ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:
ಈ ಹಿಂದಿನ ಲೇಖನದಲ್ಲಿ ((https://acharyas.koyil.org/index.php/2012/09/11/parasara-bhattar-english/) ನಾವು ಪರಾಶರ ಭಟ್ಟರ್ ಅವರ ವೈಭವವನ್ನು ನೋಡಿದೆವು. ಈಗ ಓರಾಣ್ ವಳಿ ಗುರುಪರಂಪರೆಯಲ್ಲಿ ಮುಂದಿನ ಆಚಾರ್ಯರ ಬಗ್ಗೆ ತಿಳಿದುಕೊಳ್ಳೋಣ.
ನಂಜೀಯರ್ – ತಿರುನಾರಾಯಣಪುರಮ್
ತಿರುನಕ್ಷತ್ರಮ್: ಪಂಗುನಿ, ಉತ್ತರಂ
ಅವತಾರ ಸ್ಥಳಂ: ತಿರುನಾರಾಯಣಪುರಮ್
ಆಚಾರ್ಯನ್: ಪರಾಶರ ಭಟ್ಟರ್
ಶಿಷ್ಯರು: ನಂಪಿಳ್ಳೈ, ಶ್ರೀ ಸೇನಾಧಿಪತಿ ಜೀಯರ್, ಇತ್ಯಾದಿ.
ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್
ಕೃತಿಗಳು: ತಿರುವಾಯ್ಮೊಳಿ ೯೦೦೦ ಪಡಿ ವ್ಯಾಖ್ಯಾನ, ಕಣ್ಣಿನುಣ್ ಸಿರುತ್ತಾಮ್ಬು ವ್ಯಾಖ್ಯಾನ, ತಿರುಪ್ಪಾವೈ ವ್ಯಾಖ್ಯಾನ, ತಿರುವಂದಾದಿಗಳ ವ್ಯಾಖ್ಯಾನ, ಶರಣಾಗತಿ ಗದ್ಯ ವ್ಯಾಖ್ಯಾನ, ತಿರುಪ್ಪಲ್ಲಾಂಡು ವ್ಯಾಖ್ಯಾನ, ನೂರೆಟ್ಟು(೧೦೮) ಎಂದು ಕರೆಯಲ್ಪಡುವ ರಹಸ್ಯತ್ರಯ ವಿವರಣ ಗ್ರಂಥ – ಇವುಗಳಲ್ಲಿ ಹಲವು ಈಗ ಲಭ್ಯವಿಲ್ಲ.
ಶ್ರೀ ಮಾಧವರೆಂಬ ಹೆಸರಿನಿಂದ ಜನಿಸಿದ ಅವರು ಒಬ್ಬ ಪ್ರಸಿದ್ಧ ಅದ್ವೈತ ಪಂಡಿತರಾದರು. ಅಂತಿಮವಾಗಿ ಪರಾಶರ ಭಟ್ಟರು ಅವರಿಗೆ ನಂಜೀಯರ್ ಎಂದು ಹೆಸರಿಟ್ಟರು, ಮತ್ತು ಅವರು ನಿಗಮಾಂತ ಯೋಗಿ ಮತ್ತು ವೇದಾಂತಿ ಎಂದೂ ಹೆಸರು ಪಡೆದರು.
ಮಾಧವಾಚಾರ್ಯರು ಒಬ್ಬ ಶ್ರೇಷ್ಠ ಅದ್ವೈತ ಪಂಡಿತರಾಗಿದ್ದು ತಿರುನಾರಾಯಣಪುರದಲ್ಲಿ ವಾಸಿಸುತ್ತಿದ್ದರು. ಎಂಪೆರುಮಾನಾರ್ (ರಾಮಾನುಜರು) ಅವರನ್ನು ಸುಧಾರಿಸಿ ನಮ್ಮ ಸಂಪ್ರದಾಯಕ್ಕೆ ಕರೆತರಲು ಬಯಸಿದರು. ಅವರು ಮಾಧವಾಚಾರ್ಯರನ್ನು ಸುಧಾರಿಸುವಂತೆ ಭಟ್ಟರಿಗೆ ಆದೇಶಿಸಿದರು. ಮಾಧವಾಚಾರ್ಯರು ಒಬ್ಬ ಅದ್ವೈತಿಯಾಗಿದ್ದರೂ ಸಹ, ರಾಮಾನುಜರು ಅವರನ್ನು ಗೌರವಿಸುತ್ತಿದ್ದರು ಎಂದು ಗುರು ಪರಂಪರೆಯಿಂದ ನಾವು ತಿಳಿದುಕೊಳ್ಳಬಹುದು.
