ತಿರುವರಂಗಪ್ಪೆರುಮಾಳ್ ಅರಯರ್

ಶ್ರೀ: ಶ್ರೀಮತೇ ಶಠಗೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:

ತಿರುವರಂಗಪ್ಪೆರುಮಾಳ್ ಅರಯರ್ – ಶ್ರೀರಂಗಮ್

ತಿರುನಕ್ಷತ್ರಮ್ : ವೈಕಾಶಿ, ಕೇಟ್ಟೈ
ಅವತಾರ ಸ್ಥಳ :  ಶ್ರೀರಂಗಮ್
ಆಚಾರ್ಯನ್:  ಮಣಕ್ಕಾಲ್ ನಂಬಿ, ಆಳವಂದಾರ್

ಶಿಷ್ಯರು: ಎಂಪೆರುಮಾನಾರ್ (ಗ್ರಂಥ ಕಾಲಕ್ಷೇಪ ಶಿಷ್ಯ)

ಪರಮಪದಕ್ಕೆ ಸೇರಿದ ಸ್ಥಳ:   ಶ್ರೀರಂಗಮ್

ತಿರುವರಂಗಪ್ಪೆರುಮಾಳ್ ಅರಯರ್ ಅವರು ಆಳವಂದಾರ್ ಅವರ ಪುತ್ರರು ಮತ್ತು ಆಳವಂದಾರ್ ಅವರ ಪ್ರಮುಖ ಶಿಷ್ಯರಲ್ಲೊಬ್ಬರಾಗಿದ್ದರು.

ಅರಯರ್ ಅವರು ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ಪಾರಂಗತರಾಗಿದ್ದರು. ಒಮ್ಮೆ ಅಧ್ಯಯನ ಉತ್ಸವದಲ್ಲಿ, ನಂಪೆರುಮಾಳ್ (ಶ್ರೀರಂಗನಾಥನ ಉತ್ಸವ ಮೂರ್ತಿ) ಸಮ್ಮುಖದಲ್ಲಿ ಅರಯರ್ ಸೇವೆಯನ್ನು ಮಾಡುವಾಗ, ಅವರು ತಿರುವಾಯ್ಮೊಳಿಯ (10.2.8) “ಕೆಡುಮಿಡರ್” ಪದಿಗವನ್ನು ಹಾಡುತ್ತಿದ್ದರು. ಆ ಪದಿಗದಲ್ಲಿ, ಸಭೆಯ ನಾಯಕರಾದ ಆಳವಂದಾರ್ ಅವರ ಕಡೆ ನೋಡುತ್ತಾ, ಅವರು “ನಡಮಿನೋ ನಮರ್ಗಳುಳ್ಳೀರ್ ನಾಮುಮಕ್ಕು ಅರಿಯ ಚೋನ್ನೋಮ್” ಎಂದು ಹಾಡಿದರು – ಅರ್ಥಾತ್ “ಒಹ್ ! ನನ್ನ ಪ್ರಿಯ ಭಕ್ತರೇ, ಈಗ ತಿರುವನಂತಪುರಕ್ಕೆ ಹೊರಡಿ”. ಆಳವಂದಾರ್ ಅವರು ಅದನ್ನು ಸ್ವತಃ ನಂಪೆರುಮಾಳ್ ಆದೇಶವೆಂದು ಸ್ವೀಕರಿಸಿ, ಅನಂತಶಯನ ಭಗವಂತನಿಗೆ ಮಂಗಳಾಶಾಸನವನ್ನು ಮಾಡಲು ತಿರುವನಂತಪುರಕ್ಕೆ ಹೊರಡುತ್ತಾರೆ.

