ತೊಂಡರಡಿಪ್ಪೊಡಿ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

thondaradippodi-azhwar

ತಿರುನಕ್ಷತ್ರಮ್: ಮಾರ್ಹಳಿ, ಕೇಟ್ಟೈ
ಅವತಾರ ಸ್ಥಳಂ: ತಿರುಮಂಡಂಗುಡಿ
ಆಚಾರ್ಯನ್: ವಿಶ್ವಕ್ಸೇನರ್
ಕೃತಿಗಳು: ತಿರುಮಾಲೈ, ತಿರುಪ್ಪಳ್ಳಿಯೆಳುಚ್ಚಿ
ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್

ನನ್ಜೀಯರ್, ತಿರುಪ್ಪಳ್ಳಿಯೆಳುಚ್ಚಿಗೆ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಗುರುತಿಸುವುದೇನೆಂದರೆ ಆಳ್ವಾರರು ಈ ಸಂಸಾರದಲ್ಲಿ “ಅನಾದಿ ಮಾಯಯಾ ಸುಪ್ತ:” (ಬಹು ಪ್ರಾಚೀನ ಕಾಲದಿಂದ ಅಜ್ಞಾನದಿಂದಾಗಿ ಈ ಸಂಸಾರದಲ್ಲಿ ನಿದ್ರಿಸುತ್ತಿದ್ದರು) ಮತ್ತು ಎಂಪೆರುಮಾನನು ಅವರನ್ನು ಎಚ್ಚರಗೊಳಿಸುತ್ತಾನೆ (ಅವರಿಗೆ ನಿಷ್ಕಳಂಕ ಜ್ಞಾನವನ್ನು ನೀಡುತ್ತಾನೆ). ಆದರೆ, ಆ ನಂತರ ಪೆರಿಯ ಪೆರುಮಾಳ್ ಯೋಗ ನಿದ್ರೆಯಲ್ಲಿರುವಾಗ ಆತನನ್ನು ಎಚ್ಚರಗೊಳಿಸಿ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿಕೊಳ್ಳುವುದು ಆಳ್ವಾರರ ಸರದಿಯಾಗುತ್ತದೆ.

ಪೆರಿಯಾವಾಚಾನ್ ಪಿಳ್ಳೈ, ತಿರುಪ್ಪಳ್ಳಿಯೆಳುಚ್ಚಿಗೆ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಆಳ್ವಾರರ ವೈಭವಗಳನ್ನು ಸ್ವತಃ ಆಳ್ವಾರರ ಪಾಶುರಗಳ ಮೂಲಕವೇ ತೆರೆದಿಡುತ್ತಾರೆ. ಎಂಪೆರುಮಾನನಿಂದ ಎಚ್ಚರಗೊಳಿಸಲ್ಪಟ್ಟ ಆಳ್ವಾರರು, ತಮ್ಮ ಸ್ವರೂಪವನ್ನು ಅರಿತುಕೊಂಡ ನಂತರ, ಪೆರಿಯ ಪೆರುಮಾಳರನ್ನು ನೋಡಲು ಹೋದಾಗ ಅಲ್ಲಿ ಆತನು ಕಣ್ಣುಮುಚ್ಚಿಕೊಂಡು ತಮ್ಮನ್ನು ಸ್ವಾಗತಿಸದೆ, ಕ್ಷೇಮ ಸಮಾಚಾರವನ್ನು ವಿಚಾರಿಸದೆ, ನಿದ್ರಿಸುತ್ತಿರುವುದನ್ನು ಕಾಣುತ್ತಾರೆ. ಪೆರಿಯ ಪೆರುಮಾಳರಿಗೆ ಆಳ್ವಾರರ ಬಗ್ಗೆ ಆಸಕ್ತಿಯಿಲ್ಲವೆಂದು ಹೇಳಲಾಗದು, ಏಕೆಂದರೆ ಆಳ್ವಾರರು ಎಂಪೆರುಮಾನನಿಗೆ ಅತಿ ಪ್ರಿಯರಾದವರು ಹಾಗೆಯೇ ಆಳ್ವಾರರಿಗೆ ಎಂಪೆರುಮಾನನೂ ಸಹ. ಪೆರಿಯ ಪೆರುಮಾಳ್ ಅಜೀರ್ಣದಿಂದ ಮಲಗಿದ್ದಾನೆಂದೂ ಹೇಳಲಾಗದು ಏಕೆಂದರೆ ಈ ದೋಷಗಳನ್ನು ತಮೋಗುಣದಿಂದ ಕೂಡಿದ ಭೌತಿಕ ಪ್ರಕೃತಿಯಲ್ಲಿ ಮಾತ್ರ ಕಾಣಬಹುದು – ಆದರೆ ಪೆರಿಯ ಪೆರುಮಾಳ್ ಸಂಪೂರ್ಣವಾಗಿ ಆಧ್ಯಾತ್ಮಿಕನಾದವನು – ಆದ್ದರಿಂದ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪೆರಿಯ ಪೆರುಮಾಳ್ ಧ್ಯಾನಮಗ್ನನಾಗಿ ಪವಡಿಸಲು ಕಾರಣವೇನೆಂದರೆ, ಈ ಕೆಳಗಿನ ಶ್ರೇಷ್ಠ ಗುಣಗಳಿಂದ ಕೂಡಿದ ಆಳ್ವಾರರನ್ನು ಸುಧಾರಿಸಿದಂತೆ ಪ್ರತಿಯೊಬ್ಬರನ್ನೂ ಹೇಗೆ ಸುಧಾರಿಸುವುದೆಂದು ಚಿಂತಿಸುತ್ತಿರುವುದು:
– ಆಳ್ವಾರರಿಗೆ ಜೀವಾತ್ಮನಿಗೆ ಪ್ರಕೃತಿ ಸಂಬಂಧವು ಉಚಿತವಲ್ಲವೆಂಬುದರ ಬಗ್ಗೆ ಸಂಪೂರ್ಣ ಜ್ಞಾನವಿತ್ತು – ಅವರು ಹೇಳುವಂತೆ “ಅದಲಾಲ್ ಪಿರವಿ ವೇಣ್ಡೇನ್” ಅರ್ಥಾತ್ “ನಾನು ಇನ್ನು ಮುಂದೆ ಈ ಸಂಸಾರದಲ್ಲಿ ಜನಿಸಲು ಇಚ್ಛಿಸುವುದಿಲ್ಲ “.
– ಆಳ್ವಾರರಿಗೆ ಸ್ವರೂಪ ಯಾತಾತ್ಮ್ಯ ಜ್ಞಾನವೆಂದರೆ ಭಾಗವತ ಶೇಷತ್ವವೆಂಬುದರ ಬಗ್ಗೆ ಸಂಪೂರ್ಣ ಅರಿವಿತ್ತು (ಆತ್ಮದ ನಿಜವಾದ ಸ್ವಭಾವದ ಬಗ್ಗೆ ತಿಳುವಳಿಕೆ ). ಅವರು ಹೇಳಿರುವಂತೆ “ಪೋನಗಂ ಚೆಯ್ದ ಚೇಟಮ್ ತರುವರೇಲ್ ಪುನಿತಮ್” ಅರ್ಥಾತ್ “ಒಬ್ಬ ಶ್ರೀವೈಷ್ಣವ ತಾನು ತಿಂದುಳಿದ ಆಹಾರವನ್ನು ಕೊಟ್ಟರೆ ಅದು ಬಹು ಪವಿತ್ರವಾದುದು.”
– ಅವರಿಗೆ ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ಆಕಾಂಕ್ಷೆಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯಿತ್ತು, ಅವರೇ ಹೇಳುವಂತೆ “ಇಚ್ಚುವೈ ತವಿರ ಅಚ್ಚುವೈ ಪೆರಿನುಂ ವೇಣ್ಡೇನ್” ಅರ್ಥಾತ್ ನಾನು ಪೆರಿಯ ಪೆರುಮಾಳರನ್ನು ಮಾತ್ರ ಅನುಭವಿಸಿ ಆನಂದಿಸುತ್ತೇನೆ ಬೇರೇನೂ ಬೇಕಿಲ್ಲ.
– ಅವರಿಗೆ ತಮ್ಮ ಇಂದ್ರಿಯಗಳ ಮೇಲೆ ಸಂಪೂರ್ಣ ನಿಯಂತ್ರಣವಿತ್ತು, ಅವರು ಹೇಳುವಂತೆ “ಕಾವಲಿಲ್ ಪುಲನೈ ವೈತ್ತು” ಅರ್ಥಾತ್ ನಾನು ನನ್ನ ಇಂದ್ರಿಯಗಳನ್ನು ನಿಯಂತ್ರಿಸಿದ್ದೇನೆ.
– ಅವರು ಬೇರೆಲ್ಲ ಉಪಾಯಗಳನ್ನು ಸಂಪೂರ್ಣವಾಗಿ ತೊರೆದಿದ್ದರು, ಅವರು ಹೇಳುವಂತೆ “ಕುಳಿತ್ತು ಮೂನ್ರು ಅನಲೈ ಓಂಬುಮ್ ಕುರಿಕೊಳ್ ಅನದಣಮೈ ತನ್ನೈ ಒಳಿತ್ತಿಟ್ಟೇನ್” ಅರ್ಥಾತ್ ನಾನು ಕರ್ಮ ಯೋಗ, ಇತ್ಯಾದಿಗಳ ಮಾರ್ಗವನ್ನು ತ್ಯಜಿಸಿದ್ದೇನೆ.
– ಅವರಿಗೆ ಉಪಾಯ ಯಾತಾತ್ಮ ಜ್ಞಾನದ (ನಿಜವಾದ ಉಪಾಯ) ಬಗ್ಗೆ ಸಂಪೂರ್ಣ ಅರಿವಿತ್ತು. ಅವರು ಹೇಳುವಂತೆ “ಉನ್ ಅರುಳ್ ಎನ್ನುಂ ಆಶೈ ತನ್ನಾಲ್ ಪೊಯ್ಯನೇನ್ ವಂದು ನಿನ್ರೇನ್” ಅರ್ಥಾತ್ “ನಿನ್ನ ಕೃಪೆ ಎಂಬ ಉಪಾಯದ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿ ನಾನು ಇಲ್ಲಿ ಬಂದಿದ್ದೇನೆ”.