ಮಾಧವಾಚಾರ್ಯರೂ ಸಹ ಭಟ್ಟರ ವೈಭವಗಳನ್ನು ಕೇಳುತ್ತಾರೆ ಮತ್ತು ಅವರನ್ನು ಭೇಟಿ ಮಾಡಲು ಹಾತೊರೆಯುತ್ತಾರೆ. ಶ್ರೀರಾಮಾನುಜರ ಅಪೇಕ್ಷೆಯ ಮೇರೆಗೆ ಭಟ್ಟರು ತಿರುನಾರಾಯಣಪುರಕ್ಕೆ ಹೋಗುತ್ತಾರೆ, ಅವರೊಂದಿಗೆ ವಾದ ಮಾಡುತ್ತಾರೆ ಮತ್ತು ಅವರನ್ನು ತಮ್ಮ ಶಿಷ್ಯರಾಗಿ ಸ್ವೀಕರಿಸುತ್ತಾರೆ (ಇದನ್ನು ನಾವು ಈಗಾಗಲೇ ಭಟ್ಟರ ವೈಭವದಲ್ಲಿ ನೋಡಿದ್ದೇವೆ – https://acharyas.koyil.org/index.php/2012/09/11/parasara-bhattar-english/ ). ವಾದ ಮುಗಿದ ನಂತರ ಭಟ್ಟರ ಜೊತೆಗೆ ಶ್ರೀರಂಗಮ್ ನಿಂದ ಬಂದಿದ್ದ ಎಲ್ಲಾ ಶ್ರೀವೈಷ್ಣವರೂ ಮಾಧವಾಚಾರ್ಯರ ಸ್ಥಳಕ್ಕೆ ಆಗಮಿಸುತ್ತಾರೆ ಮತ್ತು ಮಾಧವಾಚಾರ್ಯರು ಭಟ್ಟರ ವೈಭವವನ್ನು ಅರಿತ ನಂತರ ಸಂಪೂರ್ಣ ಪರವಶರಾಗುತ್ತಾರೆ. ಅವರು ಭಟ್ಟರಿಗೆ ಹೇಳುತ್ತಾರೆ – “ನೀವು ನಿಮ್ಮ ಎಲ್ಲ ವೈಭವಗಳನ್ನು ಬಿಟ್ಟು ದೂರದ ಶ್ರೀರಂಗಮ್ ನಿಂದ ಬಂದಿದ್ದೀರಿ, ತಾವಾಗಿ ಸರಳ ವಸ್ತ್ರಗಳಿಗೆ ಬದಲಿಸಿಕೊಂಡಿದ್ದೀರಿ ಮತ್ತು ನನ್ನೊಡನೆ ವಾದ ಮಾಡಿದ್ದೀರಿ, ನನಗೆ ಶಾಸ್ತ್ರಗಳ ಎಲ್ಲ ನಿಜವಾದ ಜ್ಞಾನವನ್ನು ವಿವರಿಸಿದಿರಿ ಮತ್ತು ನನ್ನನ್ನು ಸುಧಾರಿಸಿದಿರಿ. ನಾನು ಹೇಗೆ ಈ ಎಲ್ಲ ಉಪಕಾರಗಳನ್ನು ತಮಗೆ ಹಿಂದಿರುಗಿಸಲು ಸಾಧ್ಯ?”. ಭಟ್ಟರು ಸುಮ್ಮನೆ ಅವರಿಗೆ ಅರುಳಿಚೆಯಲ್ ಮತ್ತು ಸಂಬಂಧಿಸಿದ ಕೃತಿಗಳ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳುವಂತೆ ಹೇಳುತ್ತಾರೆ ಮತ್ತು ಶ್ರೀರಂಗಮ್ ಗೆ ಹಿಂದಿರುಗುತ್ತಾರೆ.
ಮಾಧವಾಚಾರ್ಯರು, ತಮ್ಮ ಕೈಂಕರ್ಯಕ್ಕೆ ಪ್ರತಿಕೂಲರಾಗಿರುವ ತಮ್ಮ ಹೆಂಡತಿಯರಿಂದ ಹತಾಶರಾಗಿ ಮತ್ತು ತಮ್ಮ ಆಚಾರ್ಯರ ಅಗಲಿಕೆಯನ್ನು ಸಹಿಸಲಾರದೆ, ಒಬ್ಬ ಸಂನ್ಯಾಸಿಯಾಗಬೇಕೆಂದು ನಿರ್ಧರಿಸುತ್ತಾರೆ ಮತ್ತು ಶ್ರೀರಂಗಂನಲ್ಲಿ ತಮ್ಮ ಆಚಾರ್ಯರೊಂದಿಗೆ ಇರಲು ಬಯಸುತ್ತಾರೆ. ಅವರು ತಮ್ಮ ಅಪಾರ ಸಂಪತ್ತನ್ನು ೩ ಭಾಗಗಳಾಗಿ ವಿಂಗಡಿಸುತ್ತಾರೆ, ಅದರಲ್ಲಿ ೨ ಭಾಗಗಳನ್ನು ತಮ್ಮ ಇಬ್ಬರು ಪತ್ನಿಯರಿಗೆ ಹಂಚುತ್ತಾರೆ (ಸಂನ್ಯಾಸಾಶ್ರಮವನ್ನು ಸ್ವೀಕರಿಸುವುದಕ್ಕೆ ಮೊದಲು ಪತ್ನಿಯರ ಕ್ಷೇಮವನ್ನು ನೋಡಿಕೊಳ್ಳಬೇಕೆಂದು ಶಾಸ್ತ್ರವು ಹೇಳುವುದರಿಂದಾಗಿ), ಸಂನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ ಮತ್ತು ಶ್ರೀರಂಗಕ್ಕೆ ಪ್ರಯಾಣ ಮಾಡುತ್ತಾರೆ. ದಾರಿಯಲ್ಲಿ ಅನಂತಾಳ್ವಾನ್ ಅವರನ್ನು ಭೇಟಿಯಾಗುತ್ತಾರೆ. ಆಗ, ಸಂನ್ಯಾಸಾಶ್ರಮವನ್ನು ಸ್ವೀಕರಿಸುವುದರ ಅವಶ್ಯಕತೆ ಏನಿತ್ತೆಂದು ಅನಂತಾಳ್ವಾನ್ ಕೇಳುತ್ತಾರೆ “ಹಾಗೆಯೇ ಭಟ್ಟರ ಬಳಿಗೆ ಹೋಗಿ ಸೇವೆ ಸಲ್ಲಿಸಿದರೂ ಸಾಕು, ಭಗವಂತನು ಹೇಗಿದ್ದರೂ ಮೋಕ್ಷವನ್ನು ಕರುಣಿಸುತ್ತಾನೆ. ನೀವು ತಿರುಮಂತ್ರದಲ್ಲಿ ಹುಟ್ಟಿ (ಆತ್ಮಸ್ವರೂಪವನ್ನು ಅರಿತುಕೊಳ್ಳುವುದು) ದ್ವಯದಲ್ಲಿ ಬೆಳೆಯುವಂತಾಗಲಿ (ಪೆರುಮಾಳ್ ಮತ್ತು ಪಿರಾಟ್ಟಿಗೆ ಕೈಂಕರ್ಯವನ್ನು ಮಾಡುವುದು)”. ಭಟ್ಟರು ಮಾಧವಾಚಾರ್ಯರ ಶ್ರದ್ಧೆಯನ್ನು ಕಂಡು, ಅವರನ್ನು ಸ್ವೀಕರಿಸಿ ಅವರನ್ನು “ನಮ್ ಜೀಯರ್” ಎಂದು ಕರೆಯುತ್ತಾರೆ ಮತ್ತು ತದನಂತರ ಅವರು ನಂಜೀಯರ್ ಎಂದೇ ಕರೆಯಲ್ಪಟ್ಟರು.
