ತಿರುಮಂಗೈ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ತಿರುನಕ್ಷತ್ರಮ್: ಕಾರ್ತಿಗೈ, ಕಾರ್ತಿಗೈ

ಅವತಾರ ಸ್ಥಳಂ: ತಿರುಕ್ಕುರೈಯಲೂರ್

ಆಚಾರ್ಯನ್: ವಿಶ್ವಕ್ಸೇನರ್, ತಿರುನರೈಯೂರ್ ನಂಬಿ, ತಿರುಕ್ಕಣ್ಣಪುರಮ್ ಸೌರಿ ಪೆರುಮಾಳ್

ಶಿಷ್ಯರು: ಅವರ ಭಾವ ಇಳಯಾಳ್ವಾರ್, ಪರಕಾಲ ಶಿಷ್ಯರ್, ನೀರ್ಮೇಲ್ ನಡಪ್ಪಾನ್, ತಾಳೂತುವಾನ್, ತೋರಾ ವಳಕ್ಕನ್, ನಿಳಲಿಲ್ ಮರೈವಾನ್, ಉಯರತ್ತೊನ್ಗುವಾನ್.

ಕೃತಿಗಳು: ಪೆರಿಯ ತಿರುಮೊಳಿ, ತಿರುಕ್ಕುರುಂತಾಣ್ಡಗಮ್, ತಿರುವೆಳುಕ್ಕೂಟ್ರಿರುಕ್ಕೈ, ಸಿರಿಯ ತಿರುಮಡಲ್, ಪೆರಿಯ ತಿರುಮಡಲ್, ತಿರುನೆಡುಂತಾಣ್ಡಗಮ್

ಪರಮಪದಕ್ಕೆ ಸೇರಿದ ಸ್ಥಳ: ತಿರುಕ್ಕುರುಂಗುಡಿ

ಪೆರಿಯವಾಚಾನ್ ಪಿಳ್ಳೈ ಅವರ ಪೆರಿಯ ತಿರುಮೊಳಿಯ ಪ್ರಸ್ತಾವನೆಯು ಶಾಸ್ತ್ರಗಳ ಸಾರವನ್ನು ತೆರೆದಿಟ್ಟಿದಾರೆ, ಅದೆಂದರೆ ಎಂಪೆರುಮಾನನು ತನ್ನ ನಿಷ್ಕಾರಣ ಕಾರುಣ್ಯದಿಂದಾಗಿ ತಿರುಮಂಗೈ ಆಳ್ವಾರರನ್ನು ಸುಧಾರಿಸುತ್ತಾನೆ ಮತ್ತು ಅವರ ಮೂಲಕ ಅನೇಕ ಜೀವಾತ್ಮರನ್ನು ಉದ್ಧರಿಸುತ್ತಾನೆ. ನಾವು ಅದನ್ನು ಈಗ ನೋಡೋಣ.

ತಿರುಮಂಗೈ ಆಳ್ವಾರರು ತಮ್ಮ ಆತ್ಮವನ್ನು (ತಮ್ಮನ್ನು) ಸುಡು ಬಿಸಿಲಿನಲ್ಲಿಟ್ಟಿದ್ದರು ಮತ್ತು ಶರೀರವನ್ನು ತಂಪಾದ ನೆರಳಿನಲ್ಲಿಟ್ಟಿದ್ದರು. ಆತ್ಮವನ್ನು ಸುಡು ಬಿಸಿಲಿನಲ್ಲಿಡುವುದೆಂದರೆ ಭಗವದ್ವಿಷಯದಲ್ಲಿ (ಆಧ್ಯಾತ್ಮಿಕ ವಿಷಯದಲ್ಲಿ) ತೊಡಗದಿರುವುದು, ಮತ್ತು ಶರೀರವನ್ನು ತಂಪಾದ ನೆರಳಿನಲ್ಲಿಡುವುದೆಂದರೆ ಅನಾದಿಕಾಲದಿಂದ ಪ್ರಾಪಂಚಿಕ ಆಕಾಂಕ್ಷೆಗಳಿಗೆ ಅಂಟಿಕೊಂಡಿರುವುದು ಮತ್ತು ಅದನ್ನೇ ಜೀವನದ ಧ್ಯೇಯವನ್ನಾಗಿಟ್ಟು ಕೊಂಡಿರುವುದು. ನಿಜವಾದ ನೆರಳೆಂದರೆ ಭಗವದ್ವಿಷಯ ಮಾತ್ರ ಈ ಹೇಳಿಕೆಯಂತೆ “ವಾಸುದೇವ : ತರುಚ್ಛಾಯಾ” ಅರ್ಥಾತ್ “ವಾಸುದೇವನು (ಕೃಷ್ಣನು) ನಿಜವಾದ ನೆರಳು ಕೊಡುವ ವೃಕ್ಷ”. ಅವನು ಮಾತ್ರವೇ ಎಲ್ಲೆಡೆಯೂ ಮತ್ತು ಎಲ್ಲ ಕಾಲವೂ ನೆರಳು ಕೊಡುವ ಮೂಲ/ಆಹ್ಲಾದಕರ ವೃಕ್ಷ. ಈ ನೆರಳು ಯಾವ ತಾಪವನ್ನೂ(ಯಾತನೆಯನ್ನೂ) ನಾಶ ಮಾಡಬಲ್ಲುದು ಮತ್ತು ಅದು ಅತಿ ಬಿಸಿಯಾಗಲಿ ಅಥವಾ ಅತಿ ತಣ್ಣಗಾಗಲಿ ಇಲ್ಲ. ತಿರುಮಂಗೈ ಆಳ್ವಾರರು ಕಣ್ಣುಗಳಿಗೆ ರಮ್ಯವಾಗಿರುವ ವಿಷಯಾಂತರಗಳಿಗೆ (ಪ್ರಾಪಂಚಿಕ ಆಕಾಂಕ್ಷೆಗಳಿಗೆ) ಅಂಟಿಕೊಡಿದ್ದರಿಂದ, ಎಂಬೆರುಮಾನನು ಅವರ ಲಕ್ಷ್ಯವನ್ನು ವಿಷಯಾಂತರಗಳಿಂದ ವಿಮುಖಗೊಳಿಸಿ ಅನೇಕ ದಿವ್ಯದೇಶಗಳು ಮತ್ತು ನೇತ್ರಗಳಿಗೆ ಆಹ್ಲಾದಕರವಾಗಿರುವ ಅರ್ಚಾವತಾರ ಎಂಬೆರುಮಾನರ ಕಡೆಗೆ ತಿರುಗಿಸುತ್ತಾನೆ ಮತ್ತು ಅವರ ಮನಸ್ಸು ಸಂಪೂರ್ಣವಾಗಿ ಅರ್ಚಾವತಾರ ಎಂಬೆರುಮಾನರಲ್ಲಿ ನೆಟ್ಟಿರುವಂತೆ ಮಾಡುತ್ತಾನೆ ಮತ್ತು ಎಂಬೆರುಮಾನನನ್ನು ನೋಡದೆ ಒಂದು ಕ್ಷಣವೂ ಉಳಿಯಲಾಗದಂತಹ ಗಾಢ ಅನುಭವವನ್ನು ಆಳ್ವಾರರಿಗೆ ನೀಡುತ್ತಾನೆ. ಅದಲ್ಲದೆ ಎಂಬೆರುಮಾನನು ಅವರನ್ನು ಈ ಸಂಸಾರದಲ್ಲಿ ಇರುವಂತೆಯೇ ನಿತ್ಯರು/ಮುಕ್ತರುಗಳ ಸ್ತರದಲ್ಲಿ ಇರುವಂತೆ ಪರಿವರ್ತಿಸುತ್ತಾನೆ ಮತ್ತು ಅವರಲ್ಲಿ ಪರಮಪದಕ್ಕೆ ಸೇರುವ ಅಪೇಕ್ಷೆಯನ್ನು ವೃದ್ಧಿಪಡಿಸುತ್ತಾನೆ ಮತ್ತು ಅಂತಿಮವಾಗಿ ಪರಮಪದ ಪ್ರಾಪ್ತಿಯನ್ನೂ ಅವರಿಗೆ ಕರುಣಿಸುತ್ತಾನೆ.

ಎಂಬೆರುಮಾನನು ಇವುಗಳನ್ನು ಮಾತ್ರ ನೋಡುತ್ತಾನೆಂದು ಆಳ್ವಾರರು ಅರಿತುಕೊಳ್ಳುತ್ತಾರೆ – ಆಳ್ವಾರರ ಅದ್ವೇಷವನ್ನು (ಅದೆಂದರೆ ಅನಾದಿಕಾಲದಿಂದಲೂ ಭಗವಾನನು ಜೀವಾತ್ಮನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾನೆ ಮತ್ತು ಜೀವಾತ್ಮನು ಈ ಸಹಾಯವನ್ನು ತಿರಸ್ಕರಿಸುತ್ತಿದ್ದಾನೆ, ಜೀವಾತ್ಮನು ತಿರಸ್ಕರಿಸುವುದನ್ನು ನಿಲ್ಲಿಸಿದಾಕ್ಷಣ, ಎಂಬೆರುಮಾನನಿಗೆ ಅದೇ ಸಾಕು ಜೀವಾತ್ಮನನ್ನು ಉದ್ಧರಿಸಲು – ಈ ಅದ್ವೇಷವನ್ನು ಅಧಿಕಾರಿ ವಿಶೇಷಣವೆಂದೂ ವಿವರಿಸಲಾಗಿದೆ ಅರ್ಥಾತ್ ಜೀವಾತ್ಮನ ಒಂದು ಸ್ವಾಭಾವಿಕ ಗುಣಲಕ್ಷಣ). ಮತ್ತು ಆಳ್ವಾರರನ್ನು ಸುಧಾರಿಸಲು ಪ್ರಾಪಂಚಿಕ ಆಕಾಂಕ್ಷೆಗಳ ಇತಿಮಿತಿಗಳನ್ನು, ಪ್ರಾಪಂಚಿಕ ಆಕಾಂಕ್ಷೆಗಳಲ್ಲಿ ಆಳ್ವಾರರ ಅಭಿರುಚಿಯನ್ನು ಆಧಾರವಾಗಿಟ್ಟು (ಮತ್ತು ಆ ಅಭಿರುಚಿಯನ್ನು ಎಂಬೆರುಮಾನನ ಕಡೆಗೆ ವಿಮುಖಗೊಳಿಸಿ) ಮತ್ತು ಆಳ್ವಾರರ ಅನಾದಿಕಾಲದ ಪಾಪಗಳನ್ನು ಎಂಬೆರುಮಾನನ ಕಾರುಣ್ಯದ ಲಕ್ಷ್ಯವಾಗಿಟ್ಟು, ಮತ್ತು ಮೊದಲು ತಿರುಮಂತ್ರವನ್ನು ಮತ್ತು ನಂತರ ಎಂಬೆರುಮಾನನ ಸ್ವರೂಪ, ರೂಪ, ಗುಣ ಮತ್ತು ವಿಭೂತಿ(ಐಶ್ವರ್ಯ) ಇವುಗಳನ್ನು ಸಾಕ್ಷಾತ್ಕಾರಗೊಳಿಸುವುದರ ಮೂಲಕ ಅನುಗ್ರಹಿಸುತ್ತಾನೆ. ಎಂಬೆರುಮಾನನ ಈ ಉಪಕಾರಗಳಿಂದ ಭಾವಪರವಶರಾದ ಆಳ್ವಾರರು, ತಕ್ಷಣವೇ ಕೃತಜ್ಞತೆಯಿಂದ ತಮ್ಮ ಪೆರಿಯ ತಿರುಮೊಳಿಯಲ್ಲಿ ತಿರುಮಂತ್ರವನ್ನು ವೈಭವೀಕರಿಸಲು ಪ್ರಾರಂಭಿಸುತ್ತಾರೆ. ಚಿತ್ (ಸಚೇತನ) ಸ್ವರೂಪವು ಜ್ಞಾನವನ್ನು ಅಭಿವ್ಯಕ್ತಿಪಡಿಸುವುದಾಗಿದೆ ಮತ್ತು ಅಚೇತನವು ಜ್ಞಾನವಿಹೀನವಾದ್ದರಿಂದ ಯಾವುದನ್ನೂ ಮೆಚ್ಚಲು ಅಶಕ್ಯವಾಗಿದೆ. ಆದ್ದರಿಂದ, ತಮ್ಮ ಕೃತಜ್ಞತೆಯನ್ನು ಪ್ರದರ್ಶಿಸಲು ಮತ್ತು ಎಂಬೆರುಮಾನನ ಅರ್ಚಾವತಾರಗಳನ್ನು ವೈಭವೀಕರಿಸಲು, ಆಳ್ವಾರರು ಈ ಅನೇಕ ದಿವ್ಯಪ್ರಬಂಧಗಳನ್ನು ಹಾಡುತ್ತಾರೆ.

ಹೀಗೆ, ಪೆರಿಯವಾಚಾನ್ ಪಿಳ್ಳೈ ಎಂಬೆರುಮಾನನ ನಿರ್ಹೇತುಕ ಕೃಪೆ ಮತ್ತು ಆಳ್ವಾರರ ಉಪಾಯ ಶೂನ್ಯತ್ವವನ್ನು (ಎಂಬೆರುಮಾನನ ಕರುಣೆಯನ್ನು ಪಡೆಯಲು ಯಾವುದೇ ಪ್ರಶಂಸನೀಯ ಕಾರ್ಯವನ್ನು ಮಾಡಬೇಕಾಗಿಲ್ಲದಿರುವುದು) ಈ ವ್ಯಾಖ್ಯಾನ ಅವತಾರಿಕೆಯಲ್ಲಿ ಪ್ರತಿಪಾದಿಸುತ್ತಾರೆ. ಆದರೆ ಒಮ್ಮೆ ಆಳ್ವಾರರು ಎಂಬೆರುಮಾನನಿಂದ ದೈವಿಕವಾಗಿ ಅನುಗ್ರಹಿಸಲ್ಪಟ್ಟ ಮೇಲೆ, ಎಂಬೆರುಮಾನನೊಂದಿಗೆ ಅವರ ಬಾಂಧವ್ಯವು ಅದ್ವಿತೀಯವಾಗುತ್ತದೆ, ಅವರೇ ಪೆರಿಯ ತಿರುಮೊಳಿ 4.9.6 ಯಲ್ಲಿ ಘೋಷಿಸಿರುವ ಹಾಗೆ – “ನುಮ್ಮಡಿಯಾರೋಡುಮ್ ಒಕ್ಕ ಎಣ್ಣಿಯಿರುತ್ತೀರ್ ಅಡಿಯೇನೈ” ಅರ್ಥಾತ್ “ಇತರ ಅಡಿಯಾರರಂತೆ ನನ್ನನ್ನು ಪರಿಗಣಿಸಬೇಡಿ”.