ಕಡೆಯದಾಗಿ ಪೆರಿಯಾವಾಚಾನ್ ಪಿಳ್ಳೈ ಹೇಳುತ್ತಾರೆ, ಆಳ್ವಾರರಿಗೆ ಈ ಶ್ರೇಷ್ಠ ಗುಣಗಳಿರುವುದರಿಂದ ಅವರು ಪೆರಿಯ ಪೆರುಮಾಳ್ ಗೆ ಅತಿ ಪ್ರಿಯರಾಗಿದ್ದಾರೆ, ಈ ಹೇಳಿಕೆಯಂತೆ “ವಾಳುಮ್ ಚೋಂಬರೈಉಗತ್ತಿ ಪೋಲುಮ್” ಅರ್ಥಾತ್ “ಎಂಪೆರುಮಾನನಿಗೆ ಸಂಪೂರ್ಣ ಶರಣಾಗತರಾದವರು ಆತನಿಗೆ ಅತಿ ಪ್ರಿಯರು”.

ಮಾಮುನಿಗಳು ಆಳ್ವಾರರನ್ನು ವೇದ ವಿದ್ವಾಂಸರುಗಳಿಂದ ಶ್ಲಾಘಿಸಲ್ಪಟ್ಟವರೆಂದು ವೈಭವೀಕರಿಸುತ್ತಾರೆ ಏಕೆಂದರೆ ಅವರು ವೇದಗಳ ಸಾರವನ್ನು ನಿಜವಾಗಿ ಅರಿತವರು ಮತ್ತು ಆಳ್ವಾರರ ಚಟುವಟಿಕೆಗಳು ಶಾಸ್ತ್ರಗಳ ಸಾರದ ಪ್ರಕಾರವಾಗಿಯೇ ಇದೆ ಎಂದು ಗಮನಿಸಿ ವೈಭವೀಕರಿಸುತ್ತಾರೆ. ಆಳ್ವಾರರ ಅರ್ಚಾವತಾರ ಅನುಭವವನ್ನು ನಾವು ಈಗಾಗಲೇ ಇಲ್ಲಿ ನೋಡಿದ್ದೇವೆ:
http://ponnadi.blogspot.in/2012/10/archavathara-anubhavam-thondaradippodi.html

ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಈಗ ಆಳ್ವಾರರ ಚರಿತ್ರೆಯನ್ನು ಆನಂದಿಸೋಣ.

