ತಿರುಮಳಿಶೈ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

thirumazhisaiazhwarತಿರು ನಕ್ಷತ್ರ೦: ತೈ, ಮಖ೦

ಅವತಾರ ಸ್ಥಳ೦: ತಿರುಮಳಿಶೈ

ಆಚಾರ್ಯರು:  ವಿಶ್ವಕ್ಸೇನರ್, ಪೇಯಾಳ್ವಾರ್

ಶಿಷ್ಯರು: ಕಣಿಕಣ್ಣನ್, ಧೃಡವ್ರತ

ಕೃತಿಗಳು: ನಾನ್ ಮುಗನ್ ತಿರುವ೦ದಾದಿ, ತಿರುಚ್ಛಂದ ವಿರುತ್ತಂ

ಪರಮಪದವನ್ನು ಅಲಂಕರಿಸಿದ ಸ್ಥಳ: ತಿರುಕ್ಕುಡಂದೈ

ಮಾಮುನಿಗಳು ಆಳ್ವಾರರು ಶಾಸ್ತ್ರಗಳ ಬಗ್ಗೆ ಅತ್ಯಂತ ಪರಿಶುದ್ಧ ಙ್ಞಾನಹೊಂದಿದ್ದರು ಎಂದು. ಮಣವಾಳ ಮಾಮುನಿಗಳು ಹೇಳುವುದು ಏನೆಂದರೆ – ಶ್ರೀಮನ್ನಾರಾಯಣನೊಬ್ಬನೇ ಪೂಜಿಸಲು ಅರ್ಹನು ಮತ್ತು ನಾವು ಅನ್ಯ ದೇವತೆಗಳ (ಇತರೆ ದೇವರ) ಬಳಿ ಕಿಂಚಿತ್ ಸಂಪರ್ಕವನ್ನೂ ಹೊಂದಿರಬಾರದು. ಮಾಮುನಿಗಳು ಅಳ್ವಾರರಿಗೆ ಶುದ್ಧ ಮನಸು ಎಂಬ ಅರ್ಥ ಇರುವ “ತುಯ್ಯ ಮದಿ” ಎಂಬ ಪದ ಉಪಯೋಗಿಸುತ್ತಾರೆ. ಪಿಳ್ಳೈ ಲೋಕಂ ಜೀಯರ್ ಅವರ ವಿವರಣೆಯಂತೆ, ಆಳ್ವಾರರ ಶುದ್ಧತೆ ಎಂಬುವುದು ಶ್ರೀಮನ್ನಾರಾಯಣನನ್ನು ಹೊರತುಪಡಿಸಿ ಇತರ ದೈವಗಳ ಬಗ್ಗೆ ಕಿಂಚಿತ್ತೂ ಪರತ್ವ (ಪ್ರಾಬಲ್ಯ) ಇಟ್ಟುಕೊಳ್ಳದೆ  ಇರುವುದು ಮತ್ತು ನಮ್ಮಗಳ ಮನಸ್ಸಿನಿಂದ ಅಂತಹ ಶಂಕೆಗಳನ್ನೂ ತೆಗೆದುಹಾಕುವುದು. ಬಹಳಷ್ಟು ಪಾಶುರಗಳಲ್ಲಿ, ಶ್ರೀವೈಷ್ಣವರು ಇತರ ದೇವತೆಗಳ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುವುದನ್ನು ಆಳ್ವಾರರು ಗುರುತಿಸಿದ್ದಾರೆ.
ಉದಾಹರಣೆಗೆ:

  • ನನ್ಮುಗನ್ ತಿರುವಂದಾದಿ – 53 – ತಿರುವಿಲ್ಲಾದ ತೇವರೈ ತೇರೇಲ್ ಮಿನ್ ತೇವು – ಶ್ರೀ ಮಹಾಲಕ್ಷ್ಮಿಯೊಡನೆ ಸಂಬಂಧವಿರದ ಯಾರನ್ನೂ ನಾವು ಪೂಜಿಸಬಾರದು
  • ನನ್ಮುಗನ್ ತಿರುವಂದಾದಿ – 68 – ತಿರುವಡಿ ತನ್ ನಾಮಂ ಮರಂದುಂ ಪುರಂದೊಳಾ ಮಾಂದರ್ – ಸರ್ವೇಶ್ವರನಾದ ಶ್ರೀಮನ್ನಾರಾಯಣನನ್ನು ಮರೆತರೂ ಸಹ ಶ್ರೀವೈಷ್ಣವರು ಇತರ ದೇವತೆಗಳನ್ನು ಪೂಜಿಸುವುದಿಲ್ಲ

ಪೆರಿಯವಾಚ್ಚಾನ್ ಪಿಳ್ಳೈ ಮತ್ತು ನಂಬಿಳ್ಳೈ ಇವರಿಬ್ಬರೂ ತಮ್ಮ ನಾನ್ಮುಗನ್ ತಿರುವಂದಾದಿಯ ವ್ಯಾಖ್ಯಾನದ ಮುನ್ನುಡಿಯಲ್ಲಿ ಬಹಳ ಸುಂದರವಾಗಿ ವರ್ಣಿಸುವುದೇನೆಂದರೆ ಎಲ್ಲರ ಮನಸ್ಸಿನಲ್ಲಿ ಕಿಂಚಿತ್ತೂ ಅನುಮಾನವಿಲ್ಲದಂತೆ ಎಂಬೆರುಮಾನ್‌ರ ಪರತ್ವ ಹಾಗು ಇತರ ದೇವತೆಗಳ ಮಿತಿಗಳ ಬಗ್ಗೆ ತಿರುಮಳಿಶೈ ಆಳ್ವಾರರು ವಿವರಿಸಿದ್ದಾರೆ ಎಂದು.

ಪೆರಿಯವಾಚ್ಚಾನ್ ಪಿಳ್ಳೈರ ವಿವರಣೆ:

ಎಂಬೆರುಮಾನ್ ಒಬ್ಬನೇ ಪರಮ ಪುರುಷನೆಂದು ಗ್ರಹಿಸಿ ಆನಂದಿಸಬೇಕೆಂದು ಮುದಲಾಳ್ವಾರರು ಪ್ರತಿಪಾದಿಸಿದ್ದಾರೆ. ಆ ಪ್ರಕ್ರಿಯೆಯಲ್ಲಿ ಇರುವಂತಹ ಕಳೆಗಳನ್ನು ತಿರುಮಳಿಶೈ ಆಳ್ವಾರರು ತೆಗೆದುಹಾಕಿದ್ದಾರೆ. ಯಾವ ಸಂಸಾರಿಗಳು ಪರ ದೇವತೆಗಳನ್ನು ಈಶ್ವರ ( ನಿಯಂತ್ರಕ) ಎಂದು ಪರಿಗಣಿಸಿದ್ದಾರೊ, ಅಂತಹ ದೇವತೆಗಳೂ ಸಹ ಕ್ಷೇತ್ರಜ್ಞ (ಜೀವಾತ್ಮ – ಆತ್ಮ ಹೊಂದಿರುವ ದೇಹ) ಮತ್ತು ಅವರೂ ಸಹ ನಿಯಂತ್ರಣಕ್ಕೆ ಒಳಪಟ್ಟವರು ಎಂದು ತಿರುಮಳಿಶೈ ಆಳ್ವಾರರು ವಿವರಿಸಿದ್ದಾರೆ.

ನಂಬಿಳ್ಳೈರ ವಿವರಣೆ:

ಮುದಲಾಳ್ವಾರರು ಸರ್ವೇಶ್ವರನನ್ನು ಅರಿತುಕೊಂಡದ್ದು ಪ್ರಾಪಂಚಿಕ ದೃಷ್ಟಿ, ಶಾಸ್ತ್ರಗಳ ದೃಷ್ಟಿ, ಅವರ ಭಕ್ತಿ ಹಾಗು ಎಂಬೆರುಮಾನ್‍ರ ನಿರ್ಹೇತುಕ ಕೃಪೆಯಿಂದಾಗಿ. ಇದೇ ರೀತಿ ತಿರುಮಳಿಶೈ ಆಳ್ವಾರರು ಸಹ ಎಂಬೆರುಮಾನ್‍ನನ್ನು ಅರ್ಥೈಸಿಕೊಂಡು ಆನಂದಿಸಿದ್ದಾರೆ. ಆದರೆ ಪ್ರಪಂಚದ ಸುತ್ತಲೂ ನೋಡುತ್ತಾ, ಅವರು ದುಃಖಿಸುವುದು, ಬಹಳಷ್ಟು ಜನರು ಶ್ರೀಮನ್ನಾರಾಯಣನೇ ನಿಯಂತ್ರಕ ಹಾಗು ಶಾಸ್ತ್ರಗಳಲ್ಲಿ ವಿವರಿಸಿರುವಂತೆ ಇತರ ಎಲ್ಲವೂ ಆತನ ನಿಯಂತ್ರಣದಲ್ಲಿಯೆಂದು, ಅವರು ವೇದಗಳ ರಹಸ್ಯಗಳನ್ನು ತಮ್ಮ ಅತ್ಯಂತ ಕೃಪೆಯಿಂದ ಬಹರಂಗಪಡಿಸಿದ್ದಾರೆ. ಅವರು ಹೇಳುತ್ತಾರೆ, “ಬ್ರಹ್ಮನೇ (ಮೊದಲ ಮೂಲಜನಕ) ಒಬ್ಬ ಜೀವಾತ್ಮ ಹಾಗು ಶ್ರೀಮನ್ನಾರಯಣನಿಂದ ಸೃಷ್ಟಿಯ ಸಮಯದಲ್ಲಿ ನೇಮಕಗೊಂಡಿದ್ದು, ಹಾಗು ವೇದಗಳಲ್ಲಿ ವಿವರಿಸಿರುವಂತೆ ಶ್ರೀಮನ್ನಾರಾಯಣನೇ ಸಕಲ ಚರಾಚರ ವಸ್ತುಗಳಿಗೂ ಅಂತರ್ಯಾಮಿಯಾಗಿರುವುದರಿಂದ ಶ್ರೀಮನ್ನಾರಾಯಣನೊಬ್ಬನೇ ಸರ್ವೋಚ್ಚ ಪರಮಪುರುಷ. ಈ ತತ್ವವನ್ನು ಮರೆಯದೇ ಸ್ಪಷ್ಟವಾಗಿ ಹಿಡಿದಿಟ್ಟುಕೊಳ್ಳಿ “

ಈ ರೀತಿ ಮಾಮುನಿಗಳು, ಪೆರಿಯವಾಚ್ಚಾನ್ ಪಿಳ್ಳೈ ಮತ್ತು ನಂಬಿಳ್ಳೈ ಅವರುಗಳು ತಿರುಮಳಿಶೈ ಆಳ್ವಾರ್‍ರ ವಿಶೇಷತೆಗಳನ್ನು ತಮ್ಮ ಸುಂದರವಾದ ಕೃತಿಗಳಲ್ಲಿ ವರ್ಣಿಸಿದ್ದಾರೆ.