ಭಟ್ಟರ್ ಮತ್ತು ನಂಜೀಯರ್ ಒಂದು ಆದರ್ಶವಾದ ಆಚಾರ್ಯ–ಶಿಷ್ಯ ಸಂಬಂಧವನ್ನು ಹೊಂದಿದ್ದರು. ನಂಜೀಯರ್ ತಮ್ಮ ಜೀವನದಲ್ಲಿ ಎಲ್ಲವನ್ನೂ ಬಿಟ್ಟಿದ್ದರು ಮತ್ತು ಸದಾಕಾಲವೂ ತಮ್ಮ ಆಚಾರ್ಯರೊಂದಿಗೆ ತಂಗಿದ್ದರು. ಭಟ್ಟರು ಅವರಿಗೆ ತಿರುಕ್ಕುರುಗೈ ಪಿರಾನ್ ಪಿಳ್ಳಾನ್ ಅವರ ೬೦೦೦ ಪಡಿ ವ್ಯಾಖ್ಯಾನದ ಆಧಾರದ ಮೇಲೆ ತಿರುವಾಯ್ಮೊಳಿಯನ್ನು nಉಪದೇಶಿಸಿದರು. ಭಟ್ಟರು ಅವರಿಗೆ ತಿರುವಾಯ್ಮೊಳಿಯ ಮೇಲೆ ವ್ಯಾಖ್ಯಾನವನ್ನು ಬರೆಯುವಂತೆ ಆದೇಶಿಸುತ್ತಾರೆ ಮತ್ತು ನಂಜೀಯರ್ ಯಥೋಕ್ತವಾಗಿ ೯೦೦೦ ಪಡಿ ವ್ಯಾಖ್ಯಾನವನ್ನು ಬರೆದರು. ನಂಜೀಯರ್ ಅವರ ಒಂದು ವೈಶಿಷ್ಟ್ಯವೇನೆಂದರೆ ಅವರು ತಮ್ಮ ೧೦೦ ವರ್ಷ ಜೀವಿತ ಕಾಲದಲ್ಲಿ ೧೦೦ ಬಾರಿ ತಿರುವಾಯ್ಮೊಳಿ ಕಾಲಕ್ಷೇಪವನ್ನು ಮಾಡಿದರು.
ನಂಜೀಯರ್ ಅವರ ಆಚಾರ್ಯ ಭಕ್ತಿಯು ಅಪರಿಮಿತವಾದದ್ದು. ನಾವು ಈಗ ಕೆಲವು ಘಟನೆಗಳ ಮೂಲಕ ಅವರ ಆಚಾರ್ಯ ಭಕ್ತಿಯನ್ನು ಅರಿಯೋಣ.
- ಒಮ್ಮೆ ಭಟ್ಟರ ಪಲ್ಲಕ್ಕಿಯ ಮೆರವಣಿಗೆಯ ಸಮಯದಲ್ಲಿ, ನಂಜೀಯರ್ ಅವರು ಒಂದು ಭುಜದಲ್ಲಿ ತಮ್ಮ ತ್ರಿದಂಡವನ್ನು ಇಟ್ಟುಕೊಂಡು ಇನ್ನೊಂದು ಭುಜದಲ್ಲಿ ಪಲ್ಲಕ್ಕಿಯನ್ನು ಹೊರಲು ಯತ್ನಿಸುತ್ತಾರೆ. ಆಗ ಭಟ್ಟರು ಹೇಳುತ್ತಾರೆ “ಜೀಯಾ, ಇದು ನಿನ್ನ ಸನ್ಯಾಸಾಶ್ರಮಕ್ಕೆ ಒಪ್ಪುವುದಿಲ್ಲ, ನೀನು ನನ್ನನ್ನು ಹೊರಬಾರದು“. ಅದಕ್ಕೆ ನಂಜೀಯರ್ ಹೇಳುತ್ತಾರೆ “ಒಂದು ವೇಳೆ ನನ್ನ ತ್ರಿದಂಡವು ತಮ್ಮ ಸೇವೆಯನ್ನು ಮಾಡಲು ಅಡ್ಡಿಯಾದರೆ, ಅದನ್ನು ಮುರಿದುಹಾಕುತ್ತೇನೆ ಮತ್ತು ಸನ್ಯಾಸಾಶ್ರಮವನ್ನು ತೊರೆಯುತ್ತೇನೆ“.
- ಒಮ್ಮೆ ಕೆಲವು ಏಕಾಂಗಿಗಳು (ಅವರ ಸಹಾಯಕರು) ಭಟ್ಟರ ಆಗಮನದಿಂದಾಗಿ ತೋಟದಲ್ಲಿ ಕ್ಷೋಭೆಯುಂಟಾಗಿದೆಯೆಂದು ದೂರಿದಾಗ, ನಂಜೀಯರ್ ಹೇಳುತ್ತಾರೆ ತೋಟದ ಇರುವಿಕೆಯ ಉದ್ದೇಶವೇ ಭಟ್ಟರು ಮತ್ತು ಅವರ ಕುಟುಂಬದ ಸೇವೆಗಾಗಿಯೇ ಹೊರತು ನಂಪೆರುಮಾಳ್ ಸೇವೆಗಾಗಿ ಅಲ್ಲ, ಮತ್ತು ತಮ್ಮ ಏಕಾಂಗಿಗಳಿಗೆ ಇದನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಲು ತಿಳಿಸುತ್ತಾರೆ.