ತಮ್ಮ ಜನನದಲ್ಲಿ ನಂಪೆರುಮಾಳರ ದೈವಿಕ ಆಶೀರ್ವಾದದಿಂದ, ಆಳ್ವಾರರು ಶುದ್ಧ ಸತ್ತ್ವನಿಷ್ಠರಾಗಿ ಜನಿಸಿದರು ಮತ್ತು ವಿಪ್ರನಾರಾಯಣರೆಂದು ಹೆಸರಿಸಲ್ಪಟ್ಟರು. ಅವರು ವಯಸ್ಸಿಗೆ ತಕ್ಕ ಸಂಸ್ಕಾರಗಳಾದ ಚೌಲ, ಉಪನಯನ, ಇತ್ಯಾದಿಗಳನ್ನು ಮುಗಿಸಿದರು ಮತ್ತು ಸಕಲ ವೇದಗಳೊಂದಿಗೆ ಅದರ ಅಂಗಗಳು ಮತ್ತು ಅರ್ಥಗಳನ್ನು ಅಭ್ಯಸಿಸಿದರು. ಅಪಾರ ಜ್ಞಾನವನ್ನು ಮತ್ತು ವೈರಾಗ್ಯವನ್ನು ಬೆಳೆಸಿಕೊಂಡು, ಅವರು ಶ್ರೀರಂಗವನ್ನು ಪ್ರವೇಶಿಸುತ್ತಾರೆ ಮತ್ತು ಪೆರಿಯ ಪೆರುಮಾಳರನ್ನು ಆರಾಧಿಸುತ್ತಾರೆ. ಪೆರಿಯ ಪೆರುಮಾಳ್ ಅವರ ಭಕ್ತಿಯಿಂದ ಸಂತುಷ್ಟರಾಗಿ ತಮ್ಮ ದಿವ್ಯ ಸೌಂದರ್ಯವನ್ನು ತೋರಿಸಿ ಅವರ ಭಕ್ತಿಯನ್ನು ಇನ್ನಷ್ಟು ವರ್ಧಿಸುತ್ತಾರೆ ಮತ್ತು ಅವರು ಶ್ರೀರಂಗದಲ್ಲಿಯೇ ನಿರಂತರವೂ ನೆಲೆಸುವಂತೆ ಮಾಡುತ್ತಾರೆ.

ಆಳ್ವಾರರು ಒಂದು ಸುಂದರವಾದ ನಂದವನವನ್ನು ಸ್ಥಾಪಿಸಿ ಪೆರಿಯ ಪೆರುಮಾಳ್ ಗೆ ಪ್ರತಿದಿನ ಪುಷ್ಪ ಕೈಂಕರ್ಯವನ್ನು ಮಾಡುತ್ತಾರೆ. ಈ ಮಹಾನ್ ಗಳು ಹಾಕಿಕೊಟ್ಟ ದಾರಿಯನ್ನು ಅನುಸರಿಸುತ್ತಾರೆ – ಪುಂಡರೀಕರು (ಒಬ್ಬ ದೊಡ್ಡ ಮಹಾನ್), ಮಾಲಾಕಾರರು (ಮಥುರಾದಲ್ಲಿ ಕಣ್ಣನ್ ಎಂಪೆರುಮಾನ್ ಮತ್ತು ಬಲರಾಮರಿಗೆ ಪುಷ್ಪ ಮಾಲೆಗಳನ್ನು ಬಹು ಪ್ರೀತಿ ಮತ್ತು ವಾತ್ಸಲ್ಯದಿಂದ ಅರ್ಪಿಸಿದವರು), ಒಬ್ಬ ಶ್ರೇಷ್ಠ ಕೈಂಕರ್ಯ ಶ್ರೀಮಾನ್ ಗಜೇಂದ್ರಾಳ್ವಾನ್, ಮತ್ತು ನಮ್ಮ ಶ್ರೇಷ್ಠ ಪೆರಿಯಾಳ್ವಾರ್ (ಎಂಟು ಹೂವುಗಳಿಂದ ಸುಂದರವಾದ ಮಾಲೆಗಳನ್ನು ಮಾಡಿದವರು) .

ಒಮ್ಮೆ ತಿರುಕ್ಕರಂಬನೂರಿನ ದೇವದೇವಿ ಎಂಬ ಒಬ್ಬ ಸುಂದರವಾದ ವೇಶ್ಯೆಯು ತನ್ನ ಸ್ನೇಹಿತೆಯರೊಡನೆ ಉರೈಯೂರಿನಿಂದ ಹಿಂತಿರುಗುವಾಗ ಆಳ್ವಾರರ ತೋಟವನ್ನು ಪ್ರವೇಶಿಸುತ್ತಾಳೆ ಮತ್ತು ಆ ವನದ ಪುಷ್ಪಗಳು, ಪಕ್ಷಿಗಳು, ಇವುಗಳ ಸೌಂದರ್ಯದಿಂದ ಆಶ್ಚರ್ಯಚಕಿತಳಾಗುತ್ತಾಳೆ.

ಅದೇ ಸಮಯದಲ್ಲಿ ಅವರು ಬಹು ಸುಂದರವಾಗಿ ಕಾಣುವ, ತಲೆ ಮತ್ತು ಮುಖದ ಮೇಲೆ ನೀಳವಾದ ಕೇಶಗಳುಳ್ಳ, ಶುಭ್ರವಾದ ವಸ್ತ್ರಗಳು, ತುಳಸಿ/ಪದ್ಮ ಮಾಲೆಗಳು, ಊರ್ಧ್ವಪುಂಡ್ರ, ಇತ್ಯಾದಿಗಳನ್ನು ಧರಿಸಿದ, ನೀರು ಮತ್ತು ತೋಟದ ಉಪಕರಣಗಳನ್ನು ಕೈಯಲ್ಲಿ ಹಿಡಿದ ವಿಪ್ರನಾರಾಯಣರನ್ನು ಕಂಡರು. ಅವರು ಹಾಗೆ ನೋಡುತ್ತಿರಲು, ವಿಪ್ರನಾರಾಯಣರು ಅವರನ್ನು ಕಿಂಚಿತ್ತೂ ಗಮನಿಸದೆ ತಮ್ಮ ಕೈಂಕರ್ಯದಲ್ಲಿ ಶ್ರದ್ಧೆಯಿಂದ ನಿರತರಾಗಿದ್ದರು. ಆಗ ದೇವದೇವಿಯು ತನ್ನ ಸಹೋದರಿ ಮತ್ತು ಗೆಳತಿಯರನ್ನು ಕೇಳುತ್ತಾಳೆ “ಈತನು ಏನು ಬುದ್ಧಿಗೇಡಿಯೊ ಅಥವಾ ಹೇಡಿಯೊ, ನನ್ನಂಥಾ ಸುಂದರವಾದ ಹುಡುಗಿಯು ಮುಂದೆ ನಿಂತಿದ್ದರೂ ಈ ಕಡೆ ನೋಡುತ್ತಿಲ್ಲವೇಕೆ?” ಅವಳ ಗೆಳತಿಯರು ವಿಪ್ರನಾರಾಯಣರು ನಂಪೆರುಮಾಳ್ ಗೆ ಒಬ್ಬ ಕೈಂಕರ್ಯಪರರು ಮತ್ತು ಅವರು ನಿನ್ನ ಸೌಂದರ್ಯದ ಕಡೆ ಗಮನ ಕೊಡುವುದಿಲ್ಲವೆಂದು ತಿಳಿಸುತ್ತಾರೆ. ಅವರು ಹೇಳುತ್ತಾರೆ ಅವರನ್ನು ಮೋಹಗೊಳಿಸಲು ಮತ್ತು ನಿನ್ನ ಬಗ್ಗೆ ಹುಚ್ಚು ಹಿಡಿಯುವಂತೆ ಬದಲಾಯಿಸಲು ೬ ತಿಂಗಳು ಕಾಲಾವಕಾಶ ನೀಡುತ್ತೇವೆ, ಮತ್ತು ಹಾಗೆ ಮಾಡಿದಲ್ಲಿ ಅವಳು ಅತ್ಯಂತ ಸುಂದರಿಯೆಂದು ಒಪ್ಪಿಕ್ಕೊಳ್ಳುತ್ತೇವೆ ಮತ್ತು ೬ ತಿಂಗಳ ಕಾಲ ಅವಳ ದಾಸಿಯರಾಗಿ ಸೇವೆ ಮಾಡುತ್ತೇವೆ. ಅವಳು ಒಪ್ಪಿಕೊಂಡು ತನ್ನ ಬೆಲೆಬಾಳುವ ಒಡವೆ ಇತ್ಯಾದಿಗಳನ್ನು ತನ್ನ ಗೆಳತಿಯರಿಗೆ ಕೊಟ್ಟು ಸಾತ್ವಿಕ ರೂಪ/ವಸ್ತ್ರಗಳನ್ನು ಧರಿಸುತ್ತಾಳೆ.