ಆಳವಂದಾರ್ ಅವರ ಅಂತಿಮ ಕಾಲದ ನುಡಿಗಳಲ್ಲಿ ಅರಯರ್ ಅವರಿಗೆ ತಿರುಪ್ಪಾಣಾಳ್ವಾರ್ ಅವರೊಂದಿಗೆ ಅತಿಯಾದ ನಂಟಿತ್ತೆಂದು ಸ್ಪಷ್ಟವಾಗುತ್ತದೆ. ಅರಯರ್ ಅವರಿಗೆ ಪೆರಿಯ ಪೆರುಮಾಳ್ ಮತ್ತು ತಿರುಪ್ಪಾಣಾಳ್ವಾರರಲ್ಲಿ ಇರುವ ಅನನ್ಯ ಭಕ್ತಿಯಿಂದಾಗಿ ಆಳವಂದಾರ್ ಅವರು ತಮ್ಮ ಅಂತಿಮ ದಿನಗಳಲ್ಲಿ ಪ್ರತಿಯೊಬ್ಬರೂ ತಿರುವರಂಗಪ್ಪೆರುಮಾಳ್ ಅರಯರ್ ಅವರೊಂದಿಗೆ ಬಹುವಾದ ಬಾಂಧವ್ಯವನ್ನು ಹೊಂದಿರಬೇಕೆಂದು ಸ್ಪಷ್ಟಪಡಿಸುತ್ತಾರೆ. ಅರಯರ್ ಅವರ ಹಿರಿಮೆ ಎಷ್ಟೆಂದರೆ ಅವರನ್ನು ಸ್ವತಃ ಆಳವಂದಾರ್ ಅವರೇ ಸಾರ್ವಜನಿಕವಾಗಿ ಪ್ರಶಂಸಿಸಿದ್ದಾರೆ.

ಅರಯರ್ ಅವರು ರಾಮಾನುಜರನ್ನು ಶ್ರೀರಂಗಕ್ಕೆ ಕರೆತರುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದರು. ಆಳವಂದಾರ್ ಅವರ ಕಾಲದ ನಂತರ ಮತ್ತು ಎಂಬೆರುಮಾನಾರರು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ನಂತರ, ಎಲ್ಲ ಶ್ರೀವೈಷ್ಣವರೂ ರಾಮಾನುಜರನ್ನು ಶ್ರೀರಂಗಕ್ಕೆ ಕರೆತಂದು ಅಲ್ಲಿಯೇ ಶಾಶ್ವತವಾಗಿ ನೆಲೆಸುವಂತೆ ಮಾಡಲು  ನಂಪೆರುಮಾಳ್ (ಶ್ರೀರಂಗನಾಥನ ಉತ್ಸವ ಮೂರ್ತಿ) ಅವರಲ್ಲಿ ಪ್ರಾರ್ಥಿಸುತ್ತಾರೆ. ಆ ಕೂಡಲೇ ಪೆರಿಯ ಪೆರುಮಾಳ್ (ಶ್ರೀರಂಗನಾಥನ ಮೂಲ ಮೂರ್ತಿ) ರಾಮಾನುಜರನ್ನು ಶ್ರೀರಂಗಕ್ಕೆ ಕಳುಹಿಸುವಂತೆ ದೇವ ಪೆರುಮಾಳ್ (ಕಾಂಚೀಪುರಮ್ ವರದರಾಜರು) ಅವರಿಗೆ ವಿಜ್ಞಾಪನೆಯನ್ನು ಕಳುಹಿಸುತ್ತಾರೆ. ಆದರೆ ಪೇರರುಳಾಳನ್ (ವರದರಾಜರು) ಅವರು ತಮ್ಮ ಹೃದಯಕ್ಕೆ ಅತಿ ಪ್ರಿಯರಾದ ರಾಮಾನುಜರನ್ನು ಕಳುಹಿಸಲಾಗುವುದಿಲ್ಲವೆಂದು ತಿಳಿಸುತ್ತಾರೆ. ಆಗ ಶ್ರೀರಂಗನಾಥರು ರಾಮಾನುಜರನ್ನು ಶ್ರೀರಂಗಕ್ಕೆ ಕರೆತರಲು ಒಂದು ಯೋಜನೆಯನ್ನು ರೂಪಿಸುತ್ತಾರೆ. ಅವರು ಅರಯರ್ ಅವರಿಗೆ ಹೇಳುತ್ತಾರೆ “ವರದರಾಜರು ಸಂಗೀತ ಮತ್ತು ಸ್ತೋತ್ರವನ್ನು ಬಹಳವಾಗಿ ಇಷ್ಟಪಡುತ್ತಾರೆ ಮತ್ತು ಅವರನ್ನು  ಸ್ತೋತ್ರಗಳಿಂದ ಮೆಚ್ಚಿಸಿದವರಿಗೆ ಏನು ಬೇಕಾದರೂ ಕೊಡುತ್ತಾರೆ”. ಆದ್ದರಿಂದ ವರದರಾಜರನ್ನು ಸ್ತೋತ್ರಗಳಿಂದ ತೃಪ್ತಿಪಡಿಸಿ ಏನು ಬೇಕಾದರೂ ಕೇಳಿಕೊಳ್ಳುವಂತೆ ಹೇಳಿದಾಗ, ತಮಗೆ ರಾಮಾನುಜರು ಬೇಕೆಂದು ಕೇಳಬೇಕೆಂದು ಅರಯರ್ ಅವರಿಗೆ ಶ್ರೀರಂಗನಾಥರು ಸೂಚಿಸುತ್ತಾರೆ.