- ಆಚಾರ್ಯರು ತಮ್ಮ ಶಿಷ್ಯರ ತೊಡೆಯ ಮೇಲೆ ತಲೆಯನ್ನು ಇಟ್ಟುಕೊಂಡು ನಿದ್ರಿಸುವುದು ವಾಡಿಕೆ. ಒಮ್ಮೆ ಭಟ್ಟರು ವಿಶ್ರಾಂತಿ ಪಡೆಯಲು ಬಯಸಿದಾಗ, ನಂಜೀಯರ್ ಅವರ ತೊಡೆಯ ಮೇಲೆ ತಮ್ಮ ತಲೆಯನ್ನು ಇಟ್ಟುಕೊಂಡು ಬಹಳ ಹೊತ್ತು ವಿಶ್ರಮಿಸಿದರು. ನಂಜೀಯರ್ ಆ ಇಡೀ ಸಮಯ ಅಲುಗಾಡದೆ ಅಲ್ಲಿಯೇ ಕುಳಿತಿದ್ದರು ಮತ್ತು ಭಟ್ಟರು ಎಚ್ಚರಗೊಂಡಾಗ ನಂಜೀಯರ್ ಅವರ ಶ್ರದ್ಧೆಯನ್ನು ಅರಿಯುತ್ತಾರೆ ಮತ್ತು ಅವರಿಗೆ ದ್ವಯದ ಅರ್ಥಗಳನ್ನು ಮತ್ತೊಮ್ಮೆ ಬೋಧಿಸುತ್ತಾರೆ (ಆಚಾರ್ಯರು ಶಿಷ್ಯರ ಬಗ್ಗೆ ಬಹು ಸಂತೋಷಗೊಂಡಾಗ ಮಾತ್ರ ದ್ವಯವನ್ನು ಬೋಧಿಸುತ್ತಾರೆ).
- ನಂಜೀಯರ್ ಕ್ಷಿಪ್ರವಾಗಿ ಅರುಳಿಚೆಯಲ್ ಕಲಿತರು ಮತ್ತು ಅದರ ಮೇಲೆ ಪ್ರಭುತ್ವ ಸಾಧಿಸಿದರು. ಭಟ್ಟರು ನಂಜೀಯರ್ ಅವರಿಗೆ ಅರುಳಿಚೆಯಲ್ ಪಾಶುರಗಳನ್ನು ಪಠಿಸುವಂತೆ ಹೇಳುತ್ತಿದ್ದರು ಮತ್ತು ಅದಕ್ಕೆ ಅದ್ಭುತವಾದ ಅರ್ಥಗಳನ್ನು ನೀಡುತ್ತಿದ್ದರು. ಒಮ್ಮೆ ನಂಜೀಯರ್ ತಿರುವಾಯ್ಮೊಳಿ 7.2.9 “ಎನ್ ತಿರುಮಗಳ್ ಚೇರ್ ಮಾರ್ವನೇ ಎನ್ನುಮ್ ಎಣ್ಣುಡೈಯಾವಿಯೇ ಎನ್ನುಮ್ ” ಪಾಶುರವನ್ನು ಹೇಳುತ್ತಿದ್ದಾಗ ಆ ಇಡೀ ವಾಕ್ಯವನ್ನು ನಡುವೆ ಅಂತರವಿಲ್ಲದೆ ಪಠಿಸಿದರು. ಇದನ್ನು ಕೇಳಿ ಭಟ್ಟರು ತಕ್ಷಣವೇ ಜ್ಞಾನತಪ್ಪಿದರು. ಅವರನ್ನು ಎಚ್ಚರಗೊಳಿಸಿದಾಗ, ಭಟ್ಟರು ಈ ವಾಕ್ಯವನ್ನು ಒಟ್ಟಾಗಿಯೇ ಪಠಿಸಬೇಕು ಏಕೆಂದರೆ ಹಾಗೆ ಮಾಡಿದಾಗ ನಮಗೆ ಪರಾಂಕುಶ ನಾಯಕಿಯ ನಿಜವಾದ ಅಂತರಂಗವು ತಿಳಿಯುತ್ತದೆ, ಹೇಗೆಂದರೆ ಶ್ರೀರಂಗನಾಥನು ಶ್ರೀರಂಗನಾಚ್ಚಿಯಾರ್ ರನ್ನು ತನ್ನ ಹೃದಯದಲ್ಲಿ ಇಟ್ಟಿರುವುದರಿಂದ, ಆತನು ಆಳ್ವಾರರಿಗೆ ಅತಿ ಪ್ರಿಯನಾದವನು. ಈ ವಾಕ್ಯವನ್ನು ಎರಡು ಭಾಗಗಳಾಗಿ ಬಿಡಿಸಿ ಹೇಳಿದ್ದರೆ ಅದು ಸುಮ್ಮನೆ “ಈತನು ಶ್ರೀರಂಗನಾಚ್ಛಿಯಾರನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡಿರುವ ಶ್ರೀರಂಗನಾಥನು ಮತ್ತು ಆತನು ನನಗೆ ಅತಿ ಪ್ರಿಯನಾದವನು” ಎಂದು ಅರ್ಥೈಸಿದಂತಾಗುತ್ತಿತ್ತು.
- ತಮಿಳು ಮಾತೃಭಾಷೆಯಲ್ಲದ ಪ್ರದೇಶದಿಂದ ಬಂದಿದ್ದರೂ ಸಹ ಮತ್ತು ಹಿಂದೆ ಸಂಸ್ಕೃತ ವೇದಾಂತಿ(ಅದ್ವೈತಿ)ಯಾಗಿದ್ದರೂ ಸಹ ಅರುಳಿಚೆಯಲ್ ಬಗ್ಗೆ ನಂಜೀಯರ್ ಅವರಿಗೆ ಇರುವ ಜ್ಞಾನವನ್ನು ಭಟ್ಟರು ಶ್ಲಾಘಿಸುತ್ತಾರೆ.
ಭಟ್ಟರು ಮತ್ತು ನಂಜೀಯರ್ ನಡುವೆ ಹಲವು ಸ್ವಾರಸ್ಯಕರವಾದ ಸಂಭಾಷಣೆಗಳು ನಡೆದಿವೆ. ನಂಜೀಯರ್, ತಾವು ಒಬ್ಬ ಉತ್ತಮ ವಿದ್ವಾಂಸರಾಗಿದ್ದರೂ ಸಹ, ತಮ್ಮ ಆಚಾರ್ಯರನ್ನು ಕೇಳಿ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ಅವರ ಕೆಲವು ಸಂಭಾಷಣೆಗಳನ್ನು ನಾವು ಇಲ್ಲಿ ನೋಡೋಣ:
- ಆಳ್ವಾರುಗಳು ಕಣ್ಣನ್ ಎಂಪೆರುಮಾನ್ (ಶ್ರೀಕೃಷ್ಣ) ನನ್ನು ಬಹಳವಾಗಿ ಹಚ್ಚಿಕೊಂಡಿರುವುದೇಕೆಂದು ನಂಜೀಯರ್ ಭಟ್ಟರನ್ನು ಕೇಳುತ್ತಾರೆ. ಭಟ್ಟರು ಹೇಳುತ್ತಾರೆ ಪ್ರತಿಯೊಬ್ಬರೂ ಅತಿ ಇತ್ತೀಚಿನ ಚಟುವಟಿಕೆಗಳನ್ನು ನೆನಪಿಸಿಕೊಳ್ಳುತ್ತಾರೆ. ಕೃಷ್ಣಾವತಾರವು ಎಂಪೆರುಮಾನನ ಅತ್ಯಂತ ಇತ್ತೀಚಿನ ಅವತಾರವಾದ್ದರಿಂದ ಮತ್ತು ಆಳ್ವಾರರು ಸನಿಹ ಕಾಲದಲ್ಲಿಯೇ ಜನಿಸಿದ್ದರೂ (ಇತರ ಅವತಾರಗಳಿಗೆ ಹೋಲಿಸಿದಾಗ) ಶ್ರೀಕೃಷ್ಣನನ್ನು ಸಂಧಿಸಲಾಗದಿದ್ದುದರಿಂದ ಅವನನ್ನು ಬಹುವಾಗಿ ಹಚ್ಚಿಕೊಂಡಿದ್ದರು.