ಅವಳು ನಂತರ ಹೋಗಿ ಆಳ್ವಾರರ ಕಾಲಿಗೆ ಬೀಳುತ್ತಾಳೆ ಮತ್ತು ಎಂಪೆರುಮಾನಿಗೆ ಗೌಪ್ಯ ಸೇವೆ ಭಾಗವತರೊಬ್ಬರಿಗೆ ಶರಣಾಗಲು ಬಯಸುತ್ತೇನೆಂದು ಹೇಳುತ್ತಾಳೆ. ಅವಳು ಆಳ್ವಾರರ ಹತ್ತಿರ ಹೋಗಿ ಆಳ್ವಾರರು ತಮ್ಮ ಮಾಧುಕರ (ಭಿಕ್ಷೆ) ಮುಗಿಸಿ ಹಿಂತಿರುಗುವ ತನಕ ಕಾದಿರುವೆನೆಂದು ಹೇಳುತ್ತಾಳೆ. ಆಳ್ವಾರರು ಒಪ್ಪಿಕೊಳ್ಳುತ್ತಾರೆ ಮತ್ತು ಅವಳು ಕೆಲವು ಕಾಲ ಆಳ್ವಾರರ ಶೇಷ ಪ್ರಸಾದವನ್ನು ಸೇವಿಸುತ್ತಾ ಅವರ ಸೇವೆಯನ್ನು ಮಾಡುತ್ತಾಳೆ.