ನಾವು ಈಗಾಗಲೇ ಪೆರಿಯವಾಚಾನ್ ಪಿಳ್ಳೈ ಮತ್ತು ಮಾಮುನಿಗಳ ಆಳ್ವಾರರ ವೈಭವೀಕರಣವನ್ನು ಇಲ್ಲಿ ನೋಡಿದ್ದೇವೆ:

http://ponnadi.blogspot.in/2012/10/archavathara-anubhavam-thirumangai.html

ಎಂಬೆರುಮಾನಾರ್ (ಶ್ರೀ ರಾಮಾನುಜರು) ರಾಮಾನುಜ ನೂಟ್ರನ್ದಾದಿಯ 2 ನೆಯ ಪಾಶುರದಲ್ಲಿ ಅಮುದನಾರರಿಂದ ಹೀಗೆ ಘೋಷಿಲ್ಪಟ್ಟರು “ಕುರೈಯಲ್ ಪಿರಾನಡಿಕ್ಕೀಳ್ ವಿಳ್ಳಾದ ಅನ್ಬನ್” ಅರ್ಥಾತ್ “ತಿರುಮಂಗೈ ಆಳ್ವಾರರ ತಿರುವಡಿಯೊಂದಿಗೆ ಧೃಡವಾದ ಬಾಂಧವ್ಯವನ್ನು ಹೊಂದಿದವರು”.

ಮಾಮುನಿಗಳು ತಿರುವಾಲಿ-ತಿರುನಗರಿ ದಿವ್ಯದೇಶಗಳನ್ನು ಸಂದರ್ಶಿಸುವಾಗ ಆಳ್ವಾರರ ದಿವ್ಯ ತಿರುಮೇನಿಯ ಸೌಂದರ್ಯದಿಂದ ಎಷ್ಟು ಆಕರ್ಷಿತರಾದರೆಂದರೆ, ಆ ಕ್ಷಣವೇ ಆ ಸುಲಲಿತವಾದ ರೂಪವನ್ನು ನಮ್ಮ ಕಣ್ಣುಗಳ ಮುಂದೆ ತರುವಂತಹ ಒಂದು ಪಾಶುರವನ್ನು ಸಮರ್ಪಿಸಿದರು. ನಾವು ಈಗ ಅದನ್ನು ಆನಂದಿಸೋಣ:

“ಅಣೈತ್ತ ವೇಲುಮ್, ತೊಳುತಕೈಯುಮ್, ಅಳುಣ್ದಿಯ ತಿರುನಾಮಮುಮ್,
ಓಮೆನ್ರ ವಾಯುಮ್, ಉಯರ್ನ್ತ ಮೂಕ್ಕುಮ್, ಕುಳಿರ್ನ್ತ ಮುಕಮುಮ್,
ಪರನ್ತ ವಿಳಿಯುಮ್, ಇರುಣ್ಡ ಕುಳಲುಮ್, ಚುರುಣ್ಡ ವಳೈಯಮುಮ್,
ವಡಿತ್ತ ಕಾದುಮ್, ಮಲರ್ನ್ದ ಕಾದು ಕಾಪ್ಪುಮ್, ತಾಳ್ನ್ದ ಚೆವಿಯುಮ್,
ಚೆರಿಣ್ದ ಕಳುತ್ತುಮ್, ಅಗನ್ರ ಮಾರ್ಬುಮ್, ತಿರಣ್ಡ ತೋಳುಮ್,
ನೆಳಿತ್ತ ಮುದುಗುಮ್, ಕುವಿಣ್ದ ಇಡೈಯುಮ್, ಅಲ್ಲಿಕ್ಕಯಿರುಮ್,
ಅಳುಣ್ದಿಯ ಚೀರಾವುಮ್, ತೂಕ್ಕಿಯ ಕರುಙ್ಕೋವೈಯುಮ್,
ತೊಙ್ಗಲುಮ್, ತನಿ ಮಾಲೈಯುಮ್, ಚಾತ್ತಿಯ ತಿರುತ್ತಣ್ಡೈಯುಮ್,
ಚದಿರಾನ ವೀರಕ್ಕಳಲುಮ್, ಕುಣ್ದಿಯಿಟ್ಟ ಕಣೈಕ್ಕಾಲುಮ್,
ಕುಳಿರ ವೈತ್ತ ತಿರುವಡಿ ಮಲರುಮ್, ಮರುವಲರ್ತಮ್ ಉಡಲ್ ತುಣಿಯ
ವಾಳ್ವೀಚುಮ್ ಪರಕಾಲನ್ ಮಙ್ಗೈಮನ್ನರಾನ ವಡಿವೇ ಎನ್ರುಮ್”

ಪರಕಾಲ/ಮಂಗೈ ಮನ್ನರ ದಿವ್ಯ ರೂಪವು ಯಾವಾಗಲೂ ನನ್ನ ಹೃದಯದಲ್ಲಿರುತ್ತದೆ. ಈ ರೂಪವು ಹೀಗೆ ನಿರೂಪಿತವಾಗಿದೆ:

ಭುಜದಿಂದ ಆಧರಿತವಾದ ಭರ್ಜಿ, ಎಂಬೆರುಮಾನನ್ನು ಪೂಜಿಸುತ್ತಿರುವ ಕೈಗಳು, ಸುಂದರವಾದ ಊರ್ಧ್ವಪುಂಡ್ರ, ಓಂ ಎಂದು ಹೇಳುತ್ತಿರುವ ಬಾಯಿ, ಚೂಪಾದ/ಸ್ವಲ್ಪ ಎತ್ತರಿಸಿರುವ ಮೂಗು, ತಂಪೆರೆಯುವ ಮುಖ, ಅಗಲವಾದ ಕಣ್ಣುಗಳು, ಸುಂದರವಾಗಿ ಗುಂಗುರಾದ ಕಪ್ಪು ಕೂದಲುಗಳು, ನಿಖರವಾಗಿ ರಚಿಸಲ್ಪಟ್ಟ ಮತ್ತು ಸ್ವಲ್ಪ ಬಾಗಿದ ಕಿವಿಗಳು (ಎಂಪೆರುಮಾನನಿಂದ ಅಷ್ಟಾಕ್ಷರ ಮಹಾಮಂತ್ರವನ್ನು ಕೇಳಲು), ಚೆನ್ನಾಗಿ ದುಂಡಾದ ಕುತ್ತಿಗೆ, ವಿಶಾಲವಾದ ಎದೆ, ಬಲವತ್ತಾದ ಭುಜಗಳು, ಸುರೂಪವಾದ ಮೇಲ್ಭಾಗದ ಬೆನ್ನು, ಸಪೂರವಾದ ಸೊಂಟ, ಸುಂದರವಾದ ಮಾಲೆಗಳು, ಅದ್ಭುತವಾದ ಕಾಲ್ಬಳೆಗಳು, ಆಳ್ವಾರರ ಪರಾಕ್ರಮವನ್ನು ಪ್ರತಿಬಿಂಬಿಸುವ ತೊಡೆಗಳು, ಸ್ವಲ್ಪ ಓರೆಯಾದ ದಿವ್ಯ ಪಾದಾರವಿಂದಗಳು ಮತ್ತು ಎಲ್ಲ ವೈರಿಗಳನ್ನೂ ನಾಶಮಾಡುವ ಖಡ್ಗ. ತಿರುವಾಲಿ-ತಿರುನಗರಿಯಲ್ಲಿನ ಕಲಿಯನ್ನರ ಅರ್ಚಾ ವಿಗ್ರಹವು ಇಡೀ ಸೃಷ್ಟಿಯಲ್ಲಿ ಅತಿ ಸುಂದರವಾದದ್ದೆಂದು ನಾವು ಸುಲಭವಾಗಿ ಸಾರಬಹುದು.

ಆಳ್ವಾರರು ಪರಕಾಲನ್, ಕಲಿಯನ್, ನೀಲನ್, ಕಲಿಧ್ವಂಸನ್, ಕವಿಲೋಕ ದಿವಾಕರನ್, ಚತುಶ್ಕವಿ ಶಿಖಾಮಣಿ, ಷಟ್ ಪ್ರಬಂಧ ಕವಿ, ಕಲಿವೈರಿ, ನಾಲುಕವಿಪ್ಪೆರುಮಾಳ್, ತಿರುವಾವೀರುಡೈಯ ಪೆರುಮಾನ್, ಮಂಗೈಯರ್ ಕೋನ್, ಅರುಳ್ ಮಾರಿ, ಮಂಗೈ ವೇನ್ದನ್, ಆಲಿನಾಡನ್, ಅರಟ್ಟ್ಮುಕ್ಕಿ, ಅಡೈಯಾರ್ ಸೀಯಮ್, ಕೊಂಗು ಮಲರ್ಕ್ಕುಳಲಿಯರ್ವೇಳ್, ಕೊಟ್ರ ವೇನ್ದನ್, ಕೊಟ್ರವೇಲ್ ಮಂಗೈ ವೇನ್ದನ್ ಎಂದೂ ಹೆಸರಾಗಿದ್ದರು.

ಇದನ್ನು ಗಮನದಲ್ಲಿಟ್ಟು, ನಾವು ಈಗ ಅವರ ಚರಿತ್ರೆಯನ್ನು ನೋಡೋಣ.

ಗರುಡವಾಹನ ಪಂಡಿತರ ದಿವ್ಯಸೂರಿ ಚರಿತ್ರೆಯಲ್ಲಿ ಗುರುತಿಸಿರುವಂತೆ ಆಳ್ವಾರರು ತಿರುಕ್ಕುರೈಯಲೂರ್ (ತಿರುವಾಲಿ-ತಿರುನಗರಿ ಸಮೀಪ) ಕಾರ್ಮುಕನ ಒಂದು ಅಂಶವಾಗಿ ಚತುರ್ಥ ವರ್ಣದಲ್ಲಿ ಜನಿಸಿದರು ಮತ್ತು ನೀಲನ್ (ಕಪ್ಪು ಮೈಬಣ್ಣದ) ಎಂದು ನಾಮಾಂಕಿತರಾದರು.

ತಮ್ಮ ಬಾಲ್ಯದಲ್ಲಿ ಭಗವದ್ವಿಷಯಗಳೊಂದಿಗೆ ಯಾವುದೇ ನಂಟಿಲ್ಲದೆ ಬೆಳೆದ ಅವರು, ಯುವಕನಾದಾಗ ಅತಿ ವಿಷಯಾಸಕ್ತರಾದರು. ಅವರಿಗೆ ಬಲಿಷ್ಠವಾದ ಶರೀರ ಮತ್ತು ಅನೇಕ ಆಯುಧಗಳನ್ನು ಉಪಯೋಗಿಸುವ ಚಾಕಚಕ್ಯತೆಯೊಂದಿಗೆ ಹೋರಾಡುವ ಕೌಶಲ್ಯವಿತ್ತು, ಮತ್ತು ಅದರಿಂದಾಗಿ ಚೋಳ ಭೂಪತಿಯ (ಆ ಪ್ರದೇಶದ ರಾಜ) ಬಳಿಗೆ ಹೋಗಿ ಅವನ ಸೇನೆಯಲ್ಲಿ ತಮ್ಮನ್ನು ಸೇರಿಸಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತಾರೆ. ರಾಜನು ನೀಲನ ಸಾಮರ್ಥ್ಯಗಳನ್ನು ಕಂಡು ಸಂತುಷ್ಟನಾಗಿ ಅವರನ್ನು ತನ್ನ ಸೇನೆಯಲ್ಲಿ ಒಬ್ಬ ದಂಡನಾಯಕನನ್ನಾಗಿ ನೇಮಿಸುತ್ತಾನೆ ಮತ್ತು ಒಂದು ಚಿಕ್ಕ ಪ್ರದೇಶವನ್ನು ಆಳಲು ಕೊಡುತ್ತಾನೆ.

ಅದೇ ಕಾಲದಲ್ಲಿ, ತಿರುವಾಲಿ ದಿವ್ಯದೇಶದಲ್ಲಿ, ಒಂದು ಸುಂದರವಾದ ಕೊಳದಲ್ಲಿ, ಕೆಲವು ಅಪ್ಸರ ಸ್ತ್ರೀಯರು (ದೇವಲೋಕದ ನರ್ತಕಿಯರು) ನೀರಿನಲ್ಲಿ ಆಟವಾಡಲು ಬರುತ್ತಾರೆ. ಅವರಲ್ಲಿ ಒಬ್ಬಳಾದ ತಿರುಮಾಮಗಳ್ (ಕುಮುದವಲ್ಲಿ) ಎಂಬುವಳು ಕೆಲವು ಹೂಗಳನ್ನು ತರಲು ಹೋಗುತ್ತಾಳೆ ಮತ್ತು ಅವಳ ಸ್ನೇಹಿತೆಯರು ಅವಳನ್ನು ಮರೆತು ಆ ಸ್ಥಳದಿಂದ ಹೊರಟುಹೋಗುತ್ತಾರೆ. ಅವಳು ಮನುಷ್ಯ ಶರೀರವನ್ನು ಸ್ವೀಕರಿಸುತ್ತಲೇ ಮತ್ತು ಯಾವುದಾದರೂ ಸಹಾಯಕ್ಕಾಗಿ ಎದುರುನೋಡುತ್ತಾಳೆ. ಒಬ್ಬ ಶ್ರೀವೈಷ್ಣವ ವೈದ್ಯರು ಆ ಹಾದಿಯಾಗಿ ಬರುತ್ತಾರೆ ಮತ್ತು ಅವಳನ್ನು ವಿಚಾರಿಸುತ್ತಾರೆ ಮತ್ತು ಅವಳು ತನ್ನ ಸ್ನೇಹಿತೆಯರು ತನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದುದನ್ನು ಮತ್ತು ಇಡೀ ಪ್ರಸಂಗವನ್ನು ತಿಳಿಸುತ್ತಾಳೆ. ಅವರಿಗೆ ಯಾವುದೇ ಮಕ್ಕಳಿಲ್ಲದಿದುದರಿಂದ, ಅವರು ಸಂತೋಷದಿಂದ ಅವಳನ್ನು ಮನೆಗೆ ಕರೆತರುತ್ತಾರೆ ಮತ್ತು ತಮ್ಮ ಹೆಂಡತಿಗೆ ಅವಳನ್ನು ಪರಿಚಯಿಸುತ್ತಾರೆ ಮತ್ತು ಅವರಿಬ್ಬರೂ ಸಂತೋಷದಿಂದ ಅವಳನ್ನು ತಮ್ಮ ಮಗಳಾಗಿ ಸ್ವೀಕರಿಸುತ್ತಾರೆ ಮತ್ತು ಅವಳನ್ನು ಬೆಳೆಸಲು ಆರಂಭಿಸುತ್ತಾರೆ. ಅವಳ ಸೌಂದರ್ಯವನ್ನು ಕಂಡ ಕೆಲವರು ಅವಳ ಬಗ್ಗೆ ನೀಲನಿಗೆ ಹೋಗಿ ತಿಳಿಸುತ್ತಾರೆ ಮತ್ತು ಅವಳ ಸೌಂದರ್ಯದಿಂದ ಆಕರ್ಷಿತರಾಗಿ ಅವರು ತಕ್ಷಣವೇ ಭಾಗವತ ವೈದ್ಯರ ಬಳಿಗೆ ಹೋಗುತ್ತಾರೆ ಮತ್ತು ಮಾತುಕತೆಯನ್ನು ಪ್ರಾರಂಭಿಸುತ್ತಾರೆ. ಅದೇ ಸಮಯದಲ್ಲಿ ಕುಮುದವಲ್ಲಿಯು ಅವರ ಮುಂದೆ ಹೋಗುತ್ತಾಳೆ ಮತ್ತು ವೈದ್ಯರು ನೀಲನಿಗೆ ಅವಳ ಕುಲ, ಗೋತ್ರ ಯಾವುದೂ ತಿಳಿಯದಿರುವುದರಿಂದ ಅವಳನ್ನು ಒಬ್ಬ ಸೂಕ್ತ ವರನಿಗೆ ವಿವಾಹ ಮಾಡಿಕೊಡುವುದರ ಬಗ್ಗೆ ಚಿಂತಿಸುತ್ತಿರುವುದರ ಬಗ್ಗೆ ಹೇಳುತ್ತಾರೆ. ತಕ್ಷಣವೇ ನೀಲನು ವೈದ್ಯರಿಗೆ ಅವಳನ್ನು ವಿವಾಹವಾಗಲು ಬಯಸಿರುವುದಾಗಿ ಹೇಳುತ್ತಾನೆ ಮತ್ತು ಅಪಾರ ಸಂಪತ್ತನ್ನು ಕೊಡುವುದಾಗಿ ಹೇಳುತ್ತಾನೆ. ವೈದ್ಯರು ಮತ್ತು ಅವರ ಪತ್ನಿ ಅವರಿಗೆ ಅವಳನ್ನು ಮದುವೆ ಮಾಡಿಕೊಡಲು ಒಪ್ಪಿಕೊಳ್ಳುತ್ತಾರೆ, ಆದರೆ ಕುಮುದವಲ್ಲಿಯು ತಾನು ಒಬ್ಬ ಆಚಾರ್ಯರಿಂದ ಪಂಚಸಂಸ್ಕಾರ ಮಾಡಲ್ಪಟ್ಟ ಒಬ್ಬ ಶ್ರೀವೈಷ್ಣವನನ್ನು ಮಾತ್ರ ವಿವಾಹವಾಗುವುದಾಗಿ ಷರತ್ತನ್ನು ಹಾಕುತ್ತಾಳೆ. ಒಬ್ಬ ಬುದ್ಧಿವಂತನಾದ ಮನುಷ್ಯನು ಒಳ್ಳೆಯ ಕಾರ್ಯಗಳನ್ನು ತಕ್ಷಣವೇ ಮಾಡುತ್ತಾನೆಂದು ಹೇಳಿರುವಂತೆ, ನೀಲನು ಆ ಕ್ಷಣವೇ ತಿರುನರೈಯೂರಿಗೆ ಓಡುತ್ತಾನೆ ಮತ್ತು ತಿರುನರೈಯೂರ್ ನಂಬಿಯ ಮುಂದೆ ನಿಲ್ಲುತ್ತಾನೆ ಮತ್ತು ಪಂಚ್ಸಂಸ್ಕಾರವನ್ನು ಮಾಡಿ ಅನುಗ್ರಹಿಸುವಂತೆ ಕೇಳಿಕೊಳ್ಳುತ್ತಾನೆ. ಎಂಬೆರುಮಾನನು ತನ್ನ ದಿವ್ಯ ಕಾರುಣ್ಯದಿಂದಾಗಿ ಅವನಿಗೆ ಶಂಖ ಚಕ್ರ ಲಾಂಛನವನ್ನು ಹಾಕುತ್ತಾನೆ ಮತ್ತು ತಿರುಮಂತ್ರ ಉಪದೇಶವನ್ನು ಮಾಡುತ್ತಾನೆ.

ಪದ್ಮ ಪುರಾಣದಲ್ಲಿ ಹೀಗೆ ಹೇಳಿದೆ:

ಸರ್ವಶ್ವೇತಾಮೃತ ಧಾರ್ಯಮ್ ಊರ್ಧ್ವಪುಂಡ್ರಮ್ ಯಥಾವಿಧಿ ।
ರುಜುಣಿ ಸಾನ್ತರಾಳಾಣಿ ಹ್ಯಙ್ಗೇಶು ದ್ವಾದಶಸ್ವಪಿ ।।

ದಿವ್ಯದೇಶಗಳಿಂದ ಬಂದ ಬಿಳಿಯ ಬಣ್ಣದಿಂದ ಕೂಡಿದ ಮಣ್ಣನ್ನು ಉಪಯೋಗಿಸಿ ಮಾಡಿದ ಊರ್ಧ್ವಪುಂಡ್ರವನ್ನು ದೇಹದ ಹನ್ನೆರಡು ಭಾಗಗಳಲ್ಲಿ ಧರಿಸಬೇಕು, ಮೇಲ್ಮುಖವಾಗಿ ನಡುವೆ ಸಾಕಷ್ಟು ಅಂತರವಿರುವಂತೆ.

ಹೀಗೆ ಆಳ್ವಾರರು ದ್ವಾದಶ ಊರ್ಧ್ವಪುಂಡ್ರವನ್ನು ಧರಿಸಿ ಕುಮುದವಲ್ಲಿಯ ಬಳಿಗೆ ಹಿಂತಿರುಗುತ್ತಾರೆ ಮತ್ತು ಕುಮುದವಲ್ಲಿಗೆ ತನ್ನನ್ನು ವಿವಾಹವಾಗಲು ಕೇಳುತ್ತಾರೆ. ಕುಮುದವಲ್ಲಿಯು ಅವರನ್ನು ವಿವಾಹವಾಗುವುದಾಗಿ, ಆದರೆ ಆಳ್ವಾರರು ಒಂದು ವರ್ಷ ಪೂರ್ತಿ ಪ್ರತಿದಿನವೂ ತಪ್ಪದೇ 1008 ಶ್ರೀವೈಷ್ಣವರಿಗೆ ತದಿಯಾರಾಧನವನ್ನು ಮಾಡಿದರೆ ಮಾತ್ರ ಅವರನ್ನು ಪತಿಯಾಗಿ ಸ್ವೀಕರಿಸುವುದಾಗಿ ಹೇಳುತ್ತಾಳೆ. ಆಳ್ವಾರರು ಕುಮುದವಲ್ಲಿಯ ಮೇಲಿನ ಮೋಹದಿಂದ ಈ ಷರತ್ತಿಗೆ ಒಪ್ಪಿಕೊಳ್ಳುತ್ತಾರೆ ಮತ್ತು ಅವರ ವಿವಾಹವು ಒಂದು ಅದ್ದೂರಿಯ ಸಮಾರಂಭದಲ್ಲಿ ನಡೆಯುತ್ತದೆ.

ಪದ್ಮ ಪುರಾಣದಲ್ಲಿ ಹೀಗೆ ಹೇಳಿದೆ:

ಆರಾಧನಾನಾಮ್ ಸರ್ವೇಶಾಮ್ ವಿಷ್ಣೋರ್ ಆರಾಧನಮ್ ಪರಮ್ ।
ತಸ್ಮಾತ್ ಪರತರಮ್ ಪ್ರೋಕ್ತಮ್ ತದೀಯಾರಾಧನಮ್ ನೃಪ ।।

ಹೇ ರಾಜನ್ ! ವಿಷ್ಣುವನ್ನು ಪೂಜಿಸುವುದು ಇತರ ಯಾರನ್ನು ಪೂಜಿಸುವುದಕ್ಕಿಂತ ಶ್ರೇಷ್ಠವಾದುದು.
ವಿಷ್ಣುಭಕ್ತರನ್ನು ಆರಾಧಿಸುವುದು ವಿಷ್ಣುವಿಗಿಂತಲೂ ಶ್ರೇಷ್ಠವಾದದ್ದೆಂದು ಪರಿಗಣಿಸಲ್ಪಟ್ಟಿದೆ.

ಈ ಮೇಲಿನ ಪ್ರಮಾಣದಂತೆ, ಆಳ್ವಾರರು ತಮ್ಮ ಎಲ್ಲ ಸಂಪತ್ತನ್ನೂ ಬಳಸಿ ತದೀಯಾರಾಧನವನ್ನು (ಶ್ರೀವೈಷ್ಣವರಿಗೆ ಪ್ರತಿದಿನ ಹೇರಳವಾದ ಪ್ರಸಾದವನ್ನು ಉಣಬಡಿಸುವುದರ ಮೂಲಕ) ಮಾಡಲು ಪ್ರಾರಂಭಿಸಿದರು. ಇದನ್ನು ನೋಡಿದ ಕೆಲವರು, ಪರಕಾಲನು (ಆಳ್ವಾರ್) ರಾಜ್ಯದ ಎಲ್ಲ ಸಂಪತ್ತನ್ನು ಕೇವಲ ಶ್ರೀವೈಷ್ಣವರಿಗೆ ಉಣಬಡಿಸುವುದರ ಮೂಲಕ ವ್ಯಯಿಸುತ್ತಿದ್ದಾನೆಂದು ರಾಜನಿಗೆ ದೂರು ನೀಡುತ್ತಾರೆ. ರಾಜನು ಆಳ್ವಾರರನ್ನು ಆಸ್ಥಾನಕ್ಕೆ ಕರೆತರಲು ಕೆಲವು ಸೈನಿಕರನ್ನು ಕಳುಹಿಸುತ್ತಾನೆ, ಆದರೆ ಆಳ್ವಾರರು ಅವರೊಂದಿಗೆ ನಯವಾಗಿ ಮಾತನಾಡಿ ಅವರು ಅಲ್ಲೇ ಕಾದಿರುವಂತೆ ಮಾಡುತ್ತಾರೆ. ಸೈನಿಕರು ಆಳ್ವಾರರು ರಾಜನಿಗೆ ತಮ್ಮ ಕಂದಾಯವನ್ನು ಕಟ್ಟಬೇಕೆಂದು ಆಗ್ರಹಪಡಿಸುತ್ತಾರೆ, ಮತ್ತು ಆಳ್ವಾರರು ಕೋಪಗೊಂಡು ಅವರನ್ನು ಹೊರಗೆ ಅಟ್ಟುತ್ತಾರೆ. ಸೈನಿಕರು ರಾಜನಲ್ಲಿಗೆ ಹಿಂತಿರುಗುತ್ತಾರೆ ಮತ್ತು ನಡೆದ ಘಟನೆಯನ್ನು ಅವನಿಗೆ ತಿಳಿಸುತ್ತಾರೆ. ರಾಜನು ಸೇನಾಧಿಪತಿಗೆ ಎಲ್ಲ ಸೈನ್ಯದೊಂದಿಗೆ ಹೋಗಿ ಅವರನ್ನು ಬಂಧಿಸಲು ಆಜ್ಞಾಪಿಸುತ್ತಾನೆ. ಸೇನಾಧಿಪತಿಯು ಒಂದು ದೊಡ್ಡ ಸೈನ್ಯದೊಂದಿಗೆ ಹೋಗುತ್ತಾನೆ ಮತ್ತು ಆಳ್ವಾರರ ಮೇಲೆ ದಾಳಿ ಮಾಡುತ್ತಾನೆ. ಆಳ್ವಾರರು ಅತ್ಯಂತ ಬಲಿಷ್ಠ ಮತ್ತು ಧೈರ್ಯಶಾಲಿಯಾದ್ದರಿಂದ ಪ್ರತಿಯಾಗಿ ಹೋರಾಟ ಮಾಡಿ ಸೇನಾಧಿಪತಿ ಮತ್ತು ಅವನ ಸೈನ್ಯವನ್ನು ಆ ಪ್ರದೇಶದಿಂದ ಹೊರಗಟ್ಟುತ್ತಾರೆ. ಸೇನಾಧಿಪತಿಯು ರಾಜನ ಬಳಿಗೆ ಹಿಂತಿರುಗುತ್ತಾನೆ ಮತ್ತು ಆಳ್ವಾರರ ಜಯದ ಬಗ್ಗೆ ತಿಳಿಸುತ್ತಾನೆ. ಪ್ರಬಲನಾದ ರಾಜನು ಸ್ವತಃ: ಆಳ್ವಾರರೊಂದಿಗೆ ಹೋರಾಡಲು ನಿರ್ಧರಿಸುತ್ತಾನೆ ಮತ್ತು ತನ್ನ ದೊಡ್ಡ ಸೈನ್ಯದೊಂದಿಗೆ ಆಳ್ವಾರರ ಮೇಲೆ ದಾಳಿ ಮಾಡುತ್ತಾನೆ. ಆಳ್ವಾರರು ಮತ್ತೊಮ್ಮೆ ತಮ್ಮ ಪರಾಕ್ರಮವನ್ನು ತೋರಿಸುತ್ತಾರೆ ಮತ್ತು ರಾಜನ ಸೈನ್ಯವನ್ನು ಧ್ವಂಸ ಮಾಡುತ್ತಾರೆ. ರಾಜನು ಆಳ್ವಾರರ ಪರಾಕ್ರಮವನ್ನು ಕಂಡು ಅತಿ ಸಂತೋಷಗೊಳ್ಳುತ್ತಾನೆ, ಯುದ್ಧ ವಿರಾಮವನ್ನು ಘೋಷಿಸುತ್ತಾನೆ ಮತ್ತು ಅವರ ಹಿರಿಮೆಯನ್ನು ಪ್ರಶಂಸಿಸುತ್ತಾನೆ. ರಾಜನನ್ನು ನಂಬಿದ ಆಳ್ವಾರರು ಅವನ ಬಳಿಗೆ ಹೋಗುತ್ತಾರೆ, ಆದರೆ ರಾಜನು ಕಪಟದಿಂದ ತನ್ನ ಮಂತ್ರಿಯ ಮೂಲಕ ಅವರನ್ನು ಬಂಧಿಸುತ್ತಾನೆ ಮತ್ತು ಉಳಿದ ತೆರಿಗೆಯನ್ನು ಕಟ್ಟುವಂತೆ ಹೇಳುತ್ತಾನೆ. ಮಂತ್ರಿಯು ಆಳ್ವಾರರನ್ನು ಕರೆದುಕೊಂಡು ಹೋಗಿ ಎಂಬೆರುಮಾನನ ಒಂದು ಗುಡಿಯಲ್ಲಿ ಸೆರೆಯಲ್ಲಿಡುತ್ತಾನೆ ಮತ್ತು ಆಳ್ವಾರರು 3 ದಿನ ಯಾವುದೇ ಆಹಾರ ಸ್ವೀಕರಿಸದೆ ಉಪವಾಸ ಮಾಡುತ್ತಾರೆ. ಅದೇ ಸಮಯದಲ್ಲಿ ತಿರುನರೈಯೂರಿನ ನಾಚಿಯಾರ್ ತಿರುನರೈಯೂರ್ ನಂಬಿಗೆ ಆಳ್ವಾರರು ಹಸಿವಿನಿಂದಿರುವುದನ್ನು ತನಗೆ ನೋಡಲಾಗದೆಂದು ಹೇಳಿ ಸ್ವಲ್ಪ ಪ್ರಸಾದವನ್ನು ಅವರಿಗೆ ತಂದು ಕೊಟ್ಟರೆಂದು ಹೇಳಲಾಗಿದೆ. ಆಳ್ವಾರರು ಪೆರಿಯ ಪೆರುಮಾಳ್ ಮತ್ತು ತಿರುವೇಂಕಟಮುಡೈಯಾನ್ಗೆ ಸಂಪೂರ್ಣ ಶರಣಾಗತರಾಗಿದ್ದು ಅವರನ್ನು ಧ್ಯಾನಿಸುತ್ತಿರುತ್ತಾರೆ. ಅದೇ ಸಮಯದಲ್ಲಿ, ಕಾಂಚೀಪುರಮ್ನ ದೇವ ಪೆರುಮಾಳ್ ಆಳ್ವಾರರ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಕಾಂಚೀಪುರಂನಲ್ಲಿ ಒಂದು ದೊಡ್ಡ ನಿಧಿ ಇದೆಯೆಂದು ಮತ್ತು ಅವರು ಅಲ್ಲಿಗೆ ಬಂದರೆ ಅದನ್ನು ತೆಗೆದುಕೊಳ್ಳಬಹುದೆಂದು ಹೇಳುತ್ತಾರೆ. ಆಳ್ವಾರರು ಅದನ್ನು ರಾಜನಿಗೆ ಅದನ್ನು ತಿಳಿಸುತ್ತಾರೆ ಮತ್ತು ರಾಜನು ಆಳ್ವಾರರು ಕಾಂಚೀಪುರಕ್ಕೆ ಹೋಗಲು ಬಹು ಭದ್ರತೆಯೊಂದಿಗೆ ಏರ್ಪಾಡು ಮಾಡುತ್ತಾನೆ. ಆಳ್ವಾರರು ಕಾಂಚೀಪುರವನ್ನು ತಲುಪಿದಾಗ ಆ ನಿಧಿಯು ಕಾಣಬರುವುದಿಲ್ಲ ಮತ್ತು ದೇವ ಪೆರುಮಾಳ್ ತನ್ನ ಭಕ್ತರಿಗೆ ಎಲ್ಲವನ್ನೂ ಕೊಡುವವನಾದ್ದರಿಂದ, ಆಳ್ವಾರರ ಸ್ವಪ್ನದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾನೆ ಮತ್ತು ವೇಗವತಿ ನದಿಯ ದಡದಲ್ಲಿ ನಿಧಿಯಿರುವ ಸ್ಥಳವನ್ನು ತೋರಿಸುತ್ತಾನೆ. ಆಳ್ವಾರರು ನಿಧಿಯನ್ನು ಕಂಡುಹಿಡಿಯುತ್ತಾರೆ, ರಾಜನ ಪಾಲನ್ನು ಕೊಡುತ್ತಾರೆ ಮತ್ತು ತಿರುಕ್ಕುರೈಯಲೂರ್ ಗೆ ಹಿಂತಿರುಗಿ ತಮ್ಮ ತದೀಯಾರಾಧನವನ್ನು ಮುಂದುವರಿಸುತ್ತಾರೆ. ಮತ್ತೆ ಕೆಲವು ಕಾಲದ ನಂತರ, ರಾಜನು ತನ್ನ ಸೈನಿಕರನ್ನು ತೆರಿಗೆಯನ್ನು ಸಂಗ್ರಹಿಸಲು ಕಳುಹಿಸುತ್ತಾನೆ, ಆಳ್ವಾರರು ವ್ಯಾಕುಲಗೊಳ್ಳುತ್ತಾರೆ ಮತ್ತು ದೇವ ಪೆರುಮಾಳ್ ಪುನ: ಆಳ್ವಾರರ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ವೇಗವತಿ ನದಿಯ ದಂಡೆಯಿಂದ ಮರಳನ್ನು ಸಂಗ್ರಹಿಸಿ ಅದನ್ನು ಸೈನಿಕರಿಗೆ ನೀಡುವಂತೆ ಆದೇಶಿಸುತ್ತಾನೆ. ಸೈನಿಕರು ಅದನ್ನು ಸ್ವೀಕರಿಸಿದಾಗೆ ಅವರಿಗೆ ಅದು ಅಮೂಲ್ಯವಾದ ಕಣಗಳಂತೆ ಕಾಣುತ್ತದೆ. ಅವರು ಸಂತೋಷದಿಂದ ಅದನ್ನು ರಾಜನ ಬಳಿಗೆ ತೆಗೆದುಕೊಂಡು ಹೋಗುತ್ತಾರೆ ಮತ್ತು ನಡೆದುದೆಲ್ಲವನ್ನೂ ವಿಸ್ತಾರವಾಗಿ ಅವನ
ಿಗೆ ತಿಳಿಸುತ್ತಾರೆ. ಆಗ ರಾಜನು ಆಳ್ವಾರರ ಮಹಿಮೆಯನ್ನು ಅರಿತುಕೊಳ್ಳುತ್ತಾನೆ, ಅವರನ್ನು ಮತ್ತೆ ಆಸ್ಥಾನಕ್ಕೆ ಆಹ್ವಾನಿಸುತ್ತಾನೆ, ಕ್ಷಮೆಯನ್ನು ಯಾಚಿಸುತ್ತಾನೆ ಮತ್ತು ಅವರಿಗೆ ಅಪಾರ ಸಂಪತ್ತನ್ನು ಸಲ್ಲಿಸುತ್ತಾನೆ. ತಾನು ಆಳ್ವಾರರಿಗೆ ಮಾಡಿದ ಅಪರಾಧಗಳ ಪರಿಹಾರವಾಗಿ, ರಾಜನು ತನ್ನ ಸಂಪತ್ತನ್ನು ದೇವರು ಮತ್ತು ಬ್ರಾಹ್ಮಣರಿಗೆ ದಾನಗಳನ್ನು ಮಾಡಲು ವ್ಯಯಿಸುತ್ತಾನೆ.

ಆಳ್ವಾರರು ತಮ್ಮ ತದೀಯಾರಾಧನವನ್ನು ಮುಂದುವರಿಸುತ್ತಾರೆ ಮತ್ತು ಅದರ ಪರಿಣಾಮವಾಗಿ ಅವರ ಸಂಪತ್ತು ಬರಿದಾಗುತ್ತದೆ. ಆಗ ಅವರು ಆ ಪ್ರದೇಶದ ಮೂಲಕ ಹಾದು ಹೋಗುವ ಶ್ರೀಮಂತರನ್ನು ಲೂಟಿ ಮಾಡಿ ತಮ್ಮ ಕೈಂಕರ್ಯವನ್ನು ಮುಂದುವರಿಸಲು ನಿರ್ಧರಿಸುತ್ತಾರೆ. ಅವರು ಶ್ರೀಮಂತರನ್ನು ಕೊಳ್ಳೆ ಹೊಡೆಯುತ್ತಾರೆ ಮತ್ತು ಬಹು ಭಕ್ತಿಯಿಂದ ತದೀಯಾರಾಧನವನ್ನು ನಡೆಸುತ್ತಾರೆ. ಸರ್ವೇಶ್ವರನು, ಅವರು ಶ್ರೀಮಂತರನ್ನು ಕೊಳ್ಳೆ ಹೊಡೆದರೂ ಸಹ ಆ ಹಣವನ್ನು ಶ್ರೀವೈಷ್ಣವರ ಪ್ರಸಾದಕ್ಕಾಗಿ ವ್ಯಯಿಸಿ ಚರಮ ಪುರುಷಾರ್ಥದಲ್ಲಿ (ಅಂತಿಮ ಗುರಿಯಲ್ಲಿ) ಸ್ಥಾಪಿತರಾಗಿದ್ದರೆಂದು ಯೋಚಿಸಿ, ಅವರಿಗೆ ದಿವ್ಯ ನಿಷ್ಕಳಂಕ ಜ್ಞಾನವನ್ನು ಅನುಗ್ರಹಿಸಿ ಉದ್ಧರಿಸಲು ನಿಶ್ಚಯಿಸುತ್ತಾನೆ. ಶ್ರೀಮನ್ನಾರಾಯಣನು ಮನುಷ್ಯ ರೂಪವನ್ನು ತಳೆದು (ಆಚಾರ್ಯನಾಗಿ) ಸಂಸಾರದಲ್ಲಿ ಪರಿತಪಿಸುತ್ತಿರುವ ಜೀವಾತ್ಮರನ್ನು ಶಾಸ್ತ್ರಗಳ ಸಹಾಯದಿಂದ ಉದ್ಧರಿಸುತ್ತಾನೆಂದು ಹೇಳುವಂತೆ, ಎಂಬೆರುಮಾನನು ವಿವಾಹದ ಉಡುಪುಗಳನ್ನು ಧರಿಸಿದ ನಾಚಿಯಾರೊಡಗೂಡಿ ವೈಯಾಲಿ ಮಣವಾಳನಾಗಿ ಸುಂದರವಾದ ಆಭರಣಗಳೊಂದಿಗೆ ಮತ್ತು ಒಂದು ದೊಡ್ಡ ಮದುವೆ ದಿಬ್ಬಣದೊಂದಿಗೆ ಆಳ್ವಾರರ ಸ್ಥಳಕ್ಕೆ ಪ್ರಯಾಣಿಸುತ್ತಾನೆ. ಒಂದು ದೊಡ್ಡ ಸಂಪತ್ತನ್ನು ಕೊಳ್ಳೆ ಹೊಡೆಯುವ ಅವಕಾಶದಿಂದ ಉತ್ತೇಜಿತರಾದ ಆಳ್ವಾರರು, ಎಂಬೆರುಮಾನ್ ಮತ್ತು ಆತನ ಮದುವೆಯ ದಿಬ್ಬಣವನ್ನು ಸುತ್ತುವರಿಯುತ್ತಾರೆ ಮತ್ತು ಅವರಿಂದ ಎಲ್ಲವನ್ನೂ ಲೂಟಿ ಮಾಡುತ್ತಾರೆ. ಕಡೆಯದಾಗಿ, ಆಳ್ವಾರರು ಎಂಬೆರುಮಾನನ ಪಾದಾರವಿಂದದ ಕಾಲುಂಗುರವನ್ನು ಬಾಯಲ್ಲಿ ಕಚ್ಚಿ ತೆಗೆಯುತ್ತಾರೆ ಮತ್ತು ಎಂಬೆರುಮಾನನು ಆಳ್ವಾರರ ಶೌರ್ಯದಿಂದ ಬಹು ವಿಸ್ಮಿತನಾಗಿ “ನಮ್ ಕಲಿಯನೋ” ಎಂದು ಸಾರುತ್ತಾನೆ (ಕಲಿಯನ್ ಎಂದರೆ ಮಹಾ ಪರಾಕ್ರಮಶಾಲಿ ಎಂದು ಅರ್ಥ).