ಇವುಗಳಲ್ಲದೆ, ತಿರುಚ್ಚಂದವಿರುತ್ತಂನ ತನಿಯನ್‍ನಲ್ಲಿರುವ ಒಂದು ಸುಂದರ ವರ್ಣನೆ ಏನೆಂದರೆ, ಒಂದು ಸಲ ಮಹಾನ್ ಋಷಿಗಳು ತಪಸ್ಸು ಮಾಡಲು ಒಂದು ಒಳ್ಳೆಯ ಏಕಾಂತ ಪ್ರದೇಶವನ್ನು ಆಯ್ಕೆ ಮಾಡಲು ತಿರುಮಳಿಶೈ (ಆಳ್ವಾರರ ಅವತಾರ ಸ್ಥಳ) ಹಾಗು ಇಡೀ ಪ್ರಪಂಚವನ್ನು ಹೋಲಿಕೆ ಮಾಡಿದಾಗ ತಿರುಮಳಶೈಯೇ  ಮಹಾನ್ ಎಂದು ನಿರ್ಧರಿಸಿದರು. ಆಳ್ವಾರ್/ಆಚಾರ್ಯರ ಅವತಾರ ಸ್ಥಳಗಳ ಮಹಿಮೆ ಎಷ್ಟೆಂದರೆ, ಈ ಸ್ಥಳಗಳನ್ನು ದಿವ್ಯದೇಶಗಳಿಗಿಂತಲೂ ಹೆಚ್ಚಾಗಿ ವೈಭವೀಕರಿಸಬೇಕು, ಏಕೆಂದರೆ ಎಂಬೆರುಮಾನ್ ಯಾರು ಎಂದು ನಮಗೆ ತೋರಿಸಿಕೊಟ್ಟವರು ಈ  ಆಳ್ವಾರ್/ಆಚಾರ್ಯರು ಮತ್ತು ಅವರುಗಳು ಇಲ್ಲದೆ ಇದ್ದಿದ್ದರೆ ನಾವುಗಳು ಎಂಬೆರುಮಾನ್‍ರ ಅನುಭವಗಳನ್ನು ಹೊಂದಲಾಗುತ್ತಿರಲಿಲ್ಲ.

ಇವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಈಗ ನಾವು ಆಳ್ವಾರರ ಚರಿತ್ರೆಯನ್ನು ನೋಡೋಣ.

ಆಳ್ವಾರರು ಕೃಷ್ಣನ ತರಹ – ಕಣ್ಣನ್ ಎಂಬೆರುಮಾನ್ ಹುಟ್ಟಿದ್ದು ವಸುದೇವ/ದೇವಕಿಗೆ ಹಾಗು ಬೆಳಸಲ್ಪಟ್ಟದ್ದು ನಂದಗೋಪ/ಯಶೋದೆಯಿಂದ. ಇದೇ ರೀತಿ, ಆಳ್ವಾರರು ಹುಟ್ಟಿದ್ದು ಭಾರ್ಗವ ಋಷಿ/ಕನಕಾಂಗಿಗೆ ಮತ್ತು ಬೆಳಸಲ್ಪಟ್ಟದ್ದು ತಿರುವಾಳನ್/ಪಂಗಯಚೆಲ್ವಿ (ಒಬ್ಬ ಮರ ಕಡಿಯುವವ ಹಾಗು ಆತನ ಪತ್ನಿ) ಯಿಂದ. ಅವರು ಶ್ರೀ ಭಕ್ತಿಸಾರರ್, ಮಹಿಷಪುರಾಧೀಶರ್, ಭಾರ್ಗವಾತ್ಮಜರ್, ತಿರುಮಳಿಶೈಯಾರ್ ಎಂದೂ ಹಾಗು ಬಹಳ ಮುಖ್ಯವಾಗಿ ತಿರುಮಳಿಶೈಪ್ಪಿರಾನ್ ಎಂದು ಕರೆಯಲ್ಪಡುತ್ತಾರೆ. ಪಿರಾನ್ ಎಂದರೆ ದೊಡ್ಡ ಅನುಗ್ರಹ ಮಾಡಿದವರು ಎಂದು ಹಾಗು ಆಳ್ವಾರ್‍ರವರು ನಾರಾಯಣನ ಪರತ್ವವನ್ನು ಸ್ಥಾಪಿಸಿ ನಮಗೆ ಬಹಳ ದೊಡ್ಡ ಅನುಗ್ರಹವನ್ನೇ ಮಾಡಿದ್ದಾರೆ.

ಒಂದು ಸಲ ಮಹಾ ಋಷಿಗಳಾದ ಅತ್ರಿ, ಭೃಗು, ವಸಿಷ್ಟ, ಭಾರ್ಗವ, ಆಂಗೀರಸ ಮತ್ತಿತ್ತರರು ಬ್ರಹ್ಮ (ಚತುರ್ಮುಖ) ನಲ್ಲಿ ಹೋಗಿ “ನಾವು ಭೂಲೋಕದಲ್ಲಿನ ಉತ್ಕೃಷ್ಟ ಪ್ರದೇಶದಲ್ಲಿ ವಾಸ ಮಾಡಲು ಬಯಸತ್ತೇವೆ. ಅಂತಹ ಉತ್ತಮವಾದ ಸ್ಥಳವನ್ನು ವಾಸ್ತವಿಕವಾಗಿ ಸ್ಥಾಪಿಸಿ ಕೊಡಬೇಕು” ಎಂದು ಕೇಳಿಕೊಂಡರು. ವಿಶ್ವಕರ್ಮನ ಸಹಾಯದೊಂದಿಗೆ ಬ್ರಹ್ಮ ಇಡೀ ವಿಶ್ವವನ್ನು ಒಂದುಕಡೆಯಲ್ಲಿ ಹಾಗು ತಿರುಮಳಿಶೈಯನ್ನು ಮತ್ತೊಂದು ಕಡೆಯಲ್ಲಿ ತೂಗಿ ಅಳೆದು, ಸ್ಪರ್ಧೆಯಲ್ಲಿ ತಿರುಮಳಿಶೈ ಗೆದ್ದಿತ್ತು. ಇದು ಮಹೀಸಾರ ಕ್ಷೇತ್ರ ಎಂದೂ ಕರೆಯಲ್ಪಡುತ್ತದೆ. ಆದುದರಿಂದ, ಮಹಾನ್ ಋಷಿಗಳು ಕೆಲ ಕಾಲ ಅ ಸ್ಥಳಕ್ಕೆ ಹೋಗಿ ತಂಗಿದ್ದರು.

ಆ ಸಮಯದಲ್ಲಿ, ಭಾರ್ಗವ ಮಹರ್ಷಿಯು ಶ್ರೀಮನ್ನಾರಾಯಣನಿಗೋಸ್ಕರ ಧೀರ್ಘ ಸತ್ರ ಯಾಗ ಎಂಬ ಯಜ್ಞವನ್ನು ನಡೆಸುತ್ತಿದ್ದಾಗ, ಅವರ ಪತ್ನಿ ಗರ್ಭವತಿಯಾಗಿ  12 ತಿಂಗಳುಗಳ ನಂತರ ಒಂದು ಪಿಂಡಕ್ಕೆ (ಮಾಂಸದ ಮುದ್ದೆ – ಭ್ರೂಣದ ಮೊದಲಿನ ಭಾಗ) ಜನ್ಮವಿತ್ತಳು ಹಾಗು ಅದೇ ತಿರುಮಳಿಶೈ ಆಳ್ವಾರ್. ಅವರು ಸುದರ್ಶನ ಅಂಶಸ್ಥ (ಆಳ್ವಾರ ವೈಭವಗಳನ್ನು ಗಮನಿಸಿದರೆ, ಇವರು ನಿತ್ಯಸೂರಿಗಳ ಅಂಶ ಎಂದು ಕೆಲ ಆಚಾರ್ಯರು ಅಭಿಪ್ರಾಯ ಹೊಂದಿದ್ದರೂ ಸಹ, ನಮ್ಮ ಪೂರ್ವಾಚಾರ್ಯರು ಸ್ಪಷ್ಟವಾಗಿ ವಿವರಿಸಿರುವಂತೆ ಆಳ್ವಾರರು ಬಹಳ ಹಿಂದಿನಿಂದಲೂ ಈ ಸಂಸಾರದಲ್ಲಿ ಇದ್ದು, ಹಠಾತ್ತನೆ ಎಂಬೆರುಮಾನಿನ ಕೃಪೆಗೆ ಪಾತ್ರರಾದವರು). ಭಾರ್ಗವ ಮಹರ್ಷಿ ಹಾಗು ಅವರ ಪತ್ನಿ, ಆಕಾರ ತಳೆಯದ ಮಗುವಿಗೆ ಆಶ್ರಯಕೊಡಲು ಇಚ್ಚಿಸದೆ, ಒಂದು ಪೊದೆಯ ಕೆಳಗೆ ಬಿಟ್ಟುಬಿಟ್ಟರು.  ಶ್ರೀದೇವಿ ನಾಚ್ಚಿಯಾರಿನ ಸಂಕಲ್ಪದೊಂದಿಗೆ ಭೂದೇವಿ ನಾಚ್ಚಿಯಾರ್ ಆ ಪಿಂಡವನ್ನು ಸಂರಕ್ಷಿಸಿ, ತನ್ನ ಸ್ಪರ್ಶ ಮಾತ್ರದಿಂದ ಆ ಪಿಂಡವನ್ನು ಒಂದು ಸುಂದರ ಮಗುವನ್ನಾಗಿಸಿದಳು.  ಒಡನೆಯೇ ಆ ಮಗು ಹಸಿವಿನಿಂದ ಅಳಲಾರಂಭಿಸಿದಾಗ, ಜಗನ್ನಾಥ (ತಿರುಮಳಿಶೈಯ) ಎಂಬೆರುಮಾನ್, ಆಳ್ವಾರರ ಮುಂದೆ ಪ್ರತ್ಯಕ್ಷನಾಗಿ ತಿರುಕ್ಕುಡಂದೈ ಆರಾವಮುದನ್‍ರ ದಿವ್ಯ ಮಂಗಳ ರೂಪವನ್ನು ತೋರಿಸಿ, ಆಳ್ವಾರರಿಗೆ ಸಂಪೂರ್ಣ ಜ್ಞಾನವನ್ನು ದಯಪಾಲಿಸಿದ. ಎಂಬೆರುಮಾನ್ ಮರೆಯಾದ ತಕ್ಷಣ, ಆಳ್ವಾರರು ಭಗವಂತನ ವಿಯೋಗದಿಂದ ಅಳ ತೊಡಗಿದರು.