 ಆ ನಂತರ, ಅರಯರ್ ಅವರು ಕಾಂಚೀಪುರಕ್ಕೆ ತೆರಳುತ್ತಾರೆ ಮತ್ತು ಅಲ್ಲಿ ತಲುಪಿದಾಗ ಅವರನ್ನು ವರಂ ತರುಮ್ ಪೆರುಮಾಳ್ ಅರಯರ್ (ಸ್ಥಳೀಯ ಅರಯರ್ ಸ್ವಾಮಿ) ಅವರು ತಮ್ಮ ತಿರುಮಾಳಿಗೆಗೆ (ಸ್ವಗೃಹ) ಸ್ವಾಗತಿಸುತ್ತಾರೆ ಮತ್ತು ಅವರನ್ನು ಚೆನ್ನಾಗಿ ಉಪಚರಿಸುತ್ತಾರೆ. ಮರುದಿನ, ತಿರುಕ್ಕಚ್ಚಿ ನಂಬಿಗಳು ಅರಯರ್ ಅವರ ಆಗಮನವನ್ನು ಕೇಳಿ ಅಲ್ಲಿಗೆ ಹೋಗಿ ತಮ್ಮ ಪ್ರಣಾಮಗಳನ್ನು ತಿಳಿಸುತ್ತಾರೆ ಮತ್ತು ಅವರ ಸೌಖ್ಯವನ್ನು ವಿಚಾರಿಸುತ್ತಾರೆ. ಅರಯರ್ ಅವರು ನಂಬಿಗಳಿಗೆ ತಮ್ಮನ್ನು ಮಂಗಳಾಶಾಸನವನ್ನು ಮಾಡಲು ದೇವ ಪೆರುಮಾಳ್ (ಶ್ರೀವರದರಾಜರು) ಅವರ ಬಳಿಗೆ ಕರೆದೊಯ್ಯಲು ವಿನಂತಿಸಿಕೊಳ್ಳುತ್ತಾರೆ. (ಸಾಂಪ್ರದಾಯಿಕವಾಗಿ ಶ್ರೀವೈಷ್ಣವರು ದಿವ್ಯದೇಶಗಳಿಗೆ ಹೋದಾಗ ಅಲ್ಲಿನ ಭಗವಂತನನ್ನು ದರ್ಶಿಸಲು ಸ್ಥಳೀಯ ಕೈಂಕರ್ಯಪರರೊಂದಿಗೆ ಹೋಗುವುದು ವಾಡಿಕೆ). ನಂಬಿಗಳು ಅದಕ್ಕೆ ಸಮ್ಮತಿಸುತ್ತಾರೆ ಮತ್ತು ಅರಯರ್ ಅವರು ಶ್ರೀವರದರಾಜರನ್ನು ದರ್ಶಿಸಿ ತಮ್ಮ ಪ್ರಣಾಮಗಳನ್ನು ಈ ಮೂಲಕ ಅರ್ಪಿಸುತ್ತಾರೆ  – “ಕದಾ ಪುನಶ್ಚನ್ಕರಥಾನ್ಗ ಕಲ್ಪಕ ಧ್ವಜ ಅರವಿಂದ ಅಂಗುಚ ವಜ್ರ ಲಾಂಚನಮ್; ತ್ರಿವಿಕ್ರಮ ತ್ವಚ್ಚರಣಂಬುಜದ್ವಯಂ ಮದೀಯ ಮೂರ್ಧಾನಮ್ ಅಲಂಕರಿಷ್ಯತಿ” – ಅರ್ಥಾತ್ “ಓಹ್ ತ್ರಿವಿಕ್ರಮ ! ಓಹ್ ಯಾವಾಗ ಅನೇಕ ಮಂಗಳಕರ ಚಿನ್ಹೆಗಳಾದ ಶಂಖ, ಸುದರ್ಶನ ಚಕ್ರ, ಕಲ್ಪವೃಕ್ಷ, ಧ್ವಜ, ಪದ್ಮ, ಇತ್ಯಾದಿಗಳಿಂದ ಕೂಡಿದ ನಿನ್ನ ಚರಣಾರವಿಂದಗಳು ನನ್ನ ಶಿರಸ್ಸನ್ನು ಅಲಂಕರಿಸುತ್ತವೆ”.  ಭಗವಂತನು ಅವರಿಗೆ ತನ್ನ ಅರ್ಚಕರ ಮೂಲಕ ತೀರ್ಥ, ಪ್ರಸಾದ, ಶ್ರೀಶಠಗೋಪ ಇತ್ಯಾದಿಗಳನ್ನು ಕರುಣಿಸುತ್ತಾನೆ ಮತ್ತು ತನ್ನ ಸಮ್ಮುಖದಲ್ಲಿ ಅರಯರ್ ಸೇವೆಯನ್ನು ಮಾಡುವಂತೆ ಕೇಳುತ್ತಾನೆ. ಅರಯರ್ ಅವರು ಅತ್ಯಂತ ಪ್ರೀತಿ ಮತ್ತು ಭಕ್ತಿಯಿಂದ ಅನೇಕ ಆಳ್ವಾರುಗಳ ಶ್ರೀಸೂಕ್ತಿಗಳನ್ನು ನರ್ತನ ಮತ್ತು ಭಾವಗಳ ಮೂಲಕ ಹಾಡುತ್ತಾರೆ. ಭಗವಂತನು ಅತ್ಯಂತ ಸಂತುಷ್ಟನಾಗುತ್ತಾನೆ ಮತ್ತು ಅವರಿಗೆ ಅನೇಕ ಬಹುಮಾನಗಳನ್ನು ನೀಡುತ್ತಾನೆ. ಅರಯರ್ ಅವರು ತಮಗೆ ಆ ಬಹುಮಾನಗಳಾವುವೂ ಅಗತ್ಯವಿಲ್ಲವೆಂದು ಹೇಳುತ್ತಾರೆ ಮತ್ತು ಶ್ರೀವರದರಾಜನು ಯಾವ ವರವನ್ನೂ ದಯಪಾಲಿಸುವಂತಹವನಾದುದರಿಂದ, ಭಗವಂತನು ತಮ್ಮ ಬಯಕೆಯನ್ನು ಈಡೇರಿಸಬೇಕೆಂದು ಕೇಳಿಕೊಳ್ಳುತ್ತಾರೆ. ಭಗವಂತನು ಅದಕ್ಕೆ ಸಮ್ಮತಿಸಿ, “ನಾನು ನನ್ನನ್ನು ಮತ್ತು ನನ್ನ ಪತ್ನಿಯರನ್ನು ಬಿಟ್ಟು ಏನನ್ನಾದರೂ ಕೊಡುತ್ತೇನೆ, ಏನು ಬೇಕೆಂದು ಕೇಳಿಕೋ” ಎಂದು ಹೇಳುತ್ತಾನೆ. ಆಗ ಅರಯರ್ ಅವರು  ರಾಮಾನುಜರನ್ನು ತೋರಿಸಿ ಅವರನ್ನು ತಮ್ಮ ಜೊತೆಗೆ ಶ್ರೀರಂಗಕ್ಕೆ ಕರೆದೊಯ್ಯಬೇಕೆಂದು ಬಯಸುತ್ತೇನೆ ಎಂದು ಹೇಳುತ್ತಾರೆ. ಶ್ರೀವರದರಾಜನು “ನೀವು ಅವರನ್ನು ಕೇಳುತ್ತೀರೆಂದು ನಾನು ಯೋಚಿಸಿರಲಿಲ್ಲ; ಬೇರೇನಾದರೂ ಕೇಳಿಕೊಳ್ಳಿ” ಎಂದು ಹೇಳುತ್ತಾನೆ. ಅರಯರ್ ಅವರು ಉತ್ತರಿಸುತ್ತ್ತಾರೆ “ನೀನು ಎಂದಿಗೂ ಎರಡು ಮಾತನಾಡದ ಆ ಶ್ರೀರಾಮನಲ್ಲದೇ ಬೇರಲ್ಲ – ನೀನು ಇದನ್ನು ನಿರಾಕರಿಸಲಾಗದು”. ಆಗ ಶ್ರೀವರದರಾಜನು ಅಂತಿಮವಾಗಿ ಸಮ್ಮತಿಸುತ್ತಾನೆ ಮತ್ತು ರಾಮಾನುಜರಿಗೆ ವಿದಾಯವನ್ನು ಹೇಳುತ್ತಾನೆ. ಅರಯರ್ ಅವರು ರಾಮಾನುಜರ ಕೈಗಳನ್ನು ಹಿಡಿದು ಶ್ರೀರಂಗಕ್ಕೆ  ಪ್ರಯಾಣ ಮಾಡುತ್ತಾರೆ.  ಆಗ ರಾಮಾನುಜರು ಆಳ್ವಾನ್ ಮತ್ತು ಆಂಡಾನ್ ಅವರನ್ನು ಕರೆದು, ಮಠಕ್ಕೆ ಹೋಗಿ ತಮ್ಮ ತಿರುವಾರಾಧನ ಭಗವಂತನನ್ನು (ಪೇರರುಳಾಳನ್ – ಶ್ರೀವರದರಾಜ) ಮತ್ತು ಇತರ ಎಲ್ಲ ಪರಿಕರಗಳನ್ನು ತರುವಂತೆ ಹೇಳುತ್ತಾರೆ ಮತ್ತು ಶ್ರೀವರದರಾಜನ ಅನುಮತಿಯನ್ನು ಪಡೆದುಕೊಂಡು ಎಲ್ಲರೊಂದಿಗೆ ಶ್ರೀರಂಗಕ್ಕೆ ಹೊರಡುತ್ತಾರೆ. ಹೀಗೆ, ರಾಮಾನುಜರನ್ನು ಶ್ರೀರಂಗಕ್ಕೆ ಕರೆದುಕೊಂಡು ಬಂದು ನಮ್ಮ ಸಂಪ್ರದಾಯವನ್ನು ದೃಢವಾಗಿ ಸ್ಥಾಪಿಸಲು ಮತ್ತು ಅದನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಲು, ಅರಯರ್ ಅವರು ಬಹು ಮುಖ್ಯವಾದ ಉಪಕಾರವನ್ನು ಮಾಡಿದ್ದಾರೆ.