ಒಂದು ದಿನ ದೇವದೇವಿಯು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಜೋರಾಗಿ ಮಳೆ ಬರುತ್ತದೆ. ಅದರಿಂದಾಗಿ ಅವಳು ನಿಧಾನವಾಗಿ ವಿಪ್ರನಾರಾಯಣರ ಆಶ್ರಮವನ್ನು ಪ್ರವೇಶಿಸುತ್ತಾಳೆ. ಅವಳು ಸಂಪೂರ್ಣವಾಗಿ ತೊಯ್ದಿರುವುದನ್ನು ಕಂಡು ವಿಪ್ರನಾರಾಯಣರು ತಮ್ಮ ಉತ್ತರೀಯವನ್ನು ಅವಳಿಗೆ ನೀಡುತ್ತಾರೆ. ಇದಾದ ನಂತರ ವಿಪ್ರನಾರಾಯಣರು ಮತ್ತು ದೇವದೇವಿಯು ಬೆಣ್ಣೆ ಮತ್ತು ಬೆಂಕಿಯಂತೆ ಪರಸ್ಪರ ನಿಕಟರಾಗುತ್ತಾರೆ. ಮರುದಿನ ಅವಳು ತನ್ನ ಒಡವೆಗಳು ಮತ್ತು ಆಕರ್ಷಕ ವಸ್ತ್ರಗಳನ್ನು ತೆಗೆದುಕೊಡು ಬಂದು ಧರಿಸುತ್ತಾಳೆ ಮತ್ತು ತನ್ನ ಸುಂದರವಾದ ರೂಪವನ್ನು ಅವರಿಗೆ ಪ್ರಕಟಪಡಿಸುತ್ತಾಳೆ. ಅವರು ನಂತರ ಅವಳನ್ನು ಎಷ್ಟು ಹಚ್ಚಿಕೊಳ್ಳುತ್ತಾರೆಂದರೆ ತಮ್ಮ ಕೈಂಕರ್ಯವನ್ನು ಸಂಪೂರ್ಣವಾಗಿ ಮರೆತು ಕೈಬಿಡುತ್ತಾರೆ. ಅವಳು ಕೆಲವು ಕಾಲ ಅವರಿಗೆ ಸ್ವಲ್ಪ ಪ್ರೀತಿಯನ್ನು ತೋರಿಸುತ್ತಾಳೆ ಮತ್ತು ಅವರು ಅವಳಿಗೆ ಸಂಪೂರ್ಣವಾಗಿ ಶರಣಾಗುತ್ತಾರೆ. ಅವರ ಎಲ್ಲ ಸಂಪತ್ತನ್ನು ಕಸಿದುಕೊಂಡ ನಂತರ ಅವಳು ಅವರನ್ನು ಹೊರಗಟ್ಟುತ್ತಾಳೆ ಮತ್ತು ಆ ಜಾಗವನ್ನು ಬಿಡಬೇಕೆಂದು ಹೇಳುತ್ತಾಳೆ. ಅವರು ಬಹು ದುಃಖಿತರಾಗುತ್ತಾರೆ ಮತ್ತು ಅವಳ ಮನೆಯ ಬಾಗಿಲಲ್ಲೇ ಕುಳಿತು ಅವಳು ಅವರನ್ನು ಸ್ವೀಕರಿಸಲು ಕಾಯುತ್ತಾರೆ. ಅದೇ ಸಮಯದಲ್ಲಿ ಪೆರಿಯ ಪೆರುಮಾಳ್ ಮತ್ತು ಪೆರಿಯ ಪಿರಾಟ್ಟಿ ತಮ್ಮ ದಿವ್ಯ ನಡಿಗೆಯಲ್ಲಿ ಆ ರಸ್ತೆಯಲ್ಲಿ ಹಾದು ಹೋಗುತ್ತಾರೆ. ಪಿರಾಟ್ಟಿಯು ಎಂಪೆರುಮಾನನ್ನು ಕೇಳುತ್ತಾಳೆ “ವೇಶ್ಯೆಯ ಮನೆಯ ಬಾಗಿಲಲ್ಲಿ ಕಾಯುತ್ತಿರುವ ಆ ವ್ಯಕ್ತಿ ಯಾರು?” ಮತ್ತು ಎಂಪೆರುಮಾನನು ಅವರು ವಿಪ್ರನಾರಾಯಣರು ತನ್ನ ಒಬ್ಬ ಕೈಂಕರ್ಯಪರರಾಗಿದ್ದರು ಮತ್ತು ಈಗ ಅವಳ ಬಗ್ಗೆ ಹುಚ್ಚು ಹಿಡಿದಿದೆ ಮತ್ತು ಅದರಿಂದ ಕಷ್ಟಪಡುತ್ತಿದ್ದಾರೆ ಎಂದು ಉತ್ತರಿಸುತ್ತಾನೆ. ನಂತರ ಪಿರಾಟ್ಟಿಯು ತನ್ನ ಪುರುಷಾಕಾರವನ್ನು ಉಪಕ್ರಮಿಸುತ್ತಾಳೆ ಮತ್ತು ಎಂಪೆರುಮಾನನನ್ನು ಕೇಳುತ್ತಾಳೆ “ಒಬ್ಬ ಗೌಪ್ಯ ಭಕ್ತನು ವಿಷಯಾಂತರವನ್ನು ಹಚ್ಚಿಕೊಂಡರೂ ಸಹ ಹೀಗೆ ತಾವು ಆತನನ್ನು ಕೈಬಿಡಬಹುದೇ? ಆತನ ಮಾಯೆಯನ್ನು ಅಳಿಸಿ ಮತ್ತು ಪುನ: ಆತನು ನಮ್ಮ ಆಪ್ತ ಸೇವಕನಾಗುವಂತೆ ಅನುಗ್ರಹಿಸಿ”. ಎಂಪೆರುಮಾನ್ ಒಪ್ಪಿಕೊಳ್ಳುತ್ತಾನೆ ಮತ್ತು ತನ್ನ ಸನ್ನಿಧಿಯಿಂದ ಸ್ವರ್ಣ ಪಾತ್ರೆಗಳಲ್ಲೊಂದನ್ನು (ತಿರುವಾರಾಧನಕ್ಕೆ ಉಪಯೋಗಿಸುವ ಪಂಚ ಪಾತ್ರೆಗಳಲ್ಲೊಂದು) ತೆಗೆದುಕೊಂಡು ದೇವದೇವಿಯ ಮನೆಗೆ ಹೋಗುತ್ತಾನೆ (ತನ್ನ ಸ್ವರೂಪವನ್ನು ಬಿಟ್ಟು ಮಾರುವೇಷದಲ್ಲಿ) ಮತ್ತು ಬಾಗಿಲನ್ನು ತಟ್ಟುತ್ತಾನೆ. ಆಕೆಯು ಬಾಗಿಲನ್ನು ತೆರೆದು ಆತನು ಯಾರೆಂದು ಕೇಳಿದಾಗ, ಅವನು ತನ್ನ ಹೆಸರು ಅಳಗಿಯ ಮಣವಾಳನೆಂದು ವಿಪ್ರನಾರಾಯಣರ ದೂತನೆಂದು ಮತ್ತು ಈ ಸ್ವರ್ಣ ಪಾತ್ರೆಯನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆಂದು ಹೇಳುತ್ತಾನೆ. ಅವಳು ಬಹು ಸಂತೋಷಗೊಂಡು ವಿಪ್ರನಾರಾಯಣರನ್ನು ಒಳಗೆ ಕಳುಹಿಸಲು ಹೇಳುತ್ತಾಳೆ. ಆತನು ನಂತರ ವಿಪ್ರನಾರಾಯಣರ ಬಳಿಗೆ ಹೋಗುತ್ತಾನೆ ಮತ್ತು ದೇವದೇವಿಯು ಒಳಗೆ ಆಹ್ವಾನಿಸಿದ್ದಾಳೆಂದು ತಿಳಿಸುತ್ತಾನೆ. ಈ ಸಿಹಿ ಮಾತುಗಳನ್ನು ಕೇಳಿ ಅವರು ಬಹು ಸಂತೋಷಗೊಳ್ಳುತ್ತಾರೆ ಮತ್ತು ಮನೆಯೊಳಗೆ ಪ್ರವೇಶಿಸುತ್ತಾರೆ ಮತ್ತು ಅವರಿಬ್ಬರೂ ಪುನ: ವಿಷಯಲೋಲುಪತೆಯಲ್ಲಿ ಮುಳುಗುತ್ತಾರೆ. ಪೆರಿಯ ಪೆರುಮಾಳ್ ತಮ್ಮ ಸನ್ನಿಧಿಗೆ ಹಿoತಿರುಗುತ್ತಾರೆ ಮತ್ತು ಆನಂದದಿಂದ ತಮ್ಮ ಆದಿಶೇಷ ಪರ್ಯಂಕದ ಮೇಲೆ ಮಲಗುತ್ತಾರೆ.