ಆ ಸಮಯದಲ್ಲಿ, ಅಲ್ಲಿ ಹಾದುಹೊಗುತ್ತಿದ್ದ ತಿರುವಾಳನ್ ಎಂಬ ಒಬ್ಬ ಮರ ಕಡಿಯುವವ, ಅಳುತ್ತಿರುವ ಎಳೆಯ ಮಗುವನ್ನು ಬಹಳ ಸಂತೋಷದಿಂದ ತೆಗೆದುಕೊಂಡು, ತನ್ನ ಪತ್ನಿಯ ಬಳಿ ತರುತ್ತಾರೆ. ಮಕ್ಕಳಿಲ್ಲದ ಆಕೆ, ಸಂತೋಷದಿಂದ ಮಗುವನ್ನು ಸ್ವೀಕರಿಸಿ ಬೆಳೆಸುತ್ತಾಳೆ. ತಾಯಿಯ ಮಮತೆಯಿಂದ ಆಕೆ ತನ್ನ ಮೊಲೆಹಾಲು ಉಣಿಸಲು ಪ್ರಯತ್ನಿಸಿದರೂ ಸಹ,   ಆಳ್ವಾರರು ಭಗವತ್ ಕಲ್ಯಾಣಾನುಭವದಲ್ಲಿ ತಲ್ಲೀನರಾಗಿದ್ದುದರಿಂದ, ತಿನ್ನುವುದಾಗಲಿ, ಮಾತನಾಡುವುದಾಗಲಿ, ಅಳುವುದಾಗಲಿ, ಇನ್ನಿತರ ಯಾವುದರಲ್ಲಿಯೂ ಆಸಕ್ತಿ ತೋರದೆ, ಭಗವಂತನ ಕೃಪೆಯಿಂದ ಸುಂದರವಾಗಿ ಬೆಳೆಯುತ್ತಾರೆ.

ಈ ಅದ್ಭುತ ವಾರ್ತೆಯನ್ನು ಕೇಳಿದ್ದ ಚತುರ್ಥ ವರ್ಣದಲ್ಲಿ ಹುಟ್ಟಿದ್ದ ಓರ್ವ ವೃದ್ದ ತನ್ನ ಪತ್ನಿಯೊಡನೆ ಒಂದು ದಿನ ಬೆಳಗಿನ ಜಾವದಲ್ಲೇ ಬಂದು, ಭವ್ಯ ತೇಜಸ್ಸಿನಿಂದ ಬೆಳಗುವ ಮಗುವನ್ನು ನೋಡಿ, ತಾವು ತಯಾರಿಸಿದ್ದ ಒಳ್ಳೆಯ ಬೆಚ್ಚಗಿನ ಹಾಲನ್ನು ಅರ್ಪಿಸಿ ಸ್ವೀಕರಿಸಲು ಬೇಡಿಕೊಳ್ಳುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಆಳ್ವಾರರು, ಹಾಲನ್ನು ಸ್ವೀಕರಿಸಿ, ಸ್ವಲ್ಪ ಕುಡಿದು, ಶೇಷವನ್ನು (ಉಳಿದಿದ್ದನ್ನು) ಆ ವೃದ್ದ ದಂಪತಿಗಳಿಗೇ ನೀಡುತ್ತಾರೆ. ಅವರುಗಳಿಗೆ ಆ ಹಾಲಿನ ಪ್ರಸಾದವನ್ನು ಸೇವಿಸುವಂತೆ ಮತ್ತು ಅದರಿಂದ ಅವರುಗಳಿಗೆ ಒಬ್ಬ ಸತ್ಪುತ್ರ (ಒಳ್ಳೆಯ ಗಂಡು ಮಗು) ಪ್ರಾಪ್ತಿಯಾಗುವುದು ಎಂದು ಆಳ್ವಾರರು ತಿಳಿಸುತ್ತಾರೆ.  ಒಡನೆಯೇ ಆ ದಂಪತಿಗಳಿಗೆ ತಮ್ಮ ಪ್ರಾಯ ಮರುಕಳಿಸಿ, ಅ ಹೆಂಗಸು ಗರ್ಭ ಧರಿಸುತ್ತಾಳೆ. 10 ತಿಂಗಳುಗಳ ಬಳಿಕ ಆಕೆ ಶ್ರೀ ವಿದುರರಂತೆ (ಕಣ್ಣನಿಗೆ ಅತ್ಯಂತ ಹತ್ತಿರದ ಸಂಭಂದವಿದ್ದ) ಮಗುವಿಗೆ ಜನ್ಮವೀಯುತ್ತಾಳೆ. ಅವರು ಆ ಮಗುವಿಗೆ ಕನಿ ಕಣ್ಣನ್ ಎಂದು ನಾಮಕರಣ ಮಾಡಿ, ಆತನಿಗೆ ಎಂಬೆರುಮಾನ್‍ರ ಬಗೆ ಎಲ್ಲವನ್ನೂ ಹೇಳಿಕೊಡುತ್ತಾರೆ.

ಭಾರ್ಗವ ಋಷಿಯ ಪುತ್ರರಾದುದರಿಂದಲೂ ಹಾಗು ಜನ್ಮದ ಸಮಯದಲ್ಲಿ ಎಂಬೆರುಮಾನ್‍ರ ಕೃಪೆಗೆ ಪಾತ್ರರಾದುದರಿಂದಲೂ ಆಳ್ವಾರರಿಗೆ 7 ವರ್ಷಗಳು ತುಂಬಿದ ನಂತರ ಅವರಿಗೆ ಅಷ್ಟಾಂಗ ಯೋಗ ಮಾಡುವ ಬಯಕೆ ಹುಟ್ಟಿತು. ಅದು ಮಾಡುವುದಕ್ಕೆ ಮೊದಲು ಪರಬ್ರಹ್ಮದ ಅರ್ಥಪಡೆದುಕೊಳ್ಳಬೇಕು ಎಂದು ವಿವಿಧ ಮತಗಳ ಸಂಶೋಧನೆ ಮಾಡಲು (ಇತರ ಮತಗಳು ದೋಷಯುಕ್ತವಾದವು ಎಂದು ಸ್ಥಾಪಿಸಲು) ಬಾಹ್ಯ ಮತಗಳು (ಶಾಕ್ಯ, ಉಲೂಕ್ಯ, ಅಕ್ಷಪಾದತ್, ಕ್ಷಪಣ, ಕಪಿಲ, ಪತಾಂಜಲಿ) ಹಾಗು ಕುದೃಷ್ಟಿ ಮತಗಳ (ಶೈವ, ಮಾಯಾವಾದ, ನ್ಯಾಯ, ವೈಶೇಷಿಕ, ಭಟ್ಟ, ಪ್ರಭಾಕರ, ಇತರೆ) ಬಗ್ಗೆ ವಿಷ್ಲೇಶಿಸಿ, ಈ ಮತಗಳು ಅತ್ಯುಚ್ಚ ಸತ್ಯದ ಕಡೆಗೆ ಕರೆದೊಯ್ಯಲಾರದು ಎಂದು ಸ್ಪಷ್ಟವಾಗಿ ಸ್ಥಾಪಿಸಿದರು. ಕಡೆಗೆ, ಅವರು ಸನಾತನ ಧರ್ಮವಾದ ಶ್ರೀವೈಷ್ಣವ ಸಿದ್ದಾಂತದಲ್ಲಿ ದೃಢವಾಗಿ ನೆಲಗೊಳ್ಳುತ್ತಾರೆ. ಅಷ್ಟರಲ್ಲಿ 700 ವರ್ಷಗಳು ಕಳೆದಿರುತ್ತದೆ.

ತದನಂತರ ಸರ್ವೇಶ್ವರನು ಆಳ್ವಾರರಿಗೆ ಕಳಂಕರಹಿತ ದೈವೀಕ ಜ್ಞಾನವನ್ನು ಕರುಣಿಸಿ, ಅವರಿಗೆ ಕೆಳಕಂಡದೆಲ್ಲವನ್ನು ತೋರಿಸುತ್ತಾರೆ:

  • ಆತನ ದಿವ್ಯ ಸ್ವರೂಪ
  • ಆತನ ಅತ್ಯಂತ ಮಂಗಳಕರ ಗುಣಗಳು
  • ಆತನ ದಿವ್ಯ ರೂಪಗಳು (ಸ್ವರೂಪ ಮತ್ತು ಗುಣಗಳನ್ನು ತೋರಿಸುವಂತಹ)
  • ಆ ದಿವ್ಯ ರೂಪಗಳ ಮೇಲೆ ಧರಿಸಿರುವಂತಹ ಆಭರಣಗಳು
  • ಅನುಕೂಲರು ಆಭರಣಗಳು ಎಂದೇ ಪರಿಗಣಿಸಲ್ಪಡುವ ಆತನ ದಿವ್ಯ ಆಯುಧಗಳು
  • ಆತನ ಮಹಿಷಿಗಳು (ಶ್ರೀದೇವಿ, ಭೂದೇವಿ, ನೀಳಾ ದೇವಿ, ಇತರರು) ಮತ್ತು ಆತನ ನಿರಂತರ ಅನಂದವನ್ನು ಅನುಭವಿಸುವ ನಿತ್ಯಸೂರಿಗಳು ಮೇಲ್ಕಂಡವುಗಳೊಂದಿಗೆ (ಸ್ವರೂಪ, ಗುಣ, ರೂಪ, ಆಭರಣ, ಆಯುಧ, ಮತ್ತಿತರ)
  • ಪರಮಪದ – ಅದರ ನಿತ್ಯ ಸುಂದರ ನಿವಾಸ ಹಾಗು ಕೊನೆಯದಾಗಿ
  • ಸಂಸಾರ – ಪ್ರಕೃತಿ, ಪುರುಷ, ಕಾಲ ತತ್ವಗಳನ್ನು ಒಳಗೊಂಡದ್ದು ಮತ್ತು ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಇತರ ದೇವತೆಗಳಿಂದ ಪರೋಕ್ಷವಾಗಿ ಹಾಗು ಎಂಬೆರುಮಾನ್ ತಾನೇ ಪ್ರತ್ಯಕ್ಷವಾಗಿ ನಡೆಸುವ  ನಿರಂತರ ಪ್ರಕ್ರಿಯೆಗಳು.