ಆಳವಂದಾರ್ ಅವರು ತಮ್ಮ ೫ ಪ್ರಮುಖ ಶಿಷ್ಯರಿಗೆ ೫ ವಿಭಿನ್ನ ಅಂಶಗಳನ್ನು ಉಡೈಯವರ್ ಅವರಿಗೆ ಬೋಧಿಸುವಂತೆ ಆದೇಶಿಸುತ್ತಾರೆ – ಪೆರಿಯ ನಂಬಿಗಳು ಉಡೈಯವರ್ ಅವರಿಗೆ ಪಂಚ ಸಂಸ್ಕಾರವನ್ನು ಮಾಡುತ್ತಾರೆ, ಪೆರಿಯ ತಿರುಮಲೈ ನಂಬಿಗಳು ಶ್ರೀ ರಾಮಾಯಣವನ್ನು ಬೋಧಿಸುತ್ತಾರೆ, ತಿರುಕೋಷ್ಠಿಯೂರ್ ನಂಬಿಗಳು ತಿರುಮಂತ್ರ ಮತ್ತು ಚರಮ ಶ್ಲೋಕದ ಅರ್ಥಗಳನ್ನು ಬೋಧಿಸುತ್ತಾರೆ, ತಿರುಮಾಲೈ ಆಂಡಾನ್ ಅವರು ತಿರುವಾಯ್ಮೊಳಿಯನ್ನು ಬೋಧಿಸುತ್ತಾರೆ. ತಿರುವರಂಗಪ್ಪೆರುಮಾಳ್ ಅರಯರ್ ಅವರಿಗೆ ಅರುಳಿಚ್ಛೆಯಲ್ ಮತ್ತು ಚರಮೋಪಾಯಮ್ (ಅಂತಿಮ ಸಾಧನ – ಆಚಾರ್ಯ ನಿಷ್ಠೆ) ಇವುಗಳ ಕೆಲವು ಭಾಗಗಳನ್ನು ಉಡೈಯವರ್ ಅವರಿಗೆ ಬೋಧಿಸುವಂತೆ ಆಳವಂದಾರ್ ಆದೇಶಿಸುತ್ತಾರೆ. ರಾಮಾನುಜರು ತಿರುವಾಯ್ಮೊಳಿಯನ್ನು ಸಂಪೂರ್ಣವಾಗಿ ತಿರುಮಾಲೈ ಆಂಡಾನ್ ಅವರಿಂದ ಕಲಿಯುತ್ತಾರೆ ಮತ್ತು ಆನಂತರ ಪೆರಿಯ ನಂಬಿಗಳು ಅವರಿಗೆ ನಮ್ಮ ಸಂಪ್ರದಾಯದ ಸಾರವನ್ನು ಅರಯರ್ ಅವರಿಂದ ಕಲಿಯುವಂತೆ ಆದೇಶಿಸುತ್ತಾರೆ. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ತತ್ತ್ವಗಳಂತೆ ರಾಮಾನುಜರು ಅರಯರ್ ಅವರಿಗೆ ಏನಾದರೂ ಬೋಧಿಸಲು ವಿನಂತಿಸಿಕೊಳ್ಳುವ ಮೊದಲು ೬ ತಿಂಗಳ ಕಾಲ ಅವರಿಗೆ ಕೈಂಕರ್ಯವನ್ನು ಮಾಡುತ್ತಾರೆ. ಅವರು ಪ್ರತಿದಿನ ಹಾಲನ್ನು ಸರಿಯಾದ ಉಷ್ಣತೆಯೊಂದಿಗೆ ಅಣಿಗೊಳಿಸುತ್ತಾರೆ ಮತ್ತು ಅರಯರ್ ಅವರಿಗೆ ಅವಶ್ಯವಿದ್ದಾಗ ಉಪಯೋಗಿಸಲು ಅರಿಶಿಣ ಲೇಪನವನ್ನು ಸಿದ್ಧಪಡಿಸುತ್ತಾರೆ.