ಇದಾದ ನಂತರ, ಆಳ್ವಾರರು ಹಣ ಮತ್ತು ಆಭರಣಗಳ ಒಂದು ದೊಡ್ಡ ಮೂಟೆಯನ್ನು ಸಿದ್ಧಪಡಿಸುತ್ತಾರೆ ಮತ್ತು ಅದನ್ನು ಎತ್ತಲು ಪ್ರಯತ್ನಿಸುತ್ತಾರೆ, ಆದರೆ ಎತ್ತಲಾಗುವುದಿಲ್ಲ. ಅವರು ವರನ (ಎಂಬೆರುಮಾನನ) ಕಡೆಗೆ ನೋಡುತ್ತಾರೆ ಮತ್ತು ಹೇಳುತ್ತಾರೆ “ನೀನು ಯಾವುದೊ ಒಂದು ಮಂತ್ರವನ್ನು ಹೇಳಿರುವೆ ಅದರಿಂದಾಗಿ ನಾನು ಇದನ್ನು ಎತ್ತಲು ಅಶಕ್ಯನಾಗಿದ್ದೇನೆ”. ಎಂಬೆರುಮಾನನು ಹೀಗೆ ಒಂದು ಮಂತ್ರವಿದೆಯೆಂದು ಒಪ್ಪಿಕೊಳ್ಳುತ್ತಾನೆ ಮತ್ತು ಆಳ್ವಾರರು ಬಯಸಿದರೆ ಅದನ್ನು ಬಹಿರಂಗಪಡಿಸುವುದಾಗಿ ಹೇಳುತ್ತಾನೆ. ಆಳ್ವಾರರು ತಮ್ಮ ಖಡ್ಗವನ್ನು ತೋರಿಸುತ್ತಾರೆ ಮತ್ತು ಕೂಡಲೇ ಆ ಮಂತ್ರವನ್ನು ಕೇಳಲು ಬಯಸುತ್ತೇನೆಂದು ಹೇಳುತ್ತಾರೆ. ಎಂಬೆರುಮಾನನು, ಕೇಳಲು ಅತ್ಯಂತ ಆಪ್ಯಾಯಮಾನವಾದ, ಸಕಲ ಅರ್ಥಗಳಿಂದ ಪೂರ್ಣವಾದ, ಅಂತಿಮ ಗುರಿ ಸಾಧನೆಯನ್ನು ಪ್ರತಿಷ್ಠಾಪಿಸುವ, ಸಕಲ ವೇದಗಳ ಸಾರವಾದ, ಬಹು ದುಃಖಗಳಿಂದ ಕೂಡಿದ ಸಂಸಾರದಿಂದ ಒಬ್ಬರನ್ನು ಮೇಲೆತ್ತಲು ಸಹಾಯಕವಾದ, ಉಪಾಸಕರಿಗೆ ಐಶ್ವರ್ಯ(ಈ ಪ್ರಪಂಚದಲ್ಲಿ ಸುಖ), ಕೈವಲ್ಯ(ಆತ್ಮಾನಂದ) ಮತ್ತು ಭಗವತ್ ಕೈಂಕರ್ಯವನ್ನು ಅನುಗ್ರಹಿಸುವ, ತಿರುಮಂತ್ರವನ್ನು ಬಹಿರಂಗಪಡಿಸಿದನು. ಈ ತಿರುಮಂತ್ರವು ಶಾಸ್ತ್ರಗಳಲ್ಲಿ ಹೀಗೆ ವೈಭವೀಕರಿಸಲ್ಪಟ್ಟಿದೆ:

ವೃತ್ತ ಹಾರೀತ ಶ್ರುತಿ:

ಋಚೋ ಯಜುಂಶಿ ಸಾಮಾಣಿ ತಥೈವ ಅಥರ್ವಣಾನಿ ಚ |
ಸರ್ವಮ್ ಅಷ್ಟಾಕ್ಷರಾಂತಸ್ತಮ್ ಯಚ್ಚಾನ್ಯದಪಿ ವಾಙ್ಮಯಮ್ ||

ಋಕ್, ಯಜುರ್, ಸಾಮ, ಅಥರ್ವ ವೇದಗಳ ಮತ್ತು ಅವುಗಳ ಉಪಬ್ರಾಹ್ಮಣಗಳ ಸಕಲ ಅರ್ಥಗಳೂ ಅಷ್ಟಾಕ್ಷರದಲ್ಲಿಯೇ ಅಡಕವಾಗಿವೆ.

ನಾರದೀಯ ಪುರಾಣ:

ಸರ್ವವೇದಾಂತ ಸಾರಾರ್ಥಸ್ ಸಂಸಾರಾರ್ಣವ ತಾರಕ: |
ಗತಿರ್ ಅಷ್ಟಾಕ್ಷರೋ ನೃಣಾಮ್ ಅಪುನರ್ಭವಕಾಂಕ್ಷಿಣಾಮ್ ||

ಮೋಕ್ಷವನ್ನು ಪಡೆಯಲು ಇಚ್ಛಿಸುವ ನರರಿಗೆ, ಸಕಲ ವೇದಾಂತಗಳ ಸಾರವಾದ ಮತ್ತು ಸಂಸಾರ ಸಾಗರವನ್ನು ದಾಟಲು ಇರುವ ಒಂದೇ ಗತಿ ಅಷ್ಟಾಕ್ಷರ ಮಂತ್ರ.

ನಾರಾಯಣ ಉಪನಿಷದ್:

ಓಮಿತ್ಯಗ್ರೇ ವ್ಯಾಹರೇತ್, ನಮ ಇತಿ ಪಶ್ಚಾತ್, ನಾರಾಯಣಾಯೇತ್ಯುಪರಿಷ್ಟಾತ್, ಓಮಿತ್ಯೇಕಾಕ್ಷರಮ್, ನಮ ಇತಿ ದ್ವೇ ಅಕ್ಷರೇ, ನಾರಾಯಣಾಯೇತಿ ಪಂಚಾಕ್ಷರಾಣಿ

ಓಂ ಅನ್ನು ಮೊದಲು ಉಚ್ಚರಿಸಬೇಕು, ನಂತರ ನಮ: ಮತ್ತು ನಾರಾಯಣಾಯ; ಓಂ ನಲ್ಲಿ ಒಂದಕ್ಷರವಿದೆ, ನಮ: ದಲ್ಲಿ ಎರಡು ಅಕ್ಷರಗಳಿವೆ ಮತ್ತು ನಾರಾಯಣಾಯ ಐದು ಅಕ್ಷರಗಳಿಂದ ರಚಿತವಾಗಿದೆ (ಹೀಗೆ ಈ ಮಂತ್ರವು 8 ಅಕ್ಷರಗಳಿಂದ ಕೂಡಿದೆ ಮತ್ತು ಅಷ್ಟಾಕ್ಷರ ಎಂದು ಹೇಳಲ್ಪಟ್ಟಿದೆ). ಹೀಗೆ ಶಾಸ್ತ್ರವು ಅಷ್ಟಾಕ್ಷರದ ನಿಖರವಾದ ರಚನೆಯನ್ನು ಮತ್ತು ಅದನ್ನು ಹೇಗೆ ಉಚ್ಚರಿಸಬೇಕೆಂಬುದನ್ನು ಯಾವುದೇ ಸಂದೇಹವಿಲ್ಲದಂತೆ ಹೇಳಿದೆ.

ನಾರದೀಯ ಪುರಾಣ:

ಮಂತ್ರಾಣಾಮ್ ಪರಮೋ ಮಂತ್ರೋ ಗುಹ್ಯಾನಾಮ್ ಗುಹ್ಯಮುತ್ತಮಮ್ |
ಪವಿತ್ರಂಚ ಪವಿತ್ರಾಣಾಮ್ ಮೂಲಮಂತ್ರಸ್ ಸನಾತನ: ||

ಅಷ್ಟಾಕ್ಷರ ಮಂತ್ರವು ಎಲ್ಲ ಮಂತ್ರಗಳಲ್ಲಿ ಶ್ರೇಷ್ಠತಮವಾದ ಮಂತ್ರ, ಗುಹ್ಯವಾದ ಮಂತ್ರಗಳಲ್ಲಿ ಗುಹ್ಯತಮವಾದದ್ದು, ಪವಿತ್ರವಾದ ಮಂತ್ರಗಳಲ್ಲಿ ಅತ್ಯಂತ ಪವಿತ್ರವಾದದ್ದು ಮತ್ತು ಸನಾತನವಾದ ಮೂಲ ಮಂತ್ರ.

ಇದೆಲ್ಲಕ್ಕಿಂತ ಮಿಗಿಲಾಗಿ ಅಷ್ಟಾಕ್ಷರ ಮಹಾಮಂತ್ರವು ಮಹಾ ಜ್ಞಾನಿಗಳಾದ ಪೂರ್ವಾಚಾರ್ಯರುಗಳಿಂದ ಅಂಗೀಕರಿಸಲ್ಪಟ್ಟ ಮಂತ್ರ, ತಿರುಮೊಳಿ 7.4.4 ರಲ್ಲಿ ಹೇಳಿರುವಂತೆ “ಪೇರಾಳನ್ ಪೇರೋದುಮ್ ಪೆರಿಯೋರ್” ಅರ್ಥಾತ್ “ಎಂಬೆರುಮಾನನ ನಾಮಗಳನ್ನು ಸಂಕೀರ್ತನೆ ಮಾಡುವ ಮಹಾನ್ ವ್ಯಕ್ತಿಗಳು”. ಇದಲ್ಲದೆ, ಪೆರಿಯ ತಿರುಮೊಳಿಯ ಮೊದಲ ಪದಿಗಮ್ ನಲ್ಲಿಯೇ ಸ್ವತಃ ಆಳ್ವಾರರೇ ಹೀಗೆ ತೆರೆದಿಟ್ಟಿದ್ದಾರೆ “ಪೆಟ್ರ ತಾಯಿನುಮ್ ಆಯಿನ ಚೆಯ್ಯುಮ್ ನಲಂತರುಮ್ ಚೊಲ್ಲೈ ನಾನ್ ಕಣ್ಡು ಕೊಣ್ಡೇನ್” ಅರ್ಥಾತ್ “ತನ್ನ ಹೆತ್ತ ತಾಯಿಗಿಂತ ಮಿಗಿಲಾಗಿ ಒಳ್ಳೆಯದನ್ನುಂಟು ಮಾಡುವ ಮಂತ್ರವನ್ನು ನಾನು ಕಂಡುಕೊಂಡೆ”.

ಎಂಬೆರುಮಾನನಿಂದ ತಿರುಮಂತ್ರವನ್ನು ಶ್ರವಣ ಮಾಡಿದ ನಂತರ, ಸುಂದರವಾಗಿ ಸ್ವರ್ಣದಂತೆ ಹೊಳೆಯುವ ಶರೀರ ಉಳ್ಳವನಾದ ದಿವ್ಯ ಗರುಡಾಳ್ವರರ ಮೇಲೆ ಕರುಣೆಯೇ ಮೂರ್ತಿವೆತ್ತ ಶ್ರೀ ಮಹಾಲಕ್ಷ್ಮಿಯೊಂದಿಗೆ ಎಂಬೆರುಮಾನನು ತನ್ನ ದಿವ್ಯ ಸ್ವರೂಪವನ್ನು ತೋರಿಸುತ್ತಾನೆ. ಅದಲ್ಲದೆ, ಎಂಪೆರುಮಾನನು ತನ್ನ ನಿರ್ಹೇತುಕ ಕೃಪೆಯಿಂದಾಗಿ ಆಳ್ವಾರರಿಗೆ ದಿವ್ಯ ನಿಷ್ಕಳಂಕ ಜ್ಞಾನವನ್ನು ಅನುಗ್ರಹಿಸುತ್ತಾನೆ. ಇದೆಲ್ಲವನ್ನೂ ನೋಡಿದ ನಂತರ, ಆಳ್ವಾರರು ಶ್ರೀ ಮಹಾಲಕ್ಷ್ಮಿ ತಾಯಾರರ ಪುರುಷಕಾರದಿಂದ ಪ್ರಚೋದಿತವಾದ ಎಂಬೆರುಮಾನನ ಅನುಗ್ರಹವನ್ನು ಅರಿತು, ಸಕಲರಿಗೂ 6 ಪ್ರಬಂಧಗಳನ್ನು ಅನುಗ್ರಹಿಸುತ್ತಾರೆ – ಪೆರಿಯ ತಿರುಮೊಳಿ, ತಿರುಕ್ಕುರುನ್ತಾಣ್ಡಕಮ್, ತಿರುವೆಳುಕ್ಕೂಟ್ರಿರುಕ್ಕೈ, ಚಿರಿಯ ತಿರುಮಡಲ್, ಪೆರಿಯ ತಿರುಮಡಲ್ ಮತ್ತು ತಿರುನೆಡುನ್ತಾಣ್ಡಕಮ್ – ಇವುಗಳನ್ನು ನಮ್ಮಾಳ್ವಾರರ ದಿವ್ಯ ಪ್ರಬಂಧಗಳ 6 ಅಂಗಗಳನ್ನಾಗಿ ಪರಿಗಣಿಸಲಾಗಿದೆ. ಅವರ ಪ್ರಬಂಧಗಳು ವಿಭಿನ್ನ ರೀತಿಯ ಕವಿತೆಗಳಿಂದ ಕೂಡಿವೆ – ಆಶು, ಮಧುರ, ಚಿತ್ರ ಮತ್ತು ವಿಸ್ತಾರ, ಮತ್ತು ಇದರಿಂದಾಗಿ ಅವರು ನಾಲು ಕವಿ ಪೆರುಮಾಳ್ ಎಂದು ಪ್ರಸಿದ್ಧರಾದರು.

ಕಡೆಯದಾಗಿ, ಎಂಬೆರುಮಾನನು ಆಳ್ವಾರರಿಗೆ ತಮ್ಮ ಶಿಷ್ಯರೊಂದಿಗೆ ವಿವಿಧ ದಿವ್ಯದೇಶಗಳಿಗೆ ಹೋಗಿ ಆ ದಿವ್ಯದೇಶ ಅರ್ಚಾವತಾರ ಎಂಬೆರುಮಾನರಿಗೆ ಮಂಗಳಾಶಾಸನವನ್ನು ಮಾಡುವಂತೆ ಆದೇಶಿಸುತ್ತಾನೆ ಮತ್ತು ಅಂತರ್ಧಾನನಾಗುತ್ತಾನೆ. ಆಳ್ವಾರರು ತಮ್ಮ ಮಂತ್ರಿಗಳು ಮತ್ತು ಶಿಷ್ಯರೊಂದಿಗೆ ತಮ್ಮ ದಿವ್ಯದೇಶ ಯಾತ್ರೆಯನ್ನು ಪ್ರಾರಂಭಿಸುತ್ತಾರೆ. ಅನೇಕ ಪುಣ್ಯನದಿಗಳಲ್ಲಿ ಸ್ನಾನ ಮಾಡುತ್ತಾರೆ ಮತ್ತು ಶ್ರೀ ಭದ್ರಾಚಲಮ್, ಸಿಂಹಾಚಲಮ್, ಶ್ರೀ ಕೂರ್ಮಮ್, ಶ್ರೀ ಪುರುಷೋತ್ತಮಮ್ (ಪುರಿ ಜಗನ್ನಾಥ), ಗಯಾ, ಗೋಕುಲಮ್, ವೃಂದಾವನಮ್, ಮಥುರಾ, ದ್ವಾರಕಾ, ಅಯೋಧ್ಯಾ, ಬದರಿಕಾಶ್ರಮ, ಕಾಂಚೀಪುರಮ್, ತಿರುವೇಂಕಟಮ್, ಇತ್ಯಾದಿ ದಿವ್ಯದೇಶಗಳಲ್ಲಿ ಮಂಗಳಾಶಾಸನವನ್ನು ಮಾಡುತ್ತಾರೆ. ಆಳ್ವಾರರು ಚೋಳಮಂಡಲವನ್ನು ತಲುಪುತ್ತಾರೆ, ಅವರ ಶಿಷ್ಯರು ಅವರ ವೈಭವಗಳನ್ನು “ಚತುಷ್ಕವಿ ಬಂದಿದ್ದಾರೆ”, “ಕಲಿಯನ್ ಬಂದಿದ್ದಾರೆ”, “ಪರಕಾಲನ್ ಬಂದಿದ್ದಾರೆ”, “ಇತರ ಎಲ್ಲ ಮತಗಳ ಮೇಲೆ ವಿಜಯ ಸಾಧಿಸಿದವರು ಬಂದಿದ್ದಾರೆ”, ಇತ್ಯಾದಿಯಾಗಿ ಘೋಷಿಸುತ್ತಾರೆ.