ತನ್ನ ಮಹಾನ್ ಗುಣಗಳಿಂದ ಎಂಬೆರುಮಾನ್ ಹೇಗೆ ಬ್ರಹ್ಮ (ತನ್ನ ಮೊದಲನೆಯ ಮಗ) ತನ್ನ ನಾಭಿ ಕಮಲದಿಂದ ಸೃಷ್ಟಿಸಲ್ಪಟ್ಟ ಎಂದು ಆಳ್ವಾರರಿಗೆ ತೋರಿಸಿದ –  ಶ್ವೇತಾಶ್ವತರ ಉಪನಿಷತ್ತಿನ “ಯೋ ಬ್ರಹ್ಮಾಣಾಂ ವಿದಧಾತಿ ಪೂರ್ವಂ” ನಂತೆ ಬ್ರಹ್ಮನನ್ನು ಸೃಷ್ಟಿಸುವುದು ಪರಬ್ರಹ್ಮ ಮತ್ತು ಛಾಂದೋಗ್ಯ ಬ್ರಾಹ್ಮಣದ “ಬ್ರಹ್ಮಣಃ ಪುತ್ರಾಯ ಜ್ಯೇಷ್ಠಾಯ ಶ್ರೇಷ್ಠಾಯ” – ರುದ್ರನು ಬ್ರಹ್ಮನ ಮೊದಲನೆ ಪುತ್ರ. ಇದನ್ನು ಗಮನಿಸಿದ ತಕ್ಷಣ ಆಳ್ವಾರರು ತಮ್ಮ ನಾನ್ಮುಗನ್ ತಿರುವಂದಾದಿಯಲ್ಲಿ “ನಾನ್ಮುಗನೈ ನಾರಾಯಣನ್ ಪಡೈತ್ತಾನ್ ನಾನ್ಮುಗನುಂ ತಾನ್ ಮುಗಮಾಯ್ ಶಂಕರನೈ ತಾನ್ ಪಡೈತ್ತಾನ್” ಎಂಬ ಘೋಷಣೆಯಂತೆ ನಾರಾಯಣನು ಬ್ರಹ್ಮನನ್ನು ಸೃಷ್ಟಿಸಿದ ಹಾಗು ಪ್ರತಿಯಾಗಿ ಬ್ರಹ್ಮ ರುದ್ರನನ್ನು ಎನ್ನುತ್ತಾ ಸಂಸಾರಿಗಳ ಮನಸ್ಸಿನಲ್ಲಿ ಎಂಬೆರುಮಾನ್‍ನ ಪರತ್ವದ ಬಗ್ಗೆ ಇರುವ ಯಾವುದೇ ಅನುಮಾನಗಳನ್ನು ತೆಗೆದುಹಾಕುತ್ತಾರೆ.  ತಾವೇ ಘೋಷಿಸುವಂತೆ ಆಳ್ವಾರರು ವಿವಿಧ ಮತಗಳನ್ನು ಕಲಿತುಕೊಂಡ ನಂತರ ಕೊನೆಯಲ್ಲಿ ಎಂಬೆರುಮಾನ್ ಕೃಪೆಯಿಂದಾಗಿ ತಾವು ಎಂಬೆರುಮಾನ್‍ನ ಪಾದಪದ್ಮಗಳನ್ನು ಆಶ್ರಯಿಸಿದೆ ಎಂದು ಹೇಳುತ್ತಾರೆ. ತದನಂತರ ಅವರು  ಕೈರವಣಿ ಪುಷ್ಕರಣಿಯ ತಟಾಕದಲ್ಲಿರುವ ತಿರುವಲ್ಲಿಕೇಣಿ (ಬೃಂದಾರಣ್ಯ ಕ್ಷೇತ್ರ) ದಲ್ಲಿರವ ಶ್ರೀಯಃಪತಿಯ (ಮಹಾಲಕ್ಷ್ಮಿಯ ಪತಿ) ಕಲ್ಯಾಣ ಗುಣಗಳ ನಿರಂತರ ಧ್ಯಾನದಲ್ಲಿ ನಿರತರಾಗಿದ್ದರು.

ಒಂದು ದಿನ ರುದ್ರನು ತನ್ನ ಪತ್ನಿಯೊಡನೆ ಆಕಾಶಮಾರ್ಗದಲ್ಲಿ ತನ್ನ ವೃಷಭ ವಾಹನದಲ್ಲಿ ಸಂಚರಿಸುತ್ತಿದ್ದನು. ಅವರ ನೆರಳು ಆಳ್ವಾರರ ಮೇಲೆ ಬೀಳುವುದರಲ್ಲಿದ್ದಾಗ ಆಳ್ವಾರರು ಕೊಂಚ ದೂರ ಸರಿದರು. ಅದನ್ನು ಗಮನಿಸಿದ ಪಾರ್ವತಿ, ರುದ್ರನಲ್ಲಿ ಆಳ್ವಾರರನ್ನು ಭೇಟಿ ಮಾಡೋಣವೆಂದು ಹೇಳುತ್ತಾಳೆ. ಮಹಾತ್ಮರಾದ ಆಳ್ವಾರರು ಎಂಬರುಮಾನ್‍ನ ಭಕ್ತರಾದುದರಿಂದ ತಮ್ಮನ್ನು ಉಪೇಕ್ಷಿಸುತ್ತಾರೆ ಎಂದು ರುದ್ರನು ಹೇಳುತ್ತಾನೆ. ಆದರೂ  ಪಾರ್ವತಿಯ ಬಲವಂತಕ್ಕೆ ಮಣಿದು ರುದ್ರನು ಕೆಳಗೆ ಇಳಿದು ಆಳ್ವಾರರನ್ನು ಭೇಟಿ ಮಾಡಲು ಒಪ್ಪುತ್ತಾನೆ.   ಆಳ್ವಾರರು  ಬಂದವರು ಯಾರೆಂದು ನೋಡುವುದು ಇಲ್ಲ. ಆಗ ರುದ್ರನು ಕೇಳುತ್ತಾನೆ, “ನಾವು ನಿಮ್ಮ ಪಕ್ಕದಲ್ಲಿದ್ದರೂ ಸಹ ತಾವೇಕೆ ನಮ್ಮನ್ನು ನೋಡುವುದಿಲ್ಲ?” ಆದಕ್ಕೆ ಆಳ್ವಾರರು “ನಿನ್ನೊಡನೆ ನನಗೆ ಮಾಡಲು ಏನೂ ಇಲ್ಲ” ಎಂದು ಉತ್ತರಿಸುತ್ತಾರೆ. ಆಗ ರುದ್ರನು “ನಿಮಗೆ ವರವನ್ನು ನೀಡಲು ಇಚ್ಚಿಸುತ್ತೇವೆ” ಎಂದು ಹೇಳುತ್ತಾನೆ.  ಆದಕ್ಕೆ ಆಳ್ವಾರರು “ನನಗೆ ನಿನ್ನಿಂದ ಏನೂ ಬೇಡ” ಎಂದು ಹೇಳುತ್ತಾರೆ. ಆಗ ರುದ್ರನು “ನಾವು ಭೇಟಿ ಮಾಡಲು ಬಂದದ್ದು ವ್ಯರ್ಥವಾಗುತ್ತದೆ, ಆದುದರಿಂದ ನಿಮ್ಮ ಯಾವುದೇ ಬಯಕೆ ಇದ್ದರೆ ಕೇಳಿ” ಎನ್ನುತ್ತಾನೆ. ಅದಕ್ಕೆ ನಗುತ್ತಾ ಆಳ್ವಾರರು “ ನನಗೆ ಮೋಕ್ಷ ನೀಡುವೆಯಾ?” ಎಂದು ಕೇಳುತ್ತಾರೆ. ಆಗ ರುದ್ರನು “ನನಗೆ ಅದನ್ನು ನೀಡುವ ಅಧಿಕಾರ ಇಲ್ಲ, ಕೇವಲ ಶ್ರೀಮನ್ನಾರಯಣನೊಬ್ಬನೆ ಅದನ್ನು ನೀಡಬಲ್ಲ” ಎಂದು ಉತ್ತರಿಸುತ್ತಾನೆ. ಆಗ ಆಳ್ವಾರರು “ ಯಾರಾದರೂ ಒಬ್ಬ ವ್ಯಕ್ತಿಯ ಸಾವನ್ನು ಮುಂದೂಡಲು ಸಾಧ್ಯವೆ?” ಎಂದು ಕೇಳಿದಾಗ ರುದ್ರನು “ಅದು ವ್ಯಕ್ತಿಯ ಕರ್ಮಾನುಸಾರವಾದದ್ದು, ನನಗೆ ಅದರ ಮೇಲೆ ನಿಯಂತ್ರಣವಿಲ್ಲ” ಎನ್ನುತ್ತಾನೆ. ಆಗ ಆಳ್ವಾರರು ತಮ್ಮ ಕೈಯಲ್ಲಿದ್ದ ಸೂಜಿ-ದಾರವನ್ನು ತೋರಿಸಿ “ಈ ಸೂಜಿಯೊಳಗೆ ದಾರವನ್ನು ತೂರಿಸಬಲ್ಲಿರಾ?” ಎಂದು ವ್ಯಂಗ್ಯವಾಗಿ ಕೇಳುತ್ತಾರೆ. ಆಗ ರುದ್ರನು ಕೋಪಗೊಂಡು ಕಾಮದೇವನನ್ನ ಸಟ್ಟಂತೆ ಆಳ್ವಾರರನ್ನೂ ಭಸ್ಮಮಾಡಿಬಿಡುವುದಾಗಿ ಶಪಥ ಮಾಡತ್ತಾನೆ. ರುದ್ರನು ತನ್ನ ಮೂರನೆ ಕಣ್ಣು ತೆರೆಯುತ್ತಿದ್ದಂತೆ ಬೆಂಕಿಯು ಹರಿಯಲು ಪ್ರಾರಂಭವಾಗುತ್ತದೆ.  ಪ್ರತಿಯಾಗಿ ಆಳ್ವಾರರು ಸಹ  ತಮ್ಮ ಬಲಗಾಲಿನಲ್ಲಿದ್ದ ತಮ್ಮ ಮೂರನೆಯ ಕಣ್ಣನ್ನು ತರೆದಾಗ, ಅದರಿಂದಲೂ ಬೆಂಕಿಯು ಹೊರಹೊಮ್ಮಲು ತೊಡಗುತ್ತದೆ.  ಆಳ್ವಾರರ ತಿರುವಡಿಯ ಅಗ್ನಿಯ ಉಷ್ಣತೆಯನ್ನು ತಾಳಲಾರದೆ, ರುದ್ರನು ಶ್ರೀಮನ್ನಾರಯಣನಲ್ಲಿ ಶರಣಾಗುತ್ತಾನೆ ಹಾಗ ಇತರ ಎಲ್ಲ ದೇವತೆಗಳು, ಋಷಿಗಳು ಸಹ ಎಂಬೆರುಮಾನ್‍ನ ಮೊರೆ ಹೊಕ್ಕು ವ್ಯವಸ್ಥೆಯನ್ನು ಕಾಪಾಡಲು ಪ್ರಾರ್ಥಿಸುತ್ತಾರೆ. ಒಡನೆ ಎಂಬೆರುಮಾನ್ ದೊಡ್ಡ ಮಳೆ ತರುವ ಪ್ರಳೆಯದ ಮೋಡಗಳನ್ನ ಆದೇಶಿಸುತ್ತಾನೆ. ಈ ಮೋಡಗಳಿಗೆ ಆಳ್ವಾರರ ಅಗ್ನಿಯನ್ನು ಉಪಶಮನ ಮಾಡುವ ಶಕ್ತಿ ಇದೆಯೇ ಎಂದು ಕೇಳಿದಾಗ, ಎಂಬೆರುಮಾನ್ ತಾನು ಆ ಶಕ್ತಿಯನ್ನು ಮೋಡಗಳಿಗೆ ನೀಡುವೆ ಎಂದು ಉತ್ತರಿಸುತ್ತಾನೆ.  ಒಂದು ದೊಡ್ಡ ಪ್ರವಾಹವು ಉತ್ಪತ್ತಿಯಾಗಿ ಆಳ್ವಾರರ ಅಗ್ನಿಯನ್ನ ಶಾಂತವಾಗಿಸಿದ ನಂತರ, ಎಂಬೆರುಮಾನ್‍ರಲ್ಲಿ ದೃಢ ಭಕ್ತಿ ಹೊಂದಿದ್ದ ಆಳ್ವಾರರು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಧ್ಯಾನವನ್ನು ಮುಂದುವರೆಸುತ್ತಾರೆ. ಅಳ್ವಾರರ ನಿಷ್ಠೆಯನ್ನು ಕಂಡು ವಿಸ್ಮಯಗೊಂಡ ರುದ್ರನು, ಅವರಿಗೆ “ಭಕ್ತಿಸಾರ” ಎಂಬ ಬಿರುದನ್ನು ನೀಡಿ, ಅವರನ್ನು ವೈಭವೀಕರಸಿ, ಪಾರ್ವತಿಗೆ “ಅಂಬರೀಷನಿಗೆ ಅಪಚಾರ ಮಾಡಿ ದೂರ್ವಾಸರು ಶಿಕ್ಷೆಗೆ ಒಳಗಾದರು, ಭಾಗವತರನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ತಿಳಿಸಿ ತನ್ನ ಸ್ವಸ್ಥಾನಕ್ಕೆಹಿಂದಿರುಗಿದನು.