- ಭಟ್ಟರು ಮುಂದುವರಿದು ವಿವರಿಸುತ್ತಾರೆ – ಕೃಷ್ಣಾವತಾರದಲ್ಲಿ ಎಂಪೆರುಮಾನನು ಗೋಪಕುಲದಲ್ಲಿ ವಾಸಿಸುತ್ತಿದ್ದನು. ಆತನು ಎಲ್ಲಿ ಹೋದರೂ ಅಸುರರನ್ನು ಎದುರಿಸಬೇಕಾಗುತ್ತಿತ್ತು – ಕಂಸ ಮತ್ತವನ ಸೇವಕರು ಶ್ರೀಕೃಷ್ಣನನ್ನು ಕೊಲ್ಲಲು ಎಲ್ಲೆಡೆ ಕಾಯುತ್ತಿದ್ದರು. ಆದರೆ ರಾಮಾವತಾರದಲ್ಲಿ (ಮತ್ತು ಇತರ ಅವತಾರಗಳಲ್ಲಿಯೂ ಸಹ), ಎಂಪೆರುಮಾನನು ಸ್ವತಃ ಎಲ್ಲ ಶಸ್ತ್ರವಿದ್ಯೆಗಳನ್ನು ಕಲಿತಿದ್ದನು. ಆತನ ಸಹೋದರರೂ (ಲಕ್ಷ್ಮಣ, ಭರತ, ಶತ್ರುಘ್ನ) ಸಮನಾದ ಧೈರ್ಯ ಮತ್ತು ಸಾಮರ್ಥ್ಯವುಳ್ಳವರಾಗಿದ್ದರು. ಆದ್ದರಿಂದ ಪೆರಿಯಾಳ್ವಾರರು ಇತರ ಅವತಾರಗಳಿಗಿಂತ ಶ್ರೀಕೃಷ್ಣನ ಬಗ್ಗೆ ಹೆಚ್ಚು ಆತಂಕಗೊಂಡಿದ್ದರು.
- ಕಲಿಯನ್ ತಿರುಮೊಳಿಯ ‘ಒರು ನಲ್ ಸುಟ್ಟ್ರಮ್‘ ಭಾಗದಲ್ಲಿ (ತಿರುಮೊಳಿಯ ಅಂತ್ಯದಲ್ಲಿ) ಅನೇಕ ದಿವ್ಯದೇಶಗಳಿಗೆ ಮಂಗಳಾಶಾಸನ ಮಾಡುತ್ತಾರೆ. ನಂಜೀಯರ್ ಅದಕ್ಕೆ ಕಾರಣವನ್ನು ಕೇಳುತ್ತಾರೆ ಮತ್ತು ಭಟ್ಟರು ಹೇಳುತ್ತಾರೆ ಒಬ್ಬ ಕನ್ಯೆಯು ವಿವಾಹವಾಗಿ ತನ್ನ ಪತಿಯ ಮನೆಗೆ ಹೋಗುವ ಮುನ್ನ ಕ್ಷಿಪ್ರವಾಗಿ ತನ್ನ ಸ್ನೇಹಿತೆಯರು ಮತ್ತು ನೆರೆಹೊರೆಯವರಿಗೆ ವಿದಾಯ ಹೇಳುತ್ತಾಳೆ. ಅದೇ ರೀತಿಯಲ್ಲಿ ಆಳ್ವಾರರು ಇನ್ನೇನು ಪರಮಪದಕ್ಕೆ ತೆರಳಲು ಸಿದ್ಧರಾಗಿ ಆತಂಕಗೊಂಡು ಈ ಲೋಕದ ಎಲ್ಲ ಎಂಪೆರುಮಾನರಿಗೆ ಬೀಳ್ಕೊಡುಗೆ ಹೇಳುತ್ತಾರೆ.
- ಪ್ರಹ್ಲಾದನು ತನ್ನ ಮೊಮ್ಮಗ ಮಹಾಬಲಿಯು ಭಗವಂತನನ್ನು ಗೌರವಿಸದಿದ್ದುದರಿಂದ ಅವನ ಎಲ್ಲಾ ಸಂಪತ್ತು ನಷ್ಟವಾಗಲಿ ಎಂದು ಶಪಿಸುತ್ತಾನೆ. ನಂಜೀಯರ್ ಯಾವ ಸಂಪತ್ತನ್ನೂ ಲೆಕ್ಕಿಸದ ಪ್ರಹ್ಲಾದ ಹಾಗೇಕೆ ಶಪಿಸಿದರು
ಎಂದು ಕೇಳುತ್ತಾರೆ. ಅದಕ್ಕೆ ಭಟ್ಟರು ಹೇಳುತ್ತಾರೆ ಪ್ರಹ್ಲಾದ ಮಹಾಬಲಿಗೆ ಅತಿ ಪ್ರಿಯವಾದುದ್ದನ್ನು ಬೇರ್ಪಡಿಸಿದರು – ಹೇಗೆ ಒಂದು ನಾಯಿಯನ್ನು ದಂಡಿಸಲು ಅದು ತಿನ್ನುವ ಹೊಲಸನ್ನು ತೆಗೆದುಹಾಕುತ್ತೇವೆಯೋ ಹಾಗೆ.