ತಿರುಜ್ಞಾನ ಸಂಬಂಧರ್ ಎಂಬ ಒಬ್ಬ ಶೈವ ಪಂಡಿತರು/ಭಕ್ತರು ಆ ಕಾಲದಲ್ಲಿ ಅಲ್ಲಿ ವಾಸಿಸುತ್ತಿದ್ದರು ಮತ್ತು ಅವರ ಶಿಷ್ಯರು ಆಳ್ವಾರರ ವೈಭವಗಳಿಗೆ ಆಕ್ಷೇಪಿಸಿದರು. ಆಳ್ವಾರರು ತಕ್ಷಣವೇ ಸಂಬಂಧರೊಂದಿಗೆ ವಾದ ಮಾಡುವುದಾಗಿ ಮತ್ತು ನಾರಾಯಣ ಪರತ್ವವನ್ನು ಸಿದ್ಧಪಡಿಸುವುದಾಗಿ ಹೇಳಿದರು. ಅವರು ಆಳ್ವಾರರನ್ನು ಸಂಬಂಧರ ಮನೆಗೆ ಕರೆದುಕೊಂಡು ಹೋಗುತ್ತಾರೆ ಮತ್ತು ವಿಷಯವನ್ನು ಅವರಿಗೆ ತಿಳಿಸುತ್ತಾರೆ ಮತ್ತು ಅವರು ಆಳ್ವಾರರೊಂದಿಗೆ ವಾದ ಮಾಡಲು ಒಪ್ಪಿಕೊಳ್ಳುತ್ತಾರೆ. ಆ ಇಡೀ ಸ್ಥಳವು/ಪಟ್ಟಣವು ಅವೈಷ್ಣವರಿಂದ ತುಂಬಿದ್ದರಿಂದ ಮತ್ತು ಅಲ್ಲಿ ಎಂಬೆರುಮಾನನ ವಿಗ್ರಹವು ಇಲ್ಲದಿದ್ದುದರಿಂದ, ಆಳ್ವಾರರು ಮಾತನಾಡಲು ಅಶಕ್ಯರಾಗುತ್ತಾರೆ ಮತ್ತು ಪರಿಸ್ಥಿತಿಯ ಬಗ್ಗೆ ತಳಮಳಗೊಳ್ಳುತ್ತಾರೆ. ಅದೇ ಸಮಯದಲ್ಲಿ ಅವರು ಒಬ್ಬ ಶ್ರೀವೈಷ್ಣವ ಸ್ತ್ರೀಯನ್ನು ಗಮನಿಸುತ್ತಾರೆ ಮತ್ತು ಆಕೆಯ ತಿರುವಾರಾಧನ ವಿಗ್ರಹವನ್ನು ತರುವಂತೆ ಹೇಳುತ್ತಾರೆ. ಆಕೆಯು ತನ್ನ ಎಂಬೆರುಮಾನ್ ಕೃಷ್ಣನನ್ನು ಸಂಬಂಧರ ವಾಸಸ್ಥಳಕ್ಕೆ ತರುತ್ತಾಳೆ ಮತ್ತು ಚರ್ಚೆಯು ಪ್ರಾರಂಭವಾಗುತ್ತದೆ. ಸಂಬಂಧರು ಒಂದು ಪದ್ಯವನ್ನು ವಾಚಿಸುತ್ತಾರೆ ಮತ್ತು ಆಳ್ವಾರರು ಅದರಲ್ಲಿ ತಪ್ಪನ್ನು ಕಂಡುಹಿಡಿಯುತ್ತಾರೆ. ಆಗ ಸಂಬಂಧರು ಆಳ್ವಾರರಿಗೆ ಒಂದು ಪದ್ಯವನ್ನು ವಾಚಿಸಲು ಸವಾಲು ಹಾಕುತ್ತಾರೆ ಮತ್ತು ಆಳ್ವಾರರು “ಒರು ಕುರಳಾಯ್” ತಾಡಾಳನ್ ಎಂಬೆರುಮಾನನ ಮೇಲೆ (ಕಾಳಿ ಚೀರಾಮ ವಿಣ್ಣಗರಮ್ – ಸೀರ್ಗಾಳಿ) ಪದಿಗವನ್ನು (ಪೆರಿಯ ತಿರುಮೊಳಿ – 7.4) ಹಾಡುತ್ತಾರೆ. ಸಂಬಂಧರು ನಿಖರವಾಗಿ ಮತ್ತು ಸುಂದರವಾಗಿ ರಚಿಸಲ್ಪಟ್ಟ ಆ ಪದಿಗಕ್ಕೆ ಉತ್ತರಿಸಲು ಅಶಕ್ಯರಾಗಿ ಆಳ್ವಾರರ ಶ್ರೇಷ್ಠತೆಯ ಬಗ್ಗೆ ಆಶ್ಚರ್ಯಗೊಳ್ಳುತ್ತಾರೆ ಮತ್ತು ಅವರ ವೈಭವಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಅವರನ್ನು ಪೂಜಿಸುತ್ತಾರೆ.

ವಿಮಾನಮ್ ಪ್ರಣವಾಕಾರಮ್ ವೇದಶೃಂಗಮ್ ಮಹಾದ್ಭುತಮ್ |
ಶ್ರೀರಂಗಛಾಯೀ ಭಗವಾನ್ ಪ್ರಣವಾರ್ಥ ಪ್ರಕಾಶಕ: ||

ಅತ್ಯಂತ ಅದ್ಭುತವಾದ ಶ್ರೀರಂಗವಿಮಾನವು ಓಂಕಾರದ ಅಭಿವ್ಯಕ್ತಿಯಾಗಿದೆ. ಅದರ ಶೃಂಗವು ಸಾಕ್ಷಾತ್ ವೇದವಾಗಿದೆ. ಭಗವಾನ್ ಶ್ರೀರಂಗನಾಥನು ಸ್ವತಃ (ತಿರುಮಂತ್ರದ ಸಾರಾಂಶವಾದ) ಪ್ರಣವದ ಪರಮಾರ್ಥವಾಗಿ ಅಭಿವ್ಯಕ್ತಿಗೊಂಡಿದ್ದಾನೆ.

ಆಳ್ವಾರರು ದೇವಸ್ಥಾನದ ಸುತ್ತಲೂ ಕೋಟೆಯೊಂದನ್ನು ಕಟ್ಟಲು ಬಯಸಿ, ಅದಕ್ಕಾಗಿ ಸಂಪನ್ಮೂಲಗಳನ್ನು ರೂಢಿಸಲು ತಮ್ಮ ಶಿಷ್ಯರೊಂದಿಗೆ ಚರ್ಚಿಸುತ್ತಾರೆ. ಅವರು ನಾಗಪಟ್ಟಿಣಂನಲ್ಲಿ ಅವೈದಿಕ ಮಠಕ್ಕೆ ಸೇರಿದ ಪೂರ್ಣವಾಗಿ ಚಿನ್ನದಿಂದ ಮಾಡಿದ ವಿಗ್ರಹವೊಂದಿದೆ ಮತ್ತು ನಾವು ಅದನ್ನು ಪಡೆದುಕೊಂಡರೆ ಅದರಿಂದ ನಾವು ಬಹಳಷ್ಟು ಕೈಂಕರ್ಯಗಳನ್ನು ಮಾಡಬಹುದೆಂದು ಹೇಳುತ್ತಾರೆ. ಆಳ್ವಾರರು ತಕ್ಷಣವೇ ನಾಗಪಟ್ಟಿಣಂಗೆ ಹೊರಡುತ್ತಾರೆ ಮತ್ತು ಹೆಂಗಸೊಬ್ಬಳನ್ನು ಕಾಣುತ್ತಾರೆ ಮತ್ತು ಅವಳನ್ನು ಆ ಪಟ್ಟಣದಲ್ಲಿ ರಹಸ್ಯವಾದ ವಿಷಯವೇನಾದರೂ ಇದೆಯೇ ಎಂದು ಕೇಳುತ್ತಾರೆ. ಅದಕ್ಕೆ ಅವಳು ಸುವರ್ಣ ವಿಗ್ರಹವೊಂದು ಇದೆಯೆಂದು ತನ್ನ ಅತ್ತೆ ಹೇಳುತ್ತಿದ್ದುದಾಗಿ ಮತ್ತು ಆ ವಿಗ್ರಹ ಮತ್ತು ಆ ವಿಗ್ರಹವಿರುವ ಸ್ಥಳಕ್ಕೆ ಅತ್ಯಂತ ಸುರಕ್ಷಿತವಾದ ವಿಮಾನವನ್ನು ರಚಿಸಿದ ಶಿಲ್ಪಿಯು ಬೇರೊಂದು ದ್ವೀಪದಲ್ಲಿ ವಾಸಿಸುತ್ತಿರುವುದಾಗಿ ಹೇಳುತ್ತಾಳೆ. ಆಳ್ವಾರರು ತಕ್ಷಣವೇ ತಮ್ಮ ಶಿಷ್ಯರೊಂದಿಗೆ ಆ ಸ್ಥಳಕ್ಕೆ ಹೊರಡುತ್ತಾರೆ ಮತ್ತು ವಿಶ್ವಕರ್ಮನಿಗೆ ಹೋಲಿಸಬಹುದಾದ ಆ ಶಿಲ್ಪಿಯ ಬಗ್ಗೆ ವಿಚಾರಿಸುತ್ತಾರೆ. ಅಲ್ಲಿಯ ಜನರು ಆಳ್ವಾರರಿಗೆ ಒಂದು ಬಹು ದೊಡ್ಡದಾದ ಮತ್ತು ಸುಂದರವಾದ ಅರಮನೆಗೆ ದಾರಿ ತೋರಿಸುತ್ತಾರೆ ಮತ್ತು ಆಳ್ವಾರರು ಆ ಅರಮನೆಯನ್ನು ತಲುಪುತ್ತಾರೆ. ತಮ್ಮ ಶಿಷ್ಯರೊಂದಿಗೆ ಅವರು ಅರಮನೆಯ ಹೊರಗೆ ಇರುವ ವಿವಿಧ ವಸ್ತುಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸುತ್ತಾರೆ ಮತ್ತು ಅದೇ ಸಮಯದಲ್ಲಿ ಶಿಲ್ಪಿಯು ತನ್ನ ಸ್ನಾನ ಮತ್ತು ಭೋಜನವನ್ನು ಮುಗಿಸಿ ಹೊರಗೆ ಬರುತ್ತಾನೆ. ಆತನನ್ನು ನೋಡಿ ಆಳ್ವಾರರು ತಂತ್ರಯುಕ್ತವಾಗಿ ಬಹು ವಿಷಾದದಿಂದ ಹೇಳುತ್ತಾರೆ “ಒಹ್ ! ಕೆಲವು ಆಕ್ರಮಣಕಾರರು ಬಂದು ನಾಗಪಟ್ಟಿಣಂನ ದೇವಸ್ಥಾನವನ್ನು ನಾಶಮಾಡಿದರು ಮತ್ತು ಅದರ ಸುವರ್ಣ ವಿಗ್ರಹವನ್ನು ಕೊಂಡೊಯ್ದರು. ನಾವು ಇನ್ನೂ ಈ ಜಗತ್ತಿನಲ್ಲಿ ಏಕೆ ಜೀವಿಸಿದ್ದೇವೆ?”. ಇದನ್ನು ಕೇಳಿದ ಶಿಲ್ಪಿಯು ಅತೀವ ಸಂಕಟಪಡುತ್ತಾನೆ, ಜೋರಾಗಿ ಅಳು ಆರಂಭಿಸುತ್ತಾನೆ ಮತ್ತು ಹೇಳುತ್ತಾನೆ “ಇದು ದುರುದ್ದೇಶಪೂರಿತರಾದ ಶಿಲ್ಪಿಗಳಲ್ಲೊಬ್ಬನಿರಬೇಕು ಈ ರಹಸ್ಯವನ್ನು ಬಯಲುಮಾಡಿರುವುದು – ವಿಮಾನದ ತುದಿಯನ್ನು ತೆರೆದು ಯಾರಾದರೂ ಅಲ್ಲಿ ಪ್ರವೇಶಿಸಬಹುದು. ನಾನು ಅತ್ಯಂತ ಜಟಿಲವಾದ ಕೀಲಿಕೈಯನ್ನು ಮಾಡಿದ್ದೆ – ಒಂದು ಕಲ್ಲಿನೊಳಗೆ ಒಂದು ತಿರುಚಿದ ಕಬ್ಬಿಣದ ಸರಪಣಿ ಮತ್ತು ಅದನ್ನು ನೀರು ಬೀಳುವ ಕಡೆ ಚಪ್ಪಡಿಯ ಕೆಳಗೆ ಇಟ್ಟಿದ್ದೆ ಮತ್ತು ಅದನ್ನು ಹೇಗೆ ಅವರು ಒಡೆದರು?”, ಹೀಗೆ ತನಗೆ ಅರಿವಿಲ್ಲದಂತೆಯೇ ವಾಸ್ತವಿಕ ರಹಸ್ಯವನ್ನು ಬಯಲುಮಾಡಿದನು.