ಆಳ್ವಾರರು ತಮ್ಮ ಧ್ಯಾನವನ್ನು ಮುಂದುವರೆಸುತ್ತಾರೆ. ಒಬ್ಬ ಕೇಚರ (ಗಗನ ಸಂಚಾರಿ) ತನ್ನ ಹುಲಿಯ ಮೇಲೆ ಆಕಾಶಮಾರ್ಗದಲ್ಲಿ ಚಲಿಸುತ್ತಿದ್ದಾಗ, ಆಳ್ವಾರರ ಯೋಗಶಕ್ತಿಯ ಕಾರಣದಿಂದ ಆತನಿಗೆ ಆಳ್ವಾರರನ್ನು ದಾಟಿ ಮಂದೆಹೋಗಲು ಸಾಧ್ಯವಾಗಲಿಲ್ಲ. ಆತ ಕೆಳಗೆ ಬಂದು ಆಳ್ವಾರರಿಗೆ ತನ್ನ ಪ್ರಣಾಮಗಳನ್ನು ಸಲ್ಲಿಸಿದ.  ಆ ಕೇಚರ ತನ್ನ ಮಾಂತ್ರಿಕ ಶಕ್ತಿಯಿಂದ ಒಂದು ಸುಂದರವಾದ ಶಾಲು ಸೃಷ್ಠಿಸಿ “ನಿಮ್ಮ ಹರಿದುಹೋದ ಶಾಲುವನ್ನು ಬಿಟ್ಟುಕೊಟ್ಟು ತನ್ನ ಸುಂದರವಾದ ಶಾಲುವನ್ನು ಅಂಗೀಕರಿಸಿ” ಎಂದು ಕೇಳಿಕೊಳ್ಳುತ್ತಾನೆ.  ಆಗ ಆಳ್ವಾರರು ಸುಲಲಿತವಾಗಿ ಮತ್ತೊಂದು ಸುಂದರ ಹಾಗು ರತ್ನಗಳಿಂದ ಕೂಡಿರುವ ಶಾಲುವನ್ನು ಸೃಷ್ಠಿಸಿದಾಗ ಕೇಚರನಿಗೆ ಅಸಮಾಧಾನವಾಗುತ್ತದೆ. ಆಗ ಕೇಚರ ತನ್ನ ಹಾರ (ಕಂಠಹಾರ) ತೆಗೆದು ಆಳ್ವಾರರಿಗೆ ಸಮರ್ಪಿಸಿದಾಗ ಆಳ್ವಾರರು ತಮ್ಮ ತುಳಸಿಮಾಲೆಯನ್ನು ತೆಗೆದು ಆತನಿಗೆ ವಜ್ರದ ಹಾರದಂತೆ ತೋರಿಸುತ್ತಾರೆ.  ಆಳ್ವಾರರ ಯೋಗಶಕ್ತಿಯನ್ನು ಅರ್ಥಮಾಡಿಕೊಂಡ ಕೇಚರನು, ಅವರನ್ನು ವೈಭವೀಕರಿಸಿ, ಪ್ರಣಾಮಗಳನ್ನು ಸಲ್ಲಿಸಿ, ಅಲ್ಲಿಂದ ಹೊರಡಲು ಅನುಮತಿ ಪಡೆದನು.

ಆಳ್ವಾರರ ವೈಭವಗಳನ್ನು ಕೇಳಿ, ಕೊಂಕಣಸಿದ್ದ ಎಂಬ ಜಾದೂಗಾರ ಆಳ್ವಾರರನ್ನು ಭೇಟಿಮಾಡಲು ಬಂದು, ತನ್ನ ಪ್ರಣಾಮಗಳನ್ನು ಅರ್ಪಿಸಿ, ಅವರಿಗೆ ಒಂದು ರಸವಿದ್ಯೆ ಕಲ್ಲನ್ನು (ಕಲ್ಲು/ಲೋಹವನ್ನು ಚಿನ್ನವನ್ನಾಗಿ ರೂಪಾಂತರಗೊಳಿಸುವ) ನೀಡಲು ಆಶಿಸಿದ. ಅದನ್ನು ತಿರಸ್ಕರಿಸಿದ ಆಳ್ವಾರರು, ತಮ್ಮ ದಿವ್ಯದೇಹದಿಂದ (ಕಿವಿಯ ಭಾಗದಿಂದ) ಕೊಂಚ ಕೊಳಕನ್ನು ಆ ಜಾದೂಗರನಿಗೆ ಕೊಟ್ಟು ಆ ಕೊಳಕು ಪದಾರ್ಥವೂ ಸಹ ಕಲ್ಲನ್ನು ಚಿನ್ನವನ್ನಾಗಿ ರೂಪಾಂತರಗೊಳಿಸುತ್ತದೆ ಎಂದರು. ಅದನ್ನು ಪರೀಕ್ಷಿಸಿ ಕಾರ್ಯ ಮಾಡುವುದು ಎಂಬುದನ್ನು ತಿಳಿದು ಸಂತೋಷದಿಂದ ಆಳ್ವಾರರಿಗೆ ತನ್ನ ಪ್ರಣಾಮಗಳನ್ನು ಅರ್ಪಿಸಿ ಹೊರಟುಹೋದ.

ಆಳ್ವಾರರು ತಮ್ಮ ಧ್ಯಾನವನ್ನು ಒಂದು ಗುಹೆಯೊಳಗೆ ಕೆಲಕಾಲ ಮುಂದುವರೆಸಿದರು.  ಯವಾಗಲೂ ಎಂಬೆರುಮಾನ್‍ನ ದಿವ್ಯಗುಣಗಳನ್ನು ವೈಭವೀಕರಿಸುತ್ತಾ  ನಿರಂತರವಾಗಿ ಪರ್ಯಟನೆ ಮಾಡುತಿದ್ದ ಮುದಲಳ್ವಾರರು (ಪೊಯ್‍ಗೈಯಾಳ್ವಾರ್, ಭೂದತ್ತಾಳ್ವಾರ್, ಪೇಯಾಳ್ವಾರ್)  ದಿವ್ಯ ತೇಜಸ್ಸು ಹೊರಹೊಮ್ಮುತ್ತಿದ್ದ ಆಳ್ವಾರರು ವಾಸಿಸುತ್ತಿದ್ದ ಆ ಗುಹೆಯ ಬಳಿ ಬಂದರು. ತಿರುಮಳಿಶೈ ಆಳ್ವಾರರ ವೈಭವವನ್ನು ಅರಿತ ಒಡನೆಯೇ, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಮುದಲಾಳ್ವಾರರ ವೈಭವವನ್ನು ಅರ್ಥಮಾಡಿಕೊಂಡ ಆಳ್ವಾರರು ಸಹ ಅವರ ಕುಶಲೋಪರಿಯನ್ನು ವಿಚಾರಿಸಿದರು. ಅವರುಗಳು ತಮ್ಮ ಭಗವದನುಭವಗಳನ್ನು ಒಟ್ಟಾಗಿ ಹಂಚಿಕೊಂಡರು. ಅವರೆಲ್ಲರೂ ಒಗ್ಗೂಡಿ ಅಲ್ಲಿಂದ ಹೊರಟು ಪೇಯಾಳ್ವಾರರ ಅವತಾರ ಸ್ಥಳವಾದ ತಿರುಮಯಿಲೈ (ಮಯಿಲಾಪುರ) ತಲುಪಿ, ಕೈರವತೀರ್ಥದ ದಡದ ಬಳಿ ಕೆಲಕಾಲ ಕಳೆದರು. ನಂತರ ಮುದಲಾಳ್ವಾರರು ತಮ್ಮ ದಿವ್ಯಪರ್ಯಟನೆಯನ್ನು ಮುಂದುವರೆಸಿದಾಗ, ಆಳ್ವಾರರು ತಮ್ಮ ಅವತಾರಸ್ಥಳವಾದ ತಿರುಮಳಿಶೈಗೆ ಹಿಂತಿರುಗಿದರು.

ಆವರು ತಿರುಮಣ್‍ಕಾಪ್ಪು ಹುಡುಕಲು ತೊಡಗಿದಾಗ ಅವರಿಗೆ ಸಿಗಲಿಲ್ಲ, ಅವರು ದುಃಖಿತರಾಗಿರುವಾಗ, ಅವರಿಗೆ ಸ್ವಪ್ನದಲ್ಲಿ ತಿರುವೇಂಗಡಮುಡೈಯಾನ್ ಪ್ರತ್ಯಕ್ಷನಾಗಿ ತಿರುಮಣ್ ದೊರೆಯುವ ಸ್ಥಳವನ್ನು ತೋರಿದನು.  ಆಗ ಅವರು ಸಂತೋಷದಿಂದ ಅದನ್ನು ಪುನಃ ಪಡೆದುಕೊಂಡು ದ್ವಾದಶ ಊರ್ಧ್ವಪುಂಡ್ರ (ಶಾಸ್ತ್ರಗಳಲ್ಲಿ ತಿಳಿಸಿರುವಂತೆ ದೇಹದ ವಿವಿಧ ಭಾಗಗಳಲ್ಲಿ 12 ತಿರುಮಣ್‍ಗಳು) ಧರಿಸಿದರು ಮತ್ತು ತಮ್ಮ ಭಗವದನುಭವಗಳನ್ನು ಮುಂದುವರೆಸಿದರು. ಪೊಯ್‍ಗೈಯಾಳ್ವಾರರ ಅವತಾರ ಸ್ಥಳಕ್ಕೆ ಹೋಗಲು ಇಚ್ಛೆಪಟ್ಟು ಪುಣ್ಯಕ್ಷೇತ್ರಗಳಲ್ಲಿ ಅತ್ಯಂತ ವೈಭವಯುಕ್ತವಾದ ಕಾಂಚೀಪುರದ ತಿರುವೆಕ್ಕಾಗೆ ಬಂದರು. ಶ್ರೀದೇವಿ-ಭೂದೇವಿಯರೊಡನೇ ಸೇವೆ ಸ್ವೀಕರಿಸುತ್ತಾ ಆದಿಶೇಷನ ಮೇಲೆ ಸುಂದರವಾಗಿ  ಪವಡಿಸಿರುವ ಎಂಬೆರುಮಾನ್‍ನನ್ನು ಪೂಜಿಸುತ್ತಾ ಅಲ್ಲಿಯೇ  700 ವರ್ಷಗಳ ಕಾಲ ಇದ್ದರು. ಪೊಯ್‍ಗೈಯಾಳ್ವಾರರು ಕಾಣಿಸಿಕೊಂಡ ಕೊಳದ ದಡದ ಮೇಲೇ ವಾಸಿಸುತ್ತಾ, ಪೊಯ್‍ಗೈಯಾಳ್ವಾರರನ್ನು ಧ್ಯಾನಿಸುತ್ತಾ ಸಮಯ ಕಳೆದರು.