- ನಂಜೀಯರ್ ಕೇಳುತ್ತಾರೆ ವಾಮನ ಚರಿತ್ರೆಯಲ್ಲಿ ಮಹಾಬಲಿಯು ಏಕೆ ಪಾತಾಳಕ್ಕೆ ಹೋದನು ಮತ್ತು ಶುಕ್ರಾಚಾರ್ಯರು ಏಕೆ ಕಣ್ಣನ್ನು ಕಳೆದುಕೊಂಡರು. ಭಟ್ಟರು ಹೇಳುತ್ತಾರೆ ಶುಕ್ರಾಚಾರ್ಯರು ತನ್ನ ಧರ್ಮವನ್ನು ಪಾಲಿಸದ ಹಾಗೆ ಮಹಾಬಲಿಗೆ ತಡೆಹಾಕಿದ್ದರಿಂದ ಕಣ್ಣನ್ನು ಕಳೆದುಕೊಂಡರು ಮತ್ತು ಮಹಾಬಲಿಯು ತನ್ನ ಆಚಾರ್ಯನ ಮಾತುಗಳನ್ನು ಮೀರಿದ್ದರಿಂದ ಪಾತಾಳಕ್ಕೆ ದಂಡಿಸಲ್ಪಟ್ಟನು.
- ಏಕೆ ದಶರಥನು ಭಗವಂತನ (ಶ್ರೀರಾಮ) ಅಗಲಿಕೆಯನ್ನು ಸಹಿಸಲಾರದೆ ತನ್ನ ಪ್ರಾಣವನ್ನೇ ಕಳೆದುಕೊಂಡರೂ ಸ್ವರ್ಗಕ್ಕೆ ಮಾತ್ರ ಹೋದನು ಎಂದು ನಂಜೀಯರ್ ಕೇಳುತ್ತಾರೆ. ಭಟ್ಟರು ಹೇಳುತ್ತಾರೆ ದಶರಥನು ಸಾಮಾನ್ಯ ಧರ್ಮಕ್ಕೆ (ಸತ್ಯವನ್ನು ಹೇಳುವುದು) ಗಂಟುಬಿದ್ದು ಭಗವಂತನನ್ನು (ತನ್ನ ರಕ್ಷಕನಾದ) ಬಿಟ್ಟುಕೊಟ್ಟನು, ಅದರಿಂದ ಅವನು ನರಕಕ್ಕೇ ಹೋಗಬೇಕಿತ್ತು. ಆದರೆ ಅವನು ಭಗವಂತನ ತಂದೆಯಾದುದರಿಂದ ನರಕಕ್ಕೆ ಹೋಗುವುದು ಸರಿಯಾಗಲಾರದು – ಆದ್ದರಿಂದ ಭಗವಂತನು ಕಾರುಣ್ಯದಿಂದ ಅವನನ್ನು ಸ್ವರ್ಗಕ್ಕೆ ಕಳುಹಿಸಿದನು.
- ನಂಜೀಯರ್ ಕೇಳುತ್ತಾರೆ ಏಕೆ ವಿಭೀಷಣನು ಒಬ್ಬ ಭಕ್ತನಾದರೂ ಸುಗ್ರೀವನು ಅವನನ್ನು ಒಪ್ಪಿಕೊಳ್ಳಲು ಇಚ್ಛಿಸಲಿಲ್ಲ. ಭಟ್ಟರು ಹೇಳುತ್ತಾರೆ ಹೇಗೆ ಭಗವಂತನು ತನ್ನ ಭಕ್ತನನ್ನು ಒಪ್ಪಿಕೊಳ್ಳಲು/ರಕ್ಷಿಸಲು ಯತ್ನಿಸಿದನೋ ಹಾಗೆ ಸುಗ್ರೀವನೂ ಸಹ ತನಗೆ ಶರಣಾಗತನಾದವನನ್ನು ರಕ್ಷಿಸಲು ಯತ್ನಿಸಿದನು (ಭಗವಂತನು ಹಿಂದೆ ಸುಗ್ರೀವನ ಸಹಾಯವೆನ್ನು ಕೇಳಿದ್ದನು). ಸುಗ್ರೀವನು ಭಗವಂತನಿಗೆ ವಿಭೀಷಣನು ಅಪಾಯವುಂಟು ಮಾಡಬಹುದೆಂದು ಕ್ಲೇಶಗೊಂಡಿದ್ದನು.
- ಕಣ್ಣನ್ ಎಂಪೆರುಮಾನ್ (ಶ್ರೀಕೃಷ್ಣನು) ಕಂಸನನ್ನು ಸಂಹರಿಸಿದ ನಂತರ ದೇವಕಿ ಮತ್ತು ವಸುದೇವರನ್ನು ಭೇಟಿಯಾದಾಗ, ತಾಯ್ತನದ ವಾತ್ಸಲ್ಯದಿಂದಾಗಿ ದೇವಕಿಯ ಸ್ತನಗಳಿಂದ ಹಾಲು ಹರಿಯುತ್ತಿತ್ತೆಂದು ಮತ್ತು ಶ್ರೀಕೃಷ್ಣನು ಅದನ್ನು ಸ್ವೀಕರಿಸಿದನೆಂದು ಹೇಳಲಾಗಿದೆ (ಅವನು ಚಿಕ್ಕ ಕಂದನಾಗಿಲ್ಲದಿದ್ದರೂ ಸಹ). ನಂಜೀಯರ್ ಇದು ಹೇಗೆ ಸಾಧ್ಯ ಎಂದು ಕೇಳುತ್ತಾರೆ. ಭಟ್ಟರು ಮೊದಲು ಹಾಸ್ಯದಿಂದ ಹೇಳುತ್ತಾರೆ ಇದು ಒಬ್ಬ ತಾಯಿ ಮತ್ತು ಮಗನ ನಡುವಿನ ವಿಷಯ, ಅದನ್ನು ಪ್ರಶ್ನಿಸಲು ನಾವ್ಯಾರು? ಆದರೆ ನಂತರ ವಿವರಿಸುತ್ತಾರೆ – ಪೂತನಿಯು ಶ್ರೀಕೃಷ್ಣನ ತಾಯಿಯಲ್ಲದಿದ್ದರೂ ಮತ್ತು ಅವನ ಮೇಲೆ ಯಾವುದೇ ಪ್ರೀತಿಯಿಲ್ಲದಿದ್ದರೂ ಹಾಲುಣಿಸಬಹುದಾಗಿರುವಾಗ ಮತ್ತು ಶ್ರೀಕೃಷನು ಅದನ್ನು ಸ್ವೀಕರಿಸಿದಾಗ, ಶ್ರೀಕೃಷ್ಣನ ಮೇಲೆ ಬಹುವಾದ ಅಕ್ಕರೆಯುಳ್ಳ ಅವನ ನಿಜವಾದ ತಾಯಿಯು ಹಾಲುಣಿಸುವುದು ಮತ್ತು ಶ್ರೀಕೃಷ್ಣನು ಅದನ್ನು ಸ್ವೀಕರಿಸುವುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕಷ್ಟವೇನಿದೆ.