ಒಮ್ಮೆ ರಾಮಾನುಜರು ಸಿದ್ಧಪಡಿಸಿದ ಅರಿಶಿಣ ಲೇಪನವು ಅರಯರ್ ಅವರಿಗೆ ತೃಪ್ತಿದಾಯಕವಾಗಲಿಲ್ಲ – ಅರಯರ್ ಅವರ ಅತೃಪ್ತಿಯನ್ನು ಅವರ ಮುಖವನ್ನು ನೋಡಿಯೇ ರಾಮಾನುಜರು ಅರಿಯುತ್ತಾರೆ. ಆನಂತರ ಮತ್ತೊಂದು ಬಾರಿ ಅರಿಶಿಣ ಲೇಪನವನ್ನು ತಯಾರಿಸುತ್ತಾರೆ ಮತ್ತು ಅದು ಅರಯರ್ ಅವರ ಹೃದಯಕ್ಕೆ ಎಷ್ಟು ತೃಪ್ತಿದಾಯಕವಾಗಿತ್ತೆಂದರೆ ಅವರು ಅಂತಿಮ ಉಪಾಯ ಮತ್ತು ಅಂತಿಮ ಧ್ಯೇಯಗಳಾದ ಆಚಾರ್ಯ ನಿಷ್ಠೆಯನ್ನು ಬೋಧಿಸುತ್ತಾರೆ. ಅವರು ವಿವರಿಸುತ್ತಾರೆ – “ನಾವು ಯಾವಾಗಲೂ ಕ್ಷೀರಾಬ್ಧಿಯಲ್ಲಿ ಪವಡಿಸಿರುವ ಆ ಭಗವಂತನೇ ಆಚಾರ್ಯರ ರೂಪದಲ್ಲಿರುವನೆಂದು ಪರಿಗಣಿಸಬೇಕು”. ಚರಮೋಪಾಯದ ವಿವರಗಳನ್ನು ನಾವು ಈಗಾಗಲೇ ಇಲ್ಲಿ ನೋಡಿದ್ದೇವೆ – https://granthams.koyil.org/charamopaya-nirnayam-english/ .