.

yathokthakari-swamy

ನಾಚ್ಚಿಯಾರೊಡಗೂಡಿ ಯಥೋಕ್ತಕಾರಿ, ತಿರುವೆಕ್ಕಾ

ಆ ಸಮಯದಲ್ಲಿ ಕಣಿಕಣ್ಣನ್ ಅಲ್ಲಿಗೆ ತಲುಪಿ ಅವರ ಪಾದ ಪದ್ಮಗಳಲ್ಲಿ ಆಶ್ರಯವನ್ನು ಪಡೆದ.  ಒಬ್ಬ ವೃದ್ದ ಮಹಿಳೆ ಪ್ರತಿ ದಿನವೂ ಆಳ್ವಾರರ ಸೇವೆಯನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದಳು. ಆಳ್ವಾರರು ಆಕೆಯ ಶ್ರದ್ಧಾಭಕ್ತಿಯನ್ನು ಮೆಚ್ಚಿ, ಏನಾದರೂ ಕೋರಿಕೆಗಳಿದ್ದರೆ ಪೂರ್ತಿ ಮಾಡುತ್ತೇನೆಂದು ಹೇಳಿದರು.  ಆಕೆ ತಾನು ಮತ್ತೆ ಯೌವನ ಮರುಪಡೆಯಬೇಕು ಎಂದಾಗ, ಆಳ್ವಾರರು ಅವಳನ್ನು ಹರಿಸಿದ ಒಡನೆಯೆ ಆಕೆ ಪುನಃ ಸುಂದರ ಯುವತಿಯಾದಳು.   ಆಕೆಯಿಂದ ಆಕರ್ಷಿತನಾದ ಆ ಪ್ರದೇಶದ ರಾಜ ಪಲ್ಲವರಾಯನು, ತನ್ನನ್ನು ಮದುವೆಯಾಗು ಎಂದು ಕೇಳಿದ. ಆಕೆ ಒಪ್ಪಿ, ಈರ್ವರೂ ಮದುವೆಯಾಗಿ ಸಂತೋಷದಿಂದ ಜೊತೆಗೂಡಿದ್ದರು. ಒಂದು ದಿನ, ಪಲ್ಲವರಾಯ ತಾನು ಪ್ರತಿ ದಿನವೂ ವೃದ್ಧನಾಗುತ್ತಿದ್ದರೂ ಸಹ ತನ್ನ ಪತ್ನಿ (ಆಳ್ವಾರರ ಆಶೀರ್ವಾದದಿಂದ) ಸದಾ ಯೌವನದಿಂದ ಇರುವುದನ್ನು ಕಂಡು, ಈ ದಿವ್ಯ ಯೌವನದ ಮರ್ಮವೇನೆಂದು ಕೇಳಿದ. ಆಕೆ ಆಳ್ವಾರರ ಆಶೀರ್ವಾದದ ಬಗ್ಗೆ ತಿಳಸಿ, ಕನಿಕಣ್ಣನ್ ನನ್ನು (ರಾಜನಿಗೆ ಕೈಂಕರ್ಯ ಮಾಡಲು ಪದಾರ್ಥಗಳನ್ನು ತರುತ್ತಿದ್ದ) ವಿನಮ್ರತೆಯಿಂದ  ವಿನಂತಿಸಿಕೊಂಡರೆ, ಆತ ಆಳ್ವಾರರಿಗೆ ಶಿಫಾರಸು ಮಾಡಿ, ರಾಜನಿಗೂ ಅದೇ ದಿವ್ಯ ಯೌವನ ದಯಪಾಲಿಸುವರು ಎಂದು ನಿರ್ದೇಶಿಸಿದಳು. ಕನಿಕಣ್ಣನ್‍ನನ್ನು ಕರೆಸಿಕೊಂಡ ರಾಜನು, ಆಳ್ವಾರರನ್ನು ಪೂಜಿಸಲು ಅರಮನೆಗೆ ಕರೆದುಕೊಂಡುಬರಬೇಕು ಎಂದು ವಿನಂತಿಸಿಕೊಳ್ಳುತ್ತಾನೆ. ಆಳ್ವಾರರು ಎಂಬೆರುಮಾನ್‍ನ ದೇವಾಲಯ ಹೊರತಾಗಿ ಬೇರೆಲ್ಲಿಗೂ ಹೋಗುವುದಿಲ್ಲವೆಂದು ಉತ್ತರಿಸುತ್ತಾನೆ. ರಾಜನು ತನ್ನನ್ನು ವೈಭವೀಕರಿಸಲು ಕೋರಿದಾಗ, ಕನಿಕಣ್ಣನ್ ತಾನು ಶಿಷ್ಟಾಚಾರದಂತೆ (ಹಿರಿಯರ ವರ್ತನೆ ಹಾಗು ಕಾರ್ಯ)  ಶ್ರೀಮನ್ನಾರಾಯಣ ಮತ್ತು ಆತನ ಭಕ್ತರ ವಿನಃ ಬೇರೆ ಯಾರನ್ನೂ ವೈಭವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ತನ್ನನ್ನು ವೈಭವೀಕರಿಸಲು ನಿರಾಕರಿಸಿದ ಎಂಬ ಕಾರಣದಿಂದ ಕೋಪಗೊಂಡ ರಾಜನು ಕನಿಕಣ್ಣನ್‍ನನ್ನು ತನ್ನ ರಾಜ್ಯದಿಂದ ಹೊರ ಹೋಗುವಂತೆ ಆಜ್ಞೆಮಾಡಿದ. ತಕ್ಷಣ ಅರಮನೆಯಿಂದ ಹೊರ ಬಂದ ಕನಿಕಣ್ಣನ್, ಆಳ್ವಾರರ ಬಳಿಬಂದು ನಡೆದ ಘಟನೆಗಳನ್ನು ವಿವರಿಸಿ ಹೊರಡಲು ಅಪ್ಪಣೆಯನ್ನು ಕೇಳಿದ. ಅಳ್ವಾರರು “ನೀನು ಹೋಗುವುದಾದರೆ ನಾನೂ ಸಹ ಹೋಗುತ್ತೇನೆ.  ನಾನ ಹೋಗುವುದಾದರೆ ಎಂಬೆರುಮಾನ್ ಸಹ ಹೊರಡುತ್ತಾನೆ ಮತ್ತು ಅವನೊಡನೆ ಎಲ್ಲಾ ದೇವತೆಗಳೂ ಇಲ್ಲಿಂದ ಹೊರಟುಹೋಗುತ್ತಾರ” ಎಂದು ಹೇಳುತ್ತಾ “ನಾನು ದೇವಾಲಯಕ್ಕೆ ಹೋಗಿ ಎಂಬೆರುಮಾನ್‍ನನ್ನು ಎಬ್ಬಿಸಿ ನನ್ನೊಡನೆ ಕರೆದು ತರುತ್ತೇನೆ” ಎಂದು ದೇವಾಲಯಕ್ಕೆ ಹೋದರು.  ಆಳ್ವಾರರು ತಿರುವೆಕ್ಕಾ ಎಂಬೆರುಮಾನ್‍ರ ಮುಂದೆ ಹಾಡಲು ತೊಡಗುತ್ತಾರೆ:

ಕಣಿಕಣ್ಣನ್ ಪೋಗಿನ್ರಾನ್ ಕಾಮರು ಪೂಂಗಚ್ಚಿ
ಮಣಿವಣ್ಣಾ! ನೀ ಕಿಡಕ್ಕ ವೇಂಡಾ ತುಣಿವುಡೈಯ
ಶೆನ್ನಾಪ್ಪುಲವನುಂ ಪೋಗಿನ್ರೇನ್ ನೀಯುಂ ಉನ್ರನ್
ಪೈಂನ್ನಾಗಪ್ಪಾಯ್ ಶರುಟ್ಟಿಕ್ಕೊಳ್

ಓ ತಿರುವೆಕ್ಕಾದಲ್ಲಿ ವಾಸಿಸುವ ಸುಂದರ ರೂಪ ಉಳ್ಳವನೇ! ಕನಿಕಣ್ಣನ್ ಹೋಗುತ್ತಿದ್ದಾನೆ. ನಾನು (ಸ್ಥಿರವಾಗಿ ಸ್ಥಾಪಿತನಾದ ಕವಿ) ಸಹ ಹೋಗುತ್ತಿದ್ದೇನೆ. ನೀನೂ ಸಹ ನಿನ್ನ ಆದಿಶೇಷನನ್ನು ಸುತ್ತಿಕೊಂಡು ನಮ್ಮೊಡನೆ ಹೊರಡು.

ಎಂಬೆರುಮಾನ್ ಆಳ್ವಾರರ ಮಾತು ಕೇಳಿ ತಕ್ಷಣವೇ ಆಳ್ವಾರ್ ಹಾಗು ಕನಿಕಣ್ಣನ್ ರನ್ನು ಹಿಂಬಾಲಿಸುತ್ತಾನೆ. ಆದುದರಿಂದಲೇ ಅವನಿಗೆ ಯಥೋಕ್ತಕಾರಿ (ಯಥಾ – ಯಾವರೀತಿ, ಉಕ್ತ – ಹೇಳಿದಂತೆ, ಕಾರಿ- ಮಾಡಿದ) ಎಂಬ ಹೆಸರು ಬಂದಿತು. ಎಲ್ಲಾ ದೇವತೆಗಳೂ ಎಂಬೆರುಮಾನ್‍ರ ಹಿಂಬಾಲಕರಾದುದರಿಂದ ಕಾಂಚೀಪುರವು ಎಲ್ಲ ಮಂಗಳಕರಗಳ ಅನುಪಸ್ಥಿತಿಯಿಂದ ನಿರ್ಜೀವವಾಯಿತು. ಆ ಕಾರಣದಿಂದ ಸೂರ್ಯನೂ ಉದಯಿಸಲಿಲ್ಲ. ಸಮಸ್ಯೆಯನ್ನು ಅರಿತುಕೊಂಡ ರಾಜ ಹಾಗು ಅವನ ಮಂತ್ರಿಗಳು, ಪ್ರಯಾಣ ಮಾಡುತ್ತಿದ್ದ ಕೂಟದ ಹಿಂದೆ ಹೋಗಿ, ಕನಿಕಣ್ಣನ್‍ನ ಅಡಿದಾವರೆಗಳಲ್ಲಿ ಬಿದ್ದು ತಮ್ಮನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದರು. ಕನಿಕಣ್ಣನ್ ಆಳ್ವಾರರನ್ನು ಹಿಂತಿರುಗಬೇಕೆಂದು ಕೇಳಿಕೊಂಡಾಗ, ಆಳ್ವಾರರು ಎಂಬೆರುಮಾನ್‍ನನ್ನು ಯಥಾಸ್ಥಾನಕ್ಕೆ ಹಿಂತಿರುಗಬೇಕೆಂದು ಪ್ರಾರ್ಥಿಸುತ್ತಾ:

ಕನಿಕಣ್ಣನ್ ಪೋಕ್ಕೊಳಿಂದಾನ್
ಕಾಮರು ಪೂಂಗಚ್ಚಿ ಮಣಿವಣ್ಣಾ ನೀ ಕಿಡಕ್ಕ ವೇಂಡುಂ
ತುಣಿವುಡೈಯ ಶೆನ್ನಾಪ್ಪುಲವನುಂ ಪೋಕ್ಕೊಳಿಂದಾನ್
ನೀಯುಂ ಉನ್ರನ್ ಪೈನ್ನಾಗಪ್ಪಾಯ್ ಪಡುತ್ತುಕ್ಕೊಳ್

ಓ ತಿರುವೆಕ್ಕಾದಲ್ಲಿ ವಾಸಿಸುವ ಸುಂದರ ರೂಪ ಉಳ್ಳವನೇ! ಕನಿಕಣ್ಣನ್ ಹಿಂತಿರುಗುತ್ತಿದ್ದಾನೆ. ನಾನು (ಸ್ಥಿರವಾಗಿ ಸ್ಥಾಪಿತನಾದ ಕವಿ) ಸಹ ಹಿಂತಿರುಗುತ್ತಿದ್ದೇನೆ. ನೀನೂ ಸಹ ನಿನ್ನ ಆದಿಶೇಷನನ್ನು ತೆರೆದು ಮೊದಲಿನಂತೆ ವಿರಮಿಸು”.

