಯರ್ ಅವರು ವಿವರಿಸುತ್ತಾರೆ. ಇಲ್ಲಿಯೂ ಸಹ ಅವರು ಪಿರಾಟ್ಟಿ (ಮಹಾಲಕ್ಷ್ಮಿ), ದ್ರೌಪದಿ ಮತ್ತು ತಿರುಕ್ಕಣ್ಣಮಂಗೈ ಆಂಡಾನ್ ಅವರು, ಭಗವಂತನ ನಿಟ್ಟಿನಲ್ಲಿ ಸಾಗುವುದಕ್ಕೆ ಮತ್ತು ಅವನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುವುದಕ್ಕೆ , ಹೇಗೆ ಅತ್ಯುತ್ತಮ ಉದಾಹರಣೆಗಳಾಗಿದ್ದಾರೆ ಎಂದು ಎತ್ತಿ ತೋರಿಸಿದ್ದಾರೆ.
ವಾರ್ತಾ ಮಾಲೈ ೨೩೪ – ಇಲ್ಲಿ ಸಾಮಾನ್ಯ ಶಾಸ್ತ್ರಕ್ಕಿಂತ (ವರ್ಣಾಶ್ರಮ ಧರ್ಮ) ವಿಶೇಷ ಶಾಸ್ತ್ರದ (ಭಾಗವತ ಧರ್ಮ) ಮೇಲೆ ಸಂಪೂರ್ಣ ಗಮನವಿರಿಸುವುದರ ಪ್ರಾಮುಖ್ಯತೆಗೆ ಒತ್ತು ಕೊಟ್ಟಿದ್ದಾರೆ ಮತ್ತು ಈ ರೀತಿಯ ನಿಷ್ಠೆಯು ಬಹು ಮಹೋನ್ನತರಾದ ಆದಿ ಭರತ, ತಿರುಕ್ಕಣ್ಣಮಂಗೈ ಆಂಡಾನ್ ಮುಂತಾದ ಅಧಿಕಾರಿಗಳಿಗೆ (ವ್ಯಕ್ತಿಗಳಿಗೆ) ಮಾತ್ರ ಸಾಧ್ಯವೆಂದು ನಾವು ಪರಿಗಣಿಸಬಾರದೆಂದು ಉಲ್ಲೇಖಿಸಿದ್ದಾರೆ. ಬದಲಿಗೆ ಪ್ರತಿಯೊಬ್ಬರೂ ಇದಕ್ಕೆ ಪ್ರಯತ್ನ ಮಾಡಬೇಕು ಮತ್ತು ಆ ಭಗವಂತನ ಅನುಗ್ರಹದಿಂದ ನಾವೂ ಸಹ ಅಂತಹ ನಂಬಿಕೆಯಲ್ಲಿ ಧೃಡರಾಗುತ್ತೇವೆ.
ಹೀಗೆ ನಾವು ತಿರುಕ್ಕಣ್ಣಮಂಗೈ ಆಂಡಾನ್ ಅವರ ದಿವ್ಯವಾದ ಜೀವನದ ಕುರಿತು ಕೆಲವು ಸಂಕ್ಷಿಪ್ತ ನೋಟಗಳನ್ನು ಕಂಡಿದ್ದೇವೆ. ನಮಗೂ ಆ ಭಗವಂತನಲ್ಲಿ ಸಂಪೂರ್ಣ ವಿಶ್ವಾಸ ಉಂಟಾಗಲೆಂದು ಆಂಡಾನ್ ಅವರ ಚರಣಾರವಿಂದಗಳಲ್ಲಿ ಪ್ರಾರ್ಥಿಸೋಣ.
ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್
ಮೂಲ : https://acharyas.koyil.org/index.php/2014/07/13/thirukkannamangai-andan-english/
ರಕ್ಷಿತ ಮಾಹಿತಿ: https://acharyas.koyil.org/index.php
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org
1 thought on “ತಿರುಕ್ಕಣ್ಣಮಂಗೈ ಆಂಡಾನ್”
Comments are closed.