ಅರಯರ್ ಅವರ ಹಿರಿಮೆಯನ್ನು ಅನೇಕ ಐತಿಹ್ಯಗಳಲ್ಲಿ ತೋರ್ಪಡಿಸಲಾಗಿದೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ನೋಡೋಣ:

– 1.5.11 ರ ಈಡು ವ್ಯಾಖ್ಯಾನದಲ್ಲಿ, “ಪಾಲೇ ತಮಿಳರ್ ಇಶೈಕಾರರ್” ಎಂಬುದನ್ನು ವಿವರಿಸುವಾಗ – ಇಶೈಕಾರರ್ ಎಂದರೆ ಸಂಗೀತ ಪ್ರವೀಣ ಎಂದರ್ಥ, ಆದರೆ ನಂಪಿಳ್ಳೈ ಅವರು ಆಳ್ವಾನ್ ಅವರನ್ನು ಉಲ್ಲೇಖಿಸಿ ಇಶೈಕಾರರ್ ಎಂದರೆ ತಿರುವರಂಗಪ್ಪೆರುಮಾಳ್ ಅರಯರ್ ಎಂಬರ್ಥದಲ್ಲಿ ಹೇಳಿದ್ದಾರೆ.

– 3.3.1 ರ ಈಡು ವ್ಯಾಖ್ಯಾನದಲ್ಲಿ, ನಂಪಿಳ್ಳೈ ಅವರು ವಿವರಿಸುತ್ತಾರೆ – “ಒಳಿವಿಲ್ ಕಾಲಮೆಲ್ಲಾಮ್” ಎಂಬುದನ್ನು ಅರಯರ್ ಅವರು ಹಾಡಲು ಪ್ರಾರಂಭಿಸಿದರೆ ಭಾವಪರವಶರಾಗಿ ಕಾಲಮೆಲ್ಲಾಮ್, ಕಾಲಮೆಲ್ಲಾಮ್ ಎಂದೇ ಹಾಡುತ್ತಿರುತ್ತಾರೆ ಮತ್ತು ಮುಂದುವರಿಸದೆ ಅಲ್ಲಿಗೇ ಪೂರ್ಣಗೊಳಿಸುತ್ತಾರೆ. ಈ ಪದಿಗದಲ್ಲಿ ಆಳ್ವಾರರು ನಿರಂತರ /ಅನಿರ್ಬಂಧಿತ /ಶುದ್ಧವಾದ ಕೈಂಕರ್ಯವನ್ನು ದಯಪಾಲಿಸುವಂತೆ ಶ್ರೀವೇಂಕಟೇಶ್ವರನಲ್ಲಿ ವಿನಂತಿಸಿಕೊಳ್ಳುತ್ತಾರೆ ಮತ್ತು ಈ ಪದಿಗವು ದ್ವಯ ಮಹಾಮಂತ್ರದ (ಕೈಂಕರ್ಯ ಪ್ರಾರ್ಥನೆ) ಎರಡನೇ ಸಾಲಿನ ಅರ್ಥವೆಂದು ಗುರುತಿಸಲ್ಪಟ್ಟಿದೆ.

ನಮಗೆ ಭಗವಂತ ಮತ್ತು ಆಚಾರ್ಯರಲ್ಲಿ ಇದೆ ರೀತಿಯ ಸಂಬಂಧವನ್ನು ಅನುಗ್ರಹಿಸುವಂತೆ ಅರಯರ್ ಅವರ ಚರಣಾರವಿಂದಗಳಲ್ಲಿ ಪ್ರಾರ್ಥಿಸೋಣ.

ತಿರುವರಂಗಪ್ಪೆರುಮಾಳ್ ಅರಯರ್ ಅವರ ತನಿಯನ್:

ಶ್ರೀರಾಮಮಿಶ್ರ ಪದಪಂಕಜ ಸಂಚರೀಕಂ ಶ್ರೀ ಯಾಮುನಾರ್ಯ ವರಪುತ್ರಂ ಅಹಂ ಗುಣಾಭ್ಯಮ್

ಶ್ರೀರಂಗರಾಜ ಕರುಣಾ ಪರಿಣಾಮದತ್ತಮ್ ಶ್ರೀಭಾಷ್ಯಕಾರ ಶರಣಂ ವರರಂಗಮೀಡೇ 

ಅರ್ಥ:

ಮಣಕ್ಕಾಲ್ ನಂಬಿಗಳ ಪಾದಾರವಿಂದಗಳಲ್ಲಿ ಒಂದು ದುಂಬಿಯಂತೆ ಇದ್ದು, ಯಾಮುನಾಚಾರ್ಯರ ದಿವ್ಯಪುತ್ರರಾದ, ಮಂಗಳಕರವಾದ ಗುಣಗಳಿಂದ ಕೂಡಿದ, ಶ್ರೀರಂಗನಾಥನ ದಿವ್ಯಾನುಗ್ರಹದಿಂದ ಜನಿಸಿದ, ಶ್ರೀಭಾಷ್ಯಕಾರರನ್ನು ತಮ್ಮ ಶಿಷ್ಯರನ್ನಾಗಿ ಹೊಂದಿದ, ತಿರುವರಂಗಪ್ಪೆರುಮಾಳ್ ಅರಯರ್ ಅವರನ್ನು ನಾನು ಸ್ತುತಿಸುತ್ತೇನೆ.

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್ 

ಮೂಲ: http://acharyas.koyil.org/index.php/2013/01/12/thiruvarangapperumal-arayar-english/

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಮ್) – https://granthams.koyil.org
ಪ್ರಮಾಥಾ (ಆಚಾರ್ಯ) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – https://pillai.koyil.org