ಹೀಗಿತ್ತು ಎಂಬೆರುಮಾನ್‍ನ ಸೌಲಭ್ಯ – ನೀರ್ಮೈ (ಸರಳತೆ) ಮತ್ತು ಆದುದರಿಂದಲೇ ಆಳ್ವಾರರು ಎಂಬೆರುಮಾನ್‍ನ ಈ ಗುಣದಲ್ಲಿ ಮುಳುಗಿ ಹಾಡುತ್ತಾ – ವೆಃಕ್ಕಣೈ ಕ್ಕಿಡಂದನ್ ಎನ್ನ ನೀರ್ಮೈ – ನನ್ನ ಬೇಡಿಕೆಯ ಮೇರೆಗೆ ತಿರುವೆಕ್ಕಾದಲ್ಲಿ ಪವಡಿಸಿದ ಎಂಬೆರುಮಾನ್ ಎಂತಹ ಕರುಣಾಮಯಿ ಎಂದು ಹಾಡಿದ್ದಾರೆ.

ತದನಂತರ, ಆಳ್ವಾರರು ಆರಾವಮುದನ್ (ಎಂಬೆರುಮಾನ್) ಗೆ ಮಂಗಳಾಶಾಸನ ಮಾಡಲು ಬೃಹತ್ ಇಚ್ಛೆಯಿಂದ ತಿರುಕ್ಕುಡಂದೈ (ಕುಂಭಕೋಣಂ) ಗೆ ಹೋಗಲು ಪ್ರಯಾಣ ಆರಂಭಿಸಿದರು. ತಿರುಕ್ಕುಡಂದೈ ಮಾಹಾತ್ಮ್ಯದಲ್ಲಿ ಹೇಳಿರುವಂತೆ “ಕುಂಭಕೋಣದಲ್ಲಿ ಒಂದು ಕ್ಷಣ ಇದ್ದವರಿಗೆ ವೈಕುಂಠವೇ ದೊರಕುವಾಗ, ಈ ಪ್ರಪಂಚದ ಸಂಪತ್ತಿನ ಬಗ್ಗೆ ಹೇಳುವುದಕ್ಕೇನಿರುವುದು” – ಈ ರೀತಿಯದು ಈ ದಿವ್ಯದೇಶದ ಮಹಿಮೆ. ಆಳ್ವಾರರು ಮಾರ್ಗಮಧ್ಯದಲ್ಲಿ ಪೆರುಂಪುಲಿಯೂರ್ ಎಂಬ ಗ್ರಾಮದಲ್ಲಿನ ಒಂದು ಮನೆಯ ಜಗುಲಿಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ವೇದಾಧ್ಯಯನದಲ್ಲಿ ನಿರತರಾಗಿದ್ದ ಕೆಲ ಬ್ರಾಹ್ಮಣರು ಆಳ್ವಾರರನ್ನು ಕಂಡು, ಆಳ್ವಾರರ ಸುಸ್ತಾದ ರೂಪವನ್ನು ಅಪಾರ್ಥಮಾಡಿಕೊಂಡು ತಮ್ಮ ವಾಚನವನ್ನು ನಿಲ್ಲಿಸಿಬಿಟ್ಟರು. ಅದನ್ನು ಅರಿತುಕೊಂಡ ಆಳ್ವಾರರು, ಅತಿ ವಿನಮ್ರತೆಯಿಂದ ಆ ಸ್ಥಳದಿಂದ ಹೊರಡಲನುವಾದರು. ಆ ಬ್ರಾಹ್ಮಣರು ತಮ್ಮ ವಾಚನವನ್ನು ಮುಂದುವರೆಸಲು ಇಚ್ಛಿಸಿದರೂ ಸಹ, ಎಲ್ಲಿಯವರೆವಿಗೂ ನಿಲ್ಲಿಸಿದ್ದರೆಂದು ಮರೆತುಬಿಟ್ಟಿದ್ದರು. ಒಡನೆಯೇ ಆಳ್ವಾರರು ಒಂದು ಕಪ್ಪಗಿನ ಅಕ್ಕಿಯ ಕಾಳನ್ನು ತಮ್ಮ ಉಗುರಿನಿಂದ ವಿಭಿನ್ನಗೊಳಿಸಿ ಯಜುರ್ ಕಾಂಡದ “ಕೃಷ್ಣಂ ವ್ರೀಹಿಣಂ ನಖನಿರ್ಭಿನ್ನಂ” ಎಂಬುವುದನ್ನು ತೋರಿಸಿದರು. ತಮ್ಮ ತಪ್ಪನ್ನು ಅರಿತುಕೊಂಡ ಆ ಬ್ರಾಹ್ಮಣರು ಆಳ್ವಾರರಿಗೆ ವಂದಿಸಿ ತಮ್ಮ ತಪ್ಪಾದ ನಡವಳಿಕೆಯನ್ನು ಮನ್ನಿಸಬೇಕೆಂದು ಬೇಡಿಕೊಂಡರು.

ಒಮ್ಮೆ ಆಳ್ವಾರರು ತಮ್ಮ ತಿರುವಾರಾಧನೆಗೆ ಪರಕರಗಳನ್ನು ಹುಡುಕುತ್ತಿದ್ದಾಗ, ಆ ಗ್ರಾಮದ ದೇವಾಲಯದ ಎಂಬೆರುಮಾನ್ ಆಳ್ವಾರರು ಓಡಾಡುವ ಕಡೆಗೆ ಮುಖಮಾಡಿ ನಿರಂತರವಾಗಿ ತಿರುಗುತ್ತಿದ್ದನು. ಇಂತಹ ಆಶ್ಚರ್ಯಕರ ದೃಶ್ಯವನ್ನು ಅರ್ಚಕರು ಕೆಲ ಬ್ರಾಹ್ಮಣರಿಗೆ ತೋರಿಸಿದರು. ಆ ಬ್ರಾಹ್ಮಣರು ಪ್ರತಿಯಾಗಿ ಆ ಗ್ರಾಮದಲ್ಲಿ ಒಂದು ಯಾಗವನ್ನು ಮಾಡುತ್ತಿದ್ದ ಪೆರುಂಪುಲಿಯೂರ್‍ಅಡಿಗಳ್‍ರವರಿಗೆ ಈ ಸನ್ನಿವೇಶವನ್ನು ಹಾಗು ಆಳ್ವಾರರ ಹಿರಿಮೆಗಳನ್ನು ತಿಳಿಸುತ್ತಾರೆ. ಪೆರುಂಪುಲಿಯೂರ್‍ಅಡಿಗಳ್‍ ಒಡನೆಯೇ ಯಾಗಶಾಲೆಯಿಂದ (ಯಾಗ ಭೂಮಿ) ಹೊರ ಬಂದು, ಆಳ್ವಾರರನ್ನು ತಲುಪಿ, ಅವರ ಅಪ್ರಾಕೃತ (ದೈವೀಕ ಆತ್ಮ) ತಿರುಮೇನಿಯನ್ನು (ದೇಹ) ಕಾಣುತ್ತಲೇ ಆಳ್ವಾರರ ಚರಣಕಮಲಗಳಲ್ಲಿ ಪ್ರಣಾಮಗಳ್ನ್ನು ಅರ್ಪಿಸಿ ತಮ್ಮ ಯಾಗಶಾಲೆಗೆ ಭೇಟಿ ನೀಡುವಂತೆ ಭಿನ್ನವಿಸಿಕೊಳ್ಳುತ್ತಾರೆ.  ಆಳ್ವಾರ ಆಗಮನದ ನಂತರ ಪೆರುಂಪುಲಿಯೂರ್‍ಅಡಿಗಳ್‍ ಆಳ್ವಾರರಿಗೆ ಯಜ್ಞದಲ್ಲಿನ ಅಗ್ರಪೂಜೆ (ಅತ್ಯಂತ ಹೆಚ್ಚಿನ ಗೌರವ) ಮಾಡುತ್ತಾರೆ. ಧರ್ಮಪುತ್ರ ತನ್ನ ರಾಜಸೂಯ ಯಾಗದ ಅಗ್ರಪೂಜೆಯನ್ನು ಕೃಷ್ಣನಿಗೆ ಕೊಡುವುದನ್ನು ವಿರೋಧಿಸಿದ  ಶಿಶುಪಾಲ ಮತ್ತವನ ಸ್ನೇಹಿತರಂತೆ ಆಳ್ವಾರರಿಗೆ ಸಲ್ಲಿಸಿದ ಅಗ್ರಪೂಜೆಯನ್ನು ಕೆಲ ಬ್ರಾಹ್ಮಣರು ವಿರೋಧಿಸುತ್ತಾರೆ.  ಪೆರುಂಪುಲಿಯೂರ್‍ಅಡಿಗಳ್‍ ದುಃಖಿತರಾಗಿ ಆ ಬ್ರಾಹ್ಮಣರ ಮಾತುಗಳು ಕೇಳಲಾಗುತ್ತಿಲ್ಲವೆಂದು ಆಳ್ವಾರರಿಗೆ ಹೇಳುತ್ತಾರೆ. ತಮ್ಮ ಮಹಾನ್ ಸ್ಥಾನವನ್ನು ಬಹಿರಂಗಪಡಿಸಲು ನಿಶ್ಚಯಿಸಿದ ಆಳ್ವಾರರು ತಮ್ಮ ಅಂತರ್ಯಾಮಿ ಎಂಬೆರುಮಾನ್‍ರ ಮೇಲೆ ಪಾಶುರವನ್ನು ಹಾಡಿ, ತಮ್ಮ ಹೃದಯದಲ್ಲಿ ಪ್ರತ್ಯಕ್ಷರಾಗಿ ಎಲರಿಗೂ ದರ್ಶನ ನೀಡುವಂತೆ ಪ್ರಾರ್ಥಿಸುತ್ತಾರೆ.  ಒಡನೆಯೇ ಎಂಬೆರುಮಾನ್ ತನ್ನ ದಿವ್ಯ ಮಹಿಷಿಯರು, ಆದಿಶೇಷ, ಗರುಡಾಳ್ವಾರ್, ಇನ್ನಿತರರಂದಿಗೆ ಆಳ್ವಾರರ ಹೃದಯದಲ್ಲಿ ತಮ್ಮ ಉಪಸ್ಥಿತಿಯನ್ನು ಬಹಿರಂಗಪಡಿಸತ್ತಾರೆ. ಆಳ್ವಾರರನ್ನು ವಿರೋಧಿಸಿದ ಎಲ್ಲಾ ಬ್ರಾಹ್ಮಣರೂ, ಅವರ ಹಿರಿಮೆಯನ್ನು ಕಂಡುಕೊಂಡು, ಅವರ ಪಾದಗಳಿಗೆರಗಿ ಕ್ಷಮೆ ಬೇಡುತ್ತಾರೆ. ಅವರುಗಳು ನಂತರ ಬ್ರಹ್ಮರಥ (ಆಳ್ವಾರರನ್ನು ಪಲ್ಲಕಿಯ ಮೇಲೆ ಸಾಗಿಸಿ) ನಡೆಸಿ ಆಳ್ವಾರರ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ಆಳ್ವಾರರು ಅವರುಗಳಿಗೆ ಶಾಸ್ತ್ರಗಳ ಸತ್ವಗಳನ್ನು ವಿಷದವಾಗಿ ವಿವರಿಸುತ್ತಾರೆ. ನಂತರ ಆಳ್ವಾರರು ತಿರುಕ್ಕುಡಂದೈನ ಆರಾವಮುದನ್ ಎಂಬೆರುಮಾನ್ ದರ್ಶನಕ್ಕೆ ಹೊರಡುತ್ತಾರೆ.