ಮರುದಿನ ಕೈಂಕರ್ಯಪರರು ಸನ್ನಿಧಿಯನ್ನು ತೆರೆದಾಗ ಪಾತ್ರೆಗಳಲ್ಲೊಂದು ಕಾಣದಿರುವುದನ್ನು ಗಮನಿಸುತ್ತಾರೆ ಮತ್ತು ರಾಜನಿಗೆ ತಿಳಿಸುತ್ತಾರೆ. ಆಗ ರಾಜನು ಕೈಂಕರ್ಯಪರರ ಅಲಕ್ಷ್ಯತೆಗೆ ಕೋಪಗೊಳ್ಳುತ್ತಾನೆ. ದಾಸಿಯರಲ್ಲೊಬ್ಬಳು ಭಾವಿಯಿಂದ ನೀರನ್ನು ತರಲು ಹೋದಾಗ ತನ್ನ ಸಂಬಂಧಿಕರಲ್ಲೊಬ್ಬರು ರಾಜನ ಕೋಪಕ್ಕೆ ಪಾತ್ರರಾಗಿರುವುದನ್ನು ಕೇಳುತ್ತಾಳೆ ಮತ್ತು ವಿಪ್ರನಾರಾಯಣರು ದೇವದೇವಿಗೆ ಸ್ವರ್ಣಪಾತ್ರೆಯೊಂದನ್ನು ಕೊಟ್ಟಿದ್ದಾರೆ ಮತ್ತು ಅದು ಅವಳ ದಿಂಬಿನ ಕೆಳಗಿದೆ ಎಂದು ಹೇಳುತ್ತಾಳೆ. ಆ ಕೈಂಕರ್ಯಪರರು ವಿಷಯವನ್ನು ರಾಜಭಟರಿಗೆ ತಿಳಿಸುತ್ತಾರೆ ಮತ್ತು ಅವರು ತಕ್ಷಣವೇ ದೇವದೇವಿಯು ಇರುವೆಡೆಗೆ ಹೋಗುತ್ತಾರೆ, ಸ್ವರ್ಣಪಾತ್ರೆಯನ್ನು ಪತ್ತೆಹಚ್ಚುತ್ತಾರೆ, ಮತ್ತು ವಿಪ್ರನಾರಾಯಣ ಮತ್ತು ದೇವದೇವಿ ಇಬ್ಬರನ್ನೂ ಬಂಧಿಸುತ್ತಾರೆ. ಅವರಿಬ್ಬರನ್ನು ರಾಜನ ಆಸ್ಥಾನಕ್ಕೆ ಕರೆತಂದಾಗ ರಾಜನು ಅವಳನ್ನು ಕೇಳುತ್ತಾನೆ “ಯಾರಾದರೂ ಪೆರಿಯ ಪೆರುಮಾಳರ ಪಾತ್ರೆಯನ್ನು ತಂದು ಕೊಟ್ಟರೆ ನೀನು ಅದನ್ನು ಸ್ವೀಕರಿಸಬಹುದೇ?” ಮತ್ತು ಅವಳು ಉತ್ತರಿಸುತ್ತಾಳೆ “ಇದು ಪೆರುಮಾಳರ ಪಾತ್ರೆಯೆಂದು ನನಗೆ ಗೊತ್ತಿಲ್ಲ; ವಿಪ್ರನಾರಾಯಣರು ತನ್ನ ಸ್ವಂತ ಪಾತ್ರೆಯೆಂದು ಅಳಗಿಯ ಮಣವಾಳನೆಂಬ ದೂತನ ಮೂಲಕ ಕಳುಹಿಸಿದರು ಮತ್ತು ನಾನು ಅದನ್ನು ಸಂದೇಹಿಸದೆ ಸ್ವೀಕರಿಸಿದೆ”. ವಿಪ್ರನಾರಾಯಣರು ಹೇಳುತ್ತಾರೆ ತನಗೆ ಯಾವ ದೂತನೂ ಇಲ್ಲ ಮತ್ತು ತಾವು ಯಾವ ಸ್ವರ್ಣ ಪಾತ್ರೆಯನ್ನೂ ಹೊಂದಿಲ್ಲ. ಇದನ್ನು ಕೇಳಿದ ರಾಜನು ದೇವದೇವಿಗೆ ದಂಡವನ್ನು ವಿಧಿಸಿ ಬಿಡುಗಡೆ ಮಾಡುತ್ತಾನೆ. ನಂತರ ಅವನು ಆ ಸ್ವರ್ಣ ಪಾತ್ರೆಯನ್ನು ಎಂಪೆರುಮಾನನಿಗೆ ಸಮರ್ಪಿಸುತ್ತಾನೆ ಮತ್ತು ಈ ಕಳ್ಳತನ ಪ್ರಕರಣದಲ್ಲಿ ಮುಂದಿನ ತನಿಖೆಯಾಗುವವರೆಗೂ ವಿಪ್ರನಾರಾಯಣರನ್ನು ಕಾರಾಗೃಹದಲ್ಲಿಡಲು ತನ್ನ ಭಟರಿಗೆ ಆದೇಶಿಸುತ್ತಾನೆ.

ಈ ಘಟನೆಗಳನ್ನು ನೋಡಿದ ಪಿರಾಟ್ಟಿಯು ವಿಪ್ರನಾರಾಯಣರನ್ನು ತನ್ನ ಲೀಲೆಗೆ ಈಡು ಮಾಡದೇ ಕೃಪೆಗೆ ಪಾತ್ರರನ್ನಾಗಿ ಮಾಡಬೇಕೆಂದು ಎಂಪೆರುಮಾನನನ್ನು ವಿನಂತಿಸಿಕೊಳ್ಳುತ್ತಾಳೆ. ಎಂಪೆರುಮಾನನು ತಕ್ಷಣವೇ ಒಪ್ಪಿಕೊಳ್ಳುತ್ತಾನೆ ಮತ್ತು ಆ ರಾತ್ರಿ ರಾಜನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಆತನು ವಿಪ್ರನಾರಾಯಣರು ತನ್ನ ಗೌಪ್ಯ ಸೇವಕನೆಂದು ಮತ್ತು ಅವರ ಪ್ರಾರಬ್ಧ ಕರ್ಮವನ್ನು ತೊಡೆದು ಹಾಕಲು ಎಂಪೆರುಮಾನನು ಈ ಲೀಲಾ ನಾಟಕವನ್ನಾಡಿದನೆಂದು ಹೇಳುತ್ತಾನೆ. ದಯವಿಟ್ಟು ಅವರನ್ನು ಬಿಡುಗಡೆ ಮಾಡಿ ಮತ್ತು ಅವರು ಮೊದಲಿನಂತೆ ತೋಟವನ್ನು ನೋಡಿಕೊಳ್ಳುವ ಮತ್ತು ನನಗೆ ಮಾಲೆಗಳನ್ನು ಮಾಡುವ ಕೈಂಕರ್ಯದಲ್ಲಿ ತೊಡಗುವಂತೆ ಮಾಡಬೇಕೆಂದು ಹೇಳಿದನು. ರಾಜನು ಎಚ್ಚರಗೊಳ್ಳುತ್ತಾನೆ ಮತ್ತು ವಿಪ್ರನಾರಾಯಣರ ಹಿರಿಮೆಯನ್ನು ಅರಿಯುತ್ತಾನೆ ಮತ್ತು ತಕ್ಷಣವೇ ಅವರ ಬಿಡುಗಡೆಗೆ ಆಜ್ಞಾಪಿಸುತ್ತಾನೆ ಮತ್ತು ಅವರಿಗೆ ತನ್ನ ಸ್ವಪ್ನವನ್ನು ಪೂರ್ಣವಾಗಿ ವಿವರಿಸುತ್ತಾನೆ. ಆತನು ವಿಪ್ರನಾರಾಯಣರಿಗೆ ಬಹು ಮರ್ಯಾದೆ ಮತ್ತು ಸಂಪತ್ತನ್ನು ಕೊಟ್ಟು ಗೌರವಿಸುತ್ತಾನೆ ಮತ್ತು ಅವರನ್ನು ಮನೆಗೆ ಕಳುಹಿಸಿಕೊಡುತ್ತಾನೆ. ಆನಂತರ ವಿಪ್ರನಾರಾಯಣರು ಎಂಪೆರುಮಾನನ ವೈಭವಗಳನ್ನು ಮತ್ತು ತನ್ನನ್ನು ಪುನೀತಗೊಳಿಸಲು ಅವನ ಪ್ರಯತ್ನಗಳನ್ನು ಅರಿತುಕೊಳ್ಳುತ್ತಾರೆ, ವಿಷಯ ಸುಖಗಳ ಮೋಹವನ್ನು ಬಿಡುತ್ತಾರೆ, ಮತ್ತು ಭಾಗವತರ ಶ್ರೀಪಾದತೀರ್ಥವನ್ನು ಸ್ವೀಕರಿಸುತ್ತಾರೆ (ಪಾಪಗಳಿಗೆ ಪ್ರಾಯಶ್ಚಿತ್ತವೆಂದು ಪರಿಗಣಿಸಲ್ಪಡುತ್ತದೆ).