- ಭಟ್ಟರು ಒಂದು ಉಪನ್ಯಾಸದಲ್ಲಿ ಯಯಾತಿಯ ಚರಿತ್ರೆಯನ್ನು ವಿವರಿಸುತ್ತಾರೆ. ಯಯಾತಿಯು 100 ಅಶ್ವಮೇಧ ಯಾಗಗಳನ್ನು ಪೂರ್ಣಗೊಳಿಸಿದನು ಮತ್ತು ಇಂದ್ರನ ಆಸನವನ್ನು ಹಂಚಿಕೊಳ್ಳಲು ಸ್ವರ್ಗಕ್ಕೆ ಹೋದನು. ಇಂದ್ರನಿಗೆ ತನ್ನ ಆಸನವನ್ನು ಹಂಚಿಕೊಳ್ಳಲು ಇಷ್ಟವಿರಲಿಲ್ಲ, ಆದ್ದರಿಂದ ಅವನು ಕಪಟವಾಗಿ ಯಯಾತಿಯಿಂದ ಒಂದು ತಪ್ಪನ್ನು ಮಾಡಿಸಿ ಅವನನ್ನು ತನ್ನ ಆಸನದಿಂದ ಕೆಳಗೆ ತಳ್ಳುತ್ತಾನೆ. ನಂಜೀಯರ್ ಭಟ್ಟರನ್ನು ಕೇಳುತ್ತಾರೆ ಈ ಚರಿತ್ರೆಯ ಉದ್ದೇಶವೇನು ? ಭಟ್ಟರು ಹೇಳುತ್ತಾರೆ ಈ ಚರಿತ್ರೆಯು ಭಗವಂತನ ಗರಿಮೆಯನ್ನು ಮತ್ತು ಇತರ ದೇವತೆಗಳಲ್ಲಿ ಅದರ ಕೊರತೆಯನ್ನು ವಿವರಿಸುತ್ತದೆ. ಭಗವಂತನು ಸುಮ್ಮನೆ ತನಗೆ ಶರಣಾಗತರಾದ ಪ್ರತಿಯೊಬ್ಬರಿಗೂ ಸಾಮ್ಯಾಪತಿ ಮೋಕ್ಷವನ್ನು ನೀಡುತ್ತಾನೆ. ಆದರೆ ಇತರ ದೇವತೆಗಳು ಯಾರೊಬ್ಬರೂ ತಮಗೆ ಸಮನಾಗುವುದನ್ನು ಸಹಿಸುವುದಿಲ್ಲ 100 ಅಶ್ವಮೇಧ ಯಾಗಗಳನ್ನು ಪೂರ್ಣಗೊಳಿಸಿದ್ದರೂ ಸಹ – ಅವರನ್ನು ಹೇಗಾದರೂ ಮಾಡಿ ಕೆಳಗೆ ತಳ್ಳಲು ನೋಡುತ್ತಾರೆ.
ಈ ರೀತಿಯ ಅನೇಕ ಸಂಭಾಷಣೆಗಳು ಅರುಳಿಚೆಯಲ್ ನ ಆಳವಾದ ಅರ್ಥಗಳನ್ನು ನಮಗೆ ವಿವರಿಸುತ್ತವೆ. ನಿಜವಾಗಿ, ಈ ಸಂಭಾಷಣೆಗಳು ನಂಜೀಯರ್ ಅವರ ಅರುಳಿಚೆಯಲ್ ವ್ಯಾಖ್ಯಾನ ಮತ್ತು ಅವರ ಶಿಷ್ಯರಿಗೆ ಅದರ ವಿವರಣೆಗಳಿಗೆ ತಳಹದಿಯಾಗಿವೆ.
ನಂಜೀಯರ್ ಅವರು ತಮ್ಮ 9000 ಪಡಿ ವ್ಯಾಖ್ಯಾನದ ಉತ್ತಮ ಪ್ರತಿಯೊಂದನ್ನು ಮಾಡಲು ಇಚ್ಛಿಸಿದಾಗ, ಅದನ್ನು ಮಾಡಲು ಒಬ್ಬ ಉತ್ತಮ ಬರಹಗಾರರೆಂದು ನಂಬೂರು ವರದಾಚಾರ್ಯರು ಗುರುತಿಸಲ್ಪಟ್ಟರು. ಅವರು ಆ ಕೃತಿಯನ್ನು ಪೂರ್ಣಗೊಳಿಸುತ್ತಾರೆ ಮತ್ತು ಪರಿಣಾಮವಾಗಿ ನಂಜೀಯರ್ ಅವರನ್ನು ಪ್ರಶಂಸಿಸುತ್ತಾರೆ ಮತ್ತು ನಂಪಿಳ್ಳೈ ಎಂದು ಹೆಸರಿಸುತ್ತಾರೆ ಮತ್ತು ಧರ್ಮಪ್ರವರ್ತಕರಾಗಿ ಅವರನ್ನು ನೇಮಿಸುತ್ತಾರೆ. ಅದಲ್ಲದೆ ನಂಪಿಳ್ಳೈ ತಮಗಿಂತ ಉತ್ತಮವಾದ ವಿವರಣೆಯನ್ನು ಕೊಡುವಾಗ ನಂಜೀಯರ್ ಅವರನ್ನು ನಿರಂತರವಾಗಿ ಶ್ಲಾಘಿಸುತ್ತಾರೆ. ಇದು ಅವರ ಉದರ ಭಾವನೆಯನ್ನು ಕೂಡ ತೋರಿಸುತ್ತದೆ.