ರಹಸ್ಯವು ತಿಳಿದಿದ್ದರಿಂದಾಗಿ, ಆಳ್ವಾರರು ತಕ್ಷಣವೇ ತಮ್ಮ ಶಿಷ್ಯರೊಂದಿಗೆ ಆ ಸ್ಥಳದಿಂದ ಹೊರಡುತ್ತಾರೆ ಮತ್ತು ನಾಗಪಟ್ಟಿಣಂಗೆ ಹಿಂತಿರುಗಲು ಸಮುದ್ರ ತೀರವನ್ನು ತಲುಪುತ್ತಾರೆ. ಅವರು ಒಬ್ಬ ಗುಣಶೀಲನಾದ ವರ್ತಕನು ಒಂದು ದೊಡ್ಡ ಅಡಿಕೆಯ ಸರಕಿನೊಂದಿಗೆ ತನ್ನ ಹಡಗನ್ನು ಏರುವುದನ್ನು ನೋಡುತ್ತಾರೆ ಮತ್ತು ಅವನನ್ನು ಹರಸುತ್ತಾರೆ ಮತ್ತು ತಮ್ಮನ್ನು ಸಮುದ್ರದ ಇನ್ನೊಂದು ತಟಕ್ಕೆ ಕರೆದುಕೊಂಡು ಹೋಗಲು ವಿನಂತಿಸಿಕೊಳ್ಳುತ್ತಾರೆ. ಅವನು ಒಪ್ಪಿಕೊಳ್ಳುತ್ತಾನೆ ಮತ್ತು ಅವರೆಲ್ಲರೂ ಹಡಗನ್ನು ಏರುತ್ತಾರೆ ಮತ್ತು ಪ್ಪ್ರಯಾಣವನ್ನು ಆರಂಭಿಸುತ್ತಾರೆ. ಆಳ್ವಾರರು ಒಂದು ಅಡಿಕೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದನ್ನು ಎರಡು ಭಾಗ ಮಾಡುತ್ತಾರೆ ಮತ್ತು ವರ್ತಕನಿಗೆ ಕೊಡುತ್ತಾರೆ ಮತ್ತು ಅದನ್ನು ಪ್ರಯಾಣ ಮುಗಿದ ನಂತರ ತೆಗೆದುಕೊಳ್ಳುತ್ತೇನೆಂದು ಹೇಳುತ್ತಾರೆ ಮತ್ತು ಒಂದು ಚೀಟಿಯಲ್ಲಿ ತನ್ನ ಸಹಿಯೊಂದಿಗೆ ಹೀಗೆ ಬರೆದುಕೊಡಲು ಹೇಳುತ್ತಾರೆ “ನಾನು ನನ್ನ ಹಡಗಿನ ಅರ್ಧ ಅಡಿಕೆಯನ್ನು ಆಳ್ವಾರರಿಂದ ಸಾಲ ಪಡೆದಿದ್ದೇನೆ”. ಆ ವರ್ತಕನು ಹಾಗೆಯೇ ಮಾಡುತ್ತಾನೆ ಮತ್ತು ನಾಗಪಟ್ಟಿಣಂ ತಲುಪಿದ ನಂತರ ಆಳ್ವಾರರು ಬೆಲೆಬಾಳುವ ಅಡಿಕೆಯ ಆ ಹಡಗಿನ ಅರ್ಧ ಸರಕನ್ನು ಕೊಡಲು ಹೇಳುತ್ತಾರೆ (ಅದನ್ನು ಶ್ರೀರಂಗಂನ ದೇವಸ್ಥಾನದ ಕೈಂಕರ್ಯಕ್ಕೆ ಉಪಯೋಗಿಸಲು). ವರ್ತಕನು ಆಘಾತಗೊಳ್ಳುತ್ತಾನೆ ಮತ್ತು ಹಾಗೆ ಮಾಡಲು ನಿರಾಕರಿಸುತ್ತಾನೆ. ಅವರಿಬ್ಬರೂ ವಾದ ಮಾಡುತ್ತಾರೆ ಮತ್ತು ಒಂದು ನಿಷ್ಪಕ್ಷಪಾತ ತೀರ್ಪಿಗಾಗಿ ಎಲ್ಲ ವರ್ತಕರನ್ನೂ ಒಟ್ಟಿಗೆ ಕರೆತರಲು ನಿರ್ಧರಿಸುತ್ತಾರೆ ಮತ್ತು ಎಲ್ಲ ವರ್ತಕರೂ ಈ ವ್ಯಾಪಾರಿಯು ಹಡಗಿನ ಅರ್ಧ ಸರಕನ್ನು ಆಳ್ವಾರರಿಗೆ ನೀಡಬೇಕೆಂದು ಸ್ಪಷ್ಟಪಡಿಸುತ್ತಾರೆ. ಆ ವರ್ತಕನು ಬೇರೆ ದಾರಿಯಿಲ್ಲದೆ ಹಡಗಿನ ಅರ್ಧ ಸರಕಿನ ಹಣವನ್ನು ಆಳ್ವಾರರಿಗೆ ಕೊಡುತ್ತಾನೆ ಮತ್ತು ಹೊರಡುತ್ತಾನೆ.

ಆಳ್ವಾರರು ಮತ್ತು ಅವರ ಶಿಷ್ಯರು ನಂತರ ದೇವಸ್ಥಾನಕ್ಕೆ ಹೋಗುತ್ತಾರೆ ಮತ್ತು ರಾತ್ರಿಯಾಗುವವರೆಗೆ ಅಲ್ಲಿ ಅವಿತುಕೊಳ್ಳುತ್ತಾರೆ. ರಾತ್ರಿಯಾದಾಗ ಅವರು ಚಪ್ಪಡಿ ಕಲ್ಲನ್ನು ಒಡೆಯುತ್ತಾರೆ, ಕೀಲಿಕೈಯನ್ನು ತೆಗೆದುಕೊಳ್ಳುತ್ತಾರೆ, ವಿಮಾನದ ತುದಿಗೆ ಹೋಗುತ್ತಾರೆ ಮತ್ತು ಅದನ್ನು ಎರಡೂ ಬದಿಯಲ್ಲಿ ತಿರುಗಿಸುವ ಮೂಲಕ ಪ್ರವೇಶದ್ವಾರವನ್ನು ತೆರೆಯುತ್ತಾರೆ ಮತ್ತು ಅತೀವವಾಗಿ ಹೊಳೆಯುವ ವಿಗ್ರಹವನ್ನು ನೋಡುತ್ತಾರೆ. ಆಳ್ವಾರರನ್ನು ನೋಡಿ ವಿಗ್ರಹವು ಹೇಳುತ್ತದೆ “ಈಯತ್ತಾಲ್ ಆಗಾತೋ ಇರುಂಬಿನಾಲ್ ಆಗಾತೋ, ಭೂಯತ್ತಾಲ್ ಮಿಕ್ಕತೊರು ಭೂತತ್ತಾಲ್ ಆಗಾತೋ, ತೇಯತೇಯ್ ಪಿತ್ತಳೈ ನರ್ಚೆಂಬುಗಳಾಲಾಗಾತೋ, ಮಾಯಪ್ಪೊನ್ ವೇಣುಮೋ ಮತಿತ್ತೆನ್ನೈಪ್ಪಣ್ಣುಗೈಕ್ಕೇ” ಅರ್ಥಾತ್ “ನೀವು ಕಬ್ಬಿಣ, ತಾಮ್ರ, ಕಂಚು, ಇತ್ಯಾದಿಗಳನ್ನು ಉಪಯೋಗಿಸಬಾರದಿತ್ತೇ? ನಾನು ದಿವ್ಯ ಸುವರ್ಣದಿಂದ ಮಾಡಲ್ಪಟ್ಟಿರುವುದರಿಂದ ನೀವು ಇಲ್ಲಿ ಬಂದು ನನ್ನನ್ನು ಭಗವಂತನ ಕೈಂಕರ್ಯಕ್ಕೆ ಉಪಯೋಗಿಸಲು ಅನುವಾಯಿತು”. ಆಳ್ವಾರರು ನಂತರ ತಮ್ಮ ಭಾವನಿಗೆ ವಿಗ್ರಹವನ್ನು ತೆಗೆದುಕೊಂಡು ಬರಲು ಹೇಳುತ್ತಾರೆ ಮತ್ತು ಎಲ್ಲರೊಂದಿಗೆ ಆ ಸ್ಥಳದಿಂದ ಹೊರಡುತ್ತಾರೆ.