ತದನಂತರ ಅವರು ತೊಂಡರಡಿಪ್ಪೊಡಿ ಅಳ್ವಾರ್ ಮತ್ತು ಭಕ್ತಾಂಘ್ರಿರೇಣು ಎಂದು ಜನಪ್ರಿಯರಾಗುತ್ತಾರೆ – ಅರ್ಥಾತ್ ಎಂಪೆರುಮಾನನ ಭಕ್ತರ ಪಾದಾರವಿಂದಗಳ ಧೂಳು. ಇದು ಇತರ ಆಳ್ವಾರರುಗಳಲ್ಲಿ ಕಾಣದ ಅವರ ಅನನ್ಯವಾದ ಶ್ರೇಷ್ಠತೆ – ಭಾಗವತ ಶೇಷತ್ವವನ್ನು ಪ್ರತಿಬಿಂಬಿಸುವ ಹೆಸರಿರುವುದು ಅವರೊಬ್ಬರಿಗೆ ಮಾತ್ರ. ತಿರುವಡಿ (ಹನುಮಾನ್), ಇಳಯ ಪೆರುಮಾಳ್ (ಲಕ್ಷ್ಮಣ) ಮತ್ತು ನಮ್ಮಾಳ್ವಾರ್(ಶಡಗೋಪನ್) ಅವರು ಎಂಪೆರುಮಾನನನ್ನು ಹೊರತು ಬೇರಾವುದೂ ಗಣ್ಯವಲ್ಲವೆಂದು ಹೇಗೆ ಹೇಳಿದರೋ ಹಾಗೆ ಆಳ್ವಾರರೂ ಸಹ ಹೇಳಿದರು “ಇಂದ್ರಲೋಕಂ ಆಳುಮ್ ಅಚ್ಚುವೈ ಪೆರಿನುಂ ವೇಣ್ಡೇನ್” ಅರ್ಥಾತ್ “ನಾನು ಪರಮಪದದ ಬಗ್ಗೆ ಕೂಡ ಯೋಚಿಸಲು ಇಚ್ಛಿಸುವುದಿಲ್ಲ, ಶ್ರೀರಂಗದಲ್ಲಿ ಪೆರಿಯ ಪೆರುಮಾಳರ ಅನುಭವವನ್ನು ಮಾತ್ರ ಬಯಸುತ್ತೇನೆ”. ಅವರು ತಮ್ಮನ್ನು ಸುಧಾರಿಸಿದುದಕ್ಕಾಗಿ ಪೆರಿಯ ಪೆರುಮಾಳ್ ಗೆ ನಿರಂತರವಾದ ಉಪಕಾರಸ್ಮೃತಿಯನ್ನು ತೋರ್ಪಡಿಸುತ್ತಾರೆ ಮತ್ತು ಸಂಪೂರ್ಣವಾಗಿ ಪೆರಿಯ ಪೆರುಮಾಳರೊಂದಿಗೆ ಸಂಬಂಧ ಬೆಳೆಸುತ್ತಾರೆ, ಅನೇಕ ದಿವ್ಯದೇಶಗಳಿಗೆ ಪ್ರಯಾಣಿಸಿ ಅನೇಕ ಅರ್ಚಾವತಾರ ಎಂಪೆರುಮಾನರ ಕುರಿತು ಹಾಡಿರುವ ಇತರ ಆಳ್ವಾರರುಗಳಂತಲ್ಲದೆ. ತನ್ನ ಬಗ್ಗೆ ಅವರ ಧೃಡವಾದ ವಿಶ್ವಾಸ ಮತ್ತು ನಂಟನ್ನು ಕಂಡು ಅದಕ್ಕೆ ಪ್ರತಿಯಾಗಿ ನಂಪೆರುಮಾಳರೂ ಸಹ ತಮ್ಮ ಪ್ರೇಮವನ್ನು ಅವರ ಕಡೆಗೆ ತೋರಿಸುತ್ತಾರೆ, ನಿಷ್ಕಳಂಕವಾದ ಜ್ಞಾನವನ್ನಿತ್ತು ಅವರಿಗೆ ಆಶೀರ್ವದಿಸುತ್ತಾರೆ ಮತ್ತು  ಪರತ್ವಾದಿ ಪಂಚಕದ
( http://ponnadi.blogspot.in/2012/10/archavathara-anubhavam-parathvadhi.html ಇಲ್ಲಿ ವಿವರಿಸಿರುವ ಎಂಪೆರುಮಾನರ ಐದು ಅಭಿವ್ಯಕ್ತಿಗಳು) ತಮ್ಮ ನಾಮಗಳು, ರೂಪಗಳು, ದಿವ್ಯ ಲೀಲೆಗಳು, ಇತ್ಯಾದಿಗಳನ್ನು ತಿರುವರಂಗದಲ್ಲೇ ತೋರಿಸುತ್ತಾರೆ. ಅಲ್ಲದೆ, ಅವರ ಭಕ್ತಿಯನ್ನು ಕಂಡು, ದೇವದೇವಿಯೂ ಸಹ ಪುನೀತಳಾಗುತ್ತಾಳೆ ಮತ್ತು ತನ್ನ ಎಲ್ಲ ಸಂಪತ್ತನ್ನೂ ಪೆರಿಯ ಪೆರುಮಾಳ್ ಗೆ ಅರ್ಪಿಸುತ್ತಾಳೆ ಮತ್ತು ಎಂಪೆರುಮಾನನಿಗೆ ನಿರಂತರ ಸೇವೆ ಮಾಡುತ್ತಾಳೆ.