ತಿರುಕ್ಕುಡಂದೈ ತಲುಪಿದ ನಂತರ, ಆಳ್ವಾರರು ತಮ್ಮ ಎಲ್ಲಾ ಗ್ರಂಥಗಳನ್ನು (ಓಲೆ ಗರಿಗಳು) ಕಾವೇರಿ ನದಿಯಲ್ಲಿ ಎಸೆದುಬಿಟ್ಟರು.  ಆದರೆ ಎಂಬೆರುಮಾನ್‍ರ ತಿರುವುಳ್ಳಂದಿಂದ ನಾನ್ಮುಗನ್ ತಿರುವಂದಾದಿ ಮತ್ತು ತಿರುಚ್ಛಂದ ವಿರುತ್ತಂ ಕೃತಿಗಳು ಮಾತ್ರವೇ ಅಲೆಗಳಿಂದ ಮೇಲೆ ತೀಲಿ ಆಳ್ವಾರರ ಬಳಿ ತಿರುಗಿಬಂದವು. ಆಳ್ವಾರರು ಅವುಗಳನ್ನು ಶೇಖರಿಸಿಕೊಂಡು ಆರಾವಮುದನ್ ಸನ್ನಿಧಿಗೆ ಹೋಗಿ, ಎಂಬೆರುಮಾನ್‍ನ ಸುಂದರವಾದ ತಿರುವಡಿ (ಪಾದಗಳು) ಇಂದ ತಿರುಮುಡಿ (ತಲೆ) ಯ ವರೆವಿಗೂ ಪೋಜಿಸಿದರು. ಅತ್ಯಂತ ಪ್ರೇಮದಿಂದ ಎಂಬೆರುಮಾನ್‍ನಿಗೆ ನಿರ್ದೇಶಿಸುತ್ತಾ “ಕಾವಿರಿಕ್ಕರೈ ಕ್ಕುಡಂದೈಯುಳ್ ಕಿಡಂದವಾರ್ ಎಳುಂದಿರುಂದು ಪೇಶು”  ಅಂದರೆ “ಓ ಕಾವೇರಿ ದಡದಲ್ಲಿನ ತಿರುಕ್ಕುಡಂದೈಯಲ್ಲಿ ಮಲಗಿಕೊಂಡಿರುವವನೇ, ಮೇಲೆ ಎದ್ದು ನನ್ನ ಜೊತೆ ಮಾತನಾಡು” ಎಂದು ಹಾಡಿದರು. ಆಳ್ವಾರರ ಮಾತುಗಳನ್ನು ಕೇಳಿ ಅಕ್ಷರಶಃ ಎದ್ದು ನಿಲ್ಲಲು ಪ್ರಯತ್ನಿಸಿದಾಗ ಆಳ್ವಾರರು ಎಂಬೆರುಮಾನ್‍ನ ಕಾರ್ಯವನ್ನು ಕಂಡು ಆಶ್ಚರ್ಯಪಟ್ಟು ಎಂಬೆರುಮಾನ್‍ರಿಗೆ ಮಂಗಳಾಶಾಸನ ಮಾಡುತ್ತಾ “ವಾಳಿ ಕೇಶನೇ” (வாழி கேசனே) ಅಂದರೆ “ಓ ಸುಂದರವಾದ ಕೇಶವುಳ್ಳವನೇ! ಧೀರ್ಘಕಾಲ ಬಾಳು” ಎಂದು ಆಶಿಸಿದರು. ಆ ದಿವ್ಯಮಂಗಳ ವಿಗ್ರಹವನ್ನು ಧ್ಯಾನಿಸುತ್ತಾ ಆಳ್ವಾರರುಮ್ ಹಾಲನ್ನು ಹೊರತುಪಡಿಸಿ ಬೇರೆ ಯಾವುದೇ ಆಹಾರವನ್ನು ಸ್ವೀಕರಿಸದೆ 2300 ವರ್ಷಗಳ ಕಾಲ ತಿರುಕ್ಕುಡಂದೈನಲ್ಲಿಯೇ ಕಾಲ ಕಳೆದರು. ಈರೀತಿ ಅವರು 4700 ವರ್ಷಗಳ ಕಾಲ ಈ ಭೂಲೋಕದಲ್ಲಿ ಇದ್ದು, ಈ ಸಂಸಾರದಲ್ಲಿರುವ ಎಲ್ಲರ ಉನ್ನತಿಗಾಗಿ ತಮ್ಮ ದೈವೀಕ ಅನುಗ್ರಹದಿಂದ ಶಾಸ್ತ್ರಗಳಲ್ಲಿರುವ ಸತ್ವಗಳಾನ್ನು ತಮ್ಮ ಪ್ರಬಂಧಗಳ ಮೂಲಕ ಕೊಟ್ಟಿದ್ದಾರೆ.

aarAvamuthan

ಕೋಮಲವಲ್ಲಿ ತಾಯರ್ ಸಮೇತ ಆರಾವಮುದನ್, ತಿರುಕ್ಕುಡಂದೈ

ಇವರು ತಿರುಮಳಿಶೈ ಪಿರಾನ್ ಎಂದು ಖ್ಯಾತಿ ಹೊಂದಿದ್ದು ( ಪಿರಾನ್ ಎಂದರೆ ದೊಡ್ಡ ಅನುಗ್ರಹ ಮಾಡುವವರು ಎಂದು ಮತ್ತು ಈ ಪದ ಸಾಮಾನ್ಯವಾಗಿ ಎಂಬೆರುಮಾನ್ ರನ್ನು ಕೊಂಡಾಡಲು ಉಪಯೋಗಿಸಲ್ಪಡುತ್ತದೆ)  – ಎಂಬೆರುಮಾನ್ ನ ಪರತ್ವವನ್ನು ಸ್ಥಾಪಿಸಿ ಪರಮ ಕೃಪೆ ತೋರಿದ್ದರಿ0ದ  – ಆಳ್ವಾರ್ ರವರು ಪಿರಾನ್ ಎಂದು ಕರೆಯಲ್ಪಟ್ಟರು. ಇದಕ್ಕೆ ಬದಲಾಗಿ, ತಿರುಕ್ಕುಡಂದೈ ಆರಾವಮುದನ್ ಎಂಬೆರುಮಾನ್ ಆಳ್ವಾರ್ ಎಂಬ ಹೆಸರು ಪಡೆದ( ಆಳ್ವಾರ್ ಎಂದರೆ ಎಂಬೆರುಮಾನ್ ರ ನಾಮ, ರೂಪ, ಗುಣಗಳಲ್ಲಿ ಮುಳುಗಿದವರು ಎಂಬ ಅರ್ಥವಿದ್ದು ಸಾಮಾನ್ಯವಾಗಿ ಈ ಪದ ಎಂಬೆರುಮಾನ್ ರ ಬಹು ದೊಡ್ಡ ಭಕ್ತರುಗಳಿಗೆ ಉಪಯೋಗಿಸಲ್ಪಡುತ್ತದೆ )– ಯಾಕೆಂದರೆ ತಿರುಮಳಿಶೈ ಆಳ್ವಾರ್ ರ ನಾಮ, ರೂಪ, ಗುಣಗಳಲ್ಲಿ ತಲ್ಲೀನರಾದುದರಿ0ದ ಆರಾವಮುದನ್ ಎಂಬೆರುಮಾನ್, ಆರಾವಮುದಾಳ್ವಾರ್ ಎಂಬ ಹೆಸರು ಪಡೆದ.

ಎಂಬೆರುಮಾನ್ ಹಾಗು ಅವನ ಅಡಿಯಾರ್ ಗಳ ಅಭಿಮುಖವಾಗಿ ನಮಗೂ ಇಂತಹುದೇ ಬಾಂಧವ್ಯ ಬೆಳೆಯಲೆಂದು ನಾವೆಲ್ಲರೂ ಆಳ್ವಾರರ ದಿವ್ಯ ಕಾರುಣ್ಯವನ್ನು ಪ್ರಾರ್ಥಿಸೋಣ.

ಇವರ ತನಿಯನ್

ಶಕ್ತಿ ಪಂಚಮಯ ವಿಗ್ರಹಾತ್ಮನೇ ಸೂಕ್ತಿಕಾರಜತ ಚಿತ್ತ ಹಾರಿಣೇ
ಮುಕ್ತಿದಾಯಕ ಮುರಾರಿ ಪಾದಯೋರ್ ಭಕ್ತಿಸಾರ ಮುನಯೇ ನಮೋ ನಮ:

ಇವರುಗಳ ಅರ್ಚಾವತಾರ ಅನುಭವಗಳನ್ನು ಈಗಾಗಲೇ ಇಲ್ಲಿ ಚರ್ಚಿಸಲಾಗಿದೆ – http://ponnadi.blogspot.in/2012/10/archavathara-anubhavam-thirumazhisai-azhwar.html.

ಅಡಿಯೇನ್ ತಿರುನಾರಣನ್ ರಾಮಾನುಜ ದಾಸನ್

ಮೂಲ: https://acharyas.koyil.org/index.php/2013/01/16/thirumazhisai-azhwar-english/

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – https://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org