ಮಾರನೆಯ ದಿನ ಬೆಳಿಗ್ಗೆ ಅವರು ಒಂದು ಚಿಕ್ಕ ಪಟ್ಟಣವನ್ನು ತಲುಪುತ್ತಾರೆ, ಅಲ್ಲಿ ಆಗ ತಾನೇ ಉಳುಮೆ ಮಾಡಿದ್ದ ಒಂದು ಚಿಕ್ಕ ಹೊಲದಲ್ಲಿ ಸುರಕ್ಷತೆಗಾಗಿ ಆಳ್ವಾರರು ವಿಗ್ರಹವನ್ನು ಹೂಳುತ್ತಾರೆ ಮತ್ತು ಅಲ್ಲಿಯೇ ವಿರಮಿಸುತ್ತಾರೆ. ರೈತರು ಬಂದು ಹೊಲವನ್ನು ಉಳಲು ಪ್ರಾರಂಭಿಸಿದಾಗ ಅವರು ವಿಗ್ರಹವನ್ನು ನೋಡುತ್ತಾರೆ ಮತ್ತು ಅದು ತಮ್ಮದೆಂದು ಸಾರುತ್ತಾರೆ. ಆಳ್ವಾರರು ಅದು ತಮ್ಮ ಪೂರ್ವಜರಿಗೆ ಸೇರಿದ್ದೆಂದು ಅವರು ಅದನ್ನು ಹೊಲದಲ್ಲಿ ಹೂತಿದ್ದರೆಂದು ಹೇಳುತ್ತಾರೆ. ಒಂದು ವಾದವು ಶುರುವಾಗುತ್ತದೆ ಮತ್ತು ಆಳ್ವಾರರು ಕಡೆಯದಾಗಿ ತಮ್ಮ ಒಡೆತನವನ್ನು ಸಾಬೀತುಪಡಿಸುವ ಪ್ರಮಾಣಪತ್ರವನ್ನು ಮರುದಿನ ಬೆಳಗ್ಗೆ ತೋರಿಸುವುದಾಗಿ ಹೇಳುತ್ತಾರೆ ಮತ್ತು ರೈತರು ಒಪ್ಪಿಕೊಳ್ಳುತ್ತಾರೆ ಮತ್ತು ಅಲ್ಲಿಂದ ಹೊರಡುತ್ತಾರೆ. ಸೂರ್ಯಾಸ್ತದ ನಂತರ, ಆಳ್ವಾರರು ಮತ್ತು ಅವರ ಶಿಷ್ಯರು ವಿಗ್ರಹದೊಂದಿಗೆ ಆ ಸ್ಥಳದಿಂದ ಹೊರಡುತ್ತಾರೆ, ಉತ್ತಮರ್ ಕೋಯಿಲ್ ದಿವ್ಯದೇಶವನ್ನು ತಲುಪುತ್ತಾರೆ ಮತ್ತು ವಿಗ್ರಹವನ್ನು ಅಲ್ಲಿ ಭದ್ರವಾಗಿ ಮುಚ್ಚಿಡುತ್ತಾರೆ. ಇದೇ ಸಮಯದಲ್ಲಿ ನಾಗಪಟ್ಟಿಣಂನ ದೇವಸ್ಥಾನದ ನಿರ್ವಾಹಕರು ಮತ್ತು ಸ್ಥಳೀಯ ನಾಯಕರು ವಿಗ್ರಹವು ಕಳ್ಳತನವಾಗಿರುವುದನ್ನು ತಿಳಿಯುತ್ತಾರೆ ಮತ್ತು ಅದನ್ನು ಹೂಳಿದ್ದ ಹೊಲದವರೆಗೆ ಅದರ ಸುಳಿವನ್ನು ಕಂಡುಹಿಡಿಯುತ್ತಾರೆ ಮತ್ತು ಕಡೆಯದಾಗಿ ಉತ್ತಮರ್ ಕೋಯಿಲ್ ಗೆ ತಲುಪುತ್ತಾರೆ. ಅವರು ಆಳ್ವಾರರನ್ನು ವಿಗ್ರಹದ ಬಗ್ಗೆ ಕೇಳಿದಾಗ, ಮೊದಲು ಅವರು ವಿಗ್ರಹದ ಬಗ್ಗೆ ಏನೂ ತಿಳಿಯದೆಂದು, ಆದರೆ ನಂತರ ಮಳೆಗಾಲ ಮುಗಿದ ಮೇಲೆ ಪಂಗುನಿ ಮಾಸದಲ್ಲಿ ವಿಗ್ರಹವನ್ನು ಸಂಪೂರ್ಣವಾಗಿ ಬೆರಳಿನವರೆಗೆ ಹಿಂತಿರುಗಿಸುವುದಾಗಿ ಹೇಳುತ್ತಾರೆ. ಅದರಂತೆಯೇ ಒಂದು ದಾಖಲೆಪತ್ರವನ್ನು ಬರೆದು, ಸಹಿ ಮಾಡಿ ಮತ್ತು ಸಹಿಯೊಂದಿಗೆ ಅದನ್ನು ಅವರಿಗೆ ಕೊಡುತ್ತಾರೆ ಮತ್ತು ಅವರು ಅದನ್ನು ಸ್ವೀಕರಿಸಿ ಅಲ್ಲಿಂದ ಹೊರಡುತ್ತಾರೆ. ಆಳ್ವಾರರು ವಿಗ್ರಹವನ್ನು ಕೂಡಲೇ ಕರಗಿಸುತ್ತಾರೆ, ಅದನ್ನು ಮಾರಿ ಹಣ ಪಡೆಯುತ್ತಾರೆ ಮತ್ತು ಶ್ರೀರಂಗಮ್ ದೇವಸ್ಥಾನದ ಸುತ್ತಲೂ ಕೋಟೆಯನ್ನು ಕಟ್ಟಲು ಪ್ರಾರಂಭಿಸುತ್ತಾರೆ. ಅವರು ತೊಂಡರಡಿಪ್ಪೊಡಿ ಆಳ್ವಾರರು ಸಿದ್ಧಪಡಿಸಿದ್ದ ನಂದವನವನ್ನು ಪ್ರವೇಶಿಸುತ್ತಾರೆ ಮತ್ತು ಜಾಗರೂಕವಾಗಿ ಆ ಸ್ಥಳವನ್ನು ಭಂಗ ಮಾಡದೆ ಅತಿ ಗೌರವಯುತವಾಗಿ ಹೊರಬರುತ್ತಾರೆ. ತಿರುಮಂಗೈ ಆಳ್ವಾರರ ಈ ಕ್ರಿಯೆಯಿಂದ ಬಹು ಸಂತೋಷಗೊಂಡ ತೊಂಡರಡಿಪ್ಪೊಡಿ ಆಳ್ವಾರರು ಅವರ ತೋಟದ ಉಪಕರಣವನ್ನು ಅರುಳ್ ಮಾರಿ (ತಿರುಮಂಗೈ ಆಳ್ವಾರರ ಒಂದು ಹೆಸರು) ಎಂದು ಬಹು ಪ್ರೀತಿಯೊಂದಿಗೆ ಹೆಸರಿಸುತ್ತಾರೆ. ಹೀಗೆ ಆಳ್ವಾರರು ಈ ರೀತಿಯಾದ ಅನೇಕ ಕೈಂಕರ್ಯಗಳನ್ನು ಮಾಡಿದರು ಮತ್ತು ಎಂಬೆರುಮಾನನಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಮಳೆಗಾಲದ ನಂತರ ಅವರೆಲ್ಲರೂ ವಿಗ್ರಹವನ್ನು ಹುಡುಕಿಕೊಂಡು ಬರುತ್ತಾರೆ. ಅವರು ದಾಖಲೆಪತ್ರವನ್ನು ಓದಲು ಹೇಳುತ್ತಾರೆ ಮತ್ತು ದಾಖಲೆಪತ್ರದಲ್ಲಿ ಬರೆದಿರುವಂತೆ ಒಂದು ಚಿಕ್ಕ ಬೆರಳನ್ನು ಹಿಂತಿರುಗಿಸುತ್ತಾರೆ. ಒಂದು ಉದ್ವೇಗಯುತವಾದ ಚರ್ಚೆಯು ನಡೆಯುತ್ತದೆ ಮತ್ತು ಅವರು ಮಧ್ಯಸ್ಥರ ಬಳಿಗೆ ಹೋಗುತ್ತಾರೆ ಮತ್ತು ಮಧ್ಯಸ್ಥರು ದಾಖಲೆಪತ್ರದಲ್ಲಿರುವ ಒಪ್ಪಂದದ ಪ್ರಕಾರ ಅವರು ಬೆರಳನ್ನು ಸ್ವೀಕರಿಸಿ ಹಿಂತಿರುಗಬೇಕೆಂದು ತೀರ್ಪು ನೀಡುತ್ತಾರೆ. ಅವರು ಆಳ್ವಾರರ ಜಾಣತನವನ್ನು ಅರಿಯುತ್ತಾರೆ ಮತ್ತು ಏನನ್ನೂ ತೆಗೆದುಕೊಳ್ಳದೆ ಹಿಂತಿರುಗುತ್ತಾರೆ. ತರುವಾಯ ಆಳ್ವಾರರು ಆ ದೇವಸ್ಥಾನದ ಶಿಲ್ಪಿಗಳನ್ನು ಆಹ್ವಾನಿಸುತ್ತಾರೆ ಮತ್ತು ಅವರಿಗೆ ಸ್ವಲ್ಪ ಸಂಪತ್ತನ್ನು ಕೊಡಲು ಬಯಸಿರುವುದಾಗಿ ಹೇಳುತ್ತಾರೆ ಮತ್ತು ಆ ನಿಧಿಯು ಸಮೀಪದ ದ್ವೀಪವೊಂದರಲ್ಲಿರುವುದಾಗಿ ಹೇಳುತ್ತಾರೆ. ಅವರು ಎಲ್ಲರನ್ನು ಒಂದು ದೋಣಿಯಲ್ಲಿ ಹತ್ತಿಸುತ್ತಾರೆ ಮತ್ತು ಸ್ವಲ್ಪ ದೂರ ನೀರಿನಲ್ಲಿ ಹೋದ ನಂತರ ಅವರು ಅಂಬಿಗನಿಗೆ ಸಂಜ್ಞೆ ಮಾಡುತ್ತಾರೆ, ಅಂಬಿಗನು ಆಳ್ವಾರರೊಂದಿಗೆ ಇನ್ನೊಂದು ಚಿಕ್ಕ ದೋಣಿಗೆ ಧುಮುಕುತ್ತಾನೆ ಮತ್ತು ಎಲ್ಲ ಶಿಲ್ಪಿಗಳಿರುವ ಆ ದೋಣಿಯನ್ನು ಬಗ್ಗಿಸುತ್ತಾನೆ ಮತ್ತು ಅವರೆಲ್ಲರನ್ನೂ ಮುಳುಗಿಸುತ್ತಾನೆ. ಆಳ್ವಾರರು ತಮ್ಮ ಸ್ಥಳಕ್ಕೆ ಹಿಂತಿರುಗುತ್ತಾರೆ ಮತ್ತು ಆ ಶಿಲ್ಪಿಗಳ ಮೊಮ್ಮಕ್ಕಳು ಅಲ್ಲಿಗೆ ಬರುತ್ತಾರೆ ಮತ್ತು ತಮ್ಮ ತಾತಂದಿರ ಬಗ್ಗೆ ವಿಚಾರಿಸುತ್ತಾರೆ. ಆಳ್ವಾರರು ಅವರಿಗೆ ದ್ವೀಪದಲ್ಲಿ ಅಪಾರ ಸಂಪತ್ತನ್ನು ತೋರಿಸಿರುವುದಾಗಿ ಮತ್ತು ಅವರು ಅದನ್ನು ಇಲ್ಲಿಗೆ ತರಲು ಗಂಟು ಕಟ್ಟುತ್ತಿರುವುದಾಗಿ ಹೇಳುತ್ತಾರೆ. ಮೊಮ್ಮಕ್ಕಳಿಗೆ ಆಳ್ವಾರರ ಮೇಲೆ ಸಂದೇಹವುಂಟಾಗಿ, ತಮ್ಮ ತಾತಂದಿರನ್ನು ಜೀವಂತವಾಗಿ ಹಿಂತಿರುಗಿಸುವವರೆಗೂ ತಾವು ಅಲ್ಲಿಂದ ಹೊರಡುವುದಿಲ್ಲವೆಂದು ಹೇಳುತ್ತಾರೆ. ಆಳ್ವಾರರು ಬಹು ಆತಂಕಗೊಳ್ಳುತ್ತಾರೆ ಮತ್ತು ಶ್ರೀರಂಗನಾಥನು ಅವರ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಹೇಳುತ್ತಾನೆ “ಇನ್ನು ಚಿಂತಿಸಬೇಡ”. ಅವರು ನಂತರ ಅವರೆಲ್ಲರಿಗೂ ಕಾವೇರಿ ನದಿಗೆ ಹೋಗಿ, ಅಲ್ಲಿ ಸ್ನಾನ ಮಾಡಿ, ಊರ್ಧ್ವಪುಂಡ್ರಗಳನ್ನು ಧರಿಸಿ ಮತ್ತು ಮುಖ್ಯ ಮಂಟಪಕ್ಕೆ ಬಂದು ಮತ್ತು ಅವರ ತಾತಂದಿರುಗಳನ್ನು ಒಬ್ಬೊಬ್ಬರಾಗಿ ಹೆಸರನ್ನು ಕರೆದು ಆಹ್ವಾನಿಸುವಂತೆ ಹೇಳುತ್ತಾರೆ. ಅವರು ಎಂಬೆರುಮಾನನ ಆಜ್ಞೆಯನ್ನು ಒಪ್ಪಿಕೊಳ್ಳುತ್ತಾರೆ ಮತ್ತು ತಮ್ಮ ತಾತಂದಿರನ್ನು ಒಬ್ಬೊಬ್ಬರಾಗಿ ಆಹ್ವಾನಿಸುತ್ತಾರೆ. ಅವರ ಆಶ್ಚರ್ಯಕ್ಕೆ ಪ್ರತಿಯೊಬ್ಬರೂ ಶ್ರೀರಂಗನಾಥನ ಹಿಂದಿನಿಂದ ಬಂದು ಅವರ ಮುಂದೆ ಕಾಣಿಸಿಕೊಳ್ಳುತ್ತಾರೆ ಮತ್ತು ಅವರಿಗೆ ಹೇಳುತ್ತಾರೆ “ಆಳ್ವಾರರ ದಿವ್ಯ ಕೃಪೆಯಿಂದಾಗಿ ನಾವು ಪೆರಿಯ ಪೆರುಮಾಳರ ಪಾದಾರವಿಂದವನ್ನು ಸೇರಿದ್ದೇವೆ. ನೀವೂ ಕೂಡ ಅವರಲ್ಲಿ ಆಶ್ರಯವನ್ನು ಪಡೆಯಿರಿ, ಈ ಸಂಸಾರದಲ್ಲಿ ಕೆಲವು ಕಾಲ ಸಂತೋಷವಾಗಿರಿ ಮತ್ತು ನಿಮ್ಮನ್ನು ಉದ್ಧರಿಸಿಕೊಳ್ಳಿ”. ತಮ್ಮ ತಾತಂದಿರ ಆದೇಶದಂತೆ ಅವರಲ್ಲಿ ಪ್ರತಿಯೊಬ್ಬರೂ ಆಳ್ವಾರರನ್ನು ತಮ್ಮ ಆಚಾರ್ಯನನ್ನಾಗಿ ಸ್ವೀಕರಿಸುತ್ತಾರೆ ಮತ್ತು ಪರಿಣಾಮವಾಗಿ ತಮ್ಮ ಸ್ಥಳಕ್ಕೆ ಹಿಂತಿರುಗುತ್ತಾರೆ.

ಆನಂತರ ಪೆರಿಯ ಪೆರುಮಾಳ್ ಆಳ್ವಾರರಿಗೆ ಏನಾದರೂ ಬಯಕೆಗಳಿವೆಯೇ ಎಂದು ಕೇಳುತ್ತಾರೆ. ಆಳ್ವಾರರು ಎಂಬೆರುಮಾನನ ದಶಾವತಾರವನ್ನು ಪೂಜಿಸಲು ಇಚ್ಛಿಸುತ್ತೇನೆಂದು ಪೆರಿಯ ಪೆರುಮಾಳ್ ಗೆ ಹೇಳುತ್ತಾರೆ. ಪೆರಿಯ ಪೆರುಮಾಳ್ ಹೇಳುತ್ತಾರೆ “ಇದೇ ನಿನ್ನ ಬಯಕೆಯಾದರೆ ನೀನು ನನ್ನ ದಶಾವತಾರದ ಅರ್ಚಾವತಾರ ವಿಗ್ರಹಗಳನ್ನು ಪ್ರತಿಷ್ಠಾಪಿಸಬಹುದು” ಮತ್ತು ಕೂಡಲೇ ಆಳ್ವಾರರು ಶ್ರೀರಂಗಮ್ ನಲ್ಲಿ ದಶಾವತಾರ ಎಂಬೆರುಮಾನರ ಸನ್ನಿಧಿಯನ್ನು ಕಟ್ಟುತ್ತಾರೆ.

ತದನಂತರ, ಪೆರಿಯ ಪೆರುಮಾಳ್ ಆಳ್ವಾರರ ಭಾವನನ್ನು ಆಹ್ವಾನಿಸುತ್ತಾರೆ ಮತ್ತು ಆಳ್ವಾರರ ಒಂದು ಅರ್ಚಾ ವಿಗ್ರಹವನ್ನು ಸಿದ್ಧಪಡಿಸುವಂತೆ (ಏಕೆಂದರೆ ಆಳ್ವಾರರು ಅವರ ಭಾವನ ಆಚಾರ್ಯರು), ಮತ್ತು ಅದನ್ನು ತಿರುಕ್ಕುರೈಯಲೂರ್ ನಲ್ಲಿ ಪ್ರತಿಷ್ಠಾಪಿಸಿ, ಅಲ್ಲಿ ಒಂದು ಭವ್ಯವಾದ ದೇವಸ್ಥಾನವನ್ನು ನಿರ್ಮಿಸಿ ಮತ್ತು ಆಳ್ವಾರರ ಉತ್ಸವಗಳನ್ನು ವೈಭವೋಪೇತವಾಗಿ ನಡೆಸುವಂತೆ ಆದೇಶಿಸುತ್ತಾರೆ. ಅವರ ಭಾವನವರು ಕೂಡಲೇ ಅಳ್ವಾರ್ ಮತ್ತು ಅವರ ಪತ್ನಿ ಕುಮುದವಲ್ಲಿ ನಾಚಿಯಾರ್ ಅವರ ವಿಗ್ರಹಗಳನ್ನು ಸಿದ್ಧಪಡಿಸುತ್ತಾರೆ, ಎಲ್ಲರೊಂದಿಗೆ ತಿರುಕ್ಕುರೈಯಲೂರ್ ಗೆ ಹೋಗುತ್ತಾರೆ ಮತ್ತು ಅರ್ಚಾ ವಿಗ್ರಹಗಳನ್ನು ಅಲ್ಲಿ ಪ್ರತಿಷ್ಠಾಪಿಸುತ್ತಾರೆ ಮತ್ತು ವೈಭವಯುತವಾದ ಉತ್ಸವಗಳನ್ನು ಅಲ್ಲಿ ನಡೆಸುತ್ತಾರೆ. ಆಳ್ವಾರರು ತಮ್ಮ ಶಿಷ್ಯರನ್ನು ಹಾಗೂ ಇತರರನ್ನು ಉದ್ಧರಿಸುವುದನ್ನು ಮುಂದುವರಿಸುತ್ತಾರೆ ಮತ್ತು ಪೆರಿಯ ಪೆರುಮಾಳರನ್ನು ಉಪಾಯ ಮತ್ತು ಉಪೇಯವನ್ನಾಗಿಟ್ಟುಕೊಂಡು ನಿರಂತರವಾಗಿ ಧ್ಯಾನಿಸುತ್ತಾ ತಮ್ಮ ಜೀವನವನ್ನು ಕಳೆಯುತ್ತಾರೆ.

ಅವರ ತನಿಯನ್:

ಕಲಯಾಮಿ ಕಲಿಧ್ವಂಸಮ್ ಕವಿಮ್ ಲೋಕ ದಿವಾಕಾರಮ್ |
ಯಸ್ಯ ಕೋಬಿ: ಪ್ರಕಾಶಾಭಿರ್ ಆವಿದ್ಯಮ್ ನಿಹತಮ್ ತಮ: ||

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ವಿವರಿಸಲಾಗಿದೆ:
http://ponnadi.blogspot.in/2012/10/archavathara-anubhavam-thirumangai.html.

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://acharyas.koyil.org/index.php/2013/01/23/thirumangai-azhwar-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

2 thoughts on “ತಿರುಮಂಗೈ ಆಳ್ವಾರ್”

Comments are closed.