ಆಳ್ವಾರರು ಸಂಪೂರ್ಣವಾಗಿ ಪರ ಭಕ್ತಿ, ಪರ ಜ್ಞಾನ ಮತ್ತು ಪರಮ ಭಕ್ತಿಯಲ್ಲಿ ಸ್ಥಾಪಿತರಾಗಿದ್ದರಿಂದ, ಮತ್ತು ಪೆರಿಯ ಪೆರುಮಾಳರೇ ತಮಗೆ ಸರ್ವಸ್ವವೆಂದು ಪೂರ್ಣವಾಗಿ ಅರಿತಿದ್ದರಿಂದ, ತಿರುಮಂತ್ರ ಅನುಸಂಧಾನ ಮತ್ತು ನಾಮ ಸಂಕೀರ್ತನದ ಮೂಲಕೆ ಪೆರಿಯ ಪೆರುಮಾಳರನ್ನು ನಿರಂತರವಾಗಿ ಅನುಭವಿಸುತ್ತಾರೆ. ತಮ್ಮ ದಿವ್ಯ ಸ್ಥಾನವನ್ನು ಅರಿತು, ಶ್ರೀವೈಷ್ಣವರು ಯಮನಿಗೆ ಭಯಪಡಬೇಕಾಗಿಲ್ಲವೆಂದು ಅವರು ಸಾರುತ್ತಾರೆ. ಅವರು ಹೇಳುವುದೇನೆಂದರೆ ಯಮದೂತರು ಶ್ರೀವೈಷ್ಣವರ ಪಾದಗಳನ್ನು ಹರಸುತ್ತಾರೆ ಮತ್ತು ಶ್ರೀವೈಷ್ಣವರು ಇತರ ಶ್ರೀವೈಷ್ಣವರ ಪಾದಗಳನ್ನು ಪೂಜಿಸುವುದಕ್ಕಾಗಿ ಹರಸುತ್ತಾರೆ. ಹೀಗೆ ಪೆರಿಯ ಪೆರುಮಾಳರ ಮುಂದೆ ತಿರುಮಾಲೈಯನ್ನು ಹಾಡುತ್ತಾರೆ, ಹೇಗೆ ಶೌನಕ ಋಷಿಗಳು ಎಂಪೆರುಮಾನನ ದಿವ್ಯ ನಾಮಗಳ ವೈಭವಗಳನ್ನು ಸದಾನಂದರಿಗೆ ವಿವರಿಸಿದರೋ ಹಾಗೆ. ನಮ್ಮಾಳ್ವಾರರು ಅಚಿತ್ ನ(24 ಅಂಶಗಳು: ಮೂಲ ಪ್ರಕೃತಿ, ಮಹಾನ್, ಅಹಂಕಾರ, ಮನಸ್, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ತನ್ಮಾತ್ರೆಗಳು, ಪಂಚ ಭೂತಗಳು) ದೋಷಗಳನ್ನು ಗುರುತಿಸಿದರೋ ಹಾಗೆ ಆಳ್ವಾರರೂ ಸಹ ಅಚಿತ್ ತತ್ತ್ವವನ್ನು ಹೀಗೆ ಗುರುತಿಸುತ್ತಾರೆ “ಪುರಂ ಚುವರ್ ಓಟ್ಟೈ ಮಾಡಮ್”, ಅರ್ಥಾತ್ “ಶರೀರವು ಹೊರಗಿನ ಗೋಡೆ ಮತ್ತು ಆತ್ಮಾ ಅದರೊಳಗಿನೆ ವಾಸಿ ಮತ್ತು ನಿಯಂತ್ರಕ”. ಅವರು ನಂತರ ಜೀವಾತ್ಮನ ಸ್ವರೂಪವು ಎಂಪೆರುಮಾನನ ಭಕ್ತರ ಸೇವಕನೆಂದು ಸಾರುತ್ತಾರೆ “ಅಡಿಯೋರ್ಕ್ಕು”ವಿನಲ್ಲಿ, ಅರ್ಥಾತ್ ಜೀವಾತ್ಮನು ಭಾಗವತರ ಸೇವಕ. ಅವರು ಒಬ್ಬ ತಿರುಮಂತ್ರನಿಷ್ಠರಾಗಿದ್ದರಿಂದ, ತಿರುಮಾಲೈ ಪ್ರಬಂಧದ ಸಾರವಾದ “ಮೇಂಪೊರುಳ್” ಪಾಶುರದಲ್ಲಿ ಎಂಪೆರುಮಾನನು ಮಾತ್ರವೇ ಉಪಾಯವೆಂದು ಪ್ರಕಟಪಡಿಸುತ್ತಾರೆ. ಕಡೆಯದಾಗಿ ಅವರು “ಮೇಂಪೊರುಳ್” ಪಾಶುರದ ನಂತರದ ಪಾಶುರಗಳಲ್ಲಿ ಶ್ರೀವೈಷ್ಣವರ ಅಂತಿಮ ಗುರಿ ಭಾಗವತರ ಸೇವೆ ಮಾಡುವುದೆಂದು ಘೋಷಿಸುತ್ತಾರೆ ಮತ್ತು ತಿರುಪ್ಪಳ್ಳಿಯೆಳುಚ್ಚಿಯ ಕಡೆಯ ಪಾಶುರದಲ್ಲಿ “ಉನ್ನಡಿಯಾರ್ಕ್ಕಾಟ್ಪಡುತ್ತಾಯ್” ಅರ್ಥಾತ್ ನನ್ನನ್ನು ನಿನ್ನ ಭಕ್ತರಿಗೆ ಅಧೀನನನ್ನಾಗಿ ಮಾಡು ಎಂದು ಎಂಪೆರುಮಾನನನ್ನು ಕೇಳಿಕೊಳ್ಳುತ್ತಾರೆ. ಹೀಗೆ ಅವರು ಇಡೀ ಜಗತ್ತಿನ ಉದ್ಧಾರಕ್ಕಾಗಿ ತಮ್ಮ ಎರಡು ದಿವ್ಯ ಪ್ರಬಂಧಗಳಾದ ತಿರುಮಾಲೈ ಮತ್ತು ತಿರುಪ್ಪಳ್ಳಿಯೆಳುಚ್ಚಿಯಲ್ಲಿ ಈ ಉನ್ನತ ತತ್ತ್ವಗಳನ್ನು ತೋರಿಸಿದರು.

ಅವರ ತನಿಯನ್:

ತಮೇವ ಮತ್ವಾ ಪರವಾಸುದೇವಮ್ ರಂಗೇಶಯಮ್ ರಾಜವದರ್ಹಣೀಯಮ್ ।
ಪ್ರಾಬೋಧಿಕೀಮ್ ಯೋಕೃತ ಸೂಕ್ತಿಮಾಲಾಮ್ ಭಕ್ತಾಂಗ್ರಿರೇಣುಮ್ ಭಗವನ್ತಮೀಡೇ ।।

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ವಿವರಿಸಲಾಗಿದೆ:
http://ponnadi.blogspot.in/2012/10/archavathara-anubhavam-thondaradippodi.html.

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ : http://acharyas.koyil.org/index.php/2013/01/08/thondaradippodi-azhwar-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

1 thought on “ತೊಂಡರಡಿಪ್ಪೊಡಿ ಆಳ್ವಾರ್”

Comments are closed.