ನಂಜೀಯರ್ ಅವರಿಗೆ ನಮ್ಮ ಸಂಪ್ರದಾಯದ ಬಗ್ಗೆ ಅತ್ಯುತ್ತಮವಾದ ಅರಿವಿತ್ತು. ಅವರು ಹೇಳುತ್ತಾರೆ “ಒಬ್ಬ ಶ್ರೀವೈಷ್ಣವನು ಮತ್ತೊಬ್ಬ ಶ್ರೀವೈಷ್ಣವನ ಕಷ್ಟವನ್ನು ನೋಡಿದರೆ ಮತ್ತು ಅದಕ್ಕೆ ವ್ಯಥೆಪಟ್ಟರೆ ಆಗ ಆತನು ಶ್ರೀವೈಷ್ಣವನು“. ಅವರಿಗೆ ತಮ್ಮ ಕಾಲದ ಶ್ರೀವೈಷ್ಣವರು ಮತ್ತು ಆಚಾರ್ಯರ ಬಗ್ಗೆ ಅಪಾರವಾದ ಗೌರವವಿತ್ತು.
ಪೆರಿಯ ತಿರುಮೊಳಿ 3.6 ರಲ್ಲಿ (ತೂವಿರಿಯ ಮಲರುಳಕ್ಕಿ ಪದಿಗಂ) ಒಂದು ಘಟನೆಯನ್ನು ತೋರಿಸಲಾಗಿದೆ. ನಂಜೀಯರ್ ಅವರು ತಮ್ಮ ಅಂತ್ಯ ಕಾಲದಲ್ಲಿ ಬಹಳ ಅನಾರೋಗ್ಯದಿಂದಿದ್ದಾಗ, ಒಬ್ಬ ಪೆಟ್ತ್ರಿ ಎಂಬ ಸ್ವಾಮಿಗಳು ಅವರನ್ನು ಭೇಟಿಯಾಗುತ್ತಾರೆ ಮತ್ತು ಅವರಿಗೆ ಏನಾದರೂ ಬೇಕಿದೆಯೇ ಎಂದು ಕೇಳುತ್ತಾರೆ. ಅದಕ್ಕೆ ಭಗವಂತನಿಗೆ ತಿರುಮಂಗೈ ಆಳ್ವಾರರ ಓಲೆಯಾದ ಈ ಪದಿಗವನ್ನು ಕೇಳಲು ಇಚ್ಛಿಸುತ್ತೇನೆಂದು ನಂಜೀಯರ್ ಹೇಳುತ್ತಾರೆ (ಆಳ್ವಾರರು ಮೊದಲ ೪ ಪಾಶುರಗಳಲ್ಲಿ ಓಲೆಯನ್ನು ಕಳುಹಿಸುತ್ತಾರೆ ಮತ್ತು ನಂತರ ತಮ್ಮ ಮೃದು ಸ್ವಭಾವದಿಂದಾಗಿ ಮುಂದುವರಿಸಲಾಗಲಿಲ್ಲ) – ಅರೆಯರ್ ಸ್ವಾಮಿಗಳು ಇದನ್ನು ನಂಪೆರುಮಾಳ್ ಮುಂದೆ ಹಾಡುತ್ತಾರೆ ಮತ್ತು ನಂಜೀಯರ್ ಅವರು ಅದನ್ನು ಕೇಳಿ ಭಾವಪೂರ್ಣರಾಗಿ ತಲ್ಲೀನರಾಗುತ್ತಾರೆ.
ತಮ್ಮ ಜೀವನದ ಅಂತ್ಯ ಕಾಲದಲ್ಲಿ ಅವರು ಭಗವಂತನನ್ನು ತನ್ನ ಸ್ವಯಂ ತಿರುಮೇನಿಯನ್ನು ತೋರಿಸುವಂತೆ ಬಿನ್ನವಿಸಿಕೊಳ್ಳುತ್ತಾರೆ ಮತ್ತು ನಂಪೆರುಮಾಳ್ ಅವರಿಗೆ ವಿಶಿಷ್ಟವಾಗಿ ಅದನ್ನು ತೋರಿಸುತ್ತಾನೆ. ಇದರಿಂದ ಸಂತೃಪ್ತರಾದ ನಂಜೀಯರ್ ಅವರು ತಮ್ಮ ಶಿಷ್ಯರಿಗೆ ಅನೇಕ ಅಂತಿಮ ಆದೇಶಗಳನ್ನು ನೀಡುತ್ತಾರೆ ಮತ್ತು ತಮ್ಮ ಚರಮ ತಿರುಮೇನಿಯನ್ನು (ಶರೀರ) ತ್ಯಜಿಸಿ ಪರಮಪದವನ್ನು ಪಡೆಯುತ್ತಾರೆ.
ನಾವು ಕೂಡ ಅವರಂತೆ ಭಗವಂತ ಮತ್ತು ಆಚಾರ್ಯರಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವಂತೆ ನಂಜೀಯರ್ ಅವರ ಪಾದಾರವಿಂದಗಳಲ್ಲಿ ಪ್ರಾರ್ಥಿಸೋಣ.
ನಂಜೀಯರ್ ಅವರ ತನಿಯನ್
ನಮೋ ವೇದಾಂತವೇದ್ಯಾಯ ಜಗನ್ಮಂಗಳ ಹೇತವೇ ।
ಯಸ್ಯ ವಾಗಮೃತಸಾರ ಪೂರಿತಮ್ ಭುವನತ್ರಯಂ ।।
ನಮ್ಮ ಮುಂದಿನ ಲೇಖನದಲ್ಲಿ ನಂಪಿಳ್ಳೈ ಅವರ ವೈಭವವನ್ನು ನೋಡೋಣ.
ಅಡಿಯೇನ್ ಸಾರಥಿ ರಾಮಾನುಜ ದಾಸನ್
ಸಂಗ್ರಹ – https://acharyas.koyil.org/index.php/2012/09/14/nanjiyar-english/
ರಕ್ಷಿತ ಮಾಹಿತಿ: https://acharyas.koyil.org/index.php
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org